ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ಉದ್ಯೋಗ ಆಧಾರಿತ ವೀಸಾಗಳ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶಕ್ಕೆ ಸಹಿ ಹಾಕಿರುವುದು ತೀರಾ ನಿರಾಶದಾಯಕವಾಗಿದೆ ಎಂದು ಗೂಗಲ್ ನ ಮಾತೃ ಸಂಸ್ಥೆಯಾದ ’ಆಲ್ಫಾಬೆಟ್’ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಈ ಆದೇಶವೂ ಅಮೆರಿಕಾದಲ್ಲಿ ಕೆಲಸ ಮಾಡಲು ಬಯಸುವ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಕ್ರಮವು ಆರ್ಥಿಕತೆಗೆ ಹಾನಿ ಮಾಡುತ್ತದೆ ಎಂದು ತಂತ್ರಜ್ಞಾನ ಉದ್ಯಮ ಅಭಿಪ್ರಾಯಪಟ್ಟಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮತ್ತು ಅವರ ಕುಟುಂಬಗಳು ಬಳಸುವ ಹೊಸ H1-B ಮತ್ತು H-4 ವೀಸಾಗಳನ್ನು ಈ ಆದೇಶವು ತಡೆಹಿಡಿಯುತ್ತದೆ. ಜೊತೆಗೆ ಎಲ್ ವೀಸಾಗಳು, ಜೆ ವೀಸಾಗಳನ್ನು ಕೂಡಾ ಈ ಆದೇಶ ತಡೆ ಹಿಡಿಯುತ್ತದೆ.
ಹೊಸ ಹಸಿರು ಕಾರ್ಡ್‌ಗಳ ವಿತರಣೆಯೂ ವರ್ಷದ ಅಂತ್ಯದ ವೇಳೆಗೆ ಸ್ಥಗಿತಗೊಳ್ಳುತ್ತದೆ.
ಟ್ವಿಟರ್ ಮತ್ತು ಅಮೆಜಾನ್ ಈ ಆದೇಶವನ್ನು “ಅಲ್ಪ ದೃಷ್ಟಿ” ಎಂದು ಕರೆದಿದ್ದು, ವಲಸೆ ಬಂದಿರುವ ಟೆಕ್ ಕಾರ್ಮಿಕರು ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಹಿನ್ನಡೆಯಾಗಿದ್ದ ಅಮೇರಿಕಾದ ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತಾರೆ ಎಂದು ಹೇಳಿವೆ.
ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ “ನಾವು ವಲಸಿಗರೊಂದಿಗೆ ನಿಲ್ಲುತ್ತೇವೆ ಹಾಗೂ ಎಲ್ಲರಿಗೂ ಅವಕಾಶವನ್ನು ವಿಸ್ತರಿಸಲು ಕೆಲಸ ಮಾಡುತ್ತೇವೆ” ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಶನಿವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್ “ನಮ್ಮಲ್ಲಿ ಸಾಕಷ್ಟು ಜನರು ಉದ್ಯೋಗ ಹುಡುಕುತ್ತಿದ್ದಾರೆ” ಎಂದು ಹೇಳಿದ್ದರು.


