ಭಾರತ ಚೀನಾ ಉಭಯ ದೇಶಗಳ ಗಡಿ ಉದ್ವಿಗ್ನತೆಯ ಮಧ್ಯೆಯೂ ಭಾರತದಲ್ಲಿ ಕಾರ್ಯನಿರ್ವಹಿಸಲು ಆರ್‌ಬಿಐ ಬ್ಯಾಂಕ್ ಆಫ್ ಚೀನಾಕ್ಕೆ ಪರವಾನಗಿ ನೀಡಿದೆ ಮತ್ತು ಅದು ಮೊದಲ ಶಾಖೆ ತೆರೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ರಕ್ತಸಿಕ್ತ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ನಂತರ ಭಾರತದಲ್ಲಿ ಚೀನಾ ವಿರೋಧಿ ಭಾವನೆ ಹೆಚ್ಚಾಗಿದೆ. ಚೀನಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಬಹಿಷ್ಕರಿಸುವ ಕರೆಗಳ ಹೊರತಾಗಿಯೂ ಬ್ಯಾಂಕ್ ಆಫ್ ಚೀನಾ ತನ್ನ ಮೊದಲ ಭಾರತೀಯ ಶಾಖೆಯನ್ನು ಮುಂಬೈನಲ್ಲಿ ತೆರೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರಲಾಗಿದೆ.
ಫೇಸ್‌ಬುಕ್‌ನಲ್ಲಿ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಆಫ್ ಚೀನಾಕ್ಕೆ ಭಾರತದಲ್ಲಿ ಕಾರ್ಯನಿರ್ವಹಿಸಲು ಪರವಾನಗಿಗಳನ್ನು ನೀಡುತ್ತದೆ. ಇದು ಚೀನಾದ ನಾಯಕತ್ವಕ್ಕೆ ಪಿಎಂ ಮೋದಿ ಕೊಟ್ಟಿದ್ದ ಆಶ್ವಾಸನೆಯಾಗಿದೆ: ಮೂಲಗಳು” ಎಂಬ ಎಎನ್‌ಐ ಟ್ವೀಟ್ ಅನ್ನು ಉಲ್ಲೇಖಿಸಿರುವ ಪೋಸ್ಟ್ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್
ಗಡಿ ಉದ್ವಿಗ್ನತೆಯ ನಡುವೆಯೂ ಚೀನಾ ಬ್ಯಾಂಕ್‌ಗೆ ಅವಕಾಶ ವೈರಲ್ ಪೋಸ್ಟ್ ಹೇಳಿಕೆಯು ಸುಳ್ಳಾಗಿದೆ. ಏಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2018ರಲ್ಲಿಯೇ ಬ್ಯಾಂಕ್ ಆಫ್ ಚೀನಾಕ್ಕೆ ಪರವಾನಗಿ ನೀಡಿತ್ತು. ಅಲ್ಲದೇ ಬ್ಯಾಂಕ್ ಆಫ್ ಚೀನಾ ತನ್ನ ಮೊದಲ ಭಾರತೀಯ ಶಾಖೆಯನ್ನು ಮುಂಬೈನಲ್ಲಿ ಕಳೆದ ವರ್ಷ ಜೂನ್‌ನಲ್ಲಿಯೇ ತೆರೆದಿದೆ. ವೈರಲ್ ಎಎನ್‌ಐ ಪೋಸ್ಟ್‌ನಲ್ಲಿ ಅವರ ದಿನಾಂಕವನ್ನು ಕತ್ತರಿಸಿ ಪೋಸ್ಟ್ ಮಾಡಿದೆ. ಆ ಎಎನ್ಐ ಟ್ವೀಟ್ ಎರಡು ವರ್ಷಗಳಷ್ಟು ಹಳೆಯದಾಗಿದೆ.
Reserve Bank of India issues licence to Bank of China to operate in India.This was a commitment made by PM Modi to Chinese leadership: Sources
— ANI (@ANI) July 4, 2018
ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ತನ್ನ ಮೊದಲ ಶಾಖೆಯನ್ನು ತೆರೆಯಲು ಸಂಬಂಧಿಸಿದ ಹಲವಾರು ಸುದ್ದಿ ಲೇಖನಗಳು ಲಭ್ಯವಿವೆ. ಈ ಸುದ್ದಿ ವರದಿಗಳ ಪ್ರಕಾರ, 2019 ರ ಜೂನ್‌ನಲ್ಲಿ ಮುಂಬೈನಲ್ಲಿ ಶಾಖೆ ಪ್ರಾರಂಭವಾಯಿತು.
ಜುಲೈ 4, 2018 ರಂದು, ಸುದ್ದಿ ಸಂಸ್ಥೆ ಎಎನ್‌ಐ ಭಾರತದಲ್ಲಿ ಕಾರ್ಯನಿರ್ವಹಿಸಲು ಆರ್‌ಬಿಐ ಬ್ಯಾಂಕ್ ಆಫ್ ಚೀನಾಕ್ಕೆ ಪರವಾನಗಿ ನೀಡಿದೆ ಎಂದು ಟ್ವೀಟ್ ಮಾಡಿದೆ. “ಹಿಂದೂಸ್ತಾನ್ ಟೈಮ್ಸ್” ಕೂಡ ಜುಲೈ 4, 2018 ರಂದು ವರದಿ ಮಾಡಿದೆ.
ಕಳೆದ ತಿಂಗಳು ಚೀನಾದ ನಗರವಾದ ಕಿಂಗ್‌ಡಾವೊದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾದಾಗ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಶಾಖೆಗಳನ್ನು ಸ್ಥಾಪಿಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಮಾತು ನೀಡಿದ್ದರು ಎಂದು ವರದಿ ಹೇಳಿದೆ.
ಆದ್ದರಿಂದ, ಉಭಯ ದೇಶಗಳ ಗಡಿ ಉದ್ವಿಗ್ನತೆಯ ನಡುವೆ ಬ್ಯಾಂಕ್ ಆಫ್ ಚೀನಾ ತನ್ನ ಮೊದಲ ಭಾರತೀಯ ಶಾಖೆಯನ್ನು ಮುಂಬೈನಲ್ಲಿ ತೆರೆಯುತ್ತಿದೆ ಎಂಬ ವೈರಲ್ ಹಕ್ಕು ತಪ್ಪುದಾರಿಗೆಳೆಯುವಂತಿದೆ. ವಾಸ್ತವದಲ್ಲಿ ಕಳೆದ ವರ್ಷವೆ ಶಾಖೆ ತೆರೆದಿತ್ತು ಮತ್ತು ಎರಡು ವರ್ಷಗಳ ಹಿಂದೆಯೇ ಪರವಾನಗಿ ನೀಡಲಾಗಿದೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ: ವಾಟ್ಸಾಪ್ ಮೆಸೇಜನ್ನು ನಂಬಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ’ಟೈಮ್ಸ್ ನೌ’


