ಎಲ್ಲಾ ರಾಜ್ಯಗಳು ಕೊರೊನಾ ತಡೆಗಟ್ಟುವ ಕುರಿತು ಯೋಚಿಸುತ್ತಿದ್ದಾರೆ ಬಿಹಾರ ಮಾತ್ರ ಚುನಾವಣೆ ಬಗ್ಗೆ ಮಾತಾಡುತ್ತಿದೆ ಎಂದು ಕಳೆದ ವಾರ ಚುನಾವನಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಆರೋಪಿಸಿದ್ದರು. ಅದನ್ನು ನಿಜಮಾಡಲು ಬಿಹಾರದ ಕೆಲ ರಾಜಕಾರಣಿಗಳು ಮುಂದಾಗಿದ್ದಾರೆ. ಕಳೆದ ವಾರವೆಲ್ಲಾ ಬಿಜೆಪಿ ಪಕ್ಷವು ವರ್ಚುವಲ್ ರ್‍ಯಾಲಿಗಳನ್ನು ನಡೆಸಿ ಸದ್ದು ಮಾಡಿದ್ದರೆ ನಂತರ ಬಿಹಾರಿ ರೆಜೆಮೆಂಟ್ ಸೈನಿಕರು ಲಡಾಖ್ ಗಡಿಯಲ್ಲಿ ಸಾವನಪ್ಪಿದರೆ ಅವರನ್ನು ಬಿಹಾರ ಸೈನಿಕರು ಎಂದು ಕರೆದು ಬಿಜೆಪಿಗರು ಟ್ರೋಲ್‌ಗೆ ಒಳಗಾಗಿದ್ದರು. ಈಗ ಆರ್‌ಜೆಡಿ ಪಕ್ಷದ ಐವರು ಎಂಎಲ್‌ಸಿಗಳು ಜೆಡಿ(ಯು)ಗೆ ಪಕ್ಷಾಂತರ ಮಾಡಿ ಸುದ್ದಿಯಾಗಿದ್ದಾರೆ.
ಆರ್‌ಜೆಡಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಮತ್ತು ಸದ್ಯಕ್ಕೆ ಜೈಲುವಾಸದಲ್ಲಿರುವ ಲಾಲು ಪ್ರಸಾದ್ ಅವರ ತೀವ್ರ ಬೆಂಬಲಿಗರಾದ ಮಾಜಿ ಕೇಂದ್ರ ಸಚಿವ ರಘುವನ್ಶ್ ಪ್ರಸಾದ್ ಸಿಂಗ್ ಅವರು ತಮ್ಮ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಈ ಬೆಳವಣಿಗೆ ಸಂಭವಿಸಿದೆ.
ಐದು ಎಂಎಲ್‌ಸಿಗಳಾದ ಎಸ್ಎಂ ಕಮರ್ ಆಲಂ, ಸಂಜಯ್ ಪ್ರಸಾದ್, ರಾಧಾ ಚರಣ್ ಸೇಠ್, ರಣವಿಜಯ್ ಕುಮಾರ್ ಸಿಂಗ್ ಮತ್ತು ದಿಲೀಪ್ ರಾಯ್ ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ದ್ವಿಪಕ್ಷೀಯ ಶಾಸಕಾಂಗದ ಮೇಲ್ಮನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅವರನ್ನು ಪ್ರತ್ಯೇಕ ಗುಂಪು ಎಂದು ಪರಿಗಣಿಸಿ ಜೆಡಿಯು ಜೊತೆ ವಿಲೀನಗೊಳ್ಳಲು ಅವಕಾಶ ನೀಡುವಂತೆ ಅವರು ಸಿಂಗ್ ಅವರನ್ನು ವಿನಂತಿಸಿದರು. ಮೇಲ್ಮನೆಯ ಜೆಡಿಯು ನಾಯಕ ರೀನಾ ಯಾದವ್ ಅವರು ಪಕ್ಷದ ಒಪ್ಪಿಗೆಯ ಪತ್ರದೊಂದಿಗೆ ಆಗಮಿಸಿದರು ಮತ್ತು ಕಾರ್ಯಕಾರಿ ಅಧ್ಯಕ್ಷರು ತಮ್ಮ ತ್ವರಿತ ಅನುಮೋದನೆಯನ್ನು ನೀಡಿದರು ಎನ್ನಲಾಗಿದೆ. ಜೆಡಿಯು ರಾಜ್ಯ ಸರ್ಕಾರದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿದೆ.
ಈ ಬೆಳವಣಿಗೆಯಿಂದ 75 ಸದಸ್ಯರ ವಿಧಾನ ಪರಿಷತ್‌ನಲ್ಲಿ ಆರ್‌ಜೆಡಿ ಪಕ್ಷದ ಬಲವನ್ನು ಕೇವಲ ಮೂರಕ್ಕೆ ಇಳಿಸಿತು. ಇದರಿಂದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ ರಾಬ್ರಿ ದೇವಿ ಅವರು ಸದನದಲ್ಲಿ ಪ್ರತಿಪಕ್ಷದ ನಾಯಕರ ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಎನ್‌ಡಿಎ ಮೂಲಗಳು ಹೇಳಿವೆ.
ನಿಯಮಗಳ ಪ್ರಕಾರ, ಮುಖ್ಯ ವಿರೋಧ ಪಕ್ಷವು ತನ್ನ ನಾಯಕನಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನದ ಪ್ರತಿಪಕ್ಷದ ನಾಯಕ ಹುದ್ದೆಗೆ ಅರ್ಹತೆ ಪಡೆಯಲು ಸದನದ ಒಟ್ಟು ಸ್ಥಾನಗಳಲ್ಲಿ ಕನಿಷ್ಠ 10% ಹೊಂದಿರಬೇಕು.
ಇದನ್ನೂ ಓದಿ: ಮಣಿಪುರದಲ್ಲಿ ಆಪರೇಷನ್ ಹಸ್ತ: ಸರ್ಕಾರ ಉಳಿಸಿಕೊಳ್ಳಲು CBI ಅಸ್ತ್ರ ಬಳಸಿತೇ BJP?