BJP

ಮಣಿಪುರದಲ್ಲಿ ಮೂವರು BJP ಶಾಸಕರು ಸೇರಿದಂತೆ ಒಂಭತ್ತು ಶಾಸಕರು ಬಿರೆನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ನಂತರ ಉಂಟಾಗಿದ್ದ ಅಸ್ಥಿರತೆ ಇನ್ನೂ ಮುಂದುವರೆದಿದೆ. ಅವರನ್ನು ಕಾಂಗ್ರೆಸ್‌ ತನ್ನ ಬುಟ್ಟಿಗೆ ಹಾಕಿಕೊಂಡು ಸೆಕ್ಯುಲರ್ ಪ್ರೋಗ್ರೆಸ್ಸಿವ್ ಫ್ರಂಟ್ (ಎಸ್‌ಪಿಎಫ್) ಎಂದು ಕರೆಯಲ್ಪಡುವ ಕಾಂಗ್ರೆಸ್‌ ನೇತೃತ್ವದ ಹೊಸ ಒಕ್ಕೂಟ ರಚಿಸಿದೆ. ಆ ಮೂಲಕ ರಾಜ್ಯಪಾಲರ ಬಳಿ ಅವಿಶ್ವಾಸ ನಿರ್ಣಯ ಮಂಡಿಸಿದೆ.

ಸರ್ಕಾರ ಬಿದ್ದುಹೋಗುವ ಅಪಾಯ ಅರಿತ BJP ಹಲವು ಕಸರತ್ತುಗಳಿಗೆ ಮುಂದಾಗಿದೆ. ಮೊದಲನೇ ಹಂತವಾಗಿ ಬೆಂಬಲ ಹಿಂತೆಗೆದುಕೊಂಡ ನ್ಯಾಷನಲ್ ಪೀಪಲ್ಸ್ ಪಾರ್ಟಿಯು (ಎನ್‌ಪಿಪಿ)ಯ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರ ಶಾಸಕರನ್ನು ಬಿಜೆಪಿಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿಸುವುದಕ್ಕಾಗಿ ಇಂದು ಗುವಾಹಟಿಗೆ ಕರೆತಂದಿದೆ.

ಎರಡನೇ ಹೆಜ್ಜೆಯಾಗಿ ಆಪರೇಷನ್ ಹಸ್ತದ ನಾಯಕತ್ವ ವಹಿಸಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಅವರನ್ನು ಪ್ರಶ್ನಿಸಲು ಸಿಬಿಐ ತಂಡ ಇಂಫಾಲ್‌ಗೆ ಬಂದಿಳಿದಿದೆ. 332 ಕೋಟಿ ರೂ.ಗಳ ಹಗರಣದ ಆರೋಪವನ್ನು ಈಗ ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ಅವರು ನಾಲ್ಕು ದಿನಗಳ ಹಿಂದಷ್ಟೇ ಬಿಜೆಪಿಯ ಮೂವರು ಸೇರಿದಂತೆ ಒಂಬತ್ತು ಶಾಸಕರು ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮಣಿಪುರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಚಲಾಯಿಸಿದ್ದರು.

ಈ ಎರಡೂ ಕ್ರಮಗಳ ಮೂಲಕ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಬಿಜೆಪಿಯ ಕೇಂದ್ರ ನಾಯಕತ್ವ ಅದರ ಜಬಾಬ್ದಾರಿ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಈಶಾನ್ಯದಲ್ಲಿ BJP ಯ ಮುಖ್ಯ ಟ್ರಬಲ್‌ ಶೂಟರ್ ಎನಿಸಿಕೊಂಡಿರುವ ಸಚಿವ ಹಿಮಂತ ಬಿಸ್ವಾ ಶರ್ಮಾ ಎನ್‌ಪಿಪಿ ಶಾಸಕರೊಂದಿಗಿನ ಮಾತುಕತೆಗೆ ಮುಂದಾಗಿದ್ದಾರೆ. ಅಗತ್ಯಬಿದ್ದರೆ ಆ ನಾಲ್ವರು ಶಾಸಕರನ್ನು ಮಾತುಕತೆಗೆ ದೆಹಲಿಗೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಮಣಿಪುರದ ಪರಿಸ್ಥಿತಿಯನ್ನು “ನಿಯಂತ್ರಣದಲ್ಲಿದೆ” ಎಂದು ಬಣ್ಣಿಸಿದ್ದಾರೆ. ಸಮಸ್ಯೆಯನ್ನು ಪರಿಹರಿಸಲಾಗುವುದು. ಎಲ್ಲಾ ಚರ್ಚೆಗಳು ಸಕಾರಾತ್ಮಕ ವಾತಾವರಣದಲ್ಲಿ ನಡೆಯುತ್ತಿವೆ ಮತ್ತು ಎರಡು ಅಥವಾ ಮೂರು ದಿನಗಳಲ್ಲಿ ಸಕಾರಾತ್ಮಕ ಫಲಿತಾಂಶವು ಹೊರಹೊಮ್ಮುತ್ತದೆ ಎಂದು ಅವರು ಹೇಳಿದ್ದಾರೆ.

ಅಸ್ಸಾಂನ ರಾಜ್ಯಸಭಾ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತು. ಆದರೆ ಇದು ಅನರ್ಹತೆಯನ್ನು ಎದುರಿಸುತ್ತಿರುವ ಮೂವರು ಕಾಂಗ್ರೆಸ್ ಶಾಸಕರಿಗೆ ಮತ ಚಲಾಯಿಸಲು ಅವಕಾಶ ನೀಡುವ ಸ್ಪೀಕರ್ ಅವರ ಕೊನೆಯ ನಿಮಿಷದ ನಿರ್ಧಾರದಿಂದ ಅವರ ವಿಜಯವಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

2017 ರ ವಿಧಾನಸಭಾ ಚುನಾವಣೆಯಲ್ಲಿ, 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 28 ಸ್ಥಾನಗಳೊಂದಿಗೆ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಗೆ 21 ಸ್ಥಾನಗಳು ದೊರೆತಿದ್ದವು. ಆದರೆ ನಾಲ್ಕು ಎನ್‌ಪಿಪಿ, ನಾಲ್ಕು ಎನ್‌ಪಿಎಫ್, ಒಂದು ಎಲ್‌ಜೆಪಿ, ಒಂದು ಟಿಎಂಸಿ, ಒಬ್ಬ ಸ್ವತಂತ್ರ ಸದಸ್ಯ ಮತ್ತು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯ ಬೆಂಬಲ ಪಡೆಯುವ ಮೂಲಕ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಯಿತು. ಬಿರೆನ್ ಸಿಂಗ್ ಸರ್ಕಾರ ರಚನೆಯ ನಂತರ ಇತರ ಏಳು ಕಾಂಗ್ರೆಸ್ ಶಾಸಕರು ಸಹ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಅವರನ್ನು ಕಾಂಗ್ರೆಸ್‌ ಅನರ್ಹಗೊಳಿಸಿತು.

ಶ್ಯಾಮ್‌ಕುಮಾರ್ ಸಿಂಗ್ ಮತ್ತು ಇತರ ಏಳು ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ನಂತರ ವಿಧಾನಸಭೆಯ ಬಲಾಬಲ 52 ಕ್ಕೆ ಕುಸಿದಿದೆ.

ಬಿಜೆಪಿಗೆ ಸದ್ಯಕ್ಕೆ 23 ಸದಸ್ಯರ ಬಲವನ್ನು ಹೊಂದಿದೆ. ಅದರಲ್ಲಿ 18 ಬಿಜೆಪಿ ಶಾಸಕರು, ನಾಲ್ಕು ಎನ್‌ಪಿಎಫ್ ಮತ್ತು ಒಬ್ಬ 1 ಎಲ್‌ಜೆಪಿ ಸದಸ್ಯ ಸೇರಿದ್ದಾರೆ.

ಕಾಂಗ್ರೆಸ್ ತನ್ನದೇ ಆದ 20 ಶಾಸಕರನ್ನು ಹೊಂದಿದೆ. ಒಬ್ಬ ಸದಸ್ಯನನ್ನು ಅನರ್ಹಗೊಳಿಸಲಾಗಿದೆ ಮತ್ತು ಏಳು ಪಕ್ಷಾಂತರಿಗಳನ್ನು ನಿರ್ಬಂಧಿಸಲಾಗಿದೆ. ಬಿರೆನ್ ಸಿಂಗ್ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡ ಒಂಬತ್ತು ಶಾಸಕರು ಕಾಂಗ್ರೆಸ್‌ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಸದ್ಯಕ್ಕೆ 29 ಶಾಸಕರ ಬೆಂಬಲದಿಂದ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ.

ಬಿಜೆಪಿಗೆ ಆತಂಕವಿದೆ ಎಂಬುದು ಸ್ಪಷ್ಟವಾಗಿದೆ. ಪಕ್ಷವು ಹಿಮಂತ ಬಿಸ್ವಾ ಶರ್ಮಾ ಅವರನ್ನು ಕಳುಹಿಸಿದ್ದು ಮಾತ್ರವಲ್ಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕೂಡ ಇಂಫಾಲ್ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

ಈ ಮಧ್ಯೆ, ಮಣಿಪುರ ಡೆವಲಪ್‌ಮೆಂಟ್‌ ಸೊಸೈಟಿ ಹಗರಣದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರನ್ನು ಪ್ರಶ್ನಿಸಲು ಸಿಬಿಐ ಮುಂದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದ ತನಿಖೆಯ ಭಾಗವೇ ಈ ಪ್ರಶ್ನಿಸುವುದಾಗಿದೆ ಎಂದು ಕೆಲವು ಮೂಲಗಳು ಹೇಳುತ್ತವೆ. ಇಷ್ಟು ದಿನ ಸುಮ್ಮನಿದ್ದ ಸಿಬಿಐ ಈಗ ಬಿಜೆಪಿ ಸರ್ಕಾರ ಕುಸಿತದಲ್ಲಿರುವುದರಿಂದ ಅಧಿಕಾರ ಬಳಸಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


ಇನ್ನಷ್ಟು ಸುದ್ದಿಗಳು: ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಕಾಂಗ್ರೆಸ್‌ಗೆ ಮತ್ತೆ ಅಧಿಕಾರದ ಸಾಧ್ಯತೆ

ಆಪರೇಷನ್ ಕಮಲಕ್ಕೆ ಮುಖಭಂಗ: ಮಣಿಪುರದ ಏಳು ಶಾಸಕರನ್ನು ವಿಧಾನ ಸಭೆ ಪ್ರವೇಶಿಸದಂತೆ ಹೈಕೋರ್ಟ್ ತೀರ್ಪು

LEAVE A REPLY

Please enter your comment!
Please enter your name here