ಬಿಹಾರದಲ್ಲಿ ಚುನಾವಣಾ ರಾಜಕೀಯ ಗರಿಗೆದರುತ್ತಿದ್ದು ಮಾಜಿ ಕೇಂದ್ರ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ರಾಜ್ಯದಲ್ಲಿ ತೃತೀಯ ರಂಗ ರಚಿಸುವ ಇಂಗಿತವನ್ನು ಪ್ರಕಟಿಸಿದ್ದಾರೆ.
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿಸಿದ ಸಿನ್ಹಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. ಎನ್‌ಡಿಎ ಸರ್ಕಾರದಿಂದ ರಾಜ್ಯಕ್ಕೆ ಬದಲಾವಣೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
“ನಮ್ಮೊಂದಿಗೆ ಸೇರಲು ಎಲ್ಲರಿಗೂ ಸ್ವಾಗತ. ಆದರೆ ಸೇರಲು ಯಾವುದೇ ಷರತ್ತು ವಿಧಿಸಬಾರದು” ಎಂದು ಹೇಳಿದ ಅವರು, ಶೀಘ್ರದಲ್ಲೇ ತಮ್ಮ ಒಕ್ಕೂಟದ ಹೆಸರನ್ನು ಪ್ರಕಟಿಸುವುದಾಗಿ ಹೇಳಿದರು.
“ಸಿನ್ಹಾ ಕಳೆದ ಮೂರು ವಾರಗಳಿಂದ ಪಾಟ್ನಾದಲ್ಲಿದ್ದಾರೆ” ಎಂದು ಅವರ ನಿಕಟವರ್ತಿ ನರೇಂದ್ರ ಸಿಂಗ್ ಹೇಳಿದರು. ಬಿಹಾರ ರಾಜಕಾರಣದ ಪ್ರಮುಖ ಪಕ್ಷವನ್ನು ಉಲ್ಲೇಖಿಸಿದ ಅವರು “ಎನ್‌ಡಿಎ ಮತ್ತು ಆರ್‌ಜೆಡಿಗೆ ಪರ್ಯಾಯವಾಗಿ ವಿಶ್ವಾಸಾರ್ಹ ಒಕ್ಕೂಟವನ್ನು ಉತ್ತೇಜಿಸುವುದು ನಮ್ಮ ಪ್ರಯತ್ನ” ಎಂದು ತಿಳಿಸಿದರು.
ಸಿನ್ಹಾ ಅವರ ತಂಡವನ್ನು ”ಏನನ್ನೂ ಸಾಧಿಸಲು ಸಾಧ್ಯವಾಗದೆ ಸೋತವರ ಗುಂಪು” ಎಂದು ಜೆಡಿಯು ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆಂದು ’ದಿ ಪ್ರಿಂಟ್’ ವರದಿ ಮಾಡಿದೆ.
ನಿನ್ನೆ (ಶನಿವಾರ) ನಡೆದ ಈ ಗೋಷ್ಠಿಯಲ್ಲಿ ಝಜರ್‌ಪುರದ ಮಾಜಿ ಸಂಸದ ದೇವೇಂದ್ರ ಪ್ರಸಾದ್ ಯಾದವ್, ಜೆಹಾನಾಬಾದ್‌ನ ಮಾಜಿ ಸಂಸದ ಅರುಣ್ ಕುಮಾರ್, ಮಾಜಿ ಕೇಂದ್ರ ಸಚಿವ ನಾಗಮಣಿ ಮತ್ತು ಬಿಹಾರದ ಮಾಜಿ ಬಿಜೆಪಿ ಮುಖಂಡ ಮತ್ತು ಸಂಸದ ರೇಣು ಕುಶ್ವಾಹ ಇದ್ದರು.
ಬಿಹಾರ ರಾಜ್ಯದಲ್ಲಿ ಈ ವರ್ಷದ ಅಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ.


