ಭೂಸುಧಾರಣೆಯಿಂದ ಉಳುವವರು ಮತ್ತು ದುಡಿಯುವವರ ಭಾರತವಾಗಿದ್ದನ್ನು ಈಗ ಉಳ್ಳವರ ಭಾರತವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದರು.
ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಮಮನೋಹ ಲೋಹಿಯಾ ಮತ್ತು ಸಮತಾ ವಿದ್ಯಾಲಯ ಟ್ರಸ್ಟ್ ನಿಂದ 2 ಸಾವಿರ ಮಾಸ್ಕ್ ಗಳು ಮತ್ತು ಸ್ಯಾನಿಟೈಜರ್ ವಿತರಿಸಿ ಅವರು ಮಾತನಾಡಿದರು.
ದಿವಂಗತ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿದರು. ಪರಿಣಾಮ ಮಠ-ದೇವಾಲಯಗಳು, ದೊಡ್ಡದೊಡ್ಡ ಭೂಮಾಲೀಕರು, ಜಾಗೀರುದಾರರ ಬಳಿಯಿದ್ದ ಲಕ್ಷಾಂತರ ಎಕರೆ ಭೂಮಿ ಗೇಣಿದಾರರು ಮತ್ತು ಉಳುವವರಿಗೆ ಸೇರುವಂತಾಯಿತು. ಇನ್ನೊಂದೆಡೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಬ್ಯಾಂಕುಗಳು, ವಿಮಾಕ್ಷೇತ್ರ, ವಿದ್ಯುಚ್ಛಕ್ತಿ ಕ್ಷೇತ್ರಗಳನ್ನು ರಾಷ್ಟ್ರೀಕರಣಗೊಳಿಸಿದರು. ರಾಜಧನ ರದ್ದುಪಡಿಸಿದರು. ಸಂವಿಧಾನದ ಆಶಯಗಳಡಿ ಕೆಲಸ ಮಾಡಿದರು. ದೇವರಾಜ ಅರಸು ಮತ್ತು ಇಂದಿರಾಗಾಂಧಿ ಕೈಗೊಂಡ ಕಾರ್ಯಗಳಿಂದ ಉಳ್ಳವರ ಭಾರತವಾಗಿದ್ದುದು ಉಳುವವರು ದುಡಿಯುವವರ ಭಾರತವಾಯಿತು ಎಂದರು.
ಆದರೆ ಇಂದು ಉಳ್ಳವರು ಪ್ರಬಲರಾಗಿದ್ದಾರೆ. ಪ್ರತೀಕಾರ ಮನೋಭಾವದಿಂದ ಉಳುವವರಿಂದ ಭೂಮಿ ಕಿತ್ತುಕೊಳ್ಳತೊಡಗಿದ್ದಾರೆ. ಉಳ್ಳವರಿಂದ ಸಂವಿಧಾನವನ್ನು ತಿರುಚುವ ಮತ್ತು ಬುಡಮೇಲು ಮಾಡುವ ಸಂಚು ನಡೆಯುತ್ತಿದೆ. ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು.
ಇಂದು ಉಳುವವರು ಮತ್ತು ದುಡಿಯುವವರಿಂದ ಭೂಮಿಯನ್ನು ಕಿತ್ತುಕೊಂಡು ಉಳ್ಳವರ ಭಾರತವನ್ನಾಗಿ ಮಾಡಲಾಗುತ್ತಿದೆ. ಕೊರೊನ ಸಂದರ್ಭವನ್ನು ಉಪಯೋಗಿಸಿಕೊಂಡು ಸಂವಿಧಾನವನ್ನು ನಾಶ ಮಾಡುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. ರೈತರ ಭೂಮಿಯನ್ನು ಬಂಡವಾಳಗಾರರಿಗೆ ಕೊಡಲಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳ ಕಪ್ಪುಹಣವನ್ನು ಭೂಮಿ ಖರೀದಿಗೆ ಸುರಿದು ಬಿಳಿಹಣ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರಕ್ಕೆ ಉತ್ತರದಾಯಿತ್ವ ಇರಬೇಕು. ಸರ್ಕಾರ ತಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಹೊಣೆಗಾರನಾಗಬೇಕು. ಆದರೆ ಇಂದು ಸಂವಿಧಾನ ನೋಡುತ್ತಿಲ್ಲ ಮತ್ತು ಪಾಲಿಸುತ್ತಿಲ್ಲ. ಉದಾರಹರಣೆಗೆ ನೋಟು ಅಮಾನ್ಯೀಕರಣವೇ ಸಾಕ್ಷಿಯಾಗಿದೆ ಎಂದರು.
ಸಂವಿಧಾನದ ಪ್ರಕಾರ ನೋಟು ಅಮಾನ್ಯಗೊಳಿಸುವ ಬಗ್ಗೆ ಆರ್.ಬಿ.ಐ ತೀರ್ಮಾನಿಸಬೇಕಿತ್ತು. ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಿತ್ತು. ಕೇಂದ್ರ ಶಿಫಾರಸ್ಸ ಒಪ್ಪಬೇಕಿತ್ತು. ನಂತರ ರಿಸರ್ವ ಬ್ಯಾಂಕ್ ಜಾರಿಗೊಳಿಸಬೇಕಿತ್ತು. ಈ ಹಂತದಲ್ಲಿ ಆರ್.ಬಿ.ಐ ನೋಟು ಮುದ್ರಣದ ತಯಾರಿ ಮಾಡಿಕೊಂಡು ನೋಟುಗಳನ್ನು ಪ್ರಿಂಟ್ ಮಾಡಬೇಕಿತ್ತು. ಬ್ಯಾಂಕು, ಎಟಿಎಂಗಳಿಗೆ ರವಾನಿಸಬೇಕಿತ್ತು. ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿತ್ತು. ಇದ್ಯಾವ ಪ್ರಕ್ರಿಯೆಯೂ ನಡೆಯಲಿಲ್ಲ ಎಂದು ಅವರು ಹೇಳಿದರು.
ನೋಟು ಅಮಾನ್ಯೀಕರಣದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿಲ್ಲ. ಹಣಕಾಸು ಸಚಿವರಿಗೆ, ಆರ್.ಬಿ.ಐ ನಿರ್ದೇಶಕರಿಗೂ ತಿಳಿದಿರಲಿಲ್ಲ. ಇಂತಹ ಕ್ರಮದಿಂದ ಆರ್ಥಿಕತೆ ಮತ್ತು ರೈತರು, ಕಾರ್ಮಿಕರು ಜನಸಾಮಾನ್ಯರು ಹೊಡೆತ ತಿಂದರು. ಜಿಎಸ್‌ಟಿಯಿಂದಲೂ ಸಾವಿರರಾರು ಉದ್ದಿಮೆಗಳು ಮುಚ್ಚಿದವು ಎಂದರು.
ಕಾರ್ಯಕ್ರಮದಲ್ಲಿ ಜನಪರ ಚಿಂತಕ ಕೆ.ದೊರೈರಾಜ್, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಸ್ವಾಗತಿಸಿ, ವಂದಿಸಿದರು.
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ


