ಕೋವಿಡ್-19 ಸೋಂಕು ಹಾಗೂ ದೀರ್ಘಕಾಲದ ಲಾಕ್‍ಡೌನ್, ಕೋವಿಡ್ ಸೋಂಕಿತ ರೋಗಿಗಳ ಮೇಲೆ ಹಾಗೂ ಕೋವಿಡ್ ಸೋಂಕು ಹೊಂದಿರದ ಇತರ ರೋಗಿಗಳ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡಿದೆ ಎಂಬುದು ನಮಗೆಲ್ಲರಿಗೂ ತಿಳಿದ ಸಂಗತಿ. ನಂಬಲರ್ಹವಾದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶಗಳಿಗಿಂತ ಸುಳ್ಳುಸುದ್ದಿಗಳೇ ಎಲ್ಲೆಡೆ ಹರಿದಾಡುತ್ತಿವೆ. ರೋಗ ಪತ್ತೆಹಚ್ಚುವ ಸಾಧನಗಳು ಮತ್ತು ಚಿಕಿತ್ಸಾ ಲಭ್ಯತೆಯ ಪ್ರಮಾಣ ಅವಶ್ಯಕತೆಗೆ ಅನುಗುಣವಾಗಿಲ್ಲ. ಲಾಕ್‍ಡೌನ್‍ನಿಂದಾಗಿ ಜೀವನೋಪಾಯ ಕಳೆದುಕೊಂಡ ಕಾರಣ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಲು ಸಾಧ್ಯವಾಗದ ಕಾರಣ ಈ ಸಾಂಕ್ರಾಮಿಕ ರೋಗ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿ ಪರಿಣಮಿಸಿದೆ. ಇದನ್ನು ಕೇವಲ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿಗಳಿಂದಷ್ಟೇ ನಿಭಾಯಿಸುವುದು ಸಾಧ್ಯವಿಲ್ಲ.
ಈ ಬಿಕ್ಕಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ, ಒಂದು ಸಣ್ಣ ಲ್ಯಾಬ್ ಪರೀಕ್ಷೆಗೂ ಜನರು ಕರ್ನಾಟಕದ ಮೂಲೆಮೂಲೆಗಳಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾಗಿರುವುದನ್ನು ನಾವು ನೋಡಿದ್ದೇವೆ. ಅದೂ ಲಾಕ್‍ಡೌನ್ ಸಂದರ್ಭದಲ್ಲಿ ಸಾರಿಗೆ ಕೊರತೆಯಿಂದ ಇದು ಇನ್ನೂ ಕಷ್ಟಕರ. ಹಲವು ಖಾಸಗಿ ಆಸ್ಪತ್ರೆಗಳು ಲಾಕ್‍ಡೌನಿನ ಆರಂಭದ ಹಂತದಲ್ಲೇ ಮುಚ್ಚಿದ್ದವು. ಈಗ ಸರ್ಕಾರ ರಾಜ್ಯದ ಆರೋಗ್ಯ ಸೇವೆಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಬೇಕೆಂದು ಆದೇಶ, ಸೂಚನೆಗಳನ್ನು ಹೊರಡಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಜೂನ್ 20, 2020ರಂದು ಕರ್ನಾಟಕ ಸರ್ಕಾರ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದು ಆದೇಶ ಹೊರಡಿಸಿತು. ಜೂನ್ 23, 2020ರಂದು ಚಿಕಿತ್ಸಾ ಪ್ಯಾಕೇಜ್‍ಗೆ ತಗಲುವ ವೆಚ್ಚವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತು. ಈ ನಿರ್ಧಾರಗಳನ್ನು ಕೈಗೊಂಡದ್ದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಕಾರ್ಯನಿರ್ವಾಹಕ ನಿರ್ದೇಶಕರ ನೇತೃತ್ವದ ಸಮಿತಿ. ಈ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಅಸೋಸಿಯೇಷನ್ ಆಫ್ ಪ್ರೈವೇಟ್ ಹಾಸ್ಪಿಟಲ್ಸ್ (ಎಹೆಚ್‍ಪಿಐ), ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ ಅಸೋಸಿಯೇಷನ್ ಹಾಗೂ ಇನ್ನಿತರ ಖಾಸಗಿ ಆಸ್ಪತ್ರೆಗಳ ಜೊತೆಗೆ ಸಮಾಲೋಚಿಸಿ ರಾಜ್ಯದ ಆರೋಗ್ಯ ವಿಮಾ ಯೋಜನೆಗಳನ್ನು ನಿರ್ವಹಿಸುವ ಸಂಸ್ಥೆ.
25 ಜೂನ್ 2020ರಂದು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸುಮಾರು 28 ಸಂಘಸಂಸ್ಥೆಗಳು ಕರ್ನಾಟಕ ಸರ್ಕಾರ ನಿಗದಿಪಡಿಸಿದ ಪ್ರಾಕೇಜ್‍ನ ಮೊತ್ತಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಪ್ರಶ್ನೆಗಳನ್ನು ಎತ್ತಿವೆ.
ಮೊದಲನೆಯದಾಗಿ, ಎಹೆಚ್‍ಪಿಐ, ಕಾರ್ಪೊರೇಟ್ ಆಸ್ಪತ್ರೆಗಳ ಪರವಾಗಿ ದೊಡ್ಡ ಮಟ್ಟದ ಲಾಬಿ ನಡೆಸುತ್ತಾ ಬಂದಿದ್ದು, ಕರ್ನಾಟಕದ ಆರೋಗ್ಯ ಸೇವಾ ಯೋಜನೆ ಮತ್ತು ಬೆಲೆನಿಗದಿ ವಿಷಯದಲ್ಲಿ ಪ್ರಭಾವ ಬೀರುತ್ತಾ ಬಂದಿದೆ. ಆರೋಗ್ಯ ಸೇವಾ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ತೆರಿಗೆ ಪಾವತಿಸುವವರ ಹಣ ಹೇಗೆ ವಿನಿಯೋಗವಾಗಬೇಕು ಎಂಬ ವಿಚಾರದಲ್ಲಿ ಖಾಸಗಿ ಆರೋಗ್ಯ ಸೇವಾ ಕ್ಷೇತ್ರ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂತಿರಬಾರದು. ಸರ್ಕಾರವೇ ಹೆಚ್ಚು ಪಾರದರ್ಶಕವಾಗಿ, ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ, ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವಿರುವ ಖಾಸಗಿ ಆಸ್ಪತ್ರೆಗಳಲ್ಲಿ 50% ಬೆಡ್ಡುಗಳು ಸಾರ್ವಜನಿಕ ಆರೋಗ್ಯ ವಲಯದಿಂದ ಸೂಚಿಸಲಾದ ರೋಗಿಗಳಿಗೆ ಮೀಸಲಾಗಿರಬೇಕು ಎಂದು ಅಧಿಸೂಚನೆಯ ಒಂದು ಅಂಶ ತಿಳಿಸುತ್ತದೆ. ಇದು ವೆಂಟಿಲೇಟರ್ ಹೊಂದಿರುವ ಹೊಂದಿರದ, ಹೈ ಡಿಪೆಂಡೆನ್ಸಿ ಯೂನಿಟ್ಸ್ (ಹೆಚ್ಚಿನ ನಿಗಾ ಘಟಕ), ಐಸಿಯುಗಳನ್ನು (ತೀವ್ರ ನಿಗಾ ಘಟಕ) ಒಳಗೊಂಡಿರುತ್ತದೆ. ಉಳಿದ 50ಶೇಕಡಾ ಸೌಲಭ್ಯವನ್ನು ಕೋವಿಡ್-19 ರೋಗಿಗಳಿಗಾಗಿ ಖಾಸಗಿಯಾಗಿ ಬಳಸಿಕೊಳ್ಳಬಹುದು. ಪ್ರತಿ ವಿಭಾಗದಲ್ಲೂ ಎಷ್ಟು ಬೆಡ್‍ಗಳು ದೊರೆಯುವಂತಿರಬೇಕು ಎಂಬ ಬಗ್ಗೆ ಈ ಸೂಚನೆ ತಿಳಿಸುವುದಿಲ್ಲ. ಇದು ಸಾರ್ವಜನಿಕ ಆಸ್ಪತ್ರೆಗಳಿಂದ ಸೂಚಿಸಿದ ರೋಗಿಗಳಿಗೆ ಯಾವ ಪ್ರಮಾಣದಲ್ಲಿ ಸೌಲಭ್ಯಗಳನ್ನು ನೀಡಬೇಕು ಹಾಗೂ ಶುಲ್ಕ ಪಾವತಿಸುವ ರೋಗಿಗಳಿಗೆ ಯಾವ ಸೌಲಭ್ಯ ನೀಡಬೇಕು ಎಂಬುದನ್ನು ಇದು ಖಾಸಗಿ ಆಸ್ಪತ್ರೆಗಳ ನಿರ್ಣಯಕ್ಕೆ ಬಿಡುತ್ತದೆ.
ಸರ್ಕಾರಿ ಆಸ್ಪತ್ರೆಗಳಿಂದ ಸೂಚಿಸಲ್ಪಟ್ಟ ರೋಗಿಗಳ ವೆಚ್ಚವನ್ನು ಸರ್ಕಾರ ಭರಿಸುತ್ತದೆ, ಆದರೆ ಖಾಸಗಿಯಾಗಿ ಚಿಕಿತ್ಸೆಗೆ ದಾಖಲಾದ ರೋಗಿಗಳ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಇವೆರಡಕ್ಕೂ ತಗಲುವ ವೆಚ್ಚವನ್ನು ಸರ್ಕಾರವೇ ನಿಗದಿಪಡಿಸಿದ್ದಾದರೂ. ಸಾರ್ವಜನಿಕ ಆಸ್ಪತ್ರೆಯಿಂದ ಕೋವಿಡ್ ರೋಗಿ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ವಿದ್ ವೆಂಟಿಲೇಟರ್ ಸೇವೆ ಪಡೆದರೆ ಸರ್ಕಾರ ಆಸ್ಪತ್ರೆಗೆ ದಿನಕ್ಕೆ 10,000ರೂಗಳನ್ನು ಪಾವತಿ ಮಾಡುತ್ತದೆ. ರೋಗಿ ನೇರವಾಗಿ ಖಾಸಗಿ ಆಸ್ಪತ್ರೆಗೆ ಪ್ರವೇಶ ಪಡೆದರೆ ಅವರು ಜನರಲ್ ಅಥವಾ ಒಬ್ಬರಿಗಿಂತ ಹೆಚ್ಚು ಮಂದಿಯಿರುವ ವಾರ್ಡ್‍ನಲ್ಲಿದ್ದರೆ ದಿನಕ್ಕೆ 25,000ರೂ ಪಾವತಿಸಬೇಕಾಗುತ್ತದೆ. ಇಬ್ಬರಿರುವ ವಾರ್ಡ್‍ನಲ್ಲಿದ್ದರೆ ಈ ವೆಚ್ಚ 10% ಹೆಚ್ಚಾಗುತ್ತದೆ. ಒಬ್ಬರೇ ಇರುವ ಕೋಣೆಯಲ್ಲಿದ್ದರೆ ವೆಚ್ಚ 25% ಹೆಚ್ಚಾಗುತ್ತದೆ. ಈ ಬಗೆಯ ನಿಯಮಗಳು ರೋಗಿಗಳಲ್ಲಿ ಭಿನ್ನ ವರ್ಗಗಳನ್ನು ಸೃಷ್ಟಿಸುತ್ತವೆ. ಹೀಗಿರುವಾಗ ಸಹಜವಾಗಿಯೇ ಕೆಲವು ರೋಗಿಗಳಿಗೆ(ಹೆಚ್ಚು ದುಡ್ಡು ಕೊಡುವವರು) ಹೆಚ್ಚಿನ ಕಾಳಜಿ ಸಿಗುತ್ತದೆ. ವ್ಯಕ್ತಿಗಳು ಅಸ್ವಸ್ಥರಾದಾಗ ಈ ಬಗೆಯ ವಿಚಿತ್ರ ಆಯ್ಕೆಗಳನ್ನು ಇಡುವುದು ಸರಿಯಲ್ಲ.
ಈ ನಿಗದಿತ ಪ್ಯಾಕೇಜ್ ದರಗಳೂ ಅನಿರೀಕ್ಷಿತ ಸಮಸ್ಯೆಗಳು, ಶಸ್ತ್ರಚಿಕಿತ್ಸೆಗಳು, ಇತರ ಆರೋಗ್ಯ ಸಮಸ್ಯೆಗಳು, ಗರ್ಭಿಣಿಯರಿಗೆ ಎದುರಾಗುವ ಸಮಸ್ಯೆಗಳು ಮುಂತಾದವುಗಳನ್ನು ಒಳಗೊಳ್ಳುವುದಿಲ್ಲ. ಇದು ತುಂಬಾ ಸಮಸ್ಯಾತ್ಮಕವಾದುದು. ಏಕೆಂದರೆ, ಯಾರು ಈಗಾಗಲೇ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೋ ಅವರೇ ಕೋವಿಡ್-19 ಕಾರಣಕ್ಕೆ ಹೆಚ್ಚು ತೊಂದರೆಗೊಳಗಾಗುತ್ತಿರುವವರು. ಇವರಿಗೆ ಆಕ್ಸಿಜನ್, ವೆಂಟಿಲೇಟರ್ ಸಪೋರ್ಟ್, ದುಬಾರಿ ಔಷಧಗಳು ಹಾಗೂ ಆಸ್ಪತ್ರೆಯಲ್ಲಿ ಹೆಚ್ಚಿನ ದಿನ ಚಿಕಿತ್ಸೆ ಪಡೆಯುವ ಅಗತ್ಯವಿರುತ್ತದೆ. ಖಾಸಗಿ ರೋಗಿಗಳಿಗೆ ಸಂಬಂಧಿಸಿದ ಈ ಇನ್ನಿತರ ಆರೋಗ್ಯ ಸಮಸ್ಯೆಗಳನ್ನೂ ಪ್ಯಾಕೇಜ್‍ನ ಭಾಗವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಚಿಕಿತ್ಸೆ ನೀಡಲು ಏನು ಕಾರಣ ಎಂಬುದನ್ನೂ ವಿವರವಾಗಿ ನಮೂದಿಸಬೇಕಾಗುತ್ತದೆ.
ಖಾಸಗಿ ವಿಮೆ ಮತ್ತು ಆಸ್ಪತ್ರೆ ಹಾಗೂ ಕಾರ್ಪೊರೇಟ್ ಒಪ್ಪಂದಕ್ಕೊಳಪಡುವ ರೋಗಿಗಳಿಗೆ ಈ ಪ್ಯಾಕೇಜ್ ಅನ್ವಯಿಸುವುದಿಲ್ಲ ಎಂದು ಈ ಅಧಿಸೂಚನೆ ಹೇಳುತ್ತದೆ. ಆಸ್ಪತ್ರೆಗಳು ದುಬಾರಿ ವೆಚ್ಚ ವಿಧಿಸುವ ಬಗ್ಗೆ ವಿಮಾ ಕಂಪೆನಿಗಳು ಆತಂಕ ವ್ಯಕ್ತಪಡಿಸಿವೆ. ಪಿಪಿಇ ಹಾಗು ಹೊಸ ಬಗೆಯ ಚಿಕಿತ್ಸೆಗಳು ವಿಮೆಯ ಅಡಿಯಲ್ಲಿ ಬರುವುದಿಲ್ಲ. ಇವುಗಳನ್ನು ರೋಗಿಗಳು ಕೈಯಿಂದ ಭರಿಸಬೇಕಾಗುತ್ತದೆ. ಪ್ಯಾಕೇಜ್‍ಅನ್ನು ಆಧಾರವಾಗಿರಿಸಿಕೊಳ್ಳದೇ ಎಲ್ಲ ರೋಗಿಗಳಿಗೂ ಅನ್ವಯವಾಗುವಂತೆ ಚಿಕಿತ್ಸೆಗೆ ಸಂಬಂಧಿಸಿದ ಸಾಮಾನ್ಯ ಮಾರ್ಗಸೂಚಿಗಳು ಹಾಗೂ ಶುಲ್ಕಗಳನ್ನು ರೂಪಿಸಬೇಕಾಗಿದೆ.
ಎಹೆಚ್‍ಪಿಐ, ‘ಕೋವಿಡ್-19 ರೋಗಿಗಳ ಚಿಕಿತ್ಸೆಗೆ ತಗಲುವ ಸಾಮಾನ್ಯ ವೆಚ್ಚ’ವನ್ನು ಸಲಹಾರೂಪದಲ್ಲಿ ಸರ್ಕಾರದ ಮುಂದಿಟ್ಟಿದೆ. ಇದರಲ್ಲಿ ದುಬಾರಿ ಔಷಧಿಗಳು ಹಾಗೂ ಕೋವಿಡ್ ಸೋಂಕಿನಿಂದ ಬಿಗಡಾಯಿಸಿದ ಇನ್ನಿತರ ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ವೆಚ್ಚ ಸೇರಿಕೊಂಡಿಲ್ಲ. ಇದು ರೋಗಿಗಳಿಂದ ಅತಾರ್ಕಿಕವಾಗಿ, ದೊಡ್ಡ ಮೊತ್ತದ ಹಣ ಕೀಳಲು ಅನುವು ಮಾಡಿಕೊಡುತ್ತದೆ.
ನಾಲ್ಕು ವಿಭಾಗಗಳಲ್ಲಿ ತಗಲುವ ವೆಚ್ಚ


ಎಹೆಚ್‍ಪಿಐ, ಪ್ರತಿ ಕೋವಿಡ್-19 ರೋಗಿಗೆ ಜನರಲ್ ವಾರ್ಡ್‍ನಲ್ಲಿ ತಗಲುವ ಅಂದಾಜು ವೆಚ್ಚವನ್ನೂ ಸೂಚಿಸಿದೆ. ಇದು ಹೊದಿಕೆ, ನೀರು, ವಿದ್ಯುತ್ ಬಿಲ್‍ಗಳನ್ನೂ ಗಮನಕ್ಕೆ ತೆಗೆದುಕೊಂಡು ಪ್ರತಿ ರೋಗಿಗೆ ದಿನವೊಂದಕ್ಕೆ ರೂ.500 ಅನ್ನು ನಿಗದಿಪಡಿಸಿದೆ. ಇದು ಇಡೀ ಕುಟುಂಬಕ್ಕೆ ಒಂದು ತಿಂಗಳಿಗೆ ತಗಲುವ ಒಟ್ಟು ನೀರು, ವಿದ್ಯುತ್ ಬಿಲ್ಲಿಗಿಂತಲೂ ಹೆಚ್ಚಿನ ಮೊತ್ತ. ಐವಿ ಫ್ಲೂಯಿಡ್ ಸೇರಿದಂತೆ ಔಷಧಿಯ ಶುಲ್ಕ ಪ್ರತಿ ರೋಗಿಗೆ ಪ್ರತಿ ದಿನಕ್ಕೆ ರೂ.700 ಎಂದು ಸೂಚಿಸಲಾಗಿದೆ. ರೋಗಿಗೆ ಔಷಧದ ಅಗತ್ಯವೇ ಇಲ್ಲದೇ ಕೇವಲ ಮುನ್ನೆಚ್ಚರಿಕೆಗಾಗಿ ಆಸ್ಪತ್ರೆಗೆ ಸೇರಿಸಿಕೊಂಡಾಗ ಇದು ಹೇಗಾಗುತ್ತದೆ? ದ್ರವಗಳನ್ನು ರೋಗಿ ಬಾಯಿಯಲ್ಲೇ ಸ್ವೀಕರಿಸಲು ಶಕ್ತನಿದ್ದಾಗಲೂ ಈ ಶುಲ್ಕ ಭರಿಸಬೇಕಾಗುವುದರ ಅರ್ಥವೇನು? ಅವರಿಗೆ ಐವಿ ಫ್ಯೂಯಿಡ್ ಹಾಕುವುದು ಕಡ್ಡಾಯವೇ?
ಪ್ರತಿದಿನಕ್ಕೆ ಹೆಮಟಾಲಜಿ, ಮೈಕ್ರೋಬಯಾಲಜಿ ಹಾಗೂ ರೇಡಿಯಾಲಜಿ ಪರೀಕ್ಷೆಗಳ ಅಂದಾಜು ಮೊತ್ತ ರೂ.1400 ಎಂದು ಸೂಚಿಸಲಾಗಿದೆ. ಇದು ಅನೈತಿಕ ಮತ್ತು ಅವೈಜ್ಞಾನಿಕ. ಏಕೆಂದರೆ ಇದು ರೋಗಿಗಳು ಅನಗತ್ಯವಾಗಿ ಪರೀಕ್ಷೆಗೊಳಪಡುವಂತೆ ಮಾಡುತ್ತದೆ. ಇವುಗಳಲ್ಲಿ ಅನೇಕ ಪರೀಕ್ಷೆಗಳು ತುಂಬಾ ಪ್ರಾಥಮಿಕವಾದವು ಹಾಗೂ ರೋಗದ ತೀವ್ರತೆ ಹಾಗೂ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಿದ್ದಾರೆಂದು ತಿಳಿಯಲು ನಡುನಡುವೆ ಇವುಗಳನ್ನು ನಡೆಸಬೇಕಾಗುತ್ತದೆ. ರೋಗಿಗೆ ಉಸಿರಾಟದ ಸಮಸ್ಯೆ ಇಲ್ಲದಿದ್ದಲ್ಲಿ ಪ್ರತಿದಿನ ಎದೆಯ ಎಕ್ಸ್‍ರೇ ಹಾಗೂ ಸಿಟಿ ಸ್ಕ್ಯಾನ್ ಮಾಡುವ ಅಗತ್ಯವೇನಿದೆ? ರೋಗಿಗೆ ಯಾವುದೇ ಲಿವರ್ ಸಮಸ್ಯೆ ಇಲ್ಲದಿರುವಾಗಲೂ ಪ್ರತಿದಿನ ಲಿವರ್ ಫಂಕ್ಷನ್ ಟೆಸ್ಟ್ ಮಾಡುವ ಅವಶ್ಯಕತೆ ಏನಿದೆ? ಏನೇ ಇದ್ದರೂ ಈ ಪರೀಕ್ಷೆಗಳು ಗಂಟೆಗಳ ಅಂತರದಲ್ಲಿ ಬದಲಾವಣೆಯನ್ನು ತೋರುವುದಿಲ್ಲ, ದಿನಗಳು, ವಾರಗಳಲ್ಲಿ ಬದಲಾವಣೆ ತೋರಿಸುತ್ತವೆ.
ಸರ್ಕಾರ ಆರೋಗ್ಯ ಸೇವೆಯ ಖಾಸಗೀಕರಣವನ್ನು ನಿಲ್ಲಿಸಬೇಕು. ಬದಲಾಗಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವತ್ತ ಗಮನ ಹರಿಸಬೇಕು. ಭಾರತದ ಆರೋಗ್ಯ ಸಂಬಂಧಿ ನೀತಿಗಳ ರೂಪಣೆಯಲ್ಲಿ ಈ ಆರೋಗ್ಯ ಬಿಕ್ಕಟ್ಟು ಒಂದು ಮಹತ್ತರ ತಿರುವಾಗಿ ಪರಿಣಮಿಸಬೇಕಾಗಿದೆ. ಎಲ್ಲರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮಹತ್ವವನ್ನು ಮತ್ತೆ ಮುನ್ನೆಲೆಗೆ ತರಬೇಕಾಗಿದೆ.
ಡಾ. ಸಿಲ್ವಿಯಾ ಕರ್ಪಗಂ, ಸಾರ್ವಜನಿಕ ಆರೋಗ್ಯ ವೈದ್ಯರು ಮತ್ತು ಸಂಶೋಧಕರು
(ಕನ್ನಡಕ್ಕೆ): ಪಿ.ಭಾರತಿ ದೇವಿ
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಕೋವಿಡ್ ನಿಜಪರೀಕ್ಷೆ: ಖಾಸಗಿ ಆಸ್ಪತ್ರೆಗಳು ಖಳನಾಯಕರಾಗುವರೇ?


