ಕೋವಿಡ್ ನಿಜಪರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳು ಖಳನಾಯಕರಾಗುವರೇ?

ಕರ್ನಾಟಕ ಸರ್ಕಾರ ತನ್ನ ಅತ್ಯಂತ ಕಠಿಣ ಪರೀಕ್ಷೆಯನ್ನು ಈಗಷ್ಟೇ ಎದುರಿಸಲು ಹೊರಟಿದೆ. ಅದಕ್ಕಾಗಿ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಮೂಲಸೌಕರ್ಯದ ಹಲವು ಸಂಗತಿಗಳನ್ನು ಸರ್ಕಾರ ಸುಧಾರಿಸಲೇಬೇಕಿದೆ. ಅದರಿಂದ ಅಂಚಿಗೊತ್ತಲ್ಪಟ್ಟ ನಿರ್ಲಕ್ಷಿತ ಮತ್ತು ದುರ್ಬಲ ಸಮುದಾಯಗಳ ಕೋವಿಡ್ ರೋಗಿಗಳು ಸೇವೆಯಿಂದ ವಂಚಿತರಾಗದಂತೆ, ಖಾಸಗಿ ಆಸ್ಪತ್ರೆಗಳಿಂದ ರೋಗಿಗಳು ಆತಂಕವನ್ನು ಎದುರಿಸದಂತೆ ಸರ್ಕಾರ ಖಾತ್ರಿಪಡಿಸಬೇಕಿದೆ.


ಮೂಲ: ಡಾ. ಅಖಿಲಾ ವಾಸನ್

ಅನುವಾದ: ಮಲ್ಲಿಗೆ

ಈವರೆಗೆ ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದ ನಿಯಂತ್ರಣದ ಕೆಲಸವನ್ನು ಕರ್ನಾಟಕ ಚೆನ್ನಾಗಿಯೇ ಮಾಡಿದೆ ಅನಿಸುತ್ತದೆ. ಆದರೆ, ನಿಜವಾದ ಪರೀಕ್ಷೆ ಈಗಷ್ಟೇ ಆರಂಭವಾಗಬೇಕಿದೆ. ತಳಮಟ್ಟದ ವರದಿಗಳು ಸರ್ಕಾರದ ಕಾರ್ಯನಿರ್ವಹಣೆಯಲ್ಲಿರುವ ಕೊರತೆಗಳನ್ನು ತೋರಿಸಲಾರಂಭಿಸಿವೆ.

ಉದಾಹರಣೆಗೆ, ಬೆಂಗಳೂರಿನ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ವಾಸಿಸುತ್ತಿರುವ ಜನರು ಹಲವು ಸಮಸ್ಯೆಗಳ ಬಗ್ಗೆ ದೂರುತ್ತಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ತಮ್ಮ ನಿಯಮಿತ ಪರೀಕ್ಷೆಗಳಿಗೆ ಮತ್ತು ಹೆರಿಗೆಗಾಗಿ ಆರೋಗ್ಯ ಕೇಂದ್ರಗಳನ್ನು ತಲುಪಲು ವಾಹನ ಸೌಲಭ್ಯವಿಲ್ಲ. 6 ವರ್ಷದೊಳಗಿನ ಮಕ್ಕಳಿಗೆ ನಿಯಮಿತ ಲಸಿಕೆ ಕಾರ್ಯಕ್ರಮಗಳು ತೊಂದರೆಗೆ ಒಳಗಾದಂತೆ ಕಾಣುತ್ತಿವೆ. ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು (ಇವರು ಕೋವಿಡ್ 19ಕ್ಕೆ ಹೆಚ್ಚು ಬೇಗ ತುತ್ತಾಗುವ ಸಾಧ್ಯತೆ ಇರುವವರೂ ಕೂಡಾ ಆಗಿರುತ್ತಾರೆ) ತಮ್ಮ ಔಷಧಿಗಳನ್ನು ಪಡೆಯುವುದು ಅಥವಾ ಡಯಾಲಿಸಿಸ್‌ನಂತಹ ಸೇವೆಗಳನ್ನು ತಲುಪುವುದು ಕಷ್ಟಕರವಾಗಿದೆ.


ವೀಡಿಯೋ ನೋಡಿ: ವಾಹಿನಿ’ ಮಾಧ್ಯಮಗಳು ಹೇಳದ ಮಾಹಿತಿಗಳು, ಕೇಳದ ಪ್ರಶ್ನೆಗಳು ಇಲ್ಲಿವೆ.


ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಿಯಮಿತ ಆರೋಗ್ಯ ಸೇವೆಗಳು ಬಹಳ ಕೆಟ್ಟ ರೀತಿಯಲ್ಲಿ ತೊಂದರೆಗೆ ಸಿಲುಕಿವೆ ಮತ್ತು ಇದರ ಪರಿಣಾಮಗಳನ್ನು ಬಹುಶಃ ಮುಂದಿನ ದಿನಗಳಲ್ಲಿ ಅಂಕಿ ಅಂಶಗಳು ತೋರಿಸಬಹುದು. ಆಹಾರ ಮತ್ತು ಆಹಾರ ಧಾನ್ಯಗಳ ಕೊರತೆ ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯಗಳೂ ಕೂಡಾ ಕಂಟೈನ್‌ಮೆಂಟ್ ಜೋನ್‌ಗಳನ್ನು ಕಾಡುತ್ತಿರುವ ಸಮಸ್ಯೆಗಳು. ಕೋವಿಡ್ ಪೂರ್ವಾಗ್ರಹದ ಕಾರಣಕ್ಕೆ ಕಂಟೈನ್‌ಮೆಂಟ್ ಜೋನ್‌ಗಳ ಜನರು ತಮ್ಮ ಕೆಲಸಗಳನ್ನೂ ಕಳೆದುಕೊಂಡಿದ್ದು, ಇದು ಅವರನ್ನು ಇನ್ನಷ್ಟು ಅಪಾಯಕ್ಕೆ ದೂಡಿದೆ.


ಓದಿ: ಮಗು ಸಾಯುತ್ತಿದ್ದರೂ ವೈದ್ಯರು ಮುಟ್ಟಿಲ್ಲವೆಂದು ಆರೋಪ; ಹೃದಯ ವಿದ್ರಾವಕಾರಿ ಘಟನೆ


ಈ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳು ಬಹಳ ನಿಧಾನವಾಗಿ ಸಾಗಿವೆ. ಸಮಸ್ಯೆ ಪರಿಹರಿಸುವುದಕ್ಕೆ ಬೇಡಿಕೊಳ್ಳುವ ಜನರನ್ನು ಯಾವಾಗಲೂ ಒಬ್ಬ ಅಧಿಕಾರಿಯಿಂದ ಇನ್ನೊಬ್ಬ ಅಧಿಕಾರಿಯ ಕಡೆಗೆ ಸಾಗಹಾಕಲ್ಪಡುತ್ತಿದ್ದಾರೆ. ಹಾಗೆಯೇ, ಕ್ವಾರಂಟೈನ್‌ನಲ್ಲಿ ಇರುವವರಿಗೆ ನೀಡಲಾಗುತ್ತಿರುವ ಸೌಲಭ್ಯಗಳೂ ಕೂಡಾ ಕಳಪೆ ದರ್ಜೆಯವಾಗಿರುವಂತೆ ತೋರುತ್ತದೆ. ಕ್ವಾರಂಟೈನ್‌ನಲ್ಲಿರುವ ಜನರು ಕಳಪೆ ಗುಣಮಟ್ಟದ ಆಹಾರ, ಸಮರ್ಪಕ ಸಂಖ್ಯೆಯಲ್ಲಿದ ಶೌಚಾಲಯಗಳು ಮತ್ತು ನೀರು ಕಟ್ಟಿಕೊಳ್ಳುವ ಶೌಚಾಲಯಗಳು, ನೀರಿನ ಕೊರತೆ, ಅತಿಯಾದ ಸಂಖ್ಯೆಯ ಜನರ ಸಮಸ್ಯೆ ಮುಂತಾದವುಗಳನ್ನು ಹೇಳಿಕೊಂಡಿದ್ದಾರೆ.

ಅದೇ ರೀತಿ, ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಗಳೂ ಕೂಡಾ ಗುಣಮಟ್ಟದ ಆರೋಗ್ಯ ಸೌಕರ್ಯ ನೀಡುವುದರಲ್ಲಿ ಹಿಂದೆಬಿದ್ದಿವೆ. ಬೆಂಗಳೂರು ನಗರದಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಕುರಿತಾದ ವರದಿಗಳು ಈ ನಡುವೆ ಹೊರಬರುತ್ತಿವೆ. ಕೋವಿಡ್ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ವಿಶೇಷವಾಗಿ ಸೋಂಕು ತನ್ನ ತುತ್ತತುದಿ ಮುಟ್ಟುವುದಕ್ಕೆ ಇನ್ನು ಕೆಲವೇ ತಿಂಗಳುಗಳಿವೆ ಎಂದು ಹೇಳಲಾಗುತ್ತಿರುವಾಗ, ಈ ವರದಿಗಳು ಸರ್ಕಾರದ ಪರವಾಗಿ ಸಮಾಧಾನದ ವಾದವನ್ನೇನೂ ಮಂಡಿಸುತ್ತಿಲ್ಲ!

ಕಂಟೈನ್‌ಮೆಂಟ್ ಕ್ರಮಗಳಿಗೆ ಸಂಬಂಧಪಟ್ಟಂತೆ, ಕಳೆದ ಕೆಲವು ದಿನಗಳಲ್ಲಿ ಅತಿವೇಗವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆಂಗಳೂರಿನಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಿಸುವ ಸಾಧ್ಯತೆಯನ್ನು ಸರ್ಕಾರ ತಳ್ಳಿಹಾಕಿದೆ. ಬದಲಿಗೆ, ಎಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡಿವೆಯೋ ಅಂತಹ ಪ್ರದೇಶಗಳನ್ನು ಲಾಕ್‌ಡೌನ್ ಅಥವಾ ಸೀಲ್ ಮಾಡಲಾಗುತ್ತಿದೆ. ಬೆಂಗಳೂರಿನ ಒಟ್ಟು ಕಂಟೈನ್‌ಮೆಂಟ್ ಪ್ರದೇಶಗಳ ಸಂಖ್ಯೆ ಈವರೆಗೆ 521. ಇದರಲ್ಲಿ 44 ಪ್ರದೇಶಗಳು ತಮ್ಮ ‘ಸಹಜ ಸ್ಥಿತಿ’ಗೆ ಮರಳಿರುವುದಾಗಿ ಹೇಳಲಾಗುತ್ತಿದೆ.

ಕರ್ನಾಟಕಕ್ಕೆ ಸಂಬಂಧಪಟ್ಟ ಅಂದಾಜುಗಳು:

ಜಾಗತಿಕ ಸಾಂಕ್ರಾಮಿಕದ ಆರಂಭದ ದಿನಗಳಿಂದಲೂ ಹಲವು ಗಣಿತದ ಲೆಕ್ಕಾಚಾರಗಳು ಬೇರೆ ಬೇರೆ ಸಂಖ್ಯೆಯ ಪ್ರಕರಣಗಳ ಮುನ್ಸೂಚನೆಯನ್ನೂ, ಸೋಂಕು ತನ್ನ ತುತ್ತತುದಿ ತಲುಪುವುದಕ್ಕೆ ಬೇರೆ ಬೇರೆ ಸಮಯದ ಅಂದಾಜುಗಳನ್ನೂ ಮುಂದಿಡುತ್ತಾ ಬಂದಿದ್ದವು. ‘ತುತ್ತತುದಿ’ ಎಂಬುದು ಗ್ರಾಫ್ ಮೇಲಿನ ಒಂದು ಬಿಂದುವಾಗಿದ್ದು, ಅದರ ನಂತರ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗುತ್ತಾ ಬರುತ್ತವೆ. ತುದಿಯನ್ನು ತಲುಪಿದಾಗ R0 ಎಂಬುದು 1ಕ್ಕಿಂತ ಕಡಿಮೆಯಾಗಿರುತ್ತದೆ. R0 ಅಂದರೆ, ಪ್ರತಿಯೊಬ್ಬ ಸೋಂಕಿತ ಎಷ್ಟು ಮಂದಿಗೆ ಸೋಂಕನ್ನು ದಾಟಿಸುತ್ತಾರೆ ಎಂಬ ಸಂಖ್ಯೆ. ಈ ಬಿಂದುವಿನಲ್ಲಿ ನಾವು ವೈರಸ್ ವಿರುದ್ಧ ನಿಧಾನಕ್ಕೆ ‘ಗುಂಪು ರೋಗನಿರೋಧಕ ಶಕ್ತಿ’ಯನ್ನು ಗಳಿಸಿಕೊಳ್ಳುವ ಹಂತವನ್ನು ಮುಟ್ಟುತ್ತಿದ್ದೇವೆ ಎಂದು ಅರ್ಥ.

ಈ ಬಗೆಯ ಅಂದಾಜುಗಳ ಮೇಲೆ ಅತಿಯಾದ ನಂಬಿಕೆ ಇಡುವ ಬಗ್ಗೆಯೂ ಆತಂಕಗಳುಂಟಾಗಿವೆ. ಆದರೆ ತಜ್ಞರು ಹೇಳುತ್ತಿರುವಂತೆ, ಯಾವುದೇ ಅಂದಾಜು ಕೂಡಾ ಸೋಂಕಿನ ಮಾದರಿಯೊಳಗೆ ಪರಿಗಣಿಸಲಾಗುವ ಅಂಕಿಅಂಶಗಳಷ್ಟೇ ಸರಿಯಾದುದು. ಅಂಕಿಅಂಶಗಳು ಎಷ್ಟು ಬಲವಾಗಿರುತ್ತವೋ ಅಂದಾಜುಗಳೂ ಅಷ್ಟೇ ನಿಖರವಾಗಿರುತ್ತವೆ. ಜೊತೆಗೆ, ಎಲ್ಲ ಉತ್ತರಗಳನ್ನೂ ಕೊಡುವಂತಹ ಬೇರೆ ಯಾವುದೇ ಮಾದರಿಗಳೂ ಇರಲು ಸಾಧ್ಯವಿಲ್ಲ. ತಜ್ಞರ ಪ್ರಕಾರ ಭಾರತಕ್ಕಾಗಲೀ, ರಾಜ್ಯಕ್ಕಾಗಲೀ ಯಾವುದೇ ಒಂದು ತುತ್ತತುದಿ ಎಂಬುದಿರಲು ಸಾಧ್ಯವಿಲ್ಲ.


ಓದಿ: ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಹೆಚ್ಚಿನ ಮಾನವ ಶಕ್ತಿ ಹಾಗೂ ಸಾಕಷ್ಟು ಸುರಕ್ಷತೆಗೆ ಒತ್ತಾಯಿಸಿ ವೈದ್ಯರ ಪ್ರತಿಭಟನೆ


ಸದ್ಯಕ್ಕೆ, ಬೇರೆ ಬೇರೆ ರಾಜ್ಯಗಳು ಮತ್ತು ನಗರಗಳು ಜುಲೈ ಇಂದ ನವೆಂಬರ್ ನಡುವೆ ಬೇರೆ ಬೇರೆ ಸಮಯಗಳಲ್ಲಿ ಸೋಂಕಿನ ತುದಿಯನ್ನು ತಲುಪಬಹುದೆಂದು ಊಹಿಸಲಾಗಿದೆ. ಸೋಂಕಿನ ಹರಿವಿನಲ್ಲಿ ಒಂದೇ ರಾಜ್ಯದ ಬೇರೆ ಬೇರೆ ಪ್ರದೇಶಗಳ ನಡುವೆ, ನಗರ ಪಟ್ಟಣಗಳ ನಡುವೆ ಇರಬಹುದಾದ ಭಿನ್ನತೆಗಳನ್ನು ಗಮನಿಸುವ ಮೂಲಕ ನೀತಿ ನಿರೂಪಕರು ಸೋಂಕಿನ ನಿಯಂತ್ರಣಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸಲು ಸಾಧ್ಯವೆಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಸೋಂಕಿನ ಹರಡುವಿಕೆಯ ಅಂದಾಜಿಗೆ ಬರುವುದಕ್ಕಾಗಿ ಸಾಂಕ್ರಾಮಿಕ ಎರಡು ಪಟ್ಟು ಹೆಚ್ಚಳವಾಗುವ ಸಮಯ, ಪಾಸಿಟಿವಿಟಿ ದರ, ಸೋಂಕಿನ ಹರಡುವಿಕೆಯ ಸಾಮರ್ಥ್ಯ ಮತ್ತು ಎರಡನೇ ಹಂತಕ್ಕೆ ಸೋಂಕಿನ ವಿಸ್ತರಣೆಯ ದರವನ್ನು ಆಧರಿಸಿ ಒಂದು ಅಂದಾಜನ್ನು ಮಾಡಿದೆ. ಈ ಅಂದಾಜಿನ ಪ್ರಕಾರ ಆಗಸ್ಟ್ 15, 2020ರ ವೇಳೆಗೆ ಕರ್ನಾಟಕವು 1 ಲಕ್ಷ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಸಾಧ್ಯತೆ ಇದೆ. ಸಕ್ರಿಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 25,000 ಇರಬಹುದು.

ಆರೋಗ್ಯ ವ್ಯವಸ್ಥೆಯ ಸಿದ್ಧತೆ:

27 ಜೂನ್ 2020ಕ್ಕೆ ರಾಜ್ಯದಲ್ಲಿ ಲಭ್ಯವಿರುವ ಒಟ್ಟು ಹಾಸಿಗೆಗಳ ಸಂಖ್ಯೆ 83,524 ಎಂದು ಕರ್ನಾಟಕ ಸರ್ಕಾರ ಹೇಳಿದೆ. ಇವುಗಳಲ್ಲಿ 23,896 ಮಾತ್ರ ಕೋವಿಡ್ ಪ್ರಕರಣಗಳಿಗೆಂದು ಮೀಸಲಿರುವ ಹಾಸಿಗೆಗಳು. ಐಸಿಯುನಲ್ಲಿರುವ ಒಟ್ಟು ಹಾಸಿಗೆಗಳ ಸಂಖ್ಯೆ 1,985 ಮತ್ತು ವೆಂಟಿಲೇಟರ್ ಸೌಲಭ್ಯವೂ ಲಭ್ಯವಿರುವ ಹಾಸಿಗೆಗಳ ಸಂಖ್ಯೆ 979 ಆಗಿವೆ. ಮುನ್ಸೂಚನೆಯ ಅಂದಾಜಿನ ಪ್ರಕಾರ 1 ಲಕ್ಷ ಪಾಸಿಟಿವ್ ಪ್ರಕರಣಗಳಿಗೆ ಏರಿದರೆ, ಅದರಲ್ಲಿ ಆಸ್ಪತ್ರೆಗೆ ದಾಖಲಿಸಬೇಕಾಗಿ ಬರಬಹುದಾದ ಪ್ರಕರಣಗಳ ಸಂಖ್ಯೆ 15% ಅಂದರೆ 15,000 ಆಗಿರುತ್ತದೆ. ಹಾಗೆಯೇ ಐಸಿಯುಗೆ ದಾಖಲಿಸಬೇಕಾಗುವ ಪ್ರಕರಣಗಳು 5% ಇರುತ್ತವೆಂದುಕೊAಡರೆ ಅದು 5000 ಆಗುತ್ತದೆ.

ಸ್ಥೂಲ ಅಂದಾಜಿನಂತೆ ಹೋಗುವುದಾದರೆ, ಆಸ್ಪತ್ರೆಗೆ ದಾಖಲಿಸಬೇಕಾಗುವ ಪ್ರಕರಣಗಳಿಗೆ ಈಗಿರುವ ಹಾಸಿಗೆಗಳ ಸಂಖ್ಯೆ ಸಾಕಾಗಬಹುದು. ಆದರೆ, ಐಸಿಯು/ವೆಂಟಿಲೇಟರ್‌ಗೆ ದಾಖಲಾಗುವ ರೋಗಿಗಳಿಗೆ ಸುಮಾರು 2,036 ಹಾಸಿಗೆಗಳ ಕೊರತೆಯುಂಟಾಗುತ್ತದೆ. ಇದು ಭಾರೀ 40% ಕೊರತೆಯಾಗಿದೆ. ಇದು ಬಹಳ ದೊಡ್ಡ ಅಂತರವಾಗಿದೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಸರಿದೂಗಿಸಿಕೊಳ್ಳುವುದು ಸವಾಲಾಗಿರಬಹುದಾದಷ್ಟು ದೊಡ್ಡ ಸಂಖ್ಯೆ. ಇದು ಕೇವಲ 2,036 ವೆಂಟಿಲೇಟರ್ ಐಸಿಯು ಹಾಸಿಗೆಗಳನ್ನು ಹೊಂದಿಸುವ ಹಣಕಾಸಿನ ಸಂಪನ್ಮೂಲ ಮತ್ತು ವ್ಯವಸ್ಥೆಯ ವಿಚಾರ ಮಾತ್ರವಲ್ಲ, ಬದಲಿಗೆ ಅಷ್ಟು ಸಂಖ್ಯೆಯ ಹೆಚ್ಚುವರಿ ತೀವ್ರನಿಗಾ ಪರಿಣತರು ಮತ್ತು ಪರಿಣತ ಐಸಿಯು ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವ ಸವಾಲು. ಇಲ್ಲದಿದ್ದಲ್ಲಿ, ಸರ್ಕಾರವು ತೀವ್ರ ನಿಗಾ ಆರೋಗ್ಯ ಸೇವೆಗಳ ಅಗತ್ಯವಿರುವ ರೋಗಿಗಳ ಸಮಸ್ಯೆಗೆ ಸ್ಪಂದಿಸಲಾಗದಿರುವ ಬಿಕ್ಕಟ್ಟಿಗೆ ಸಿಲುಕುತ್ತದೆ.

ಕರ್ನಾಟಕದಲ್ಲಿ ಉತ್ತರ-ದಕ್ಷಿಣದ ವಿಭಜನೆ:

ಕರ್ನಾಟಕ ಸರ್ಕಾರವು ಗಮನ ಹರಿಸಲೇಬೇಕಾಗುವ ಮತ್ತೊಂದು ತೀವ್ರವಾದ ಸಮಸ್ಯೆಯೆಂದರೆ ರಾಜ್ಯದೊಳಗೆಯೇ ಇರುವ ಪ್ರಾದೇಶಿಕ ಅಸಮಾನತೆಗಳು. ರಾಜ್ಯದೊಳಗಿನ ಉತ್ತರ-ದಕ್ಷಿಣದ ವಿಭಜನೆಗೆ ಸುದೀರ್ಘ ಇತಿಹಾಸವಿದ್ದು ಸಂಪನ್ಮೂಲ ಮತ್ತು ಅಭಿವೃದ್ಧಿ ಚಟುವಟಿಕೆಗಳ ದೃಷ್ಟಿಯಿಂದ ಉತ್ತರದ ಜಿಲ್ಲೆಗಳು ಯಾವಾಗಲೂ ನಿರ್ಲಕ್ಷಕ್ಕೆ ಒಳಪಟ್ಟಿವೆ.

ಇಂದಿನ ಬಿಕ್ಕಟ್ಟಿನಲ್ಲಿ ಈ ಪ್ರದೇಶಗಳು ವಿಶೇಷವಾಗಿ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೊಂದಿವೆ. ಉತ್ತರದ ಜಿಲ್ಲೆಗಳ ಆರೋಗ್ಯ ಸ್ಥಿತಿಯ ಸೂಚಕಗಳು ಮತ್ತು ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದಾಗ ಈಗಲೂ ಬಹಳ ಕೆಳಮಟ್ಟದಲ್ಲೇ ಮುಂದುವರೆದಿದೆ. ಉದಾಹರಣೆಗೆ, ಒಟ್ಟಾರೆ ಲಭ್ಯವಿರುವ ಐಸೋಲೇಶನ್ ಐಸಿಯು/ವೆಂಟಿಲೇಟರ್ ಹಾಸಿಗೆಗಳಲ್ಲಿ ಶೇ.35ರಷ್ಟು ಮಾತ್ರ ಉತ್ತರದ ಜಿಲ್ಲೆಗಳಲ್ಲಿವೆ ಮತ್ತು ಅವೂ ಕೂಡಾ ಹಾಸ್ಟೆಲ್‌ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿವೆ.


ಓದಿ: PPE ಕೇಳಿದ ವೈದ್ಯರನ್ನು ದೂಷಿಸುವುದು ಸರಿಯಲ್ಲ: ಪ್ರಧಾನಿಗೆ ಪತ್ರ ಬರೆದ ಏಮ್ಸ್ ವೈದ್ಯರು


ಉತ್ತರ ಕರ್ನಾಟಕದ 6 ಜಿಲ್ಲೆಗಳು-ಬೀದರ್, ರಾಯಚೂರು, ಕೊಪ್ಪಳ, ಕಲಬುರ್ಗಿ, ಯಾದಗಿರಿ ಮತ್ತು ಬಳ್ಳಾರಿಗಳು- ರಾಜ್ಯದ ಅತ್ಯಂತ ಹಿಂದುಗಳಿದ ಜಿಲ್ಲೆಗಳ ಪಟ್ಟಿಯಲ್ಲಿವೆ. ಈ ಪ್ರದೇಶಕ್ಕೆ ಸಂವಿಧಾನದ 371ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಘೋಷಿಸುವ ಮೂಲಕ ಚಾರಿತ್ರಿಕ ಅಸಮತೋಲನವನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗಿದೆ. ಈ ರಾಜ್ಯಗಳು ಹೊರವಲಸೆಯ ಬಹುದೊಡ್ಡ ಸಂಖ್ಯೆಯನ್ನು ಹೊಂದಿವೆ. ಅಲ್ಲಿಂದ ಜನರು ಮಹಾರಾಷ್ಟ್ರ, ಗೋವಾ, ತೆಲಂಗಾಣ, ಬೆಂಗಳೂರು, ಮಂಗಳೂರು ಮತ್ತು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆ. ಅವರು ಹೆಚ್ಚಿನ ಬಡತನ, ಅಪೌಷ್ಟಿಕತೆ, ರಕ್ತಹೀನತೆಗಳಿಂದಲೂ ಬಳಲುತ್ತಿರುತ್ತಾರಾಗಿ ಸೋಂಕಿನ ಸಮಸ್ಯೆಗೆ ತುತ್ತಾಗುವಿಕೆ ಹೆಚ್ಚಿರುತ್ತದೆ.

ಲಾಕ್‌ಡೌನ್ ತೆರವಾದ ಬಳಿಕ ಬೆಂಗಳೂರು ಮತ್ತು ಇತರ ರಾಜ್ಯಗಳಿಂದ ವಲಸೆ ಕಾರ್ಮಿಕರು ಮರಳಿ ಬಂದನಂತರ ಈ ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆಯು ಭಾರೀ ಹೆಚ್ಚಳವನ್ನು ದಾಖಲಿಸಿತು. ಮತ್ತು 27 ಜೂನ್ 2020ಕ್ಕೆ, ಕಲಬುರ್ಗಿ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳು ಈ ರಾಜ್ಯದ ಟಾಪ್ 5 ಸೋಂಕಿತ ಜಿಲ್ಲೆಗಳ ಪಟ್ಟಿಯಲ್ಲಿದ್ದವು. ಆದರೆ, ಇದಕ್ಕೆ ವಿರೋಧಾಭಾಸವೆಂಬಂತೆ ಆ ಜಿಲ್ಲೆಗಳಲ್ಲಿ ಲಭ್ಯವಿದ್ದ ಐಸೋಲೇಶನ್ ಹಾಸಿಗೆಗಳು ಒಟ್ಟು ಲಭ್ಯತೆಯ ಶೇ.20ರಷ್ಟು ಮತ್ತು ವೆಂಟಿಲೇಟರ್ ಹಾಸಿಗೆಗಳು ಕೇವಲ 17%ರಷ್ಟು ಮಾತ್ರ ಆಗಿದ್ದವು. ಯಾದಗಿರಿ ಮತ್ತು ಕೊಪ್ಪಳಗಳಲ್ಲಿ ಕೇವಲ ಐಸೋಲೇಶನ್ ಹಾಸಿಗೆಗಳು ಮಾತ್ರ ಇದ್ದು, ವೆಂಟಿಲೇಟರ್ ಹಾಸಿಗೆಗಳು, ಆಮ್ಲಜನಕ ಲಭ್ಯ ಇರುವ ಹಾಸಿಗೆಗಳು ಮತ್ತು ಐಸಿಯುಗಳು ಲಭ್ಯವೇ ಇರಲಿಲ್ಲ.

ಕಳೆದ ಕೆಲವು ವಾರಗಳಲ್ಲಿ ಕೋವಿಡ್ ಸನ್ನಿವೇಶಕ್ಕೆ ಸಿದ್ಧತೆ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದಿರಬಹುದೆಂದು ಆಶಿಸಬೇಕಷ್ಟೇ. ಹಾಗೆಯೇ, ಈ ಜಿಲ್ಲೆಗಳು ವೈದ್ಯರು ಮತ್ತು ಆರೋಗ್ಯ ಮಾನವ ಸಂಪನ್ಮೂಲದ ತೀವ್ರ ಕೊರತೆಯನ್ನೂ ಕೂಡಾ ಚಾರಿತ್ರಿಕವಾಗಿ ಅನುಭವಿಸಿಕೊಂಡು ಬಂದಿವೆ. ಬಹುತೇಕ ತಾಲೂಕು ಆಸ್ಪತ್ರೆಗಳು ಈ ಪ್ರದೇಶಗಳಲ್ಲಿ ಬಹಳ ದುರ್ಬಲವಾದ ಉಪಕರಣ ಸಿದ್ಧತೆಗಳನ್ನು ಹೊಂದಿವೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಆದೇಶಿಸಿರುವಂತೆ ‘ಪ್ರಥಮ ರೆಫರಲ್ ಘಟಕ’ಗಳಾಗಿಯಂತೂ ಕೆಲಸ ಮಾಡುವುದಿಲ್ಲ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮಗಳ ಗಮನ ಕೂಡಾ ಅತಿಯಾಗಿ ಬೆಂಗಳೂರು ನಗರ ಜಿಲ್ಲೆಯ ಮೇಲೆ ಕೇಂದ್ರೀಕರಿಸಿದೆ ಮತ್ತು ಉತ್ತರದ ಜಿಲ್ಲೆಗಳ ಸ್ಥಿತಿಗತಿ ಬಹುಪಾಲು ನಿರ್ಲಕ್ಷಕ್ಕೊಳಗಾಗಿದೆ. ಈ ಜಿಲ್ಲೆಗಳು ಹೇಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿವೆ ಎಂಬುದನ್ನು ಅರಿಯುವುದಕ್ಕೋಸ್ಕರ ಯಾದಗಿರಿ, ಕಲಬುರ್ಗಿ ಮತ್ತು ಬಳ್ಳಾರಿಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು.

ಯಾದಗಿರಿಯು ಕಲಬುರ್ಗಿ ಜಿಲ್ಲೆಯಿಂದ ಹೊಸದಾಗಿ ವಿಭಜಿಸಲ್ಪಟ್ಟು ರಚನೆಯಾದ ಜಿಲ್ಲೆಯಾದ್ದರಿಂದ, ಆರೋಗ್ಯ ಸಂಬಂಧಿ ಮೂಲಸೌಕರ್ಯಗಳು ಇನ್ನೂ ಸಾಕಷ್ಟು ಮಟ್ಟಿಗೆ ಸಿದ್ಧಗೊಂಡಿರದ ಕಾರಣ ಸಾಪೇಕ್ಷವಾಗಿ ಹೆಚ್ಚು ಅಪಾಯಕ್ಕೆ ತುತ್ತಾಗುವ ಸಾಧ್ಯತೆಯುಳ್ಳ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ವೈದ್ಯರ ಕೊರತೆಯು ಶೇ.30ರ ಪ್ರಮಾಣದಲ್ಲಿ ಈಗಲೂ ಮುಂದುವರೆದಿದೆ. ಯಾದಗಿರಿ ಜಿಲ್ಲಾ ಅಧಿಕಾರಿಗಳಿಗೆ ವೈದ್ಯರನ್ನು ನೇಮಿಸಿಕೊಳ್ಳುವ ಅನುಮತಿ ನೀಡಲಾಗಿದೆ. ಅದರಂತೆ ಎರಡು ಬಾರಿ ವೈದ್ಯರ ನೇಮಕಕ್ಕೆ ಅರ್ಜಿ ಕರೆದಿದ್ದರೂ ಯಾರೂ ಅರ್ಜಿ ಹಾಕಿಲ್ಲ ಎಂದು ಅಧಿಕಾರಿಗಳು ನಿರಾಸೆಯಿಂದ ಹೇಳುತ್ತಾರೆ. ಅದೇನೆ ಇದ್ದರೂ 30 ಮಂದಿ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಮತ್ತು ಇನ್ನೂ 50 ಮಂದಿಯ ನೇಮಕ ಪ್ರಕ್ರಿಯೆ ನಡೆಯುತ್ತಿದೆ.

ಬಿಕ್ಕಟ್ಟನ್ನು ಎದುರಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವ ಸಲುವಾಗಿ, ಐಎಂಎ ಮೂಲಕ ಖಾಸಗಿ ವೈದ್ಯರು ತುರ್ತು ಕರೆಯ ಮೇಲೆ ಸೇವೆಗೆ ಲಭ್ಯರಿರುವಂತೆ ಕೋರಿಕೊಳ್ಳಲಾಗಿದೆ ಮತ್ತು ಇಎಸ್‌ಐ ಆಸ್ಪತ್ರೆಗಳೊಂದಿಗೆ ನೆಟ್‌ವರ್ಕ್ ಮಾಡಿಕೊಳ್ಳಲಾಗಿದೆ. ಹೊಸದಾಗಿ ನಿರ್ಮಾಣವಾಗಿದ್ದ ಆದರೆ ಇನ್ನೂ ಬಳಕೆಗೆ ಬಾರದಿದ್ದ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಪ್ರತ್ಯೇಕ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ಹಳೆಯ ಆಸ್ಪತ್ರೆಯು ಕೋವಿಡ್ ಅಲ್ಲದ ರೋಗಿಗಳಿಗಾಗಿ ಲಭ್ಯವಿದೆ. ಹಾಗೆಯೇ ಹಾಸ್ಟೆಲ್‌ಗಳು ಮತ್ತು ಛತ್ರಗಳಲ್ಲಿ ಇನ್ನೂ 6000 ಹಾಸಿಗೆಗಳನ್ನು ಸಜ್ಜುಗೊಳಿಸುವ ಮೂಲಕ ಹೆಚ್ಚಬಹುದಾದ ಪ್ರಕರಣಗಳನ್ನು ನಿಭಾಯಿಸಲು ಸರ್ವಸನ್ನದ್ಧತೆ ಮಾಡಿಕೊಳ್ಳಾಗುತ್ತಿದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿ ತಿಳಿಸಿದರು.


ಓದಿ: ಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?


ಕಲಬುರ್ಗಿಯ ಜಿಲ್ಲಾ ಅಧಿಕಾರಿ ನೀಡಿದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಪೂರ್ವಸಿದ್ಧತೆಯ ಭಾಗವಾಗಿ ಹೆಚ್ಚುವರಿ 8000 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅವರು ವೈದ್ಯರ ಲಭ್ಯತೆಯ ಬಗ್ಗೆ ವಿಶ್ವಾಸ ಹೊಂದಿದ್ದರು ಏಕೆಂದರೆ ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳಿವೆ. ಇತ್ತೀಚೆಗೆ 120 ಐಸಿಯು ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗಿದೆ ಮತ್ತು ಸರ್ಕಾರಿ ವ್ಯವಸ್ಥೆಯೊಳಗಡೆಯೇ 60 ವೆಂಟಿಲೇಟರ್‌ಗಳು ಲಭ್ಯವಿವೆ. ರಾಜ್ಯದ ಸರಾಸರಿಗಿಂತ ಕಲಬುರ್ಗಿ ಜಿಲ್ಲೆಯ ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿರುವುದರ ಬಗ್ಗೆ ಕೇಳಿದಾಗ ಜಿಲ್ಲಾ ಅಧಿಕಾರಿ ತಾವು 60 ವರ್ಷಕ್ಕೆ ಮೇಲ್ಪಟ್ಟ ಮತ್ತು ತೀವ್ರ ರೂಪದ ಖಾಯಿಲೆಗಳಿರುವ ಎಲ್ಲರನ್ನೂ ಮುಂಜಾಗ್ರತೆ ಕ್ರಮವಾಗಿ ಐಸಿಯು ಘಟಕಕ್ಕೇ ದಾಖಲಿಸುತ್ತಿರುವುದರಿಂದ ಹೆಚ್ಚು ಹಾಸಿಗೆಗಳ ಅಗತ್ಯವಿದ್ದು, ಅವನ್ನು ಏರ್ಪಡಿಸಿಕೊಂಡಿರುವುದಾಗಿ ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಮತ್ತು ಸಂಜೀವಿನಿ ಖಾಸಗಿ ಆಸ್ಪತ್ರೆಯನ್ನೂ ಪ್ರತ್ಯೇಕ ಕೋವಿಡ್ ಆಸ್ಪತ್ರೆಗಳನ್ನಾಗಿ ಗೊತ್ತುಪಡಿಸಲಾಗಿದೆ ಎಂದು ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿ ಹೇಳಿದರು. ಖಾಸಗಿ ಆಸ್ಪತ್ರೆಯು 110 ಹಾಸಿಗೆಗಳ ಸೌಲಭ್ಯ ಹೊಂದಿತ್ತು. ಇವಲ್ಲದೆ ಜಿಲ್ಲೆಯಲ್ಲಿ ಇನ್ನೂ ಕೆಲವು ಕೋವಿಡ್ ಆರೋಗ್ಯ ಕೇಂದ್ರಗಳಿವೆ. ತೋರಣಗಲ್ಲಿನಲ್ಲಿರುವ 100 ಬೆಡ್‌ಗಳ ಆರೋಗ್ಯ ಕೇಂದ್ರ ಮತ್ತು ಸಾಧಾರಣ ಕೋವಿಡ್ ಪ್ರಕರಣಗಳನ್ನು ನಿಭಾಯಿಸುವಂತಹ 250 ಬೆಡ್‌ಗಳ ಡೆಂಟಲ್ ಆಸ್ಪತ್ರೆ, ತಲಾ 300 ಹಾಸಿಗೆಗಳಿರುವ ಮೂರು ಹಾಸ್ಟೆಲ್‌ಗಳು ಕೋವಿಡ್ ಕೇಂದ್ರಗಳಾಗಿ ಸಜ್ಜುಗೊಂಡಿವೆ ಎಂದು ಮಾಹಿತಿ ನೀಡಿದರು. ಈ ಜಿಲ್ಲಾ ಮಟ್ಟದ ಅಧಿಕಾರಿಯ ಪ್ರಕಾರ, 1000 ಪ್ರಕರಣಗಳನ್ನು ನಿಭಾಯಿಸುವಷ್ಟು ಮಟ್ಟಿನ ಸಾಮರ್ಥ್ಯ ಜಿಲ್ಲೆಗಿದೆ. ಆದರೆ, ಸಂಬಂಧಪಟ್ಟ ಅಂತರ್ಜಾಲ ತಾಣದಲ್ಲಿ ಬಳ್ಳಾರಿಯಲ್ಲಿ 75 ಐಸಿಯು ಬೆಡ್‌ಗಳು ಮತ್ತು 65 ವೆಂಟಿಲೇಟರ್ ಬೆಡ್‌ಗಳು ಲಭ್ಯವಿವೆ ಎಂಬ ಮಾಹಿತಿ ಇದ್ದರೆ, ಅಧಿಕಾರಿ ಹೇಳಿದ ಪ್ರಕಾರ ವಾಸ್ತವದಲ್ಲಿ 47 ಐಸಿಯು ಮತ್ತು 36 ವೆಂಟಿಲೇಟರ್ ಹಾಸಿಗೆಗಳು ಮಾತ್ರ ಲಭ್ಯವಿವೆ.

ಒಟ್ಟಿನಲ್ಲಿ ಈ ಸಂಭಾಷಣೆಗಳಿಂದ ತಿಳಿದುಬರುವಂತೆ, ಉತ್ತರ ಕರ್ನಾಟಕದ ಜಿಲ್ಲೆಗಳೂ ಕೂಡ ಕೋವಿಡ್ ಸವಾಲನ್ನು ಎದುರಿಸಲು ತಕ್ಕಮಟ್ಟಕ್ಕೆ ಸಿದ್ಧಗೊಳುತ್ತಿವೆ. ಆದರೆ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಐಸಿಯು ಅಥವಾ ವೆಂಟಿಲೇಟರ್ ಹಾಸಿಗೆಗಳು ಇಲ್ಲವೇ ಇಲ್ಲದ ಕಾರಣ ತುರ್ತು ನಿಗಾ ರೋಗಿಗಳನ್ನು ಅಕ್ಕಪಕ್ಕದ ಜಿಲ್ಲೆಗಳಿಗೆ ಕಳಿಸುವುದು ಅಪಾಯಕಾರಿಯಾಗಬಲ್ಲದು. ಆದ್ದರಿಂದ, ಈ ವ್ಯವಸ್ಥೆಯನ್ನು ಆಯಾ ಜಿಲ್ಲೆಗಳಲ್ಲೇ ಏರ್ಪಡಿಸುವ ಅಗತ್ಯವಿದೆ.

ಆದರೆ, ಸರ್ಕಾರವೇ ತನ್ನ ಎಲ್ಲ ಕಠಿಣ ಶ್ರಮವನ್ನೂ ವ್ಯರ್ಥಗೊಳಿಸಲು ಹೊರಟಿದೆ!

ಕೋವಿಡ್ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ಖಾಸಗಿ ಆಸ್ಪತ್ರೆಗಳನ್ನು ಒಳಗೊಳ್ಳುವ ಬಗ್ಗೆ ಈಚೆಗೆ ರಾಜ್ಯ ಸರ್ಕಾರ ಕೈಗೊಂಡ ನೀತಿ ನಿರ್ಧಾರವು, ಅತ್ಯಂತ ಬಿಕ್ಕಟ್ಟಿನಲ್ಲಿರುವ ಮತ್ತು ಬಡ ಕೋವಿಡ್ ರೋಗಿಗಳ ಮೇಲಿನ ಒತ್ತಡವನ್ನು ಹೆಚ್ಚಿಸುವಂತಹ ಅಶುಭಸೂಚಕ ನೀತಿಯಾಗಿದೆ. ಮೂರನೇ ಹಂತದ ಆರೋಗ್ಯ ಸೇವೆಗಳನ್ನು ನೀಡುವ ವಿಚಾರದಲ್ಲಿ ಖಾಸಗಿ ವಲಯಕ್ಕೆ ಸರ್ಕಾರಿ-ಖಾಸಗಿ ಸಹಭಾಗಿತ್ವದಡಿಯಲ್ಲಿ ಅವಕಾಶ ಮಾಡಿಕೊಟ್ಟದ್ದೂ ಸೇರಿದಂತೆ, ಅದರಿಂದ ಅನುಕೂಲವಾಗುತ್ತದೆಂಬ ಯಾವುದೇ ಪುರಾವೆ ಇಲ್ಲದಾಗಲೂ ಖಾಸಗಿ ವಲಯಕ್ಕೆ ಅನುಕೂಲ ಮಾಡಿಕೊಡುವ ದೀರ್ಘ ಕೆಟ್ಟ ಇತಿಹಾಸ ಕರ್ನಾಟಕಕ್ಕಿದೆ. ಈಗ ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ಎಂದು ಮರುನಾಮಕರಣಗೊಂಡಿರುವ ಇಂತಹ ಯೋಜನೆಯು, ಹೇಗೆ ರೋಗಿಗಳ ಹಕ್ಕುಗಳನ್ನೂ ಕಸಿದುಕೊಳ್ಳುತ್ತಾ ಅವರ ಜೇಬಿನ ಮೇಲಿನ ಹೊರೆಯನ್ನೂ ಹೆಚ್ಚಿಸಿದೆಯೆಂಬುದಕ್ಕೆ ಜೀವಂತ ಸಾಕ್ಷಿ.

‘ವಿಪತ್ತು ನಿರ್ವಹಣಾ ಕಾಯ್ದೆ 2005’ ಮತ್ತು ‘ಸಾಂಕ್ರಾಮಿಕ ರೋಗಗಳ ಕಾಯ್ದೆ 1897’ಗಳಲ್ಲಿ ಖಾಸಗಿ ಆಸ್ತಿ ಒಡೆತನದ ಹಕ್ಕನ್ನೂ ಸೇರಿದಂತೆ ವ್ಯಕ್ತಿಗತ ಹಕ್ಕುಗಳಿಗಿಂತ ಮೇಲ್ಪಟ್ಟು ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತಹ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಸರ್ಕಾರಗಳಿಗೆ ನೀಡಲಾಗಿದೆ. ಇವುಗಳನ್ನು ಬಳಸಿಕೊಂಡು ಸರ್ಕಾರವು ಬಹಳ ವಿಸ್ತಾರವಾದ ಆರೋಗ್ಯ ಸೇವೆಗಳ ಮೂಲಸೌಕರ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ತನ್ನ ವಶಕ್ಕೆ ತೆಗೆದುಕೊಂಡು ಬಿಕ್ಕಟ್ಟಿನ ನಿರ್ವಹಣೆ ಮಾಡಬಹುದಿತ್ತು. ಆದರೆ, ಹಾಗೆ ಮಾಡುವ ಬದಲಿಗೆ ಸರ್ಕಾರವು ಸಾರ್ವಜನಿಕರ ಹಣವನ್ನು ಎಂದಿನಂತೆ ಖಾಸಗಿ ವಲಯಕ್ಕೆ ಹರಿಸಲು ಹೊರಟಿದೆ.

ಇದರ ಸೂಚನೆಗಳು ಏಪ್ರಿಲ್ ಆರಂಭದಲ್ಲೆ ‘FICCI’ ವರದಿ ಬಿಡುಗಡೆಯಾದಾಗಲೇ ಸಿಕ್ಕಿದ್ದವು. ಆ ವರದಿ ಹೇಳುವಂತೆ, ಖಾಸಗಿ ಆರೋಗ್ಯ ವಲಯವು ಮೂರು ರೀತಿಯಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು: ಕೋವಿಡ್ ಪೂರ್ವ ಅವಧಿಯಲ್ಲೇ ಇದ್ದ ಕೆಳಮಟ್ಟದ ಆರ್ಥಿಕ ನಿರ್ವಹಣೆಯ ಸಮಸ್ಯೆ; ಕೋವಿಡ್ ನಂತರದ ಹೊರರೋಗಿಗಳ ಪ್ರಮಾಣದ ಧಿಡೀರ್ ಕುಸಿತ, ರೋಗಪತ್ತೆ ಸಂಖ್ಯೆಯಲ್ಲಿ ಕುಸಿತ ಮತ್ತು ತೀವ್ರವಾಗಿ ಇಳಿತ ಕಂಡ ಅಂತರರಾಷ್ಟ್ರೀಯ ರೋಗಿಗಳ ಸಂಖ್ಯೆ; ಮೂರನೇದಾಗಿ, ಕೋವಿಡ್-19 ಕಾರಣದಿಂದ ಹೆಚ್ಚಾಗಬೇಕಾಗಿ ಬಂದ ಹೂಡಿಕೆ. ಈ ಮೂರು ‘ತ್ರಿವಳಿ ಹೊರೆ’ಯ ಹಿನ್ನೆಲೆಯಲ್ಲಿFICCI ಸರ್ಕಾರದ ಮುಂದೆ ಖಾಸಗಿ ಆರೋಗ್ಯ ಉದ್ದಿಮೆಗೆ ‘ಬಡ್ಡಿ ರಹಿತ/ಕಡಿಮೆ ಬಡ್ಡಿ ದರದ ಸಾಲ’ವನ್ನು ಘೋಷಿಸುವ ಮೂಲಕ ಸುಮಾರು 14,000-24,000 ಕೋಟಿ ರೂಗಳ ಕೊರತೆಯ ಅಂತರವನ್ನು ತುಂಬಲು ನೆರವಾಗಬೇಕೆಂದು ಒತ್ತಡ ಹೇರುತ್ತಿತ್ತು (https://smefutures.com/ficci-ey-study-covid-19-pandemic-leaves-the-private-healthcare-sector-in-financial-distress/).

ಈ ವಿಚಾರ ನಡೆಯುತ್ತಿದ್ದ ಹೊತ್ತಿನಲ್ಲೇ, ಸರ್ಕಾರದಿಂದ ಯಾವುದೇ ನೆರವನ್ನೂ ನಿರೀಕ್ಷಿಸಲಾರದ ಸ್ಥಿತಿಯಲ್ಲಿ ಕೋಟ್ಯಾಂತರ ವಲಸೆ ಕಾರ್ಮಿಕರು ಸುಡುಬಿಸಲನ್ನೂ ಲೆಕ್ಕಿಸದೆ ನಡೆದೇ ಊರು ತಲುಪುವ ಕಡು ಧೈರ್ಯದ ನಿರ್ಧಾರ ತಳೆದದ್ದನ್ನು ನಮ್ಮಲ್ಲಿ ಹಲವರು ಮರೆತಿರಲಾರೆವು.


ಓದಿ: ಕೊರೊನಾ ಬಿಕ್ಕಟ್ಟು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಡಿ. ಕೆ. ಶಿವಕುಮಾರ್


ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಬಂಡವಾಳಿಗರು ತಮ್ಮಷ್ಟಕ್ಕೆ ತಾವೇ ಸಹಕಾರ ನೀಡಲು ಮುಂದಾಗಬೇಕು ಎಂದು ನಿರೀಕ್ಷಿಸುವುದು ಅತಿಯಾಗಬಹುದು. ಆದರೆ, ತನ್ನ ಪ್ರಜೆಗಳ ಅತ್ಯುತ್ತಮ ಹಿತಾಸಕ್ತಿ ಕಾಪಾಡಲು ಅತ್ಯಂತ ಕ್ಷಿಷ್ಟಕರ ಮತ್ತು ಅಸಾಮಾನ್ಯ ಬಿಕ್ಕಟ್ಟಿನ ಈ ಸಂದರ್ಭದಲ್ಲಾದರೂ ಜನರಿಂದ ಚುನಾಯಿತವಾದ ಸರ್ಕಾರ ತನ್ನ ಅಧಿಕಾರವನ್ನು ಸೂಕ್ತವಾಗಿ ಬಳಸಲು ಸಾಧ್ಯವಿತ್ತು. ವಿಪರ್ಯಾಸವೆಂದರೆ, ಅದನ್ನು ಮಾಡುವ ಬದಲು ಖಾಸಗಿ ಲಾಬಿಯ ಕಡೆಗೇ ವಾಲುವ ಮೂಲಕ ಈ ಬಾರಿ ಸರ್ಕಾರ ಈವರೆಗಿನ ತನ್ನ ಎಲ್ಲ ಕಠಿಣ ಶ್ರಮವನ್ನೂ ವ್ಯರ್ಥಗೊಳಿಸಲು ಹೊರಟಿದೆ. ಇದು ಖಾಸಗಿ ಆರೋಗ್ಯ ವಲಯಕ್ಕೇ ಲಾಭದಾಯಕವಲ್ಲವೇ ಎಂಬ ಅನುಮಾನಗಳು ಹರಿದಾಡುತ್ತಿವೆ.

23 ಜೂನ್ 2020ರ (ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಸರ್ಕಾರದ ಆದೇಶವನ್ನು ಗಮನಿಸಿದರೆ ಈ ಅನುಮಾನಗಳಲ್ಲಿ ಹುರುಳಿಲ್ಲದಿಲ್ಲ. ಈ ಆದೇಶವು ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಎಮರ್ಜೆನ್ಸಿಗೆಂದು ಮೀಸಲಿರಿಸಿದೆ. ಆದರೆ ಇವು ಕೇವಲ ಐಸಿಯು ಮತ್ತು ಜನರಲ್ ವಾರ್ಡ್ನ ಹಾಸಿಗೆಗಳು ಮಾತ್ರವಲ್ಲ. ಇಬ್ಬರು ರೋಗಿಗಳಿರುವ, ಒಬ್ಬರೇ ರೋಗಿ ಇರುವಂತಹವೂ ಇದರಲ್ಲಿ ಒಳಗೊಂಡಿವೆ. ಸರ್ಕಾರವು ಇವರೆಲ್ಲರಿಗೆ ನೀಡಲಾಗುವ ಚಿಕಿತ್ಸೆ ಮತ್ತು ಖಾಸಗಿ ಆರೋಗ್ಯ ಸಿಬ್ಬಂದಿಯ ಪಿಪಿಇಯ ಖರ್ಚನ್ನು ತನ್ನ ಆರೋಗ್ಯ ವಿಮೆ ಯೋಜನೆಗಳ ಮೂಲಕ ಭರಿಸಲಿದೆ. ಅಲ್ಲದೆ ಆ ಸಂದರ್ಭಗಳಲ್ಲಿ ಉಂಟಾಗುವ ‘ಅನಿರೀಕ್ಷಿತ/ಸಂಕೀರ್ಣ/ಜೊತೆಯಲ್ಲಿರುವ ತುರ್ತು ಆರೋಗ್ಯ ಸಮಸ್ಯೆಗಳು/ಗರ್ಭಿಣಿಯರು’ ಮೊದಲಾದವರ ಹೆಚ್ಚುವರಿ ಶುಲ್ಕವನ್ನು ಜನರಲ್ ವಾರ್ಡ್ಗೆ ಸಂಪೂರ್ಣವಾಗಿ ಉಳಿದ ಹಾಸಿಗೆಗಳಿಗೆ ಭಾಗಶಃ ತನ್ನ ಹಣದಿಂದ ಭರಿಸಲಿದೆ.

ಈ ಸರ್ಕಾರಿ ಆದೇಶವು ಎಷ್ಟೊಂದು ಆಡಳಿತಾತ್ಮಕ ಲೋಪದೋಷಗಳಿಗೆ ಅವಕಾಶ ಇಟ್ಟಿದೆಯೆಂದರೆ, ಖಾಸಗಿ ಆಸ್ಪತ್ರೆಗಳು ಕಣ್ಕಟ್ಟು ನಡೆಸುವ ಮೂಲಕ ಹೆಚ್ಚು ಲಾಭತರುವ ಖಾಸಗಿ ವಾರ್ಡ್‌ಗಳನ್ನಷ್ಟೇ ತುಂಬಿಸುತ್ತಾ ಸಾಗುವ ಎಲ್ಲ ಸಾಧ್ಯತೆ ಇದೆ. ಅಲ್ಲದೆ, ಬಡ ರೋಗಿಗಳ ಚಿಕೆತ್ಸೇತರ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲವಾದ್ದರಿಂದ, ಮೊದಲೇ ದುಸ್ಥಿತಿಯಲ್ಲಿರುವ ಬಡ ರೋಗಿಗಳಿಂದ ಭಾರೀ ಹೆಚ್ಚುವರಿ ಶುಲ್ಕವನ್ನೂ ವಸೂಲು ಮಾಡುವ ಸಾಧ್ಯತೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಯಾವುದೇ ಹಂತದಲ್ಲಿ ಏನಾದರೂ ಸಮಸ್ಯೆಯಾದಾಗ ಅದನ್ನು ಪರಿಹರಿಸುವ ವ್ಯವಸ್ಥೆಯ ಬಗ್ಗೆ ಯಾವುದೇ ಸೂಚನೆ ಆದೇಶದಲ್ಲಿ ಇಲ್ಲ.

ಕಳಂಕದ ಭಾವನೆ, ಪೂರ್ವಾಗ್ರಹ ಮತ್ತು ಭಯ ಸಾರ್ವಜನಿಕರನ್ನು ಕಾಡುತ್ತಿದೆ

ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಜೋಡಿಸಿಕೊಳ್ಳುವ ಜೊತೆಗೆ, ಕೋವಿಡ್ ಜಾಗತಿಕ ಸಾಂಕ್ರಾಮಿಕದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿರುವ ಕಳಂಕದ ಭಾವನೆ, ಪೂರ್ವಾಗ್ರಹ ಮತ್ತು ಭಯವನ್ನು ಕಡಿಮೆಮಾಡಲು ಸರ್ಕಾರವು ತತ್‌ಕ್ಷಣದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಕೋವಿಡ್ ರೋಗಿಗಳ ಆತ್ಮಹತ್ಯೆಯ ಘಟನೆಗಳು, ಈ ಕುರಿತಾಗಿರುವ ಅಪಾರ ಭಯಾತಂಕಗಳನ್ನು ಸೂಚಿಸುತ್ತವೆ.

ಕೆಲವು ಪ್ರದೇಶಗಳಲ್ಲಿ ಕೋವಿಡ್ ಮೂಲಸೌಕರ್ಯ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನವನ್ನು ಸ್ಥಳೀಯ ಆಡಳಿತಗಳು ನಡೆಸಿದಾಗ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು (ಕೆಲವೊಮ್ಮೆ ಕೋವಿಡ್‌ನಿಂದ ಸಾವಿಗೀಡಾದವರ ಶವಸಂಸ್ಕಾರಕ್ಕೂ ಅಮಾನವೀಯವಾಗಿ ಅಡ್ಡಿಯುಂಟುಮಾಡಿದ ಘಟನೆಗಳನ್ನೂ ಸೇರಿ) ನೋಡಿದಾಗ, ಸರ್ಕಾರ ಕೋವಿಡ್ ಕುರಿತಾಗಿ ಜನರನ್ನು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಕೋವಿಡ್‌ಅನ್ನು ಸರ್ಕಾರ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡಿದೆಯೇ ಹೊರತಾಗಿ ಸಾಮಾನ್ಯ ಜನರಿಗೆ ಪಾರದರ್ಶಕವಾದ ಮಾಹಿತಿ ನೀಡುವ ಮತ್ತು ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವ ವಿಚಾರವಾಗಿ ಪರಿಗಣಿಸಿಲ್ಲ. ಇನ್ನೂ ಹಲವು ಸಮಸ್ಯೆಗಳೂ ಸೇರಿ ಜನರಿಂದ ವಿರೋಧ ಹೆಚ್ಚಿದೆ.

ಇದರ ಜೊತೆಗೆ ಕನ್ನಡದ ಟಿವಿ ವಾಹಿನಿಗಳು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ದುರಾಸೆಯಿಂದ ಹಬ್ಬಿಸಿರುವ ತಪ್ಪು ಕಲ್ಪನೆಗಳು ಈ ಸ್ಥಿತಿಗೆ ಬಹುತೇಕ ಕಾರಣ ಎಂಬುದರಲ್ಲಿ ಅನುಮಾನವೇನಿಲ್ಲ. ಈ ಹೊಣೆಯನ್ನು ಟಿವಿ ಮಾಧ್ಯಮದ ಮಾಲೀಕರುಗಳು ಹೊರಲೇಬೇಕು ಮತ್ತು ಮುಂದೆಯಾದರೂ ಉತ್ಪ್ರೇಕ್ಷಿತ ವರದಿಗಾರಿಕೆ ಮತ್ತು ಸುಳ್ಳು ಸುದ್ದಿಗಾರಿಕೆ ಬಿಟ್ಟು ವಾಸ್ತವಾಂಶಗಳನ್ನು ಮುಂದಿಡುವ ಕೆಲಸ ಆಗಬೇಕು. ಮುಂದೆ ಕೊರೊನಾ ಪ್ರಕರಣಗಳು ಹೆಚ್ಚುವ ಸನ್ನಿವೇಶ ಇರುವುದರಿಂದ ಸಾರ್ವಜನಿಕರ ಹಿತಾಸಕ್ತಿಯಿಂದ ಅವರಿಗೆ ಸತ್ಯಸಂಗತಿಗಳನ್ನು ತಿಳಿಸುವ ಹೆಚ್ಚಿನ ಜವಾಬ್ದಾರಿಯನ್ನು ಮಾಧ್ಯಮಗಳು ಪ್ರದರ್ಶಿಸಲೇಬೇಕಿದೆ. ಸರ್ಕಾರದ ಕಡೆಯಿಂದ ಸಹಾಯವಾಣಿಗಳ ಸಂಖ್ಯೆ ಹೆಚ್ಚಿಸುವುದು ಮತ್ತು ಕಾರ್ಯದಕ್ಷತೆ ಹೆಚ್ಚಿಸುವುದು ಆಗಲೇಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ ಸರ್ಕಾರ ತನ್ನ ಅತ್ಯಂತ ಕಠಿಣ ಪರೀಕ್ಷೆಯನ್ನು ಈಗಷ್ಟೇ ಎದುರಿಸಲು ಹೊರಟಿದೆ. ಅದಕ್ಕಾಗಿ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಮೂಲಸೌಕರ್ಯದ ಹಲವು ಸಂಗತಿಗಳನ್ನು ಸರ್ಕಾರ ಸುಧಾರಿಸಲೇಬೇಕಿದೆ. ಅದರಿಂದ ಅಂಚಿಗೊತ್ತಲ್ಪಟ್ಟ ನಿರ್ಲಕ್ಷಿತ ಮತ್ತು ದುರ್ಬಲ ಸಮುದಾಯಗಳ ಕೋವಿಡ್ ರೋಗಿಗಳು ಸೇವೆಯಿಂದ ವಂಚಿತರಾಗದಂತೆ, ಖಾಸಗಿ ಆಸ್ಪತ್ರೆಗಳಿಂದ ರೋಗಿಗಳು ಆತಂಕವನ್ನು ಎದುರಿಸದಂತೆ ಸರ್ಕಾರ ಖಾತ್ರಿಪಡಿಸಬೇಕಿದೆ.

  • ಲೇಖಕಿ ಡಾ. ಅಖಿಲಾ ವಾಸನ್, ಜನಾರೋಗ್ಯ ಚಳುವಳಿಯ ಮುಂಚೂಣಿ ಕಾರ್ಯಕರ್ತೆ ಮತ್ತು ಸಾರ್ವಜನಿಕ ಆರೋಗ್ಯದ ಸಂಶೋಧಕಿಯಾಗಿದ್ದಾರೆ.

ಇದನ್ನೂ ಓದಿ: ವರ್ಚುವಲ್ ಸಂಸತ್ ಅಧಿವೇಶನವನ್ನು ನಡೆಸಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ


 

LEAVE A REPLY

Please enter your comment!
Please enter your name here