ದರೋಡೆಕೋರ ವಿಕಾಸ್ ದುಬೆಯ ಬಂಧನವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪೂರ್ವ ನಿರ್ಧರಿತ ಎಂದು ಆರೋಪಿಸಿದೆ. ಜುಲೈ 3 ರಂದು ತನ್ನನ್ನು ಬಂಧಿಸಲು ಬಂದ ಎಂಟು ಪೊಲೀಸರನ್ನು ಕೊಂದ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿಯ ಪೊಲೀಸರು ಇಂದು ಬಂಧಿಸಿ ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದರು.
ದುಬೆಯ ಬಂಧನವನ್ನು ಮಧ್ಯಪ್ರದೇಶ ಸರ್ಕಾರ ತನ್ನ ರಾಜಕೀಯ ಲಾಭಕ್ಕೆ ಪಡೆಯಲು ಮುಂದಾಗಿದ್ದು, ಮುಖ್ಯಮಂತ್ರಿ ಶಿವರಾಜ್ ಚೌಹಾನ್ ಟ್ವೀಟ್ ಮಾಡಿ “ಮಹಾಕಲ್‌ಗೆ ಹೋಗುವ ಮೂಲಕ ತಮ್ಮ ಪಾಪಗಳು ತೊಳೆಯುತ್ತವೆ ಎಂದು ಭಾವಿಸುವವರು ಭಗವಂತನನ್ನು ಅರ್ಥಮಾಡಿಕೊಂಡಿಲ್ಲ. ನಮ್ಮ ಸರ್ಕಾರ ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ” ಎಂದು ಬರೆದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ದುಬೆಯ ಬಂಧನವು ಶರಣಾಗತಿಯೆ ಅಥವಾ ಬಂಧನವೇ ಎಂದು ಸ್ಪಷ್ಟಪಡಿಸುವಂತೆ ಸರ್ಕಾರವನ್ನು ಕೇಳಿದ್ದಾರೆ. ದುಬೆಯ ಫೋನ್ ದಾಖಲೆಯನ್ನು ಸಾರ್ವಜನಿಕಗೊಳಿಸಿ ದರೋಡೆ ಕೋರರೊಂದಿಗೆ ಸಹಕರಿಸಿದ ಜನರನ್ನು ಬಹಿರಂಗಪಡಿಸುವಂತೆ ಹೇಳಿದ್ದಾರೆ.
ಉಜ್ಜಯಿನಿ ಪೊಲೀಸರಿಗೆ ಸುಳಿವು ದೊರೆತ ನಂತರ ವಿಕಾಸ್ ದುಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ ಜುಲೈ 3 ರಂದು 650 ಕಿ.ಮೀ ದೂರದ ಕಾನ್ಪುರದಲ್ಲಿ ಘಟನೆ ನಡೆದ ನಂತರ ತಾನು ಪೊಲೀಸರಲ್ಲಿ ಎಚ್ಚರದಲ್ಲಿ ಇರಬೇಕೆಂದು ಮಧ್ಯಪ್ರದೇಶದಾದ್ಯಂತ ಪೊಲೀಸರಿಗೆ ತಿಳಿಸಿದ್ದೆ ಎಂದು ಹೇಳಿದ್ದಾರೆ.
ವಿಕಾಸ್ ದುಬೆ ಬಂಧನವು ಯುಪಿ ಪೊಲೀಸರ ಸಂಪೂರ್ಣವಾಗಿ ವಿಫಲತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. “ಎಚ್ಚರಿಕೆಯ ಹೊರತಾಗಿಯೂ, ಉಜ್ಜಯಿನಿಯವರೆಗೂ ತಲುಪಿರುವುದು ಭದ್ರತೆಯಲ್ಲಿನ ವಿಫಲತೆ ಹಾಗೂ ಸಹಭಾಗಿತ್ವವನ್ನು ಬಹಿರಂಗಪಡಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಕಾನ್ಪುರದ ಸ್ಥಳೀಯ ಪೊಲೀಸ್ ಅಧಿಕಾರಿಗಳು ವಿಕಾಸ್ ದುಬೆ ಹೆಸರನ್ನು ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎಂಬ ವರದಿಗಳನ್ನು ಪ್ರಿಯಾಂಕ ಗಾಂಧಿ ಉಲ್ಲೇಖಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಕಾಸ್ ದುಬೆ ದೇವಾಲಯದಿಂದ ಬರಿಗಾಲಿನಿಂದ ನಡೆದುಕೊಂಡು ಹೊರಗೆ ಹೋಗುವುದು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಾಣಬಹುದಾಗಿದೆ.
ಈ ಬಗ್ಗೆ ತೀವ್ರ ದಾಳಿ ಮಾಡಿದ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿ.ವಿ, “ಇದು ಪೂರ್ವ ನಿರ್ಧರಿತ ಘಟನೆ, ಯಾವ ಕೋನದಿಂದ ಭಯೋತ್ಪಾದಕ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕಂಡುಬರುತ್ತದೆ?. ಈ ವೀಡಿಯೊ ಇದಕ್ಕೆ ಪುರಾವೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
इस वीडियो में कौनसे ऐंगल से आतंकवादी विकास दुबे को उज्जैन पुलिस ने 'गिरफ्तार' किया है ?
सब कुछ स्क्रिप्टेड था, ये वीडियो गवाही है । pic.twitter.com/cSF6FfN5BW
— Srinivas B V (@srinivasiyc) July 9, 2020
ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ, ಪೊಲೀಸರು ಎಚ್ಚರಿಕೆಯಿಂದ ಇದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ “ಒಳ್ಳೆಯ ಜೋಕ್” ಎಂದು ಹೇಳಿದ್ದಾರೆ.
ಪೊಲೀಸರು ಎಷ್ಟು ಜಾಗರೂಕರಾಗಿದ್ದರು ಎಂದರೆ ಉತ್ತರ ಪ್ರದೇಶದ ವಿಕಾಸ್ ಮಧ್ಯಪ್ರದೇಶದಲ್ಲಿದ್ದಾನೆ ಎಂದು ಪೊಲೀಸರು ತಿಳಿದಾಗ ಆತನೆ ತನ್ನನ್ನು ತಾನು ಗುರುತಿಸಿಕೊಳ್ಳಲು ಕಿರುಚಿ ಕೊಂಡಿದ್ದಾನೆ, ಎಂದು ಶ್ರೀನಿವಾಸ್ ವ್ಯಂಗ್ಯ ಮಾಡಿದ್ದಾರೆ.
ಗಡಿಗಳೆಲ್ಲವೂ ಮುಚ್ಚಿರುವಾಗ, ಪೊಲೀಸರು ಎಚ್ಚರದಿಂದಿರುವಾಗ ವಿಕಾಸ್ ದುಬೆ ಕಾನ್ಪುರದಿಂದ ದೆಹಲಿ ಬಳಿಯ ಫರಿದಾಬಾದ್‌ಗೆ, ನಂತರ ಉಜ್ಜಯಿನಿಗೆ ಹೇಗೆ ಪ್ರಯಾಣಿಸಿದ. ಉಜ್ಜಯಿನಿ ತಲುಪಲು ಆತನೇನು ’ಮಿಸ್ಟರ್ ಇಂಡಿಯಾ’ ಆಗಿ ಮಾರ್ಪಾಟಾಗಿದ್ದಾನೆಯೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
ಮಿಸ್ಟರ್ ಇಂಡಿಯಾ ಎಂಬುವುದು 1980 ರ ದಶಕದಲ್ಲಿ ಅನಿಲ್ ಕುಮಾರ್ ನಟಿಸಿದ ಚಲನಚಿತ್ರದ ಪಾತ್ರವಾಗಿದೆ. ಅದರಲ್ಲಿರುವ ನಾಯಕ ’ಮಿಸ್ಟರ್ ಇಂಡಿಯಾ’ ಇದ್ದಕ್ಕಿಂದತೆ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷನಾಗುತ್ತಾನೆ.
ಓದಿ: 8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕ್ರಿಮಿನಲ್ ವಿಕಾಸ್ ದುಬೆ ಬಂಧನ


