ಚಳವಳಿಗಳು ನದಿಯಂತೆ. ಕಾಲದ ಅಡೆತಡೆಗಳನ್ನು ಎದುರಿಸುತ್ತ ನಿಲ್ಲದೇ ಹರಿಯುತ್ತಿರಬೇಕು. ಚಳವಳಿ ಎಂದೂ ನಿಂತ ನೀರಲ್ಲ. ಧುಮ್ಮಿಕ್ಕಿ ಹರಿವ ವರ್ಷಧಾರೆ. ನಿರಂತರ ಹರಿವ ಹೋರಾಟದ ನದಿಯಲ್ಲಿ ಸಹಸ್ರ ಸಹಸ್ರ ಮಂದಿ ಈಜಿದ್ದಾರೆ. ಗುರಿ ಮುಟ್ಟುವ ಮುನ್ನವೇ ಅರ್ಧದಲ್ಲಿಯೇ ನಿರ್ಗಮಿಸಿದ ಚಳವಳಿಗಾರರೇ ಬಹುತೇಕರು. ಅಂತವರ ಸಾಲಿಗೆ ಮತ್ತೊಬ್ಬ ಹೋರಾಟಗಾರ ಸೇರಿದ್ದಾರೆ. ಮೂರುವರೆ ದಶಕಗಳು ಸಾಮಾಜಿಕ ಶುದ್ಧೀಕರಣ ಕ್ರಿಯೆಯಲ್ಲಿ ನಿರತರಾಗಿದ್ದ ಮೈಸೂರಿನ ಜನಪರ ಚಳವಳಿಗಳ ಸಂಗಾತಿ ಮರಿದಂಡಯ್ಯ ಬುದ್ಧ, ಮಧ್ಯದಲ್ಲಿಯೇ ನಿರ್ಗಮಿಸಿ ಸಂಗಾತಿಗಳಲ್ಲಿ ಶೂನ್ಯಭಾವ ತುಂಬಿದ್ದಾರೆ.
ಮೈಸೂರಿನ ಎಲ್ಲಾ ಮಾದರಿಯ ಚಳವಳಿಗಳಲ್ಲಿ, ಎಡಪಂಥೀಯ, ಪ್ರಗತಿಪರ ನಿಲುವಿನ ಸಮಾರಂಭಗಳಲ್ಲಿ ಕಾಣುತ್ತಿದ್ದವರು ಮರಿದಂಡಯ್ಯ ಬುದ್ಧ. ಪತ್ರಿಕಾ ಕಚೇರಿಗಳಿಗೆ ಒಂದಿಲ್ಲೊಂದು ಪತ್ರಿಕಾ ಹೇಳಿಕೆ ಹಿಡಿದು ಬರುತ್ತಿದ್ದ ಅವರು ಮಿತಭಾಷಿ. ಸಾರ್ವಜನಿಕ ವೇದಿಕೆಗಳಲ್ಲಿ ಮಾತಾಡಿದ್ದು ಇಲ್ಲವೇ ಇಲ್ಲ. ಪ್ರಚಾರಕ್ಕೆಂದೂ ಹಪಾಹಪಿಸಿದವರಲ್ಲ. ಪ್ರತಿಭಟನೆಗಳಲ್ಲಿ ತಮ್ಮ ಹೆಸರು ಬರೆದುಕೊಳ್ಳುವಂತೆ ಒಮ್ಮೆಯೂ ಹೇಳಿದವರಲ್ಲ. ಆದರೆ ಮೈಸೂರಿನ ಎಲ್ಲಾ ಚಳವಳಿಗಳಲ್ಲಿ ಅವರ ದನಿ ಇದ್ದೇ ಇರುತ್ತಿತ್ತು.
ಎತ್ತರ ನಿಲುವು, ಪೈಲ್ವಾನನ ದೇಹಾಕೃತಿ, ಸದಾ ಬಿಳಿಯ ಜುಬ್ಬಾ ಧರಿಸುತ್ತಿದ್ದ ಅವರ ಹೆಸರೇ ವಿಚಿತ್ರ ಅನಿಸಿತ್ತು. ಮರಿದಂಡಯ್ಯ ಬುದ್ಧ ಅವರ ಹೆಸರು. ಮಾನವತಾವಾದಿ ಬುದ್ಧನ ಹೆಸರನ್ನು ತಮ್ಮ ಹೆಸರ ಜೊತೆ ಇಟ್ಟುಕೊಂಡಿದ್ದ ಅವರು ಸಮಾಜದ ತರತಮಗಳ ಬಗೆಗೆ ನೋಯುತ್ತ ಮೌನಿಯಾಗಿರುವಂತೆ ಕಾಣುತ್ತಿದ್ದರು. ಅನ್ಯಾಯದ ವಿರುದ್ಧದ ಹೆಜ್ಜೆ ಹಾಕುತ್ತಿದ್ದ ಎಲ್ಲರೊಂದಿಗೂ ನಡೆದರು. ನಡೆಯುತ್ತ ನಡೆಯುತ್ತ ದಣಿದು ಅನಾರೋಗ್ಯ ಪೀಡಿತರಾಗಿ ತಮ್ಮ ನಡಿಗೆ ನಿಲ್ಲಿಸಿಬಿಟ್ಟರು.
ಇತ್ತೀಚೆಗೆ ಗುರುಗಳಾದ ನಾ.ದಿವಾಕರ ಅವರು ‘ಮರಿದಂಡಯ್ಯ ಬುದ್ಧ ತೀವ್ರ ಅನಾರೋಗ್ಯದಲ್ಲಿದ್ದಾರೆ ಎಂದು ತಿಳಿಸಿದ್ದರು. ಅದಾಗಿ ಎರಡು ದಿನಗಳಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಸಮಾಜದ ತರಮತಗಳ ವಿರುದ್ಧ ಹೋರಾಡುತ್ತಿದ್ದ ಅವರು ತಮ್ಮ ದೇಹದ ವಿರುದ್ಧ ಹೋರಾಡಿ ಗೆಲ್ಲಲಾಗದಿದ್ದು ನೋವಿನ ಸಂಗತಿ.
“ದಲಿತ ಚಳುವಳಿಯಲ್ಲಿ, ಕಮ್ಯುನಿಸ್ಟ್ ಚಳುವಳಿಯಲ್ಲಿ, ಮಾನವ ಹಕ್ಕು ಹೋರಾಟಗಳಲ್ಲಿ, ಎಲ್ಲ ರೀತಿಯ ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿದ್ದ ಮರಿದಂಡಯ್ಯ ಬುದ್ಧ ತಮ್ಮ ಸರಳ ಜೀವನದಿಂದಲೇ ಜನಾನುರಾಗಿಯಾಗಿದ್ದರು. ಕೂಲಿಕಾರ್ಮಿಕ ಸಂಘದ ಮೂಲಕ ಮೈಸೂರಿನ ಸಾವಿರಾರು ಕೂಲಿ ಕಾರ್ಮಿಕರಿಗೆ, ಪೌರ ಕಾರ್ಮಿಕರಿಗೆ ಆಸರೆಯಾಗಿದ್ದ ಮರಿದಂಡಯ್ಯ ಬುದ್ಧ ಕಾಯಕ ಜೀವಿ. ನಡೆದಾಡುವ ಚೇತನ. ಸ್ವಂತ ವಾಹನ ಇಲ್ಲದೆಯೇ ಅಗತ್ಯವಿದ್ದೆಡೆ, ಅವಶ್ಯಕತೆ ಇದ್ದವರಿಗೆ ಸಹಾಯ ಹಸ್ತ ನೀಡುತ್ತಲೇ ತಮ್ಮ ಬದುಕು ಸವೆಸಿದ ಬುದ್ಧ ಸಾಂಸಾರಿಕ ಜೀವನಕ್ಕಿಂತಲೂ ಸಮಾಜಮುಖಿಯಾಗಿಯೇ ಬದುಕಲು ಇಚ್ಚಿಸಿದವರು” ಎಂದು ಚಿಂತಕರಾದ ನಾ ದಿವಾಕರ್‌ರವರು ನುಡಿನಮನ ಸಲ್ಲಿಸಿದ್ದಾರೆ.
‘ಓಹೊ… ದಿನಾ ನೋಡ್ತಾ ಇದ್ದೆ ಇವರನ್ನ ಒಂದು ಜುಬ್ಬ ಹಾಕೊಂಡು ಓಡಾಡೋರು, ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುವವರು’ ಎಂದು ಗೆಳೆಯ ರಂಗಕರ್ಮಿ ಶಿರಾ ಸೋಮಶೇಖರ್ ನೆನಪಿಸಿಕೊಳ್ಳುತ್ತಾನೆ. ಅವರನ್ನು ಮೈಸೂರಿನ ರಸ್ತೆಗಳಲ್ಲಿ ಮುಂದೆ ಎಂದೆಂದೂ ಕಾಣಲಾಗುವುದಿಲ್ಲ. ಹೋರಾಟಗಾರರ ಎದೆಯಲ್ಲಿ ಅವರು ಸದಾ ಜೀವಂತ.
– ವಿನೋದ್ ಮಹದೇವಪುರ


