ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಯ ಸಿಬ್ಬಂದಿ ಸೇರಿದಂತೆ ಮೂರು ಮಂದಿ ಪೊಲೀಸರಿಗೆ ಕೊರೊನ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಎಸ್ಪಿ ಕಚೇರಿಯನ್ನು ಸ್ಯಾನಿಟೈಜ್ ಮಾಡಲಾಗಿದ್ದು, ಪೊಲೀಸರಲ್ಲಿ ಕೂಡಾ ಹೆಚ್ಚಾಗಿ ಸೋಂಕು ಕಂಡು ಬರುತ್ತಿರುವುದು ಅವರ ಮಾನಸಿಕ ಸ್ಥೈರ್ಯಕ್ಕೆ ಸವಾಲಾಗಿದೆ.
ಕೊರೊನಾ ಸೋಂಕಿತ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಮಧುಗಿರಿ ಡಿವೈಎಸ್ಪಿ ಕಚೇರಿ ಮತ್ತು ಕೋಡಿಗೇನಹಳ್ಳಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈಗ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯನ್ನು ಸೀಲ್ ಮಾಡಿದೆ.
ಸೋಂಕಿತ ಸಿಬ್ಬಂದಿಯ ಪ್ರಯಾಣ ಇತಿಹಾಸ, ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಿತರ ವಿವರವನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಂಗ್ರಹಿಸುತ್ತಿದೆ. ಇಬ್ಬರು ಕೆಎಸ್‌ಆರ್‌ಪಿ ಪೊಲೀಸರಿಗೂ ಕೊರೋನ ದೃಢಪಟ್ಟಿದೆ.
ವೀರಸಾಗರದ ಮುನಿಸಿಪಲ್ ಕಚೇರಿಯಲ್ಲೂ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇಂದು ತುಮಕೂರು ಜಿಲ್ಲೆಯಲ್ಲಿ 25 ಪ್ರಕರಣಗಳು ಕಂಡುಬಂದಿದ್ದು, ತುಮಕೂರಿನಲ್ಲಿ 11 ಕೇಸುಗಳು ದಾಖಲಾಗಿವೆ.
ಸಪ್ತಗಿರಿ ಬಡಾವಣೆ, ಎಸ್ಐಟಿ ಬಡಾವಣೆ ಸೇರಿದಂತೆ ಜಿಲ್ಲೆಯ ಕುಣಿಗಲ್, ಪಾವಗಡ, ಕೊರಟಗೆರೆ ತಾಲೂಕುಗಳಲ್ಲೂ ಕೊರೊನ ಪ್ರಕರಣಗಳು ವರದಿಯಾಗಿವೆ.
ಓದಿ: ವಿಚಾರಣಾಧೀನ ಖೈದಿಗೆ ಕೊರೊನಾ;ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಸೀಲ್ ಡೌನ್


