ಭಾರತದಲ್ಲಿ ಸುಮಾರು 9,31,181 ಜನರಿಗೆ ಕೊರೊನಾ ಸೋಂಕು ಆವರಿಸಿದೆ. ಈ ಪೈಕಿ 5,92,032 ಜನ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ 3,19,840. ಕೊರೊನಾ ಸೋಂಕಿನಿಂದಾಗಿ ಈವರೆಗೆ ಸುಮಾರು 24,309 ಜನ ಮೃತಪಟ್ಟಿದ್ದಾರೆ. ಅಂದರೆ ಮೃತಪಟ್ಟಿರುವ ಶೇಕಡಾವಾರು ಪ್ರಮಾಣ 2.3. ಮೃತಪಟ್ಟವರಲ್ಲಿ ಬಹುತೇಕರು 60ಕ್ಕಿಂತ ಹೆಚ್ಚು ವಯಸ್ಸಿನವರು ಮತ್ತು ಇತರ ರೋಗವನ್ನು ಹೊಂದಿದ್ದಂತವರು.
ಸ್ವಲ್ಪ ಹೆಚ್ಚುವರಿ ಎಚ್ಚರಿಕೆ ಮತ್ತು ಧೈರ್ಯ ಇದ್ದರೆ ಈ ಸೋಂಕನ್ನು ಸಂಭಾಳಿಸುವುದು ಕಷ್ಟದ ಕೆಲಸ ಏನಲ್ಲ ಎಂಬುದ ಹಲವು ತಜ್ಞರ ಅಭಿಪ್ರಾಯ. ಇದಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಆಗುತ್ತಿರುವು ಒಂದು ಅಮಾನವೀಯ ಬೆಳವಣಿಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ನಡೆಸಿಕೊಳ್ಳುತ್ತಿರುವ – ಅವರ ಜೊತೆಗೆ ವರ್ತಿಸುತ್ತಿರುವ ಹಲವು ವರದಿಗಳು ಸಿಗುತ್ತವೆ. ಸೋಂಕು ಪೀಡಿತರಾಗಿ ರೋಗದ ನೋವಿಗಿಂತಲೂ ಜನರಿಂದ ಮಾನಸಿಕ ಹಿಂಸೆ ಅನುಭವಿಸಿದ ಕೆಲವರ ಕಥೆ ಇಲ್ಲಿದೆ.
ಕಥೆ-1: ಆತನ ಹೆಸರು ಸುರೇಶ್ (ಹೆಸರನ್ನು ಬದಲಿಸಲಾಗಿದೆ). ಬೆಂಗಳೂರಿನಲ್ಲಿ ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಕೂಡ ಇದೆ. ಇತ್ತೀಚೆಗೆ ಒಂದು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದರು. ಆದರೆ, ವಾರದ ಹಿಂದೆ ಅವರಿಗೆ ಊಟ ಮಾಡುವಾಗ ರುಚಿ ಗೊತ್ತಾಗಿರಲಿಲ್ಲ. ಹೀಗಾಗಿ ತಮ್ಮ ವೈದ್ಯರ ಸಲಹೆ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಪಾಸಿಟೀವ್ ಫಲಿತಾಂಶ ಬಂದಿದೆ. ಆದರೆ, ಈ ವಿಚಾರ ಮನೆಗೆ ಆಗಮಿಸುವ ವೇಳೆಗೆ ಎಲ್ಲರಿಗೂ ಗೊತ್ತಾಗಿದೆ.
ಪರೀಕ್ಷೆ ನಡೆಸಿ ಇಂದಿಗೆ ಸರಿಯಾಗಿ 10 ದಿನಗಳಾಗಿವೆ. ತಾನು ಹಾಗೂ ತನ್ನ ಹೆಂಡತಿ ಮನೆಯಿಂದ ಹೊರ ಬರುವುದಿಲ್ಲ. ಅಪಾಟ್ಮೆರ್ಂಟ್‍ನ ಕಾಮನ್ ಸ್ಥಳಗಳನ್ನು ಬಳಸುವುದಿಲ್ಲ ಎಂದು ಇವರು ಅಪಾರ್ಟ್ಮೆಂಟ್ ಮ್ಯಾನೇಜ್ಮೆಂಟ್‍ನವರಿಗೆ ಮಾತು ನೀಡಿದ್ದಾರೆ. ಹೀಗಾಗಿ ಗಂಡ-ಹೆಂಡತಿ ಇಬ್ಬರೂ ಮನೆಯಿಂದ ಹೊರ ಬಂದು ಸೂರ್ಯನ ಕಿರಣಗಳನ್ನು ನೋಡಿಯೇ 10 ದಿನಗಳಾಗಿವೆ. ಈ ನಡುವೆ ವಾಚ್ಮನ್ ಪ್ರತಿದಿನ ಮನೆಯ ಬಾಗಿಲ ಬಳಿಯಲ್ಲಿ ಇಟ್ಟು ಹೋಗುವ ಮೊಸರನ್ನವೇ ಇವರಿಗೆ ಗತಿ. ಇನ್ನು ಮನೆಯಲ್ಲಿ ತುಂಬಾ ಕಸ ಇದ್ದು ಅದನ್ನು ಹೊರಗೆ ಸಾಗಿಸುವುದಕ್ಕೂ ಇವರು ನಿಸ್ಸಹಾಯಕರು. ಕೊರೊನಾ ನಿಮಿತ್ತ ತಮ್ಮ ಪ್ರತಿಯೊಂದು ಕೆಲಸಕ್ಕೂ ಇವರು ಪರಾವಲಂಬಿಗಳಾಗಿದ್ದಾರೆ.
ಕೊರೋನಾ ಸೋಂಕಿತರಾದ ಎಲ್ಲರೂ ಸಾಮಾನ್ಯವಾಗಿ ಎದುರಿಸಲೇಬೇಕಾದ ಸಂಕಷ್ಟವಿದು ಎಂದುಕೊಳ್ಳೋಣ. ಆದರೆ, ಚೂರಿಯಂತೆ ಇರಿಯುವ ಜನರ ಮಾತು ಕೊರೋನಾ ರೋಗಿಗಳ ಮಾನಸಿಕ ಆರೋಗ್ಯವನ್ನು ಹದಗೆಡಿಸಿದೆ. ಒಂದೆಡೆ ಅಪಾಟ್ಮೆರ್ಂಟ್‍ನ ಇತರ ನಿವಾಸಿಗಳು ಇಂತವರನ್ನು ಏಕೆ ಇಲ್ಲಿ ಇಟ್ಟಿದ್ದೀರಿ? ಎಂದು ವರಾತ ತೆಗೆಯುತ್ತಿದ್ದಾರೆ. ಅಪಾಟ್ಮೆರ್ಂಟ್ ನಿವಾಸಿಗಳ ವಾಟ್ಸಾಪ್ ಗ್ರೂಪುಗಳಲ್ಲಿ ಪ್ರತಿನಿತ್ಯ ಇವರದ್ದೇ ಮಾತಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಆರೋಗ್ಯ ವಿಚಾರಿಸುವ ನೆಪದಲ್ಲಿ ಇವರಿಗೆ ಕರೆ ಮಾಡುವವರ ಚುಚ್ಚು ಮಾತುಗಳಿಂದ ಅಕ್ಷರಶಃ ನೊಂದಿದ್ದಾರೆ.
ನಾಳೆ ಇವರು ಖಂಡಿತ ಕೊರೋನಾದಂತಹ ಖಾಯಿಲೆಯಿಂದ ಬಚಾವಾಗಿ ಬರಬಹುದು. ಆದರೆ, ಈ ಸಂದರ್ಭದಲ್ಲಿ ಅವರ ಮನಸ್ಸಿಗೆ ಸತತವಾಗಿ ಉಂಟಾಗಿರುವ ನೋವಿನಿಂದ ರೋಗಿ ಬೇಗ ಗುಣವಾಗುತ್ತಾನೆ ಎಂದು ಹೇಳುವುದು ಕಷ್ಟ.
ಕಥೆ-2: ಆತ ಮೂಲತಃ ಮಲೆನಾಡಿನ ಹುಡುಗ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ. ಒಂದೊಳ್ಳೆ ಕೆಲಸ ಪಡೆದಿದ್ದ ಆತ ನಗರದ ಪ್ರತಿಷ್ಠಿತ ಏರಿಯಾದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಆದರೆ, ದುರಾದೃಷ್ಟವಶಾತ್ ಆಗಿನ್ನು ರಾಜ್ಯಕ್ಕೆ ಕಾಲಿಟ್ಟಿದ್ದ ಕೊರೊನಾ ಲಾಕ್‍ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಆತನಿಗೂ ವಕ್ಕರಿಸಿತ್ತು.
ದಿಢೀರನೆ ಕಾಣಿಸಿಕೊಂಡಿದ್ದ ಸುಸ್ತು ಜ್ವರದಿಂದಾಗಿ ಮೆತ್ತಗಾಗಿದ್ದ ಆತ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದ. ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆತನೂ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವಾಗಿ ಗುಣಮುಖನಾಗಿದ್ದ.
ಆದರೆ, ಆಗಿನ್ನು ಮಾಧ್ಯಮಗಳು ಪ್ರತಿನಿತ್ಯ ಕೊರೊನಾ ಕೇಕೆ, ತಬ್ಲಿಘಿ ಸೋಂಕು, ಕೊರೊನಾ ರಣಕಹಳೆ, ಕೊರೊನಾ ಅಟ್ಟಹಾಸ, ಸಾವಿನ ಸರದಾರ ಹೀಗೆ ನಾನಾ ಹೆಸರಿನಲ್ಲಿ ಸೋಂಕನ್ನು ವಿಜೃಂಭಿಸಿ ವರದಿ ಮಾಡಿದ್ದವು. ಈ ಮೂಲಕ ಜನರಲ್ಲಿ ಎಚ್ಚರಿಕೆಯ ಬದಲು ಭೀತಿ ಹುಟ್ಟಿಸುವಲ್ಲಿ ಸಫಲರಾಗಿದ್ದರು. ಪರಿಣಾಮ ಆತ ಕೊರೊನಾದಿಂದ ಗುಣಮುಖನಾಗಿ ಮನೆಗೆ ಮರಳಿದ್ದರೂ ಸಹ ಕೊರೊನಾಗೆ ಹೆದರಿ ಮನೆಯ ಯಜಮಾನ ಆತನನ್ನು ಏಕಾಏಕಿ ಹೊರಹಾಕಿದ್ದ. “ಲಾಕ್‍ಡೌನ್ ಸಂದರ್ಭದಲ್ಲಿ ಅಸಹಾಯಕನಂತೆ ನಾನು ಬೀದಿ ಪಾಲಾಗಿದ್ದೆ. ಯಾರೂ ಸಹಾಯ ಹಸ್ತ ಚಾಚಲಿಲ್ಲ. ಕೊನೆಗೆ ಕೆಲಸವನ್ನೂ ಕಳೆದುಕೊಂಡು, ಆನಂತರ ಅನಿವಾರ್ಯವಾಗಿ ಊರಿಗೆ ಮರಳಿದೆ” ಎನ್ನುತ್ತಾರೆ ಅವರು.
ಇದು ಕೊರೊನಾ ಸೋಂಕು ಪೀಡಿತರ ಕಥೆಯಾದರೆ, ಇಂತಹ ಸಂದರ್ಭದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಅನಿವಾರ್ಯ ಕಾರಣಗಳಿಗಾಗಿ ತಮ್ಮ ಸಂಬಂಧಿಕರ ಅಥವಾ ತಮ್ಮ ಮನೆಗೆ ತೆರಳುವವರ ಕಥೆ ಭಿನ್ನವಾಗಿದೆ, ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿರುವುದು ತಿಳಿಯುತ್ತದೆ.
ಕಥೆ 3: ಆಕೆಯ ಹೆಸರು ಭಾನು (ಹೆಸರನ್ನು ಬದಲಾಯಿಸಲಾಗಿದೆ). ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿರುವ ಈಕೆ ಪದವೀಧರೆ. ಪೋಷಕರು ಈಕೆಯನ್ನು ದೂರದ ಮಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ಆಕೆಯ ದುರಾದೃಷ್ಟವೋ ಏನೋ? ಆಕೆಗೆ 7 ತಿಂಗಳು ತುಂಬುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಲಾಕ್‍ಡೌನ್ ಘೋಷಿಸಲಾಯಿತು.
ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ 7ನೇ ತಿಂಗಳು ನಡೆಯುವಾಗ ಸೀಮಂತ ಮಾಡಿಸಿ ಹೆರಿಗೆಗೆ ತವರು ಮನೆಗೆ ಕಳಿಸುವುದು ವಾಡಿಕೆ. ತವರು ಮನೆಗೆ ತೆರಳಲು ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ವಿಪರ್ಯಾಸ ಆಕೆ ಹೆರಿಗೆಗೆಂದು ತವರು ಮನೆಗೆ ಹೋಗುವುದು ಸಾಧ್ಯವೇ ಆಗಿರಲಿಲ್ಲ. ಹೀಗಾಗಿ ಗಂಡನ ಮನೆಯಲ್ಲೇ ಹೆರಿಗೆಯಾಗಿ ಹೆಣ್ಣುಮಗು ಜನಿಸಿತ್ತು.
ಆಕೆಗೆ ಮಗು ಜನಿಸುವಷ್ಟರಲ್ಲಿ ದೇಶದಾದ್ಯಂತ ಲಾಕ್‍ಡೌನ್ ಹಂತಹಂತವಾಗಿ ಸಡಿಲಿಕೆಯಾಗಿತ್ತು. ಹೀಗಾಗಿ ಮಗುವನ್ನಾದರೂ ತವರಿಗೆ ತೋರಿಸುವ ಸಲುವಾಗಿ ಆಕೆ ಗಂಡನ ಜೊತೆಗೆ ಕಾರಿನಲ್ಲಿ ತನ್ನ ಊರಿಗೆ ಬಂದಿಳಿದಿದ್ದಳು. ಆದರೆ, ಇಡೀ ಊರೇ ಒಟ್ಟಾಗಿ ಆಕೆ ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿತ್ತು. ಹೊರಗಡೆಯಿಂದ ಯಾರೂ ಊರಿನ ಒಳಗೆ ಬರಬಾರದು ಎಂದು ತಾಕೀತು ಮಾಡಿ, ಕೊನೆಗೆ ಜಗಳ ಮಾಡಿ ಒತ್ತಾಯಪೂರ್ವಕವಾಗಿ ಆಕೆಯನ್ನು ಹಿಂದಕ್ಕೆ ಕಳಿಸಲಾಯಿತು.
ಇಂತಹ ಅಸಂಖ್ಯಾತ ಕಥೆಗಳಲ್ಲಿ ಇವು ಕೆಲವಷ್ಟೇ. ಮಾನವೀಯ ಸಮಾಜ ತಲೆ ತಗ್ಗಿಸುವ ಅದೆಷ್ಟೋ ಕಥೆಗಳು ಕೊರೊನಾ ಸೋಂಕಿತರನ್ನು ಕಳಂಕಿತರಾಗಿ ಕಾಣುತ್ತಿರುವ ಕಾರಣಕ್ಕೆ ಹುಟ್ಟಿಕೊಂಡಿವೆ. ಕೊರೊನಾ ಸಮಯದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಬಾರದೆಲ್ಲ! ಹೀಗೆ ಕೆಲವು ‘ಭಯಂಕರ’ ಮಾಧ್ಯಮಗಳ ವೈಭವೀಕೃತ ವರದಿಗಳಿಗೆ ಬೆಚ್ಚಿಬಿದ್ದು ಇಂತಹ ಸಂದಿಗ್ಧ ಸಂದರ್ಭದಲ್ಲಿ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲುಬೇಕಿರುವ ಸಮಯದಲ್ಲಿ ವಿವೇಕ ಕಳೆದುಕೊಳ್ಳಬಾರದಲ್ಲವೇ?


