ಭಾರತದಲ್ಲಿರುವ ನೇಪಾಳಿಗಳು ಅಲ್ಲಿನ ಪ್ರಧಾನಿ ಒಲಿಯ ವಿರುದ್ದ ಧ್ವನಿ ಎತ್ತಬೇಕು. ಇಲ್ಲವೆಂದರೆ ಎಲ್ಲಾ ನೇಪಾಳಿಗಳಿಗೂ ಇದೇ ಪರಿಸ್ಥಿತಿ ಬರುತ್ತದೆ ಎಂದು ಬೆದರಿಸಿ ನೇಪಾಳಿ ಎನ್ನಲಾದ ಯುವಕನನ್ನು ತಲೆ ಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದ ಘಟನೆಯ ಹಿಂದಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಯುವಕ ಸ್ಥಳೀಯನಾಗಿದ್ದು, ಆತನಿಗೆ 1000 ರೂಪಾಯಿ ನೀಡಿ ನಟಿಸುವಂತೆ ಹೇಳಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ವೈರಲ್ ವೀಡಿಯೋದಲ್ಲಿ ಯುವಕನನ್ನು ಜೈಶ್ರೀರಾಮ್ ಹೇಳುವಂತೆ ಹಾಗೂ ಪ್ರಧಾನಿ ಒಲಿಗೆ ಧಿಕ್ಕಾರ ಕೂಗುವಂತೆ ಒತ್ತಾಯಿಸುವುದನ್ನು ಕಾಣಬಹುದಾಗಿದೆ. ಅಲ್ಲದೆ ವಿಡಿಯೋದಲ್ಲಿ ಯುವಕನ ತಲೆ ಬೋಳಿಸಿ ತಲೆಯ ಮೇಲೆ ಜೈಶ್ರೀರಾಮ್ ಎಂದು ಕೂಡಾ ಬರೆಯಲಾಗಿತ್ತು.
ಓದಿ: ಯುವಕನ ತಲೆ ಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಹಿಂದುತ್ವವಾದಿಗಳು
ನಂತರ ಪ್ರಕರಣ ದಾಖಲಿಸಿದ ಪೊಲೀಸರು ಆರು ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ವೀಡಿಯೊದಲ್ಲಿರುವ ಯುವಕ ಮೂಲತಃ ವಾರಣಾಸಿಯವನಾಗಿದ್ದು, ಆತನ ಆಧಾರ್ ಹಾಗೂ ಐಡಿ ಕಾರ್ಡ್ ನೋಡಿದ ನಂತರ ಇದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಗೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಸೇನಾ ಸಂಘಟನೆಯೂ ನೇಪಾಳಿಯಂತೆ ನಟಿಸಲು 1000 ರೂಪಾಯಿ ನೀಡದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯ ಹಿನ್ನಲೆಯಲ್ಲಿ ಭಾರತದಲ್ಲಿರುವ ನೇಪಾಳಿಗಳ ಸುರಕ್ಷತೆಯ ಬಗ್ಗೆ ನೇಪಾಳದ ರಾಯಭಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದರು.
ನೇಪಾಳಿ ರಾಯಭಾರಿ ನೀಲಾಮಾಬರ್ ಆಚಾರ್ಯ ಶನಿವಾರದಂದು, ‘ತಾನು ಬೆಳಿಗ್ಗೆ ಉತ್ತರ ಪ್ರದೇಶದ ಸಿಎಂ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ನೇಪಾಳದ ಪ್ರಜೆಗಳಿಗೆ ಅಸುರಕ್ಷಿತ ಭಾವನೆ ಬರದಂತೆ ನೋಡಿಕೊಳ್ಳಬೇಕೆಂದು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಕೈಗೊಂಡ ಕ್ರಮದಿಂದ ತೃಪ್ತಿ ಹೊಂದಿದ್ದೇನೆ’ ಎಂದು ಹೇಳಿದ್ದರು.
ಓದಿ: ನೇಪಾಳಿ ಪ್ರಜೆಗೆ ಹಿಂಸೆ: ಯುಪಿ ಸಿಎಂ ಆದಿತ್ಯನಾಥ್‌ರೊಂದಿಗೆ ಮಾತನಾಡಿದ ನೇಪಾಳದ ರಾಯಭಾರಿ


