ರಸಗೊಬ್ಬರ ರಫ್ತು ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅಶೋಕ್ ಗೆಹ್ಲೋಟ್ ಸಹೋದರ ಅಗ್ರಾಸೇನ್ ಗೆಹ್ಲೋಟ್ ನಡೆಸುತ್ತಿರುವ ಕಂಪನಿಯು ಸಬ್ಸಿಡಿ ರಸಗೊಬ್ಬರವಾದ ಮುರಿಯೇಟ್ ಆಫ್ ಪೊಟ್ಯಾಶ್ (MoP) ಅನ್ನು ರಫ್ತು ಮಾಡಿದೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ಇದರ ರಫ್ತಿಗೆ ನಿಷೇಧ ಹೇರಲಾಗಿದೆ ಎಂದು ಈಡಿ ಮೂಲಗಳು ತಿಳಿಸಿವೆ.
ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ MoP ಯ ಅಧಿಕೃತ ಆಮದುದಾರನಾಗಿದ್ದು, ಈ ರಾಸಾಯನಿಕವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ.
2007 ಮತ್ತು 2009 ರ ನಡುವೆ, ಇಂಡಿಯನ್ ಪೊಟ್ಯಾಶ್ ಲಿಮಿಟೆಡ್‌ನ ಅಧಿಕೃತ ವ್ಯಾಪಾರಿ ಆಗ್ರಾಸೇನ್ ಗೆಹ್ಲೋಟ್‌ನ ಸಂಸ್ಥೆ ಅನುಪಮ್ ಕೃಶಿ MoP ಅನ್ನು ಸಬ್ಸಿಡಿ ದರದಲ್ಲಿ ಖರೀದಿಸಿತ್ತು. ಆದರೆ ಕಂಪನಿಯು ಅದನ್ನು ರೈತರಿಗೆ ವಿತರಿಸುವ ಬದಲು ಮಲೇಷ್ಯಾಕ್ಕೆ ರಫ್ತು ಮಾಡಿತ್ತು ಎಂದು ಆರೋಪಿಸಲಾಗಿದೆ.
ಸಚಿನ್ ಪೈಲಟ್ ತನ್ನ ಆಪ್ತ ಶಾಸಕರೊಂದಿಗೆ ಬಂಡಾಯ ಎದ್ದ ಬಳಿಕ ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ತನ್ನ ಸರಕಾರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಸಚಿನ್ ಪೈಲಟ್ ಬಂಡಾಯವೆದ್ದ ಆರಂಭದಲ್ಲಿ ಸುಮಾರು 12 ಕ್ಕೂ ಹೆಚ್ಚಿನ ಕಾಂಗ್ರೆಸ್ ಹಾಗೂ ಗೆಹ್ಲೋಟ್ ಆಪ್ತ ಬೆಂಬಲಿಗರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು.
ಓದಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಮುಖಂಡರ ನಿವಾಸಗಳ ಮೇಲೆ ಐಟಿ ದಾಳಿ


