ಶನಿವಾರ, ಜುಲೈ 18ನೇ ತಾರೀಖು , ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿ ಸಂಘಟನೆ ಸತ್ಯಾಗ್ರಹಕ್ಕೆ ಕರೆ ಕೊಟ್ಟರು. ಇದಕ್ಕೆ ಸ್ಪಂದಿಸಿ ರಾಜ್ಯದ ಇತರೆ ಬೀದಿ ವ್ಯಾಪಾರಿ ಸಂಘಟನೆಗಳು ಹಾಗು ಅನೇಕ ಜಿಲ್ಲೆಗಳ ಬೀದಿ ವ್ಯಾಪಾರಿಗಳು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅಂದು ಅವರ ಮಾರುಕಟ್ಟೆಗಳಲ್ಲಿ, ಮನೆಗಳಲ್ಲಿ ಫಲಕಗಳನ್ನು ಪ್ರದರ್ಶಿಸುವುದರ ಮೂಲಕ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಈ ಸತ್ಯಾಗ್ರಹ ನಡೆದದ್ದು ಏತಕ್ಕೆ? ಬೀದಿ ವ್ಯಾಪಾರಿಗಳು ದಿನವೂ ವ್ಯಾಪಾರ ಮಾಡಿ, ಆ ದಿನದ ಆದಾಯದ ಫಲದಿಂದ ಜೀವನ ನಡೆಸುತ್ತಾರೆ. ಲಾಕ್ ಡೌನ್ ಗು ಮುನ್ನವೇ ಬೀದಿ ವ್ಯಾಪಾರಿಗಳು ಕಷ್ಟದ ಜೀವನ ನಡೆಸುತಿದ್ದರು. ಈಗ ಮಾರ್ಚ್ 3 ನೇ ವಾರದಿಂದ, 4 ತಿಂಗಳ ಕಾಲ ವ್ಯಾಪಾರ ಇಲ್ಲದೆ ಅವರ ಜೀವನ ತತ್ತರಿಸಿ ಹೋಗಿದೆ.
ಬೀದಿಲಿ ವ್ಯಾಪಾರ ಮಾಡುವವರು ಬಹುಪಾಲು ಬಡವರೇ. ಅಂಗಡಿ ಬಾಡಿಗೆ ಕಟ್ಟಲು ಸಾಧ್ಯವಿರುವವರು, ಅಂಗಡಿ ಕೊಳ್ಳಲು / ಅಂಗಡಿ ವಂಶಪಾರಂಪರ್ಯವಾಗಿ ಪಡೆದವರು ಯಾರು ಬೀದಿಲಿ ವ್ಯಾಪಾರ ಮಾಡೋಲ್ಲ. ನಗರಗಳ ಧೂಳು, ಮಳೆ, ಬಿಸಿಲುಗಳ ನಡುವೆ ವ್ಯಾಪಾರ ಮಾಡುವುದು ಸುಲಭವಲ್ಲ. ಇದರ ಜೊತೆಗೆ ಇರುವ ‘ಎತ್ತಂಗಡಿ’ಯ ಭೀತಿ . ಇವತ್ತು ವ್ಯಾಪಾರ ಮಾಡುವ ಸ್ಥಳದಲ್ಲಿ ನಾಳೆ ವ್ಯಾಪಾರ ಮಾಡಬಹುದೋ ಇಲ್ಲವೋ ತಿಳಿಯದು. ಸಂಚಾರಿ ಪೊಲೀಸ್, ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ನಿವಾಸಿ ಸಂಘಟನೆಗಳು (ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್) ಅವರ ಕಿರುಕುಳ ಯಾವಾಗಲೂ ಇದ್ದೆ ಇರುತ್ತದೆ. ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆಗೆ, ಕೇಂದ್ರ ಸರ್ಕಾರ 2014 ನಲ್ಲಿ ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ಕಾಯ್ದೆ 2014 ಅನ್ನು ತಂದಿತು. ಇದರ ಪ್ರಕಾರ ಯಾವುದೇ ಬೀದಿ ವ್ಯಾಪಾರಿಗಳನ್ನು ದಿಢೀರ್ ಎತ್ತಂಗಡಿ ಮಾಡುವಂತಿಲ್ಲ. ಆದರೆ ಬಹುಪಾಲು ಅಧಿಕಾರಿಗಳು ಈ ಕಾನೂನು ಬಗ್ಗೆ ತಿಳಿದುಕೊಳ್ಳದೆ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಆಡಿ ಬೀದಿ ವ್ಯಾಪಾರಿಗಳನ್ನು ದಿಡೀರ್ ಓಡಿಸುವುದನ್ನು ಮಾಡುತ್ತಲೇ ಇದ್ದಾರೆ.

ಆಗೀಗ ಎತ್ತಂಗಡಿಗಳನ್ನು ಎದುರಿಸುತ್ತಿದ್ದ ಬೀದಿ ವ್ಯಾಪಾರಿಗಳಿಗೆ ಮೋದಿಯವರ ಆಯೋಜಿತ , ದಿಢೀರ್ ಲಾಕ್ ಡೌನ್ ಒಂದು ದೇಶವ್ಯಾಪಿ ಎತ್ತಂಗಡಿ ಆಯಿತು. ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಬಿಬಿಎಂಪಿ ಕಾಲೇರಾ ಹರಡುತ್ತಿದೆ ಎಂದು ಹೇಳುತ್ತಾ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಟ್ಟಿರಲಿಲ್ಲ. ಲಾಕ್ ಡೌನ್ ನಲ್ಲಿ ಅಲ್ಲಿ ಇಲ್ಲಿ, ಮೂಲೆಗಳಲ್ಲಿ ನಿಂತು ವ್ಯಾಪಾರ ಮಾಡುವ, ಕೆಲವು ತಳ್ಳೋ ಗಾಡಿ ಉಳ್ಳ ಕೇವಲ 10% ಹಣ್ಣು ತರಕಾರಿಯವರಿಗೆ ಸ್ವಲ್ಪ ವ್ಯಾಪಾರ ಆಯಿತು. ಮಿಕ್ಕ 90% ವ್ಯಾಪಾರಿಗಳಿಗೆ ಯಾವುದೇ ವ್ಯಾಪಾರ ಇರಲಿಲ್ಲ. ಈಗ ಸುಮಾರು 4 ತಿಂಗಳಾಗಿದ್ದರೂ ಅವರ ಕಷ್ಟ ಮುಗಿದಿಲ್ಲ. ಜುಲೈ ತಿಂಗಳಲ್ಲೂ ಸಹ ಕೆಲವು ಕಡೆ ಇನ್ನು ವ್ಯಾಪಾರ ಪ್ರಾರಂಭವಾಗಿಲ್ಲ. (ಉದಾಹರಣೆ: ಶಿವಾಜಿನಗರ), ಮಿಕ್ಕಿರುವ ಕಡೆ, ವ್ಯಾಪಾರ ನಡೀತಿದೆ ಆದರೆ ತೀರಾ ಕಡಿಮೆ. ಶಿವಾಜಿನಗರದ ವ್ಯಾಪಾರಿಯಾದ ಬಾಬುರವರು ಜೊಮೆಟೋ ಡೆಲಿವರಿ ಕೆಲಸ ಕೈಗೊಂಡರು “ಅದರಲ್ಲೂ 2 ತಿಂಗಳ ಸ್ವಲ್ಪ ಆದಾಯ ಇತ್ತು , ಈಗ ದಿವಸಕ್ಕೆ ಎರಡು ಡೆಲಿವರಿ ಬಂದರೆ ಹೆಚ್ಚು, ಏನು ಮಾಡುವುದೋ ಗೊತ್ತಿಲ್ಲ” ಎನ್ನುತ್ತಾರೆ. ಶಿವಾಜಿನಗರ ಬಸ್ ನಿಲ್ದಾಣ ಸುತ್ತಲೂ 250ಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಅವರಲ್ಲಿ ಮಾರ್ಚ್ 15 ರಿಂದ ಒಬ್ಬರಿಗೂ ವ್ಯಾಪಾರ ಮಾಡಲು ಬಿಟ್ಟಿಲ್ಲ. ವಿಜಯನಗರದ ಮಾರುಕಟ್ಟೆಯಲ್ಲಿ ಜೂನ್ ನಲ್ಲಿ ವ್ಯಾಪಾರ ಪ್ರಾರಂಭ ಮಾಡಿದರು. ಆದರೆ ವ್ಯಾಪಾರ ಇಲ್ಲ. ಅಲ್ಲಿ ಬಟ್ಟೆ ವ್ಯಾಪಾರ ಮಾಡುವ ಬೀದಿ ವ್ಯಾಪಾರಿ ಹಾಗು ಸಂಘಟನೆಯ ನಾಯಕರಾದ ಸ್ವಾಮಿ ಅವರು ಹೇಳುವಂತೆ “ಕೆಲವು ದಿವಸ ಬೋಣಿ ಸಹ ಆಗೋದಿಲ್ಲ. ಒಂದು ಕಡೆ ವ್ಯಾಪಾರ ಆಗೋಲ್ಲ, ಇನ್ನೊಂದು ಕಡೆ ಎಲ್ಲಿ ಕರೋನಾ ತಟ್ಟುತ್ತೇವೆಯೋ ಎಂದು ಭಯ” ಎನ್ನುತ್ತಾರೆ.
ಬಿಬಿಎಂಪಿ ಕಚೇರಿಯಾಚೆ ಜೂನ್ ತಿಂಗಳಲ್ಲಿ ಒಂದು ದಿವಸ ಲಕ್ಷ್ಮಿಯವರು ಸಿಕ್ಕಿದ್ದರು. ಸುಮಾರು 50 ವಯಸ್ಸಿನ ಅವರು ಬುಟ್ಟಿಯಲ್ಲಿ ಕಡ್ಲೇಕಾಯಿ ವ್ಯಾಪಾರ ಮಾಡುತಿದ್ದರು . ಅಲ್ಲಿಂದ ಸುಮಾರು 5 ಕಿಲೋಮೀಟರ್ ದೂರದ ಕಸ್ತೂರಿ ಬಾಯಿ ನಗರದಿಂದ ನಡೆದುಕೊಂಡು ಬಂದಿದ್ದರು . “ಬಿಬಿಎಂಪಿ ಕಚೇರಿಯೊಳಗೆ ಬಿಡಲು ಹೇಳಿ ಸರ್, ಅಲ್ಲಿ ಸ್ವಲ್ಪ ವ್ಯಾಪಾರ ಆಗುತ್ತದೆ, ಇಲ್ಲಿ ರಸ್ತೇಲಿ ಏನೂ ವ್ಯಾಪಾರ ಇಲ್ಲ” ಎಂದರು. ಅವರೊಬ್ಬರೇ ಇರುವುದಂತೆ, ಕುಟುಂಬದವರು ಯಾರು ಇಲ್ಲ, ವ್ಯಾಪಾರ ಇಲ್ಲದೆ ಊಟಕ್ಕೂ ಕಷ್ಟ ಪಡುತ್ತಿದ್ದರು. ನಗರಗಳಲ್ಲಿ ಸುಮಾರು ಜನ ವಯಸ್ಸಾಗಿರುವವರು, ಬೇರೆ ಕೆಲಸ ಸಿಗದೇ ಬೀದಿ ವ್ಯಾಪಾರ ಮೇಲೆ ಅವಲಂಬಿತರಾಗಿದ್ದಾರೆ. ಅವರು ತೀವ್ರ ಕಷ್ಟವನ್ನು ಅನುಭವಿಸುತ್ತಿದ್ದಾರೆ.
ಹೀಗೆ ವ್ಯಾಪಾರ ಇಲ್ಲದೆ, ಬೀದಿ ವ್ಯಾಪಾರಿಗಳಿಗೆ ಮನೆ ಬಾಡಿಗೆ ಸಹ ಕಟ್ಟಲು ಆಗುತ್ತಿಲ್ಲ. ಅವರ ಮಕ್ಕಳ ಶಿಕ್ಷಣ ಅಪಾಯದಲ್ಲಿದೆ. ಜಯನಗರ 9ನೇ ಬ್ಲಾಕ್ ನ ಶಾಂತಿಯವರೊಡನೆ ಮಾತನಾಡುತ್ತಿದ್ದಾಗ “ಸಾರ್, ನನ್ನ ಮಗನ ಸ್ಕೂಲ್ ಫೀಸ್ ಗೆ ಸಾಲ ಮಾಡಿ ಕಟ್ಟಿದ್ದೀನಿ ಸಾರ್” ಎಂದರು. ಎಷ್ಟೋ ಜನ ಇಲ್ಲಿ ಮನೆ ನಡೆಸಲು ಸಾಧ್ಯವಾಗದೆ ಊರಿಗೆ ಹೋಗಿದ್ದಾರೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಸರ್ಕಾರದಿಂದ ಪರಿಹಾರ ಕೊಡುವಂತೆ ಒತ್ತಾಯ ಮಾಡುವುದು ಸೂಕ್ತ ಎಂದು ಬೀದಿ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿದವು. ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಎಸ್ ಬಾಬು ಅವರು – “ನಮಗೆ ಮಾರ್ಚ್ ಇಂದ ವ್ಯಾಪಾರ ಇಲ್ಲ. ಮುಂದೇನು – ಹೇಗಿರುತ್ತೋ ಗೊತ್ತಿಲ್ಲ. ಜನರ ಬಳಿ ದುಡಿಲ್ಲ, ಜೊತೆಗೆ ಈಗಾಗಲೇ ಹರಡಿರುವ ಫೇಕ್ ನ್ಯೂಸ್ ಇಂದ, ಬೀದಿ ವ್ಯಾಪಾರಿಗಳು ಕೊರೊನಾ ಹಬ್ಬುತ್ತಾರೆ ಎಂದು ಬೇರೆ ಸಾಕಷ್ಟು ಜನ ಭಯ ಪಡುತ್ತಿದ್ದಾರೆ. ಯಾವಾಗ ವ್ಯಾಪಾರ ಮುಂಚೆಯಂತೆ ಆಗುತ್ತದೆಯೋ ಗೊತ್ತಿಲ್ಲ. ನಾವು ನಮ್ಮ ಕಷ್ಟಗಳ ಬಗ್ಗೆ ಮಾನ್ಯ ಮಹಾಪೌರರು ಹಾಗು ಆಯುಕ್ತರನ್ನು ಭೇಟಿ ಆಗಿ ಪರಿಹಾರ ನೀಡಿ ಎಂದು ಮನವಿ ಸಲ್ಲಿಸಿದೆವು. ಅದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಿಗೆ ನಮ್ಮ ಕಷ್ಟ ಹೇಳಿಕೊಳ್ಳೋಣ ಎಂದು ಸಮಯ ಕೋರಿದರೆ ನಮಗೆ ಅಪ್ಪಾಯಿಂಟ್ಮೆಂಟ್ ನೀಡಲಿಲ್ಲ, ಈ-ಮೇಲ್ ಮಾಡಲು ಹೇಳಿದರು, ಆಗ ನಾವು ಮುಖ್ಯಮಂತ್ರಿಗಳಿಗೆ ಈ-ಮೇಲ್ ಮೂಲಕ ಮನವಿ ಸಲ್ಲಿಸಿದೆವು. ಅದಕ್ಕೆ ಉತ್ತರ ಸಿಕ್ಕಿಲ್ಲ. ಪ್ರತಿಭಟನೆ ಮಾಡೋಣ ಎಂದರೆ ಸೆಕ್ಷನ್ 144 ಹಾಕಿದ್ದಾರೆ. ಬೇರೆ ದಾರಿ ಇಲ್ಲದೆ ಉಪವಾಸ ಸತ್ಯಾಗ್ರಹ ಮಾಡಿದೆವು” ಎನ್ನುತ್ತಾರೆ.

ಹಾಗಾಗಿ ಸತ್ಯಾಗ್ರಹ ಮಾಡಿದ ಬೀದಿ ವ್ಯಾಪಾರಿಗಳು “ಬೀದಿ ವ್ಯಾಪಾರ ಮಾಡಲು ಅನುಮತಿ ನೀಡಿ”, “ಮಾನ್ಯ ಮುಖ್ಯಮಂತ್ರಿಗಳೇ, ಬೀದಿ ವ್ಯಾಪಾರಿಗಳ ಕಷ್ಟ ನಿಮ್ಮ ಕಣ್ಣಿಗೆ ಏಕೆ ಕಾಣುತ್ತಿಲ್ಲ, ನಮಗೂ ಪರಿಹಾರ ನೀಡಿ”, ” ಮಾನ್ಯ ಪ್ರಧಾನ ಮಂತ್ರಿಗಳೇ, ನಮಗೆ ಸಾಲದ ಬದಲು ಪರಿಹಾರ ನೀಡಿ” ಎಂಬಂತಹ ಸಂದೇಶಗಳನ್ನು ಉಲ್ಲಾ ಭಿತ್ತಿ ಪತ್ರಗಳನ್ನು ಸತ್ಯಾಗ್ರಹದಲ್ಲಿ ಪ್ರದರ್ಶಿಸಿದರು.
ತಿಂಗಳಿಗೆ 15,000 ದಂತೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಬೀದಿ ವ್ಯಾಪಾರಿಗಳ ಒತ್ತಾಯ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಪ್ರಧಾನ್ ಮಂತ್ರೀ ಆತ್ಮನಿರ್ಭರ್ ಯೋಜನೆ ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಬೀದಿ ವ್ಯಾಪಾರಿಗಳಿಗೆ 10,000 ರೂಪಾಯಿಗಳ ಸಾಲ ನೀಡುತ್ತಿದೆ. ನಮಗೆ ವ್ಯಾಪಾರ ಇಲ್ಲದಿರುವಾಗ ಸಾಲ ಹೇಗೆ ತೀರಿಸುವುದು, ಹಾಗಾಗಿ ನಮಗೆ ಸಾಲ ಬೇಡ ಪರಿಹಾರ ನೀಡಿ ಎಂದು ಈಗಾಗಲೇ ಸಾಲಗಳಲ್ಲಿ ಮುಳುಗಿರುವ ವ್ಯಾಪಾರಿಗಳ ಒತ್ತಾಯ. ಇನ್ನು ಬಿಬಿಎಂಪಿಗೆ ಬಂದರೆ, ಮೂರೂ ವರ್ಷದಿಂದಲೂ ಸ್ಥಳೀಯ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಎಂದು 2 ಕೋಟಿ ಹಣ ಮೀಸಲಿಟ್ಟಿದೆ, ಆದರೆ ಇದುವರೆಗೂ ಒಂದು ರೂಪಾಯಿ ಸಹ ಬಳಸಿಲ್ಲ. ಈಗಲಾದರೂ ಅದನ್ನು ನಮ್ಮ ಕಲ್ಯಾಣಕ್ಕಾಗಿ ಉಪಯೋಗಿಸಿ ಎಂಬುದು ಅವರ ಒತ್ತಾಯ. ಇಷ್ಟೆಲ್ಲಾ ಅಲ್ಲದೆ, ವ್ಯಾಪಾರಿಗಳದ್ದು ಒಂದು ಮುಖ್ಯ ಹಕ್ಕೊತ್ತಾಯವಿದೆ – ಈ ಮೇಲಿನ ಪರಿಹಾರ ಎಲ್ಲಾ ಬೀದಿ ವ್ಯಾಪಾರಿಗಳಿಗೂ ತಲುಪಬೇಕೆಂಬುದು. ಸರ್ಕಾರ ಸಾಲ ಕೊಡುತ್ತಿರುವುದು ಕೇವಲ ಸಮೀಕ್ಷೆಗೆ ಒಳಗೊಂಡಂತ ವ್ಯಾಪಾರಿಗಳಿಗೆ. ಆದೆರೆ ಒಂದು ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳುಳ್ಳ ಬೆಂಗಳೂರು ನಗರದಲ್ಲಿ ಕೇವಲ 25,000 ವ್ಯಾಪಾರಿಗಳು ಸಮೀಕ್ಷೆಗೆ ಒಳಪಟ್ಟಿದ್ದಾರೆ.
ಬೀದಿ ವ್ಯಾಪಾರಿಗಳ ನಮ್ಮ ನಗರಕ್ಕೆ ದೊಡ್ಡ ಸೇವೆ ಸಲ್ಲಿಸಿದವರು. ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಉತ್ತಮ ವಸ್ತುಗಳು ಸಿಗಬೇಕಾದರೆ, ಅದು ಬಿಡಿ ವ್ಯಾಪಾರಿಗಳಿಂದ ಮಾತ್ರ ಸಾಧ್ಯ. ಬೀದಿ ವ್ಯಾಪಾರ ನಮ್ಮ ನಗರಗಳ ಪರಂಪರೆಯ ಮುಖ್ಯ ಭಾಗ. ಅಧಿಕಾರಿಗಳ ಬೈಗುಳ, ಮಳೆ, ಬಿಸಿಲು, ಧೂಳು, ಹೊಗೆ ಮಧ್ಯೆ ನಮಗೆ ದಿನಾ ಸೇವೆ ಸಲ್ಲಿಸುವ ವ್ಯಾಪಾರಿಗಳ ನೆರವಿಗೆ ಸರ್ಕಾರ ಮುಂದೆ ಬರಲೇಬೇಕು. ಈ ನಗರ ಸೃಷ್ಟಿ ಮಾಡಿದ ಕೆಂಪೇಗೌಡರು ಎಲ್ಲರೂ ಬದುಕುವಂತ ಊರಾಗಬೇಕೆಂದು ಬಯಸಿದವರು. ಅವರ ನೆನಪಿನಲ್ಲಿ ಅತಿ ದೊಡ್ಡ ಪ್ರತಿಮೆ ಕಟ್ಟುತ್ತಿರುವ ರಾಜ್ಯ ಸರ್ಕಾರ ಈಗ ಅವರ ಈ ಉದಾರ ಆದರ್ಶವನ್ನು ತನ್ನದಾಗಿಸಿಕೊಂಡು, ಬೀದಿ ವ್ಯಾಪಾರಿಗಳಿಗೆ ಸಾಥ್ ನೀಡಬೇಕಾಗಿದೆ.
– ವಿನಯ್ ಕೂರಗಾಯಲ ಶ್ರೀನಿವಾಸ, ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು


