ಚನ್ನೈನ ನೆರಮನೆಯ ಮಹಿಳೆಗೆ ತೊಂದರೆ ಕೊಡುವ ದೃಷ್ಟಿಯಿಂದ ಮನೆ ಮುಂದೆ ಕಸ ಬಿಡಾಡುವ, ಮೂತ್ರ ಮಾಡುವ ಮೂಲಕ ಅಸಹ್ಯಕರವಾಗಿ ಕಿರುಕುಳ ನೀಡಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಆರೋಪಿ ABVP ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಸುಬ್ಬಯ್ಯ ವಿರುದ್ಧ ಚನ್ನೈ ಪೊಲೀಸರು ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತ ಮಹಿಳೆಯು ದೂರು ವಾಪಸ್ ಪಡೆದಿದ್ದಾರೆ. ಇದಕ್ಕಾಗಿ ಸಾಕಷ್ಟು ಜನರು ಒತ್ತಡ ತಂದಿದ್ದಾರೆಂಬ ಆರೋಪ ಕೇಳಿಬಂದಿದೆ.
ಶನಿವಾರ ಸಂಜೆ ಆರೋಪಿ ABVP ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಸುಬ್ಬಯ್ಯ ತನ್ನ ಕೃತ್ಯಕ್ಕಾಗಿ ಕ್ಷಮೆ ಕೇಳಿದ್ದಾರೆ. ಹಾಗಾಗಿ ಕೇಸ್ ವಾಪಸ್ ಪಡೆಯಬೇಕು, ಈ ವಿಚಾರದಲ್ಲಿ ಮುಂದುವರೆಯಬಾರದು ಎಂದು ಅಪಾರ್ಟ್‌ಮೆಂಟ್‌ನ ಹಲವು ಜನರು ಒತ್ತಡ ತಂದಿದ್ದಾರೆ ಎಂದು ಆ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.
ಪ್ರಕರಣ ವಾಪಸ್ ಪಡೆದಿರುವ ಬಗ್ಗೆ ಚನ್ನೈ ಪೊಲೀಸರು ಸ್ಪಷ್ಟಪಡಿಸಿದ್ದು, ಪ್ರಕರಣ ದಾಖಲಾಗಿದ್ದರಿಂದ ತನಿಖೆ ನಡೆಸುತ್ತಿದ್ದೆವು ಎಂದು ತಿಳಿಸಿದ್ದಾರೆ. ತನ್ನ ಮನೆಯ ಮುಂದೆ ಕಸ ಬಿಸಾಡುವ, ಮೂತ್ರ ಮಾಡುವ ಮೂಲಕ ಕಿರುಕುಳ ನೀಡಿದ್ದ ಆರೋಪಿಯ ವಿರುದ್ಧ ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷಿ ಸಮೇತ ಜುಲೈ 11 ರಂದು 62 ವರ್ಷದ ಮಹಿಳೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಜುಲೈ 25ರಂದು ಪ್ರಕರಣ ದಾಖಲಿಸಿದ್ದರು. ತದನಂತರ ಕೆಲವೇ ಗಂಟೆಗಳಲ್ಲಿ ದೂರು ವಾಪಸ್ ಪಡೆಯಲಾಗಿದೆ.
ಅಪಾರ್ಟ್‌ಮೆಂಟ್‌ನ ಹಲವರು ದೂರು ಹಿಂಪಡೆಯಲು ಒತ್ತಾಯಿಸಿದ್ದರು. ಆತನ ಕುಕೃತ್ಯಗಳ ವಿರುದ್ಧ ಸಾಕ್ಷಿ ಸಂಗ್ರಹಿಸುವಲ್ಲಿ ಸಹಾಯ ಮಾಡಿದ್ದ ಒಬ್ಬರು ಮಾತ್ರ ಕೇಸಿನಲ್ಲಿ ಮುಂದುವರೆಯಿರಿ ಎಂದು ಹೇಳಿದ್ದರು. ಉಳಿದವರು ಸಾಕಷ್ಟು ಒತ್ತಡ ತಂದ ನಂತರ ಮತ್ತು ಆರೋಪಿಯೇ ಕ್ಷಮೆ ಕೇಳಿದ ನಂತರ ಅನಿವಾರ್ಯವಾಗಿ ದೂರನ್ನು ಹಿಂಪಡೆಯಬೇಕಾಯಿತು ಎಂದು ದೂರು ನೀಡುವಲ್ಲಿ ನೆರವಾದ ಮಹಿಳೆಯ ಸೋದರಳಿಯ ಬಾಲಾಜಿ ತಿಳಿಸಿದ್ದಾರೆ.
ಚೆನ್ನೈನ ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಕ ಮತ್ತು ಶಸ್ತ್ರಚಿಕಿತ್ಸಾ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾಗಿರುವ ಸುಬ್ಬಯ್ಯ ವಿರುದ್ಧ ಆಡಂಬಕ್ಕಂ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಸೆಕ್ಷನ್ 271 (ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪ), ಸೆಕ್ಷನ್ 427 (ಐವತ್ತು ರೂಪಾಯಿಗೂ ಹೆಚ್ಚು ಮೊತ್ತದ ಆಸ್ತಿಗೆ ಹಾನಿ ಉಂಟುಮಾಡುವ ಕಿಡಿಗೇಡಿತನ) ಮತ್ತು ತಮಿಳುನಾಡು ಮಹಿಳಾ ಕಿರುಕುಳ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಹಿಳೆಗೆ ಸೇರಿದ್ದ ಕಾರು ಪಾರ್ಕಿಂಗ್ ಜಾಗದಲ್ಲಿ ಸುಬ್ಬಯ್ಯ ತನ್ನ ಕಾರನ್ನು ಪಾರ್ಕ್ ಮಾಡುತ್ತಿದ್ದರು. ಸ್ವಲ್ಪ ತಿಂಗಳುಗಳ ನಂತರ ಆ ಜಾಗಕ್ಕೆ ಮಾಸಿಕ 1500 ರೂ ಬಾಡಿಗೆ ವಿಧಿಸಲು ಆ ಮಹಿಳೆ ಮುಂದಾಗಿದ್ದರು. ಇದರಿಂದ ಕೋಪಗೊಂಡಿದ್ದ ಸುಬ್ಬಯ್ಯ ಆ ಜಾಗ ತನ್ನದು ಎಂದು ವಾದ ಮಾಡಿದ್ದರು ಎನ್ನಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ ನಂತರ ಸುಬ್ಬಯ್ಯ ನಿತ್ಯ ಆ ಮಹಿಳೆಯ ಮನೆ ಮುಂದೆ ಮೂತ್ರ ವಿಸರ್ಜನೆ ಮಾಡುವ, ಕಸ ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು. ಆದರೆ ಆರೋಪಿ ABVP ರಾಷ್ಟ್ರೀಯ ಅಧ್ಯಕ್ಷನಾದ ಕಾರಣ ಮತ್ತು ರಾಜಕೀಲ ಬಲ ಹೊಂದಿರುವುದರಿಂದ ಆತನನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಆ ಮಹಿಳೆ ಜುಲೈ 13 ರಂದು ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಈ ಕುರಿತು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಕಾರ್ಯಕರ್ತರು ಆರೋಪಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೇ ಟ್ವಿಟ್ಟರ್‌ನಲ್ಲಿ ಸಿಸಿಟಿವಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ShameOnABVP ಹ್ಯಾಸ್‌ಟ್ಯಾಗ್ ಟ್ರೆಂಡ್ ಆಗಿತ್ತು.
abvp ಅಧ್ಯಕ್ಷ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಈ ಕೊಳಕು ಕೆಲಸವನ್ನು ಮುಚ್ಚಿಹಾಕಲು ಇಡೀ ಬಿಜೆಪಿ ಯಂತ್ರಾಂಗ ಕೆಲಸ ಮಾಡುತ್ತಿದೆ. ಈ ಹಿಂದೆಯು ಅತ್ಯಾಚಾರ ಆರೋಪಿಗಳನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಈ ಕೂಡಲೇ ಅವನನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತೊಗೆಯಬೇಕೆಂದು ಎನ್‌ಎಸ್‌ಯುಐ ಆಗ್ರಹಿಸಿತ್ತು.
ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿಯಿಲ್ಲದ ಬಿಜೆಪಿ ಸರ್ಕಾರ ಮಹಿಳೆಯರಿಗೆ ಕಿರುಕುಳ ಕೊಟ್ಟವರಿಗೆ ರಕ್ಷಣೆ ನೀಡುತ್ತದೆ. ಪಕ್ಷದಲ್ಲಿ ಮೇಲಿನಿಂದ ಕೆಳಗಿನವರೆಗೆ ಇರುವವರೆಲ್ಲಾ ಮಹಿಳಾ ವಿರೋಧಿಗಳೇ ಆಗಿದ್ದಾರೆ. ಬಿಜೆಪಿ ಆಳ್ವಿಕೆಯು ಮಹಿಳಾ ಸುರಕ್ಷತೆ ಎಂಬುದನ್ನು ಅಣಕ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ABVP ರಾಷ್ಟ್ರೀಯ ಅಧ್ಯಕ್ಷನಿಂದ ಮಹಿಳೆಗೆ ನಿತ್ಯ ಕಿರುಕುಳ ಆರೋಪ: ShameOnABVP ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್


