Homeಮುಖಪುಟಜಗತ್ತಿನ ಆದಿ ಕವಯಿತ್ರಿ ಸ್ಯಾಫೋ: ಗೋರಿಯಿಂದ ಎದ್ದು ಬಂದ ಶಾಶ್ವತ ಕಾವ್ಯ

ಜಗತ್ತಿನ ಆದಿ ಕವಯಿತ್ರಿ ಸ್ಯಾಫೋ: ಗೋರಿಯಿಂದ ಎದ್ದು ಬಂದ ಶಾಶ್ವತ ಕಾವ್ಯ

ಸ್ಯಾಫೋಳ ಕಾವ್ಯದ ಕೇಂದ್ರಸ್ಥಾಯಿ ಪ್ರೇಮದ ಹಾತೊರೆಯುವಿಕೆಯೇ ಆಗಿದೆ. ಆಕೆ ತನ್ನ ಕಾವ್ಯದ ಸೀಮಿತ ಆವರಣದಲ್ಲಿಯೇ ತನ್ನ ಕೆಚ್ಚೆದೆಯನ್ನು ತೋರಿದ್ದಾಳೆ. ಆಕೆಯದ್ದು ವ್ಯಕ್ತಿನಿಷ್ಠ ಕಾವ್ಯದ ಅತ್ಯುತ್ತಮ ಅಭಿವ್ಯಕ್ತಿಯಾಗಿದೆ.

- Advertisement -
- Advertisement -
  • ಸುಭಾಷ್ ರಾಜಮಾನೆ

ಗ್ರೀಕ್ ದೇಶದ ಸ್ಯಾಫೋ ಜಗತ್ತಿನ ಆದಿ ಕವಯಿತ್ರಿ. ದೇಶಕಾಲ ಮೀರಿದ ಮಹಾನ್ ಕವಯಿತ್ರಿಯೂ ಆಗಿದ್ದಾಳೆ. ಸ್ಯಾಫೋ ಎಂಬ ಕಾವ್ಯ ಮಾಂತ್ರಿಕೆ ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಬದುಕಿದ್ದಳು. ಆಕೆಯ ಕಾಲದಲ್ಲಿ ಸಾಕ್ರಟಿಸ್, ಪ್ಲೇಟೋ, ಅರಿಸ್ಟಾಟಲ್‌ರಂತಹ ಜಗತ್ಪ್ರಸಿದ್ಧ ತತ್ವಜ್ಞಾನಿಗಳು ಇನ್ನೂ ಹುಟ್ಟಿರಲಿಲ್ಲ; ಸಮಸ್ತ ಭೂಮಂಡಲವನ್ನು ಗೆಲ್ಲಲು ಪಣತೊಟ್ಟ ಅಲೆಗ್ಸಾಂಡರ್‌ನಂತಹ ಚಕ್ರವರ್ತಿಯೂ ಇದ್ದಿರಲಿಲ್ಲ. ಜಗತ್ತಿನ ಮೊದಲ ಇತಿಹಾಸಕಾರ ಹೆರೊಡೋಟಸ್ ಕೂಡ ಹುಟ್ಟಿರಲಿಲ್ಲ. ಆಗ ಈ ಅಪ್ರತಿಮ ಕವಯಿತ್ರಿ ಕಾವ್ಯವನ್ನೇ ಉಸಿರಾಡುತ್ತಿದ್ದಳು; ಕಾವ್ಯವನ್ನೇ ಹಾಡುವ ಕೋಗಿಲೆಯಾಗಿದ್ದಳು. ತಾನೊಬ್ಬ ಹೆಣ್ಣಾಗಿ ತನ್ನ ಅಂತರಂಗದ ಅಗ್ನಿಜ್ವಾಲೆಗಳನ್ನು ಲೋಕದ ಎದುರಿಗೆ ಬಿಚ್ಚಿಟ್ಟವಳು. ಸ್ಯಾಫೋ ತನ್ನ ಹದಿಹರೆಯದ ವಯಸ್ಸಿನಲ್ಲಿ ಹುಚ್ಚೆದ್ದು ಕುಣಿದ ಕಾಮನೆಗಳ ಬಿರುಗಾಳಿಗೆ ಕಾವ್ಯದ ರೂಪವನ್ನು ನೀಡಿದವಳು. ಆಕೆ ಗಂಡುಹೆಣ್ಣುಗಳ ಭೇದಭಾವವಿಲ್ಲದೆ ಸ್ನೇಹಕ್ಕಾಗಿ, ಪ್ರೇಮಕ್ಕಾಗಿ, ಆತ್ಮಸಂಗಾತಕ್ಕಾಗಿ ಅನವರತ ಹಾತೊರೆದವಳು. ದೀಪದಿಂದ ಆಕರ್ಷಿತವಾಗುವ ಪತಂಗದಂತೆ ಗೆಳತಿಯರ ರೂಪುಲಾವಣ್ಯಗಳ ಸೆಳೆತಕ್ಕೆ ಸಿಕ್ಕು ಉರಿದುಹೋದವಳು.

ಆಧುನಿಕ ಕಾಲದಲ್ಲಿಯು ಜಗತ್ತಿನಾದ್ಯಂತ ಸ್ಯಾಫೋಳ ಕಾವ್ಯಕ್ಕೆ ಮುಗಿ ಬೀಳುವವರಿದ್ದಾರೆ; ಆಕೆಯ ಕಾವ್ಯವು ಹೃದಯವನ್ನು ತಣ್ಣಗೆ ಚೂರಿಯಿಂದ ಇರಿಯುವ ಅನುಭೂತಿಯನ್ನು ನೀಡುತ್ತದೆ. ಅದೆಂತಹದೇ ಕಲ್ಲುಹೃದಯವನ್ನೂ ಕರಗಿಸುತ್ತದೆ; ಅದೆಂತಹದೇ ಕಠೋರ ಮನಸ್ಸನ್ನು ತಲ್ಲಣಗೊಳಿಸುತ್ತದೆ. ತನ್ನ ಆದರ್ಶರಾಜ್ಯದಲ್ಲಿ ಕವಿಗಳನ್ನು ನಿರಾಕರಿಸಿದ್ದ ಪ್ಲೇಟೋ ಸಹ ಸ್ಯಾಫೋಳ ಕಾವ್ಯದ ಆರಾಧಕನಾಗಿದ್ದನೆಂದರೆ ಅಚ್ಚರಿಯಾಗುತ್ತದೆ. ಅವನು ಸ್ಯಾಫೋಳನ್ನು ಕುರಿತು ಕೆಲವರು ಪ್ರಪಂಚದಲ್ಲಿ ಒಂಭತ್ತು ಅದ್ಭುತ ಸ್ತ್ರೀ ದೇವತೆಗಳು ಮಾತ್ರ ಇದ್ದಾರೆಂದು ಹೇಳುತ್ತಾರೆ. ಆದರೆ ಲೆಸ್‌ಬೋಸ್‌ನ ಕವಯಿತ್ರಿ ಸ್ಯಾಫೋ ಪ್ರಪಂಚದ ಹತ್ತನೆಯ ಸ್ತ್ರೀ ದೇವತೆ. ಆಕೆಯ ತಾತ್ವಿಕ ಚಿಂತನೆ ಉನ್ನತ ಮಟ್ಟದ್ದು. ಅವಳು ಹೊರೆಸ್, ಓವಿಡ್‌ರಂತೆ ಶ್ರೇಷ್ಠಮಟ್ಟದ ಆದಿ ಕವಯಿತ್ರಿ ಎಂದು ಕೊಂಡಾಡಿದ್ದಾನೆ. ಅವನು ತನ್ನ ಅಚ್ಚುಮೆಚ್ಚಿನ ಈ ಕವಯಿತ್ರಿಗೆ ಟೆನ್ತ್ ಮ್ಯೂಸ್ ಎಂಬ ಬಿರುದನ್ನು ನೀಡಿದ್ದ.

ಸ್ಯಾಫೋಳ ಕೆಲವು ಕವಿತೆಗಳನ್ನು ಕೆ.ಎನ್. ವಿಜಯಲಕ್ಷ್ಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಉತ್ಕಟ ಕಾವ್ಯಪ್ರೇಮಿಯಾಗಿದ್ದ ಕಿರಂ ನಾಗರಾಜ ಅವರು ತೊಂಬತ್ತರ ದಶಕದ ಪ್ರಾರಂಭದಲ್ಲಿ ಕಾವ್ಯ ಮಂಡಲವನ್ನು ಸ್ಥಾಪಿಸಿದರು. ಇದರ ಮುಖ್ಯ ಧ್ಯೇಯೋದ್ದೇಶಗಳಲ್ಲಿ ಪುಸ್ತಕ ಪ್ರಕಟನೆಯೂ ಒಂದಾಗಿತ್ತು. ಕಿರಂ ನಾಗರಾಜ, ಕಿರಂ ಅವರ ಬಾಳಸಂಗಾತಿಯಾಗಿದ್ದ ಕೆ.ಎನ್. ವಿಜಯಲಕ್ಷ್ಮಿ, ಕೆ.ಸಿ. ಶಿವಾರೆಡ್ಡಿ, ಎಲ್.ಎನ್. ಮುಕುಂದರಾಜ್ ಮೊದಲಾದವರು ಇದರ ಟ್ರಸ್ಟಿಗಳಾಗಿದ್ದರು. ಈ ಪುಸ್ತಕ ಪ್ರಕಟಿಸಲು ದುಡ್ಡಿರಲಿಲ್ಲ. ಇವರೆಲ್ಲ ಹಣವನ್ನು ತಾವೇ ಸೇರಿಸಿಕೊಂಡು ಸ್ಯಾಫೋ ಕಾವ್ಯದ ಪ್ರಕಟನೆಗೆ ಮುಂದಾದರು. ಕಾವ್ಯ ಮಂಡಲದ ಮೊದಲ ಕೃತಿಯಾಗಿ ಸ್ಯಾಫೋ ಕಾವ್ಯ (1993) ಹೊರಬಂದಿತು. ಇದಕ್ಕೆ ಲಂಕೇಶ್ ಅವರು ಮೆಚ್ಚುಗೆಯ ಮುನ್ನುಡಿಯನ್ನು ಬರೆದರು. ಕಲಾವಿದರಾದ ಎಂ.ಎಸ್. ಮೂರ್ತಿಯವರು ಮಾಡಿದ ಮುಖಪುಟ ಮತ್ತು ಒಳಗಣ ರೇಖಾಚಿತ್ರಗಳು ಆಕರ್ಷಕವಾಗಿವೆ. ಹೀಗೆ ಸ್ಯಾಫೋಳ ಕೆಲವು ಕವಿತೆಗಳು ಕನ್ನಡಕ್ಕೆ ಕಾಲಿಟ್ಟವು.

ಕವಯಿತ್ರಿ ಸ್ಯಾಫೋ (610-580 ಕ್ರಿಸ್ತಪೂರ್ವ) ಗ್ರೀಕ್ ದೇಶದ ಲೆಸ್‌ಬೋಸ್ ದ್ವೀಪದಲ್ಲಿ ಜನಿಸಿದಳು. ಆಕೆಯ ವೈಯಕ್ತಿಕ ಜೀವನದ ವಿವರಗಳ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲ. ಆಕೆಯ ಮದುವೆಯಾಗಿತ್ತು ಎಂಬುದು ಕಾವ್ಯದಿಂದಲೇ ತಿಳಿಯುತ್ತದೆ; ಒಬ್ಬಳು ಮಗಳಿದ್ದಳು. ಆಕೆಗೆ ಮೂರು ಜನ ತಮ್ಮಂದಿರು ಇದ್ದರು. ಸ್ಯಾಫೋಳ ಬಾಲ್ಯದಲ್ಲಿ ಈ ಲೆಸ್‌ಬೋಸ್ ಮತ್ತು ಅಥೆನ್ಸ್ ನಡುವೆ ಒಂದು ದಶಕದವರೆಗೂ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಸ್ಯಾಫೋಳ ತಂದೆ ಮಡಿದನೆಂದು ಹೇಳಲಾಗುತ್ತದೆ. ಸ್ಯಾಫೋಳ ತಾಯಿಯು ತನ್ನ ಮಗಳೊಂದಿಗೆ ಮಿಥಿಲೇನಿಗೆ ಬಂದು ನೆಲೆಸಿದಳು. ಸ್ಯಾಫೋ ಅಲ್ಲಿ ಅವಿವಾಹಿತ ಹುಡುಗಿಯರಿಗಾಗಿ ಒಂದು ಅಕಾಡೆಮಿಯನ್ನು (ಶಾಲೆ) ನಡೆಸುತ್ತಿದ್ದಳು. ಅಲ್ಲಿ ಹುಡುಗಿಯರಿಗೆ ಹಾಡು, ಕುಣಿತ, ಗಂಡಿಗಾಗಿ ರೀತಿರಿವಾಜುಗಳನ್ನು ಹೇಳಿಕೊಡುವ ಶಿಕ್ಷಕಿಯಾಗಿದ್ದಳು. ಅಂದಿನ ಸಮಾಜವು ಮಹಿಳೆಯರಿಗೆ ನಿರ್ಬಂಧಗಳಿಲ್ಲದ ಕಾಲವಾಗಿತ್ತು. ಹೆಣ್ಣಿನ ಕನ್ಯತ್ವಕ್ಕಾಗಲಿ ಚಾರಿತ್ರ್ಯಕ್ಕಾಗಲಿ ಅಷ್ಟೊಂದು ನಿಷೇಧಗಳಿರಲಿಲ್ಲ. ಅಂದಿನ ಧಾರ್ಮಿಕ ಆಚರಣೆಗಳಲ್ಲಿ ಗಂಡು ಹೆಣ್ಣುಗಳ ಸ್ವಚ್ಛಂದ ಲೈಂಗಿಕತೆಗೆ ಪ್ರಾಮುಖ್ಯವಿತ್ತು ಎಂದು ಹೇಳಲಾಗುತ್ತದೆ. ಆದ್ದರಿಂದ ಪುರುಷ ಶಿಶ್ನದ ಚಿಹ್ನೆಯು ಈ ಅಕಾಡೆಮಿಯ ಲಾಂಛನವಾಗಿತ್ತು. ಸ್ಯಾಫೋಳ ಬಹುತೇಕ ಕವಿತೆಗಳು ಈ ಹದಿಹರೆಯದ ಹುಡುಗಿಯರ ಒಡನಾಟದಲ್ಲಿಯೇ ಹುಟ್ಟಿಕೊಂಡವು. ತನ್ನದೊಂದು ಕವಿತೆಯಲ್ಲಿ ಇಂದು ನಾ ಹಾಡುವೆನು ನನ್ನಂತರಂಗದ ಎಲ್ಲ ಹಾಡುಗಳನ್ನು| ನನ್ನ ಮುದ್ದು ಗೆಳತಿಯರಿಗಾಗಿ ಈ ಹರ್ಷದ ಹೊನಲು ಎಂದಿದ್ದಾಳೆ. ತನ್ನ ಹೃದಯದ ಧ್ವನಿಯನ್ನು ನೇರವಾಗಿ ತೋಡಿಕೊಂಡಿದ್ದಾಳೆ. ಆಕೆ ತನ್ನ ಕವಿತೆಗಳನ್ನು ಲೈರ್ ಎಂಬ ವಾದ್ಯವನ್ನು ನುಡಿಸುತ್ತ ಹಾಡುತ್ತಿದ್ದಳು. ತನಗೆ ತಾನೇ ಹೇಳಿಕೊಂಡಂತಿರುವ ಆಕೆಯ ಕವಿತೆಗಳು ಮನುಷ್ಯ ಪ್ರೇಮದ ಉತ್ಕಟ ಹಂಬಲಗಳಾಗಿವೆ. ತನ್ನೊಳಗಿನ ಹಿಗ್ಗು, ಉಲ್ಲಾಸ, ಸಂತಸಗಳನ್ನು ತೆರೆದಿಟ್ಟಿದ್ದಾಳೆ; ಹಾಗೆಯೇ ತನಗಾದ ಭಗ್ನಪ್ರೇಮದ ನೋವು, ಹತಾಶೆ, ಸಂಕಟಗಳನ್ನು ಅಷ್ಟೇ ತೀವ್ರವಾದ ಸಂವೇದನೆಯಿಂದ ವ್ಯಕ್ತಪಡಿಸಿದ್ದಾಳೆ.

ಸ್ಯಾಫೋ ಬರಿ ಪುರುಷರಿಂದಷ್ಟೇ ಅಲ್ಲದೇ ಅನೇಕ ಸುಂದರ ಹೆಣ್ಣುಗಳಿಂದ ಎಣೆಯಿಲ್ಲದೇ ಆಕರ್ಷಿತಳಾಗಿದ್ದಳು ಎಂಬುದು ಆಕೆಯ ಕಾವ್ಯದಿಂದ ನಿದರ್ಶಿತವಾಗುತ್ತದೆ. ಆಕೆ ಅಟ್ಟೀಸ್ ಎಂಬ ಹೆಣ್ಣಿನ ಬಗ್ಗೆ ಇಲ್ಲವೆನಬೇಡ ಇಂದೇ ದೂರವಾಗುವೆ ನಾನು| ನಿನ್ನ ಹಾಸಿಗೆಯನ್ನು ಬಿಟ್ಟು ಬಾ, ಮುದ್ದು ತಾರೆ| ನಿನ್ನ ಶಕ್ತಿ ಸೌಂದರ್ಯಗಳಿಂದ ಕಂಗೊಳಿಸು… ಎಂದು ಬರೆದಿದ್ದಾಳೆ. ಹಾಗೆಯೇ ಗಾಂಗ್ಲಿಯ ಎಂಬ ಹೆಣ್ಣಿನ ಬಗ್ಗೆ ಓ ಗುಲಾಬಿ ಮೊಗ್ಗೆ, ಗಾಂಗ್ಲಿಯ, ಈ ರಾತ್ರಿ ಬಾ ನನ್ನ ಬಳಿಗೆ| ನಿನ್ನ ಲಿಡಿಯನ್ ಲೈರ್‌ವಾದ್ಯ ನುಡಿಸಿ ನನ್ನಂತರಂಗದ ಕಾಮನೆಗಳ ಕೆರಳಿಸು| ನಿನ್ನ ತೀಕ್ಷ್ಣ ನೋಟಕ್ಕೆ ನಾನು ಮೋಹಪರವಶಳಾದೆ… ಎಂದಿದ್ದಾಳೆ. ಆಕೆಯ ಕಾವ್ಯದಲ್ಲಿ ಇಂತಹ ಅನೇಕ ಸಾಲುಗಳು ಬರುತ್ತವೆ. ಆದರೆ ಆಕೆ ತನ್ನ ವಾರಿಗೆಯ ಹೆಣ್ಣುಗಳೊಂದಿಗೆ ಲೈಂಗಿಕ ಕಾಮನೆಗಳಲ್ಲಿ ತೊಡಗಿದ್ದಳೆಂದು ಅವಳ ಕಾವ್ಯದಿಂದ ತೀರ್ಮಾನಕ್ಕೆ ಬರುವುದು ಕಷ್ಟವೇ. ಪುನರುತ್ಥಾನ ಕಾಲದ ಅನೇಕ ಕಲಾವಿದರು ಸ್ಯಾಫೋಳನ್ನು ಸಲಿಂಗಕಾಮಿಯಂತೆ ಚಿತ್ರಿಸಿದ್ದಾರೆ. ಸ್ಯಾಫೋ ಕಾವ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದ ವಿಮರ್ಶಕರಲ್ಲಿ ಆಕೆಯ ಲೈಂಗಿಕತೆಯ ಬಗ್ಗೆ ಒಮ್ಮತದ ಅಭಿಪ್ರಾಯಗಳಿಲ್ಲ. ಫ್ರೆಡರಿಕ್ ಗೊಟ್ಲೀಬ್ ಎಂಬಾತ ಬೇರೆ ಹೆಣ್ಣುಗಳ ಬಗೆಗಿನ ಸ್ಯಾಫೋಳ ಭಾವನೆಯು ಸಂಪೂರ್ಣವಾಗಿ ಆದರ್ಶದಿಂದ ಮತ್ತು ಸ್ಪರ್ಶರಹಿತತೆಯಿಂದ ಕೂಡಿದ್ದು ಎಂದು ಹೇಳಿದ್ದಾರೆ. ಕಾರ್ಲ್ ಒಟ್‌ಫ್ರಾಯ್ಡ್ ಮುಲ್ಲರ್ ಎಂಬಾತ ಅದು ಬರಿ ಸ್ನೇಹದ ಅಪೇಕ್ಷೆಯಷ್ಟೇ ಆಗಿತ್ತು ಎಂದು ಹೇಳುತ್ತಾರೆ. ವಿಮರ್ಶಕರ ಅಭಿಪ್ರಾಯಗಳೇನೇ ಇದ್ದರೂ ಸ್ಯಾಫೋ ಇಂದು ಅನೇಕ ಹೆಣ್ಣುಗಳಿಗೆ ಸಲಿಂಗಕಾಮದ (ಆಕೆ ಹುಟ್ಟಿದ ಲೆಸ್‌ಬೋಸ್ ದ್ವೀಪವು ಲೆಸ್ಬಿಯನ್ ಪದದ ಮೂಲವಾಗಿದೆ) ಸಂಕೇತಳಾಗಿದ್ದಾಳೆ.

ಸ್ಯಾಫೋಳ ಕಾವ್ಯದ ಕೇಂದ್ರಸ್ಥಾಯಿ ಪ್ರೇಮದ ಹಾತೊರೆಯುವಿಕೆಯೇ ಆಗಿದೆ. ಆಕೆ ತನ್ನ ಕಾವ್ಯದ ಸೀಮಿತ ಆವರಣದಲ್ಲಿಯೇ ತನ್ನ ಕೆಚ್ಚೆದೆಯನ್ನು ತೋರಿದ್ದಾಳೆ. ಆಕೆಯದ್ದು ವ್ಯಕ್ತಿನಿಷ್ಠ ಕಾವ್ಯದ ಅತ್ಯುತ್ತಮ ಅಭಿವ್ಯಕ್ತಿಯಾಗಿದೆ. ಆಕೆಯ ಪ್ರೇಮನಿವೇದನೆಯ ಸ್ವರೂಪವು ಸಾಮಾಜಿಕ ನಿಷೇಧಗಳನ್ನು ದಾಟಿ ಬಂಡುಕೋರುತನದ ಆಯಾಮವನ್ನು ಪಡೆದುಕೊಂಡಿದೆ. ಈ ಕಾರಣದಿಂದಲೇ ಪ್ಲುಟಾರ್ಕ್ ಜ್ವಾಲೆಯ ಉರಿ ಆಕೆಯ ಕವನಗಳಲ್ಲಿ ಬೆರೆತಿದೆ ಎಂದು ಹೇಳಿದ. ಬೈರನ್ ಕವಿಯು ಆಕೆಯನ್ನು ಧಗಧಗಿಸುತ್ತಿರುವ ಸ್ಯಾಫೋ ಪ್ರೇಮಿಸಿದಳು ಮತ್ತು ಹಾಡಿದಳು ಎಂದಿದ್ದಾನೆ. ಆಧುನಿಕ ಕಾಲದ ಪ್ರೇಮ ಕವಿಗಳಿಗೆ ಸ್ಯಾಫೋ ಅನೇಕ ವಿಧಗಳಲ್ಲಿ ಸ್ಫೂರ್ತಿಯಾಗಿದ್ದಾಳೆ. ನೋಡಲು ಕಪ್ಪು ಮೈಬಣ್ಣವನ್ನು ಹೊಂದಿದ್ದ ಸ್ಯಾಫೋ ಅಷ್ಟೇನು ಚೆಲುವೆಯಾಗಿರಲಿಲ್ಲ. ಆದರೆ ಸ್ಯಾಫೋ ದೈಹಿಕ ಸೌಂದರ್ಯದ ಪರಮ ಆರಾಧಕಿಯಾಗಿದ್ದಳು. ಅದೇ ಸೌಂದರ್ಯವು ಕೇಡನ್ನು ತಂದೊಡ್ಡಿದಾದ ಸೂಕ್ಷ್ಮವಾಗಿ ಪ್ರತಿರೋಧಿಸಿದ್ದಾಳೆ. ಸ್ಯಾಫೋ ತನ್ನ ಕಾಲದಲ್ಲಿ ನಡೆದ ಯುದ್ಧ ಕಲಹಗಳನ್ನು ಪರೋಕ್ಷವಾಗಿ ಖಂಡಿಸಿದ್ದಾಳೆ. ಇಂತಹ ಯುದ್ಧಗಳಿಗೆ ಕಾರಣರಾದ ಹೆಣ್ಣುಗಳ ಅಪ್ರತಿಮ ಸೌಂದರ್ಯವನ್ನು ಧಿಕ್ಕರಿಸಿದ್ದಾಳೆ. ಇಷ್ಟೆಲ್ಲ ಆಗಿಯೂ ಸ್ಯಾಫೋ ಭಗ್ನಪ್ರೇಮಿಯಾಗಿ ಕಡಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳೆನ್ನುವ ವಾದವಿದೆ. ಇನ್ನು ಕೆಲವರು ಆಕೆ ವಯಸ್ಸಾಗಿ ಸತ್ತಳೆಂದು ಹೇಳುತ್ತಾರೆ. ಸ್ಯಾಫೋಗೆ ಮುಪ್ಪಿನ ಬಗ್ಗೆ ಸುಕ್ಕುಗಟ್ಟುತ್ತಿರುವ ತನ್ನ ಮೈಚರ್ಮದ ಬಗ್ಗೆ ವಿಚಿತ್ರವಾದ ಭಯವಿತ್ತು. ಆಕೆ ಸಾವನ್ನು ದಿಟ್ಟವಾಗಿ ಎದುರಿಸಲು ಸಿದ್ಧಳಾಗಿದ್ದರ ಬಗ್ಗೆಯು ತನ್ನ ಕಾವ್ಯದಲ್ಲಿ ಹೇಳಿಕೊಂಡಿದ್ದಾಳೆ.

ಸ್ಯಾಫೋ ತನ್ನ ಮುಕ್ತ ಚಿಂತನೆಗಳಿಂದ ತನ್ನ ಕಾಲಕ್ಕಿಂತ ಎಷ್ಟೋ ಮುಂದಿದ್ದವಳು. ಆಕೆ ತೀರಿಹೋದ ಮೂರು ಶತಮಾನಗಳ ನಂತರದಲ್ಲಿ ಅವಳ ಕಾವ್ಯವನ್ನು ಒಂಬತ್ತು ಸಂಪುಟಗಳಲ್ಲಿ ಸಂಪಾದಿಸಲಾಯಿತು. ಇವು ಪ್ರಾಚೀನ ಅಥೆನ್ಸ್ ನಗರದ ಅಲೆಗ್ಸಾಂಡ್ರಿಯಾ ಗ್ರಂಥಾಲಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದವು. ಆದರೆ ಸ್ಯಾಫೋಳ ಕಾವ್ಯವು ಅಂದಿನ ಚರ್ಚ್‌ನ ಕೆಂಗಣ್ಣಿಗೆ ಬಿದ್ದವು. ಆಕೆಯ ಕಾವ್ಯವನ್ನು ನಿಷೇಧಿಸಲಾಯಿತು. ಅವುಗಳನ್ನು ಬೆಂಕಿಗೆ ಹಾಕಿ ಸುಡಲಾಯಿತು. ಹಾಗಾಗಿ ಸ್ಯಾಫೋಳ ಕಾವ್ಯವು ಪೂರ್ಣವಾಗಿ ದೊರಕಿಲ್ಲ. ಆಕೆಯ ಕಾವ್ಯದ ೧೨೦೦೦ ಸಾಲುಗಳಲ್ಲಿ ಬರಿ 600 ಸಾಲುಗಳಷ್ಟೇ ಸಿಕ್ಕಿವೆ. ಆಕೆಯ ಕವನಗಳ ಕಾಗದದ ತುಣುಕುಗಳು ಶವದ ಪೆಟ್ಟಿಗೆಯನ್ನು ಅಲಂಕರಿಸಿ ಮುಚ್ಚಲಾಗಿದ್ದನ್ನು ಇತಿಹಾಸಕಾರರು ಶೋಧಿಸಿ ಹೊರತೆಗೆದರು. ಹೆನ್ರಿ ಜೆ. ವಾರ್ಟನ್ ಎಂಬಾತ ಸ್ಯಾಫೋಳ ಗ್ರೀಕ್ ಕವಿತೆಯ ತುಣುಕುಗಳನ್ನು ಒಗ್ಗೂಡಿಸಿ, ಅವುಗಳ ಇಂಗ್ಲಿಷ್ ಅನುವಾದವನ್ನು 1877 ರಲ್ಲಿ ಲಂಡನ್ನಿನಲ್ಲಿ ಪ್ರಕಟಿಸಿದ. ಇದನ್ನು ಪರಿಷ್ಕೃತ ಆವೃತ್ತಿಯನ್ನು ದಿ ಸಾಂಗ್ಸ್ ಆಫ್ ಸ್ಯಾಫೋ ಎಂಬ ಶೀರ್ಷಿಕೆಯಲ್ಲಿ ಜೆ.ಎಂ. ಎಡ್ಮಂಡ್ಸ್ ಎಂಬಾತ 1928ರಲ್ಲಿ ಪುನರ್ ಪ್ರಕಟಿಸಿದ. ಆದ್ದರಿಂದ ಸ್ಯಾಫೋಳ ಕಾವ್ಯವು ಕಾಲಗರ್ಭದ ಗೋರಿಯಿಂದ ಎದ್ದು ಬಂದ ಶಾಶ್ವತ ಕಾವ್ಯವಾಗಿದೆ.

ಕೆ.ಎನ್. ವಿಜಯಲಕ್ಷ್ಮಿಯವರು ಸ್ಯಾಫೋಳ ಕೆಲವೇ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದರೂ ಕೂಡ ಅವುಗಳನ್ನು ಸಮರ್ಥವಾಗಿ ಕನ್ನಡದ ಭಾಷಿಕ ಲಯಕ್ಕೆ ಒಗ್ಗಿಸಿದ್ದಾರೆ. ಅವರಿಗೆ ಸ್ಯಾಫೋ ಕಾವ್ಯದ ಅನುವಾದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರವು ಬಂತು. ಇದರಿಂದ ಸಂತೋಷಿತರಾದ ವಿಜಯಲಕ್ಷ್ಮಿಯವರು ಚೀನಾದ ಜನಪದ ಕವಿತೆಗಳನ್ನು ಅನುವಾದಿಸಿದರು. ಅಮೆರಿಕದ ಪ್ರಖ್ಯಾತ ಕವಯಿತ್ರಿ ಮತ್ತು ಲೇಖಕಿಯಾದ ಸಿಲ್ವಿಯಾ ಪ್ಲಾತ್‌ಳ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ಸ್ಪ್ಯಾನಿಷ್ ಭಾಷೆಯ ಪ್ರಸಿದ್ಧ ಕವಿ ಮತ್ತು ನಾಟಕಕಾರ ಫೆಡರಿಕೋ ಗಾರ್ಸಿಯಾ ಲೋರ್ಕಾನ ಕೆಲವು ನಾಟಕಗಳನ್ನು ಕೂಡ ಕನ್ನಡಕ್ಕೆ ತಂದಿದ್ದಾರೆ. ವಿಜಯಲಕ್ಷ್ಮಿಯವರು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ಅವರ ಓದು ಮತ್ತು ಅಧ್ಯಯನಗಳು ಕನ್ನಡದ ಗಡಿಯನ್ನು ದಾಟಿ ಜಾಗತಿಕ ಸಾಹಿತ್ಯವನ್ನು ಮುಟ್ಟಿತ್ತು. ಕಿರಂ ನಾಗರಾಜರಂತೆಯೇ ಕಾವ್ಯದ ಕಡು ವ್ಯಾಮೋಹಿಯಾಗಿದ್ದ ವಿಜಯಲಕ್ಷ್ಮಿಯವರು ಕಾವ್ಯಾನುವಾದಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ವಿಜಯಲಕ್ಷ್ಮಿಯವರು ಕ್ಯಾನ್ಸರ್‌ನಿಂದಾಗಿ 2002ರಲ್ಲಿ ತಮ್ಮ ೫೩ನೇ ವಯಸ್ಸಿನಲ್ಲಿ ತೀರಿಕೊಂಡರು. ಆದರೆ ತಮ್ಮ ಜಾಗತಿಕ ಸಾಹಿತ್ಯದ ಅನುವಾದಗಳಿಂದ ಅವರು ಜೀವಂತವಾಗಿದ್ದಾರೆ.


ಇದನ್ನೂ ಓದಿ; ಚೀಮನಹಳ್ಳಿ ರಮೇಶಬಾಬು ಅವರ ‘ಜೀವ ರೇಶಿಮೆ’: ಹಳ್ಳಿ ನಗರಗಳ ನಡುವೆ ನಮ್ಮ ಕಾಪಾಡುವ ತಾಯ ಕಣ್ಣಿನ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...