ಟಿಪ್ಪು ಸುಲ್ತಾನ್ ಈ ದೇಶದ ಇತಿಹಾಸದ ಭಾಗವಾಗಿದ್ದಾರೆ. ಅವರ ವಿಚಾರ ಒಂದು ಜಾತಿ, ವರ್ಗಕ್ಕೆ ಸೇರಿದಲ್ಲ. ಹಾಗಾಗಿ ಪಠ್ಯದಿಂದ ಟಿಪ್ಪು ಸುಲ್ತಾನ ಅಧ್ಯಾಯ ಕೈಬಿಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನೇ ತಿರುಚಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಹಲವು ವಿಚಾರಗಳನ್ನು ಕೈಬಿಡುತ್ತಿದೆ ಎಂದು ಆರೋಪಿಸಿದ್ದಾರೆ.
‘ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದು ಬಿಡುವುದು ಆ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಟಿಪ್ಪು, ಹೈದರಾಲಿ ಅವರು ನಮ್ಮ ಇತಿಹಾಸದ ಭಾಗ. ಈ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರೆ ವಿಧಾನಸೌಧದ ಜಂಟಿ ಅಧಿವೇಶನದಲ್ಲಿ ಟಿಪ್ಪು ಇತಿಹಾಸ, ಚರಿತ್ರೆ, ದೇಶಭಕ್ತಿ ಬಗ್ಗೆ ಹಾಡಿ ಹೊಗಳಿ ಹೋಗಿದ್ದಾರೆ. ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂತಾ ಇತಿಹಾಸ ಬದಲಿಸಲು ಹೊರಟಿರುವುದು ಹಾಗೂ ಸಂವಿಧಾನವನ್ನು ತಿರುಚಿ ಬರೆಯಲು ಪ್ರಯತ್ನ ನಡೆಯುತ್ತಿರುವುದು ಖಂಡನೀಯ’ ಎಂದಿದ್ದಾರೆ.
ನಮ್ಮ ಇತಿಹಾಸ ಬದಲಾವಣೆ ಆಗಬಾರದು. ನಮ್ಮ ಸಂವಿಧಾನ ಉಳಿದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು. ಬಿಜೆಪಿಯವರು ಜನರನ್ನು ದಾರಿ ತಪ್ಪಿಸಲು ನಾವು ಬಿಡುವುದಿಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ.
ಟಿಪ್ಪು ಅಧ್ಯಾಯ ಕೈಬಿಡುವುದು ಒಂದು ವರ್ಗ, ಜಾತಿಗೆ ಸೀಮಿತವಾದುದಲ್ಲ. ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ದೇಶದ ಚರಿತ್ರೆ ವಿಚಾರ. ಹಾಗಾಗಿ ಈ ವಿಚಾರದಲ್ಲಿನ ಸಾಧಕ ಬಾಧಕಗಳ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸುತ್ತೇವೆ ಎಂದಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಸಂವಿಧಾನವನ್ನು ಪ್ರಶಂಸೆ ಮಾಡಿ ತಾವು ಅಳವಡಿಸಿಕೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿವೆ. ಆದರೆ ಬಿಜೆಪಿ ಇದನ್ನು ಮೊಟಕು ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳುವಳಿಕೆ ಹೇಳಿಕೊಡಬೇಕು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಸೇರಿದಂತೆ ಮಹತ್ವದ ಪಠ್ಯಗಳನ್ನು ಕೈಬಿಟ್ಟ ರಾಜ್ಯ ಸರ್ಕಾರ


