ಹೊಸದಾಗಿ ನೇಮಕಗೊಂಡ 209 ದಾದಿಯರಿಗೆ ಮೂರು ತಿಂಗಳ ಸಂಬಳ ಬಾಕಿ.
ಫೋಟೋ ಕೃಪೆ: ದಿ ಏಷಿಯನ್ ಏಜ್

ಮುಂಬೈ ಮಹಾನಗರದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸಲು ಹೊಸದಾಗಿ ನೇಮಕಗೊಂಡ 209 ದಾದಿಯರಿಗೆ ಮುಂಬೈ ನಾಗರಿಕ ಸಂಸ್ಥೆಯಾದ ಬೃಹನ್‌‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಂಬಳ ಹಾಗೂ ವಿಶೇಷ ದೈನಂದಿನ ಭತ್ಯೆಯನ್ನು ನೀಡಿಲ್ಲ ಎಂದು ಕಾರ್ಮಿಕ ಸಂಘಟನೆ ಆರೋಪಿಸಿದೆ.

ನಗರದಲ್ಲಿ ಕೊರೊನಾ ವೈರಸ್ ಹರಡಲು ಪ್ರಾರಂಭವಾದ ಏಪ್ರಿಲ್-ಮೇ ತಿಂಗಳಲ್ಲಿ ಬಿಎಂಸಿ ಈ ದಾದಿಯರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕ ಮಾಡಿದೆ ಎಂದು ಮುನ್ಸಿಪಲ್ ಮಜ್ದೂರ್ ಯೂನಿಯನ್ (ಎಂಎಂಯು) ತಿಳಿಸಿದೆ.

ಆದಾಗ್ಯೂ, ಕಳೆದ ಮೂರು ತಿಂಗಳುಗಳಿಂದ ಬಿಎಂಸಿ ಅವರಿಗೆ ಸಂಬಳ ಹಾಗೂ ದೈನಂದಿನ 300 ರೂ. ವಿಶೇಷ ಭತ್ಯೆ ನೀಡಿಲ್ಲ ಎಂದು ಎಂಎಂಯು ಹೇಳಿದೆ.

ರೋಸ್ಟರ್ (ನೇಮಕಾತಿ) ಪರಿಶೀಲನೆ ನಡೆಯುತ್ತಿರುವ ಪ್ರಕ್ರಿಯೆಯಿಂದಾಗಿ ವೇತನ ವಿತರಣೆ ವಿಳಂಬವಾಗಿದೆ. ಆದರೆ ದಾದಿಯರಿಗೆ ಶೀಘ್ರದಲ್ಲೇ ಅವರ ವೇತನವನ್ನು ನೀಡಲಾಗುವುದು ಎಂದು ಬಿಎಂಸಿ ಆರೋಗ್ಯ ಇಲಾಖೆ ಅಧಿಕಾರಿ ಭರವಸೆ ನೀಡಿದ್ದಾರೆ.

“ನಾನು ಮೇ ಮೊದಲ ವಾರದಲ್ಲಿ ಬಿಎಂಸಿಯ ಕರ್ತವ್ಯಕ್ಕೆ ಸೇರಿಕೊಂಡೆ. ಅಂದಿನಿಂದ ನಾನು ಕೊರೊನಾ ಸೌಲಭ್ಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ ಬಿಎಂಸಿ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿದ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೇನೆ, ಆದರೆ ನನಗೆ ಸಂಬಳ ಅಥವಾ 300 ರೂ. ದಿನದ ವಿಶೇಷ ಭತ್ಯೆ ಇನ್ನು ಸಿಕ್ಕಿಲ್ಲ” ಎಂದು ದಾದಿಯೊಬ್ಬರು ಹೇಳಿದ್ದಾಗಿ ನ್ಯೂಸ್ ಕ್ಲಿಕ್ ವರದಿ ಮಾಡಿದೆ.

ಅವರು ಬಿಎಂಸಿಗೆ ಸೇರುವ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಮುನ್ಸಿಪಾಲಿಟಿಯು ಶಾಶ್ವತ ಆಧಾರದ ಮೇಲೆ ದಾದಿಯರನ್ನು ನೇಮಿಸಲು ಜಾಹೀರಾತುಗಳನ್ನು ನೀಡಿದ್ದರಿಂದ ಉದ್ಯೋಗ ಬದಲಿಸಿದ್ದಾರೆ ಎನ್ನಲಾಗಿದೆ.

ಆದರೆ ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ತೊಂದರೆಯಿಂದಾಗಿ ಈ ನಿರ್ಧಾರಕ್ಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. “ಹಣಕಾಸಿನ ಹೊಣೆಗಾರಿಕೆಗಳನ್ನು ಹೊಂದಿರುವಾಗ, ಮೂರು ತಿಂಗಳವರೆಗೆ ಸಂಬಳವಿಲ್ಲದೆ ಬದುಕುವುದು ಕಷ್ಟ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪುರಸಭೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರಿಗೆ ಜುಲೈ 25 ರಂದು ಬರೆದ ಪತ್ರದಲ್ಲಿ, ಹೊಸದಾಗಿ ನೇಮಕಗೊಂಡಿರುವ ಈ 209 ದಾದಿಯರಿಗೆ ತಕ್ಷಣ ಸಂಬಳ ಮತ್ತು ಭತ್ಯೆಯನ್ನು ನೀಡಬೇಕೆಂದು ಎಂಎಂಯು ಒತ್ತಾಯಿಸಿದೆ.

ಅವರು ಕರ್ತವ್ಯಕ್ಕೆ ಸೇರಿದ ದಿನಾಂಕದಿಂದ ಬಿಎಂಸಿ ನಡೆಸುವ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಳನ್ನು ಪರಿಗಣಿಸುವಂತೆ ಯೂನಿಯನ್ ಪಾಲಿಕೆಯನ್ನು ಕೇಳಿದೆ.

ಈ ಎಲ್ಲ ದಾದಿಯರಿಗೆ ಬಿಎಂಸಿಯ ನರ್ಸಿಂಗ್ ಕಾಲೇಜಿನಲ್ಲಿ ತರಬೇತಿ ನೀಡಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಲು ಪ್ರಾರಂಭವಾದಾಗ ಅವರನ್ನು ತಕ್ಷಣ ಸೇರಲು ತಿಳಿಸಲಾಗಿದೆ ಎಂದು ಎಂಎಂಯು ಕಾರ್ಯದರ್ಶಿ ಪ್ರದೀಪ್ ನರ್ಕರ್ ಹೇಳಿದ್ದಾರೆ.

“ಹೆಚ್ಚಿನ ಎಲ್ಲಾ ದಾದಿಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸೇವೆಗಳನ್ನು ತುರ್ತಾಗಿ ಅಗತ್ಯವಿರುವ ಬಿಎಂಸಿಗೆ ಸೇರಲು ತಮ್ಮ ಉದ್ಯೋಗವನ್ನು ತೊರೆದರು. ಆದರೆ ಈಗ ಅವರು ಸಂಬಳ ಮತ್ತು ಭತ್ಯೆಗಳಿಂದ ವಂಚಿತರಾಗಿದ್ದಾರೆ, ಇದರಿಂದಾಗಿ ಅವರಿಗೆ ಬದುಕುಳಿಯುವುದು ಕಷ್ಟಕರವಾಗಿದೆ” ಎಂದು ಅವರು ಹೇಳಿದರು.


ಓದಿ: ಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ: ಸುಗ್ರೀವಾಜ್ಞೆ ಪ್ರತಿ ಸುಟ್ಟು ಪ್ರತಿಭಟನೆಗೆ ನಿರ್ಧಾರ.


 

LEAVE A REPLY

Please enter your comment!
Please enter your name here