Homeಮುಖಪುಟಹುಲಿ ಜಾನಪದ; ಕನ್ನಡ ಜಾನಪದ ಪರಂಪರೆಯಲ್ಲಿ ಹುಲಿಯ ಜತೆಗಿನ ಮುಖಾಮುಖಿ- ಅರುಣ್ ಜೋಳದಕೂಡ್ಲಿಗಿ

ಹುಲಿ ಜಾನಪದ; ಕನ್ನಡ ಜಾನಪದ ಪರಂಪರೆಯಲ್ಲಿ ಹುಲಿಯ ಜತೆಗಿನ ಮುಖಾಮುಖಿ- ಅರುಣ್ ಜೋಳದಕೂಡ್ಲಿಗಿ

- Advertisement -
- Advertisement -

ಕನ್ನಡ ಜಾನಪದ ಪರಂಪರೆಯಲ್ಲಿ `ಹುಲಿ’ ಯ ಜತೆ ನಡೆಸಿದ ಮುಖಾಮುಖಿ ಹೇಗಿದೆ ಎಂದು ಒಂದಷ್ಟು ಹುಡುಕಿದರೆ, `ಹುಲಿ ಜಾನಪದ’ ಇರುವುದು ತಿಳಿಯುತ್ತದೆ. ಈ ಸಂಗತಿ ಕುತೂಹಲಕಾರಿಯಾಗಿದೆ. ಈ ಬಗ್ಗೆ ಒಂದು ಸಂಶೋಧನೆಯನ್ನೇ ಮಾಡಬಹುದು. ಕಾಡಿನ ಪ್ರಾಣಿ ಹುಲಿಯನ್ನು ಜನಪದರು ಕಂಡಿರುವ ಬಗೆ ವಿಶಿಷ್ಟವಾಗಿದೆ. ಹುಲಿಯೊಂದು ಮನುಷ್ಯರನ್ನು ತಿನ್ನಬಲ್ಲ ಕ್ರೂರ ಪ್ರಾಣಿ. ಈ ಹುಲಿ ಜಾನಪದ ಪರಂಪರೆಯಲ್ಲಿ ಯಾಕಿಷ್ಟು ಸ್ಥಾನ ಪಡೆದಿದೆ ಎಂಬ ಪ್ರಶ್ನೆ ಹುಟ್ಟಿಸಿಕೊಂಡು ಹುಡುಕಿದರೆ ಭಿನ್ನ ಆಯಾಮಗಳು ಹೊಳೆಯುತ್ತವೆ. ಅದರ ಒಂದಷ್ಟು ಎಳೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿಗಳಲ್ಲಿ ಹುಲಿಮನಿ ಎಂಬುದೊಂದು ಆಟವಿದೆ. ಆಟದ ಚಿತ್ರ ಒಂದು ತ್ರಿಭುಜಾಕೃತಿಯಲ್ಲಿ ಅಡ್ಡ ಮೂರು ಗೆರೆ ಎಳೆದ ಸ್ವರೂಪದಲ್ಲಿರುತ್ತದೆ.  ಇದಕ್ಕೆ ಹುಲಿಕುರಿ ಆಟ ಎಂತಲೂ ಕರೆಯುತ್ತಾರೆ. ಎದುರುಬದುರಾಗಿ ಇಬ್ಬರು ಈ ಆಟವನ್ನು ಆಡಬಹುದು. ಹುಲಿಯನ್ನು ಗುರುತಿಸಲು ದೊಡ್ಡ ಕಲ್ಲುಗಳಿದ್ದರೆ, ಕುರಿಯನ್ನು ಸಣ್ಣ ಕಲ್ಲುಗಳಲ್ಲಿ ಗುರುತಿಸಲಾಗುತ್ತದೆ.  ಒಬ್ಬ ಹುಲಿಯನ್ನೂ, ಮತ್ತೊಬ್ಬ ಕುರಿಗಳನ್ನು ನಡೆಸಬೇಕು. ಹುಲಿಗೆ ಕುರಿ ಅಡ್ಡ ಬಂದರೆ ನುಂಗುತ್ತದೆ. ಕುರಿಗಳು ಚಾಕಚಕ್ಯತೆಯಿಂದ ತಿನ್ನಲು ಅವಕಾಶವಾಗದ ಹಾಗೆ ಹುಲಿಯನ್ನು ಕಟ್ಟಿ ಹಾಕಬೇಕು. ಹುಲಿ ಎಲ್ಲಾ ಕುರಿಗಳನ್ನು ನುಂಗಿದರೆ ಗೆದ್ದಂತೆ. ಅದನ್ನು ಕಟ್ಟಿ ಹಾಕಿದರೆ ಕುರಿಗಳು ಗೆದ್ದಂತೆ. ಇದೊಂದು ರೀತಿ ಹಾವು ಏಣಿಯ ಆಟವನ್ನು ಹೋಲುತ್ತದೆ. ಈ ಆಟದಲ್ಲಿ ಹುಲಿಯೂ ಕುರಿಗಳ ಮುಂದೆ ಸೋಲನ್ನಪ್ಪಬೇಕಾಗುತ್ತದೆ. ಈ ಆಟವು ಜನರಲ್ಲಿ ಹುಲಿಯನ್ನೂ ಸೋಲಿಸಬಹುದು ಎನ್ನುವ ಭರವಸೆಯನ್ನು ಗಟ್ಟಿಗೊಳಿಸಲು ಅಥವಾ ಹುಲಿಯ ಬಗೆಗಿನ ಭಯ ಹೋಗಲಾಡಿಸಲು ಹುಟ್ಟಿಕೊಂಡಂತಿದೆ. ಇಂತಹದ್ದೆ ಜನಪದ ಆಟಗಳಲ್ಲಿಯೂ ಹುಲಿಯ ಸಂಕೇತಗಳು ಬಳಕೆಯಾಗಿರುವುದನ್ನು ನೋಡಬಹುದು.

ಕಮ್ಮಾರಿಕೆ ಮಾಡುವ ಅಲೆಮಾರಿ ಘಿಸಾಡಿ ಸಮುದಾಯವು ಕರ್ನಾಟಕದಲ್ಲಿದೆ. ಈ ಸಮುದಾಯದ ಪ್ರದರ್ಶನ ಕಲೆಗಳಲ್ಲಿ ಹುಲಿ ದನದ ಆಟವೊಂದಿದೆ. ಆ ಆಟದಲ್ಲಿ ಒಬ್ಬ ವ್ಯಕ್ತಿ ಹುಲಿಯಾಗುತ್ತಾನೆ. ಇನ್ನೊಬ್ಬ ವ್ಯಕ್ತಿ ದನವಾಗುತ್ತಾನೆ. ಉಳಿದವರು ವೃತ್ತಾಕಾರದಲ್ಲಿ ಕೋಟೆ ಕಟ್ಟಿ ನಿಲ್ಲುತ್ತಾರೆ. ಮೊದಲು ದನ ಕೋಟೆಯೊಳಗೆ ನಿಲ್ಲುತ್ತದೆ. ಹುಲಿ ಕೋಟೆಯ ಹೊರಗಡೆ ನಿಲ್ಲುತ್ತದೆ. ಆಗ ಪ್ರತಿಯೊಬ್ಬರು ಇದು ಎಂತಹ ಕೋಟೆ ಎಂದು ಪ್ರಶ್ನಿಸಿಕೊಂಡು ಬರುತ್ತಾರೆ. ಆಗ ಎಲ್ಲರೂ ಒಕ್ಕೊರಲಿನಿಂದ ಇದು ಬೆಲ್ಲದ ಕೋಟೆ, ಚಿನ್ನದ ಕೋಟೆ, ಕಲ್ಲಿನ ಕೋಟೆ, ಬೆಳ್ಳಿಯ ಕೋಟೆ ಎಂದು ಹೇಳುತ್ತಿರುತ್ತಾರೆ. ಆಗ ಹುಲಿಯಾದವನು ದುರ್ಬಲರು ಇರುವ ಕಡೆಗೆ ಒಳ ನುಗ್ಗಲು ಪ್ರಯತ್ನಿಸಬೇಕು. ಹುಲಿಯನ್ನು ಕೋಟೆಯಾಗಿ ನಿಂತವರು ಒಳಹೊಕ್ಕದಂತೆ ಕಾಯಬೇಕು. ಒಂದು ವೇಳೆ ಒಳಗಡೆ ಬಂದರೆ ದನ ಆದವನಿಗೆ ಹೊರಗೆ ಬಿಡುತ್ತಾರೆ. ಒಟ್ಟಿನಲ್ಲಿ ದನವನ್ನು ಒಳ ಅಥವಾ ಹೊರಗೆ ಹೋಗಲು ಸರಳವಾಗಿ ಬಿಟ್ಟರೆ, ಹುಲಿಯನ್ನು ಒಳ ಹೋಗಲು ಅಥವಾ ಹೊರ ಬಿಡಲು ಕೋಟೆ ಗಟ್ಟಿಯಾಗಿ ಹಿಡಿದಿಡುತ್ತದೆ. ಈ ಕೋಟೆ ಬೇದಿಸಿ ದನವನ್ನು ಹುಲಿ ಹಿಡಿದರೆ ಅದು ಗೆದ್ದಂತೆ.

ಉತ್ತರ ಕರ್ನಾಟಕ ಹೈದರಬಾದ್ ಕರ್ನಾಟಕದಲ್ಲಿ ಮೊಹರಂ ಹಬ್ಬದ ಸಂದರ್ಭಕ್ಕೆ ವಾರಗಟ್ಟಲೆ ಹುಲಿವೇಷಗಳು ಗೆಜ್ಜೆಗಳನ್ನು ಝಲ್‌ಝಲ್ ಎನ್ನಿಸಿಕೊಂಡು ಸುತ್ತುತ್ತವೆ. ಆಗ ಅಕ್ಷರಶಃ ಕಾಡಿನ ಹುಲಿಗಳು ನಾಡಿಗೆ ಮರಳಿದ ಅನುಭವವಾಗುತ್ತದೆ. ಮೈಯಲ್ಲಿ ಆರಾಮಿಲ್ಲದಿದ್ದರೆ, ಏನಾದರೂ ಕೇಡಾದರೆ ಹುಲಿ ವೇಷ ಹಾಕುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೀಗಾಗಿ ಆರು ವರ್ಷದ ಮಗುವಿನಿಂದ, ಎಪ್ಪತ್ತು ವರ್ಷದ ಅಜ್ಜನವರೆಗೆ ನಾನಾ ವಯೋಮಾನದ ಹುಲಿಗಳು ಕಾಣಸಿಗುತ್ತವೆ. ಆರೇಳು ದಿನವಿರುತ್ತಿದ್ದ ವೇಷ ಈಗ ಎರಡು ದಿನಕ್ಕೆ ಇಳಿದಿದೆ. ಅಂತೆಯೇ ಕೇವಲ ಕೈಗೆ, ಮುಖಕ್ಕಷ್ಟೆ ಬಣ್ಣ ಹಚ್ಚಿಕೊಳ್ಳುತ್ತಲೂ ಆಚರಣೆ ಸಾಂಕೇತಿಕವಾಗುತ್ತಿದೆ. ಈ ಹಬ್ಬವನ್ನು ಹೊರತು ಪಡಿಸಿದರೆ ಕರಾವಳಿ ಪ್ರದೇಶದಲ್ಲಿ ನವರಾತ್ರಿಗೆ, ಉಡುಪಿ ಭಾಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಹುಲಿ ವೇಷ ಹಾಕುವುದಿದೆ. ಉಡುಪಿಯ ಯತಿಯೊಬ್ಬರು ಹುಲಿಯನ್ನು ಎದುರಿಸಿದ್ದರ ಸಾಂಕೇತಿಕವಾಗಿ ಹುಲಿ ವೇಷ ಹಾಕುವುದಾಗಿ ಈ ಭಾಗದ ಜನ ಹೇಳುತ್ತಾರೆ.

ಮನುಷ್ಯರಿಗೆ ಹುಲಿಯ ಗುಣಗಳನ್ನು ಸಮೀಕರಿಸಿ ಹುಲಿ ಎಂಬ ಗುಣವಾಚಕ ಸೇರಿಸಿ ಕರೆವ ವಾಡಿಕೆ ಇದೆ. ಇದು ರಾಜ ಮಹಾರಾಜರುಗಳನ್ನು ಒಳಗೊಂಡಂತೆ ಸಾಮಾನ್ಯ ಜನ ಸಮುದಾಯದಲ್ಲೂ ಮಂದುವರಿದಿದೆ. ಕರ್ನಾಟಕದ ಚರಿತ್ರೆ ನೋಡುವಾಗ ನಮಗೆ ಹೊಯ್ಸಳ ನೆನಪಾಗುತ್ತಾನೆ. ದ್ವಾರಸಮುದ್ರದ ಹೊಯ್ಸಳರ ಸಳನ ಬಗ್ಗೆ ಹುಲಿಯನ್ನು ಆಯುಧಗಳಿಲ್ಲಗೆ ಹೋರಾಡಿ ಕೊಂದ ಎನ್ನುವ ಕಥೆ ಇದೆ. ಹಾಗಾಗಿ ನಾವು ಸಳ ಹುಲಿಯೊಂದಿಗೆ ಹೋರಾಡಿದ ಶಿಲ್ಪವನ್ನೂ ನೋಡುತ್ತೇವೆ. ಅಂತೆಯೇ ಟಿಪ್ಪು ಸುಲ್ತಾನನ್ನು ಮೈಸೂರು ಹುಲಿ ಎಂದೇ ಕರೆಯಲಾಗುತ್ತದೆ. ಇದರ ಹಿಂದೆ ಟಿಪ್ಪು ಹುಲಿಯ ಜತೆ ಹೋರಾಡಿದ ಕಥನವೊಂದಿದೆ. ನಾವೀಗ ಟಿಪ್ಪುವಿನ ಚಿತ್ರವನ್ನು ಕಲ್ಪಿಸಿಕೊಂಡಾಗಲೂ ಹುಲಿಯ ಜತೆ ಹೋರಾಡುವ ಚಿತ್ರವೇ ಕಣ್ಣಮುಂದೆ ಬರುತ್ತದೆ. ಚಿತ್ರದುರ್ಗದ ಮದಕರಿ ನಾಯಕನನ್ನು ಈ ಭಾಗದ ಬೇಡರು `ದುರ್ಗದ ಹುಲಿ’ ಎಂದು ಗುರುತಿಸುತ್ತಾರೆ. ಈಚೆಗೆ ತೀರಿದ ಭಾಳಾಠಾಕ್ರೆಯನ್ನು ಮಹರಾಷ್ಟ್ರಿಗರು ಹುಲಿ ಎಂದೇ ಸಂಭೋದಿಸುತ್ತಿದ್ದರು. ಕನ್ನಡದ ಪ್ರಸಿದ್ಧ ನಟ ಪ್ರಭಾಕರ್ ಅವರಿಗೆ ಟೈಗರ್ ಪದ ಸೇರದಿದ್ದರೆ ಅವರ ಚಿತ್ರ ಕಣ್ಣಮುಂದೆ ಬರುವುದೇ ಇಲ್ಲ.

ಇನ್ನು ಉತ್ತರ ಕರ್ನಾಟಕ ಹೈದರಬಾದ್ ಕರ್ನಾಟಕದಲ್ಲಿ ಹುಲಿ ದುರುಗಪ್ಪ, ಹುಲಿ ಕರಿಯಪ್ಪ, ಹುಲಿ ಹನುಮ ಮುಂತಾಡ ಅಡ್ಡ ಹೆಸರುಗಳಿರುವುದಿದೆ. ಅದು ಅವರು ರಿವಾಯ್ತ ಹಬ್ಬಕ್ಕೆ ಹುಲಿ ವೇಷ ಹಾಕಿ ತುಂಬಾ ಪ್ರಸಿದ್ಧಿಯನ್ನು ಪಡೆದ ಕಾರಣಕ್ಕೆ ಬಂದ ಹೆಸರುಗಳಾಗಿವೆ. ಉಡುಪಿ ಮಂಗಳೂರು ಕಡೆ ಶ್ರಿಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿ ವೇಷ ಹಾಕಲು ಪ್ರಸಿದ್ದಿ ಪಡೆದವರನ್ನು ಪಿಲಿ (ಹುಲಿಯ ತುಳುಪದ) ಎಂಬ ಗುಣವಾಚಕವನ್ನು ಹಾಕಿ `ಪಿಲಿ ಲಕ್ಷ್ಮಣ’, `ಪಿಲಿ ಸುಂದರ’ ಮುಂತಾಗಿ ಕರೆಯುತ್ತಾರೆ. ಇನ್ನು ಕಾಪಾಲಿಕರಲ್ಲಿ ಹುಲಿಗೊಂದೆಪ್ಪ, ಹುಲಿಯಾ ಮುಂತಾದ ಹೆಸರನ್ನು ಇಟ್ಟುಕೊಳ್ಳುತ್ತಾರೆ.

ಫೋಟೋ ಕೃಪೆ: ಕೇರನ್ ಸು ಚೈನಾ ಸ್ಪಾನ್

ದೇವರುಗಳ ಹುಲಿ ಸವಾರಿ ಆಚರಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಕಂಡು ಬರುತ್ತದೆ. ಮಂಡ್ಯ ಭಾಗದ ಮುತ್ತತ್ತಿರಾಯನ ಮೂರ್ತಿಯನ್ನು ಹುಲಿಯ ಗೊಂಬೆಯ ಮೇಲೆ ಇರಿಸಿ, ಮೆರವಣಿಗೆ ಮಾಡುವುದೇ ಹುಲಿವಾಹನ ಸೇವೆಯಾಗಿದೆ. ಹುಲಿಯ ಗೊಂಬೆಯ ಮೇಲೆ ಕೂರಿಸಿದ ಮುತ್ತತ್ತಿರಾಯನನ್ನು ದೇವಾಲಯ ಸುತ್ತಿಸುವುದು, ಹೊಳೆದಂಡೆಗೆ ತೆರಳಿ ಗುಡಿಗೆ ಮರಳುವುದಿದೆ. ಇಂತಹ ಸಂದರ್ಭಗಳಲ್ಲಿ ಹುಲಿ ತುಳಿಸುತ್ತೇವೆಂಬ ಹರಕೆ ಹೊತ್ತವರು ಹುಲಿವಾಹನ ಹೊತ್ತವರ ಕಾಲು ತುಳಿತಕ್ಕೆ ಒಳಗಾಗುತ್ತಾರೆ. ಇದು ಸಿದ್ಧಪ್ಪಾಜಿ ಹಾಗೂ ಮಲೆಮಾದೇಶ್ವರನ ದೇವಾಲಯಗಳಲ್ಲೂ ಕಾಣುತ್ತದೆ. ಮಲೆ ಮಾದಪ್ಪ, ಶಬರಿಯ ಅಯ್ಯಪ್ಪ ಸ್ವತಃ ಹುಲಿವಾಹನ ಹೊಂದಿದವರು. ಹುಲಿವಾಹನದ ಹತ್ತಾರು ದೈವಗಳ ಆಚರಣೆಯನ್ನು ಇದರ ಜತೆ ಲಗತ್ತಿಸಬಹುದು.

`ಕರ್ನಾಟಕದ ಸೂಫಿ ಸಂತರ ಕಥೆಗಳಲ್ಲಿ ಮತ್ತೆಮತ್ತೆ ಕಾಣಿಸುವ ಮಿತ್ ಎಂದರೆ, ಒಬ್ಬ ಸಂತ ಹುಲಿಯ ಮೇಲೆ ಕುಳಿತುಕೊಂಡು ಮತ್ತೊಬ್ಬ ಸಂತನನ್ನು ಭೇಟಿಮಾಡಲು ಬರುವುದು. ಹುಲಿಸವಾರ ಸಂತನು ಸಾಮಾನ್ಯವಾಗಿ ಹೊರಗಿನಿಂದ ಬರುವವನು, ಪ್ರತಿಷ್ಠಿತನಾದವನು, ಸಾಧನೆಗಳಲ್ಲಿ ಹೆಸರು ಪಡೆದ ಅಭಿಮಾನ ಉಳ್ಳವನು. ಭೇಟಿಮಾಡಿಸಿ ಕೊಳ್ಳುವ ಸಂತ ಸ್ಥಳೀಕನು, ಊರಮಟ್ಟಿಗೆ ಪ್ರಭಾವವುಳ್ಳವನು. ಅವನ ಶಕ್ತಿಯೆಂದರೆ ಊರ ಬೆಂಬಲವೇ. ಈ ನಾಟಕೀಯ ಮುಖಾಮುಖಿಯಲ್ಲಿ ಊರಸಂತನು, ಮದೋನ್ಮತ್ತನಾಗಿ ಬಂದವನನ್ನು ಭೇಟಿ ಮಾಡಲು, ತಾನು ಕುಳಿತ ಕಟ್ಟೆಯನ್ನೇ ನಡೆಸಿಕೊಂಡು ಹೋಗುತ್ತಾನೆ. ಆಡಂಬರದಿಂದ ಬಂದ ಹುಲಿಸವಾರ ಸಂತನು, ಜೀವವಿಲ್ಲದ ಕಟ್ಟೆಯನ್ನು ನಡೆಸಿದ ಊರಸಂತನ ಪವಾಡಶಕ್ತಿಗೆ ಬೆಚ್ಚಿ ಬೆರಗಾಗುತ್ತಾನೆ. ಮಣಿಯುತ್ತಾನೆ. ಗರ್ವಬಿಟ್ಟು ಊರ ಸಂತನನ್ನು ಗೆಳೆಯನಾಗಿ ಸ್ವೀಕರಿಸುತ್ತಾನೆ. ಸೂಫಿ ದೀಕ್ಷೆಯ ಕುರುಹುಗಳಾದ ‘ಶೈಲಿ ಶಮಲ ಶಿಲೇಮಣಿ’ಗಳನ್ನು ಕೊಟ್ಟು ಗೌರವಿಸುತ್ತಾನೆ.

ಈ ಮುಖಾಮುಖಿಯ ಮಿತ್, ಇಬ್ಬರು ಸಂತರ ವೈಯಕ್ತಿಕ ಬಲಾಬಲಗಳ ಪರೀಕ್ಷೆಗಳನ್ನು ಸೂಚಿಸುತ್ತಿರಬಹುದು. ಎರಡು ವಿಭಿನ್ನ ಚಿಂತನೆ ಅಥವಾ ಸಂಸ್ಕೃತಿಗಳು ಪರಸ್ಪರ ಎದುರಾಗಿರುವುದನ್ನು ಸೂಚಿಸುತ್ತಿರಬಹುದು. ಪರಿಣಾಮದಲ್ಲಿ ಮಾತ್ರ ಇವು ದ್ವೇಷ ಅಪಮಾನ ನೋವುಗಳಲ್ಲಿ ಕೊನೆಗೊಳ್ಳುವುದಿಲ್ಲ. ಗುರುಶಿಷ್ಯತ್ವದ ಇಲ್ಲವೆ ಗೆಳೆತನದ ಸಂಬಂಧಗಳಲ್ಲಿ ಮುಕ್ತಾಯವಾಗುತ್ತವೆ. ಇದು ಮಾರ್ಮಿಕ ಸಂಗತಿ. ಕರ್ನಾಟಕದ ಪ್ರಸಿದ್ಧ ಸೂಫಿಸಂತ ಗುಲಬರ್ಗೆಯ ಬಂದೇನವಾಜ ಹಾಗೂ ಸಾವಳಗಿ ಶಿವಲಿಂಗನ ಮುಖಾಮುಖಿಯ ಪರಿಣಾಮ ಗುರುಶಿಷ್ಯತ್ವದಲ್ಲಿ ಮುಗಿಯುತ್ತದೆ. ಬಂದೇನವಾಜನು ಶಿವಲಿಂಗನ ಕಾಲದಲ್ಲಿ ಇದ್ದನೆ, ನಿಜವಾಗಿಯೂ ಹುಲಿಯಮೇಲೆ ಬಂದನೆ, ಕಟ್ಟೆ ಜೀವಪಡೆದು ಚಲಿಸಿತೆ – ಇವು ಯಾವುವೂ ಸಮುದಾಯಗಳಿಗೆ ಬಾಧಿಸುವ ಪ್ರಶ್ನೆಗಳಲ್ಲ.’ (ನೋಡಿ: ರಹಮತ್ ತರೀಕೆರೆ, ಕರ್ನಾಟಕದ ಸೂಫಿಗಳು)


ಓದಿ: ಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!


ಕರ್ನಾಟಕದ ರಾವುಳ ಜೋಗಿಗಳಲ್ಲಿ ದೀಕ್ಷೆಯನ್ನು ಯೋಗಮುಂಜಿ ಎನ್ನುತ್ತಾರೆ. ಸಜ್ಜಿಗದ ಹಿಟ್ಟಿನಿಂದ ಮಾಡಿದ ಸಿಂಹ ಹುಲಿ ಕುರಿಗಳ ಪ್ರತಿಮೆಗಳಿಗೆ, ಮಂತ್ರದಿಂದ ಪ್ರಾಣಪ್ರತಿಷ್ಠೆ ಮಾಡಿ, ಅವನ್ನು ಖಡ್ಗದಿಂದ ಬಲಿಕೊಡಬೇಕು. ಕರ್ನಾಟಕದ ಮೊಹರಂ ಆಚರಣೆಯಲ್ಲಿ ಹುಲಿಯ ಪ್ರತಿಮೆಯನ್ನು ದೇವರಿಗೆ ಅರ್ಪಿಸುವ ಹರಕೆಯಿದೆ. ಹೀಗೆ ಹುಲಿಯನ್ನು ಅರ್ಪಿಸುವುದರಿಂದ ಮನೆಗೆ ಯಾವುದೇ ಕೇಡಿನ ಸಂಗತಿಗಳು ಬರುವುದಿಲ್ಲ ಎಂದು ನಂಬುವುದಿದೆ. ಹುಲಿ ಹೆಸರನ್ನು ಒಳಗೊಂಡ ಸ್ಥಳನಾಮಗಳೂ ಇವೆ. ನಾಥಪಂಥದ ಹುಲಿಗೊಂದಿ (ಚಿತ್ರದುರ್ಗ) ಹುಲಿ ಹೈದರ (ಗಂಗಾವತಿ) ಇಂತಹ ನೂರಾರು ಊರುಗಳ ಸ್ಥಳನಾಮಗಳನ್ನು ಉಲ್ಲೇಖಿಸಬಹುದು. ಇಂತಹದ್ದೇ ಸ್ಥಳನಾಮಗಳ ಹಿಂದೆ ಹುಲಿಗೆ ಸಂಬಂಧಿಸಿದ ಕಥನಗಳಿರುವುದನ್ನು ನೋಡಬಹುದು.

ಕನ್ನಡದಲ್ಲಿ ಜಾನಪದ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ `ಪುಣ್ಯಕೋಟಿ’ ಕಥನಗೀತೆ ಹೆಚ್ಚು ಚರ್ಚೆಗೆ ವಿವಾದಕ್ಕೆ ಒಳಗಾಗಿದೆ. ಇದರಲ್ಲಿ ಒಂದು ವಾದ ಭಾರತೀಯ ಸಂಸ್ಕೃತಿಯ ಹಿರಿಮೆಯ ಸಂಕೇತವಾಗಿದೆ. ಪುಣ್ಯಕೋಟಿ ಕತೆಗೂ ಕರ್ಮಣ್ಯೇವಾಧಿಕಾರಸ್ತೇ ಎಂಬ ವಿಧಿಗೂ, ದುಡಿವ ವರ್ಗಕ್ಕೆ ಸೇವೆ ದಾಸ್ಯಗಳನ್ನು ಕಡ್ಡಾಯಗೊಳಿಸುವ ಧರ್ಮಶಾಸ್ತ್ರಗಳಿಗೂ ಒಳಸಂಬಂಧ ಇದೆ. ಇಷ್ಟಂತೂ ನಿಜ, ವ್ಯವಸ್ಥೆ ಹೂಡುವ ಬೋನುಗಳಿಗೆಲ್ಲ ಜನ ಹೋಗಿ ಬೀಳುವುದಿಲ್ಲ. ತಮ್ಮನ್ನು ಕೊಲ್ಲಲು ಬರುವ ಹುಲಿಯನ್ನು ಏನೇನೋ ಉಪಾಯದಿಂದ ಬೀಳಿಸಿ ಅಥವಾ ಸಾಯಿಸಿ ತಪ್ಪಿಸಿಕೊಂಡು ಬರುವ ಕಿಲಾಡಿಗಳ ಜನಪದ ಕತೆಗಳಿವೆ. ನೊಣವೊಂದು ಹುಲಿಯನ್ನು ಸೋಲಿಸುವ ಕಥನವೊಂದು ಕುತೂಹಲಕಾರಿಯಾಗಿದೆ.

ಅರಣ್ಯವಾಸಿ ಬುಡಕಟ್ಟು ಸಮುದಾಯಗಳಲ್ಲಿ ಹುಲಿ ಒಂದು ಆರಾಧಿಸುವ ದೈವವಾಗಿ, ತಮ್ಮ ಸಾಂಸ್ಕೃತಿಕ ನಾಯಕರ ಸಾಕು ಪ್ರಾಣಿಯಾಗಿಯೂ ಬರುತ್ತದೆ. ಅದು ಅವರ ಮೌಖಿಕ ಕಥನಗಳನ್ನು ಉಲ್ಲೇಖವಾಗುತ್ತದೆ. ಸಿದ್ಧಿ ಸಮುದಾಯದ ಒಂದು ಕಥೆಯಲ್ಲಿ ಒಬ್ಬ ಧಣಿ ತನ್ನ ಸಿದ್ಧಿ ಆಳನ್ನು ಕರೆದು ಹುಲಿ ಹೊಡೆದುಕೊಂಡು ಬಾ. ಇಲ್ಲದಿದ್ದರೆ ನಿನ್ನನ್ನು ಕೊಂದೇನು ಎನ್ನುತ್ತಾನೆ. ಹುಲಿ ಹೊಡೆದು ಕೊಂಡು ಬಂದರೆ ಆಳಿಗೆ ಸಿಗುವುದು ಒಂದಿಷ್ಟು ಅಕ್ಕಿ ಹಾಗೂ ಚಿಲ್ಲರೆಕಾಸು. ನೂರಾರು ರೂಪಾಯಿ ಹುಲಿಗೆ ಇಷ್ಟು ಕಡಿಮೆ ಬಹುಮಾನದ ಕೊಟ್ಟನಲ್ಲಾ ಎಂದು ಹುಲಿಹೊಡೆದ ಧೀರ, ಧಣಿಯ ಮುಂದೆ ಇಲಿಯಂತೆ ಗೊಣಗಿಕೊಂಡು ಹೋಗುತ್ತಾನೆ. ಇಂತಹ ಭಿನ್ನ ಪಾಠಾಂತರದ ಕಥೆಗಳು ಸಿಗುತ್ತವೆ.

ಗುಲಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಹುಲಿ ಓಡಿಸುವ ಒಂದು ವಿಶಿಷ್ಟ ಜಾತ್ರೆ ನಡೆಯುತ್ತದೆ. ಇದು ಈ ಊರಲ್ಲಿನ ಶೇಕ್ ಸಾಹೇಬರ ಹೆಸರಲ್ಲಿ ನಡೆವ ಉರುಸಿನ ಜಾತ್ರೆ. ಕಾಲಿಗೆ ಚಕ್ರವಿರುವ ಮರದ ಆಕರ್ಷಕ ಹುಲಿಯೊಂದನ್ನು ಈ ಆಚರಣೆಗಾಗಿ ಸಿದ್ದಪಡಿಸಿರುತ್ತಾರೆ. ಈ ಹುಲಿಯ ನಾಲ್ಕು ಕಾಲಿಗೆ ಮದ್ದು ತುಂಬಿರುತ್ತಾರೆ. ಆಚರಣೆಯ ಭಾಗವಾಗಿ ಈ ಮದ್ದಿಗೆ ಬೆಂಕಿ ಇಡುತ್ತಲೂ ಜೀವಂತ ಹುಲಿಯಂತೆ ಹುಲಿ ಓಡುತ್ತಾ ಮುಂದಿನ ಕಂಬವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಹೀಗೆ ಕಾಡಿನ ಪ್ರಾಣಿಯನ್ನು ಓಡಿಸುವ ಆಚರಣೆ ಹಲವೆಡೆ ಇದೆ. ಸಂಕ್ರಾಂತಿ ಹಬ್ಬದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈ ಆಚರಣೆ ಈಚೆಗೆ ನಿಷೇಧಿಸಲಾಗಿದೆ. ಹೀಗೆ ಕಾಡು ಪ್ರಾಣಿಗಳನ್ನು ನಾಡಿನಿಂದ ಓಡಿಸುವ ಆಚರಣೆಗಳು ಸಾಂಕೇತಿಕವಾಗಿ ಕಾಡು-ನಾಡಿನ ಸಂಘರ್ಷದ ಮತ್ತು ಹೊಂದಾಣಿಕೆಯನ್ನು ಸೂಚಿಸುವಂತಿವೆ.

ಜನಪದ ಪರಂಪರೆ ಮತ್ತು ಕಥನಗಳಲ್ಲಿ ಹುಲಿ ವಹಿಸುವ ಪಾತ್ರಕ್ಕೂ ಸಿಂಹ ವಹಿಸುವ ಪಾತ್ರಕ್ಕೂ ವ್ಯತ್ಯಾಸವಿದೆ. ಕುತೂಹಲವೆಂದರೆ ಯಾವ ಶಿಷ್ಟದೇವತೆಯೂ ಹುಲಿಯನ್ನು ವಾಹನ ಮಾಡಿಕೊಂಡಿಲ್ಲ. ಆದರೆ ಜನಪದ ಹುಲಿಗೆಮ್ಮನಂಥ ಸ್ಥಳೀಯ ದೇವತೆಗಳಿವೆ. ಹುಲಿ ಕ್ರೂರ ಪ್ರಾಣಿ ಎಂಬ ಭಾವನೆ ಇದೆ. ಆದರೆ ಸಿಂಹ ರಾಜಗಾಂಭೀರ್ಯಕ್ಕೆ ಹೆಸರಾದದ್ದು. ದಕ್ಷಿಣ ಭಾರತದ ಕಾಡುಗಳಲ್ಲಿ ಸಿಂಹಗಳಿಲ್ಲದಿರುವುದಕ್ಕೂ ಕಥನ ಮತ್ತು ಆಚರಣೆಗಳಲ್ಲಿ ಸಿಂಹದ ಗೈರು ಹಾಜರಿಗೂ ಸಂಬಂಧವಿದ್ದಂತಿದೆ. ಮೌಖಿಕ ಕತೆಗಳಲ್ಲಿ ಹುಲಿಸವಾರಿ ಮಾಡುವ ನಾಯಕ ಸವಾಲನ್ನು ಎದುರಿಸುವವನಾಗಿರುತ್ತಾನೆ. ‘ಹುಲಿ ಸವಾರಿ’ ಎಂಬ ನುಡಿಗಟ್ಟೇ ಇಂಥ ಸವಾರಿಯ ಅಪಾಯವನ್ನೂ ಹೇಳುತ್ತದೆ. ಇದನ್ನು ಮಲೆ ಮಾದಪ್ಪನ ಕಥನದಲ್ಲಿ ಪರಿಣಾಮಕಾರಿಯಾಗಿ ನೋಡಬಹುದು.

ಮಾದಪ್ಪನಂಥ ದಲಿತ ವ್ಯಕ್ತಿ ತನ್ನ ಸುತ್ತಲ ಸಮಾಜದ ಜಾತಿ ಪ್ರೇರಿತ ಸವಾಲುಗಳನ್ನು ಎದುರಿಸಿ ಗೆದ್ದದ್ದು ಕೂಡ ಹುಲಿಸವಾರಿಯೇ. ಪ್ರತಿಭಟನೆಯ,  ಬಲದ ಹಾದಿಹಿಡಿಯುವುದನ್ನು ಹುಲಿ ಸವಾರಿ ರೂಪಾಕಾತ್ಮಕವಾಗಿ ವಿವರಿಸುವಂತಿದೆ. ಅಥವಾ ನರಭಕ್ಷಕ ಹುಲಿಯಾದರೂ ನೆರವಿತ್ತೀತು. ಮನುಷ್ಯ ಸಮಾಜವಲ್ಲ ಎಂಬ ವ್ಯಾಖ್ಯಾನವಾಗುವಂತಿದೆ. ಮಾದಪ್ಪನಿಗೆ ಒಕ್ಕಲುಗಳನ್ನು ಪಡೆಯಲು, ಮಠಗಳ ಯಜಮಾನಿಕೆಯನ್ನು ವಿರೋಧಿಸಲು ಹುಲಿ ಹಾವುಗಳು ಸಹಾಯ ಮಾಡುತ್ತವೆಯೆ ಹೊರತು ಇತರ ಮನುಷ್ಯರಲ್ಲ. ಹಾಗೆಯೇ ಹಸುವಿನ ಸಂಗತಿ ಕೂಡ. ವ್ಯವಸಾಯ ಕಸುಬು ಪ್ರಮುಖವಾಗಿದ್ದ ಸಮಾಜದಲ್ಲಿ ಸೃಷ್ಟಿಯಾದ ಕತೆಗಳಲ್ಲಿ ಮಾತ್ರ ಹಸು ಒಂದು ಮೌಲ್ಯದ ಸಂಕೇತವಾಗಬಲ್ಲದು. (ನೋಡಿ:ಮಾದಪ್ಪನ ಕತೆಯ ಸುತ್ತಮುತ್ತ, ಓ ಎಲ್ ನಾಗಭೂಷಣಸ್ವಾಮಿ)

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ `ಹುಲಿ’ ಪದ ಒಂದು ನುಡಿಗಟ್ಟಾಗಿ ಬಳಕೆಯಾಗಿದೆ ಆ ಬಗ್ಗೆಯೇ ಒಂದು ಕುತೂಹಲಕಾರಿಯಾದ ಅಧ್ಯಯನ ಮಾಡಬಹುದಾಗಿದೆ. ಕನ್ನಡದ ಮಹತ್ವದ ಕವಿ ಕುಮಾರವ್ಯಾಸನು ತನ್ನ ಭಾರತದಲ್ಲಿ “ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು”  ಎಂದಿದ್ದಾನೆ. ಈ ವಾಕ್ಯ ಪ್ರಭುತ್ವದ ಜತೆಗಿನ ಸಾಹಿತಿ ಕವಿಯೊಬ್ಬರ ಸಂಬಂಧದ ಸ್ವರೂಪವನ್ನು ವಿವರಿಸುವಾಗ ಮತ್ತೆ ಮತ್ತೆ ಬಳಕೆಯಾಗಿದೆ. ಅಕ್ಕಮಹಾದೇವಿ `ತನ್ನ ವಚನದಲ್ಲಿ `ಅತ್ತೆ ಮಾಯೆ, ಮಾವ ಸಂಸಾರಿ/ ಮೂವರು ಮೈದುನರು ಹುಲಿಯಂಥವರು/ನಾಲ್ವರು ನಗೆವೆಣ್ಣು ಕೇಳು ಕೆಳದಿ’ ಎಂಬ ರೂಪಕದಲ್ಲಿ ಹುಲಿ ಸಮೀಕರಣವಿದೆ.

ಚನ್ನಮಲ್ಲಿಕಾರ್ಜುನನ್ನು ಗುಣಗಾನ ಮಾಡುವಾಗ `ಹುಲಿಚರ್ಮ ಹೊದ್ದರೂ ಹಾಲು ಮನಸಿನ ಹುಡುಗ’ ಎಂದು ಕರೆಯುತ್ತಾಳೆ. ಕುವೆಂಪು ಅವರ `ಮದುಮಗಳು’ ಕಾದಂಬರಿಯಲ್ಲಿ ನಾಯಿಯನ್ನೆ ಹುಲಿಯೆಂದು ಕರೆಯುವುದಿದೆ. ಗುತ್ತಿ ನಾಯಿಯನ್ನು ಹುಲಿಯಾ ಎಂದೇ ಕರೆಯುತ್ತಾನೆ. ಒಂದು ಶಕ್ತ ರೂಪಕವಾಗಿ `ಹುಲಿಕಲ್ಲು ಬೆಟ್ಟದ’ ಚಿತ್ರಣ ಬರುತ್ತದೆ. ತೇಜಸ್ವಿಯವರ `ಹುಲಿಯೂರಿನ ಸರಹದ್ದು’   ಚಂದ್ರಶೇಖರ ಕಂಬಾರರ `ಹೇಳತೇನ ಕೇಳ’ ಕಾವ್ಯವನ್ನು ಒಳಗೊಂಡಂತೆ ಹುಲಿಬೇಟೆಯ ಚಿತ್ರಣ ಮತ್ತೆ ಮತ್ತೆ ಬರುತ್ತದೆ. ಜಾಗತೀಕರಣದ ಸಾಂಕೇತಿಕತೆಯಾಗಿ ಬಳಸುವ ವಿವೇಕ ಶಾನುಭಾಗ ಅವರ `ಹುಲಿ ಸವಾರಿ’ ಕಥೆಯತನಕ ಇಂತಹ ನೂರಾರು ಉಲ್ಲೇಖಗಳನ್ನು ಕನ್ನಡ ಸಾಹಿತ್ಯದ ಪಠ್ಯಗಳಿಂದ ಹೆಕ್ಕಿ ಕೊಡಬಹುದು. ಇದು ಕೂಡ ಜನಪದ ಕಥನ ಮತ್ತು ಕಾವ್ಯ ಪರಂಪರೆಯಲ್ಲಿ ಹುಲಿಯನ್ನು ಮುಖಾಮುಖಿ ಮಾಡಿದ ಆಧುನಿಕ ಮನಸ್ಸಿನ ಆಯಾಮವಾಗಿಯೂ ನೋಡಬಹುದು.

ಗೋವಿನ ಹಾಡಿನ ತರಹದ `ಹುಲಿ ದೇವರ ಹಾಡು’ ಮುಂತಾದ ಜನಪದ ಗೀತೆ ಕಥನಗೀತೆ ಲಾವಣಿಗಳಿವೆ. ಈ ಗೀತೆಗಳು ಸಾಮಾನ್ಯವಾಗಿ ಹುಲಿಬೇಟೆಯ ಸುತ್ತದ ಘಟನಾವಳಿಗಳಿಂದ ಕೂಡಿರುತ್ತವೆ. ಇಲ್ಲಿಯೂ ರಾಜನಾಗಲಿ, ಊರಿನ ಗೌಡನಾಗಲಿ ಹುಲಿ ಬೇಟೆ ಮಾಡಿದ್ದಕ್ಕಿಂತ ಸಾಮಾನ್ಯ ಅಸಹಾಯಕ ಜನರು ಬೇಟೆಯಾಡುವುದೇ ಹೆಚ್ಚು. ಬಹುಶಃ ಈ ಕಥನಗಳು ಜನಸಾಮಾನ್ಯರೊಳಗಿನ ಅದುಮಿಟ್ಟ ಪ್ರತಿರೋಧದ ಸಂಕೇತವಾಗಿಯೂ ಹುಟ್ಟಿರಬಹುದು. ಅಂತೆಯೇ ಹುಲಿಯನ್ನು ಸಣ್ಣ ಪ್ರಾಣಿಗಳು ಸೋಲಿಸುವ ತೆರನಾದ ಜನಪದ ಕಥೆಗಳು ಸಾಕಷ್ಟಿವೆ. ಈ ತರಹದ ಗೀತೆ ಕಥನಗಳ ಸೃಷ್ಟಿಯಲ್ಲಿ ಜನ ಸಾಮಾನ್ಯರ ಪ್ರತಿರೋಧ, ಸೆಡವಿನ ಗುಣ ಪ್ರತಿ ಸಂಸ್ಕøತಿ ಕಟ್ಟಿಕೊಳ್ಳುವ ಪೆಡುಸುತನ ಸಹಜವಾಗಿ ಮೂಡಿಬಂದಿದೆ. ಇಲ್ಲೆಲ್ಲಾ ಹುಲಿ ಶಕ್ತಿಯ ರೂಪಕವಾಗಿ ಒದಗಿದೆ. ತೀರಾ ಈಚೆಗೆ ಕಾಂಗ್ರೇಸ್ ನಾಯಕ ಸಿದ್ಧರಾಮಯ್ಯ ಭಾಷಣ ಮಾಡುವಾಗ ಪ್ರೇಕ್ಷಕರಲ್ಲಿ ಒಬ್ಬಾತ `ಹೌದ್ದೋ ಹುಲಿಯಾ’ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಹಾಗೆ ಹೇಳಿದ ವ್ಯಕ್ತಿಯೂ ಜನಪ್ರಿಯವಾಗಿದ್ದ. ಇದೇ ಹೆಸರಿನ ವೃತ್ತಿರಂಗಭೂಮಿಯ ನಾಟಕವಾಗಿಯೂ ಜನಪ್ರಿಯವಾಗಿತ್ತು. ಹೀಗೆ ಹುಲಿಯನ್ನು ಆಧರಿಸಿದ ದೊಡ್ಡದೊಂದು `ಹುಲಿ ಜಾನಪದ’ವೆ ಇದೆ.

-ಅರುಣ್ ಜೋಳದಕೂಡ್ಲಿಗಿ


ಓದಿ: ’ಜಾಗತಿಕ ಹುಲಿ ದಿನ’ | ಭಾರತದಲ್ಲಿವೆ ಅತಿ ಹೆಚ್ಚು ಹುಲಿಗಳು …!


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...