Homeಮುಖಪುಟಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!

ಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!

- Advertisement -
- Advertisement -

ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಬರುವ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಆದಿವಾಸಿ ಜನರು ಮತ್ತು ಇತರೆ ರೈತರ ತೀವ್ರ ಪ್ರತಿಭಟನೆಗೆ ಯಾವುದೇ ಮಾನ್ಯತೆ ನೀಡದೆ ಕುದುರೆಮುಖ ರಾಷ್ಟೀಯ ಉದ್ಯಾನ (ಕು.ರಾ.ಉ.)ದ ಹೆಸರಿನಲ್ಲಿ ಗುರುತಿಸಿರುವ ಭೂಪ್ರದೇಶವನ್ನು ಹುಲಿಧಾಮ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ಅಪ್ರಜಾತಂತ್ರಿಕ ಮತ್ತು ಬೇಜವಾಬ್ದಾರಿ ಕ್ರಮವಾಗಿದೆ. ಇದು ಜನ ವಿರೋಧಿ, ಪರಿಸರ ವಿರೋಧಿ ತೀರ್ಮಾನ ವಾಗಿದ್ದು, ಕಾರ್ಪೊರೇಟ್ ಶಕ್ತಿಗಳ ಮತ್ತು ಸಾಮ್ರಾಜ್ಯ ಶಾಹಿ ಪರವಾದುದಾಗಿದೆ.

ಕಳೆದ ಹದಿನೈದು ವರ್ಷಗಳಿಂದ ಈ ಭಾಗದ ರೈತರು, ಆದಿವಾಸಿಗಳು ಜನವಿರೋಧಿ ಕು.ರಾ.ಉ. ಯೋಜನೆಯನ್ನು ವಿರೋಧಿಸಿ ನಿರಂತರ ಹೋರಾಡುತ್ತಾ ಬಂದಿದ್ದಾರೆ. ಈ ಯೋಜನೆಯ ರದ್ದಿಗಾಗಿ, ನಿಜವಾದ ಸ್ವಾತಂತ್ಯ್ರಕ್ಕಾಗಿ, ಆದಿವಾಸಿಗಳ ಸ್ವಾಯತ್ತತೆಗಾಗಿ ತ್ಯಾಗ, ಬಲಿದಾನದ ಚರಿತ್ರೆ ನಿರ್ಮಿಸಿದ್ದಾರೆ. ಲಾಟಿಏಟು, ಬಂದನ ಜೈಲು ಎಲ್ಲವನ್ನು ಅನುಭವಿಸಿದ್ದಾರೆ. ಯೋಜನೆ ವಿರೋದಿಸಿ ನ್ಯಾಯಸಮ್ಮತವಾದ ಉನ್ನತ ಪ್ರಜಾತಾಂತ್ರಿಕ ಆಶಯಗಳೊಂದಿಗೆ ನಡೆಯುತ್ತಿರುವ ಹೋರಾಟವನ್ನು ಹೊಸಕಿ ಹಾಕುವ ಉದ್ದೇಶದಿಂದ ಜನರನ್ನು ಭಯಗೊಳಿಸಲು ಆದಿವಾಸಿ ನಾಯಕ ಅತ್ಯಡ್ಕ ಪರಮೇಶ್ವರ ಜೊತೆ ಸುಂದಸರೇಶ್, ಕಾವೇರಕ್ಕ, ಮತ್ತು ಅವರ ಪತಿ ರಾಮೇಗೌಡ್ಲು ಮುಂತಾದವರನ್ನು ಪ್ರಬುತ್ವದ ಪಡೆಗಳು ಒಡೆಯರ್‌ ಮಠದ ಕಾವೇರಕ್ಕನ ಮನೆಯಲ್ಲಿಯೇ ಅಮಾನುಷ ಮತ್ತು ಅತ್ಯಂತ ಕ್ರೂರವಾಗಿ ಹತ್ಯೆಗೈದರು.

ಇವರ ಹತ್ಯೆಗೆ ಪ್ರತಿರೋಧವಾಗಿ ಆದಿವಾಸಿ, ರೈತ-ಕೂಲಿಗಳು ಎದೆಬಿಚ್ಚಿ “ಹೊಡಿರಿಗುಂಡು” ಎಂದು ಎಸೆದ ಸವಾಲು, ಮತ್ತು ಹೋರಾಟ ಅಕ್ಷರಸಹ ಪ್ರಬುತ್ವದ ಎದೆ ನಡುಗಿಸಿದ್ದು ಸತ್ಯ. ನಿಸ್ವಾರ್ಥವಾಗಿ ತಮ್ಮವರಿಗಾಗಿ ಅಮೂಲ್ಯ ಪ್ರಾಣಗಳನ್ನುಅರ್ಪಿಸಿರುವ ಆ ನಾಲ್ವರು ಆದಿವಾಸಿಗಳ ತ್ಯಾಗ ಉನ್ನತವಾದುದು. ಅದು ಎಂದೆದಿಗೂ ಹೋರಾಟ ನಿರತ ಜನತೆಗೆ ಸ್ಪೂರ್ಥಿದಾಯಕವಾಗಿರುತ್ತದೆ. ಆದರೆ ಸರ್ಕಾರ ಮಾತ್ರ ಆದಿವಾಸಿಗಳ ಸಮಾದಿಮೇಲೆ ಹುಲಿಧಾಮ ನಿರ್ಮಿಸಲು ಹೊರಟಿರುವುದು ಪ್ರಜಾಪ್ರಭುತ್ವದ ದುರಂತವಾಗಿದೆ.

ಹುಲಿಧಾಮದ ಉದ್ದೇಶವಾದರೂ ಏನು?

ಕುದುರೆಮುಖ ರಾಷ್ಟ್ರೀಯ ಉದ್ಯಾನ ಎಂದು ಕರೆಯುವ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಹುಲಿಧಾಮ ಮಾಡಲು ಕೇಂದ್ರ ಸರ್ಕಾರ ಆಸಕ್ತಿವಹಿಸಲು ಕಾರಣವೇನು? ದೇಶದಲ್ಲಿ ಹುಲಿಸಂಖ್ಯೇಯನ್ನು ವೃದ್ದಿಸುವುದೇ? ಅಥವ ಬೇರೆನಾದರು ಉದ್ದೇಶ ಇರಬಹುದೇ? ಎಂದು ನೋಡಿದಾಗ ಆ ನಿಟ್ಟಿನ ಖಾಳಜಿ ಕಾಣಿಸುತ್ತಿಲ್ಲ. ಬದಲಿಗೆ ನಿತ್ಯಹರಿದ್ವರ್ಣದ ಕಾಡು, ಜೀವ ನದಿಗಳ ತವರು, ಸಮುದ್ರ ಮಟ್ಟದಿಂದ ಸಾವಿರಾರುಅಡಿ ಎತ್ತರದ ಸುಂದರ ಶೋಲಾಪರ್ವತಸಾಲುಗಳು, ಆಳೆತ್ತರ ಹುಲ್ಲುಗಾವಲು ಹೊದ್ದಿರುವ ಗುಡ್ಡಗಳ ಇಕ್ಕೆಲಗಳಲ್ಲಿ ದಟ್ಟವಾಗಿ ಬೆಳೆದಿರುವ ಹಚ್ಚಹಸುರಿನ ಕಾಡುಗಳು, ಅದರಮದ್ಯೆ ಉಕ್ಕಿ ಹರಿಯುವ ಜಲಬುಗ್ಗೆಗಳು, ಬೋರ್ಗರೆದು ದುಮ್ಮಿಕ್ಕುವ ಜಲಪಾತಗಳು, ಹಳ್ಳ-ಹೊಳೆಗಳನ್ನು ಹೊಂದಿರುವ ಈ ಶ್ರೇಣಿ ಅದೆಷ್ಟೋ ಜಾತಿಯ ಪ್ರಾಣಿ, ಪಕ್ಷಿ, ಜೀವರಾಶಿಗಳ ಅವಾಸಸ್ಥಾನವಾಗಿದೆ. ಅಪರೂಪದ ಔಷದಿ ಸಸ್ಯಗಳು, ಜೀವ ವೈವಿದ್ಯತೆಯ ಪ್ರಕೃತಿದತ್ತ ನೈಸರ್ಗಿಕ ಭಂಡಾರವೇ ಇಲ್ಲಿದೆ.

ಇಂತಹ ಕಣ್ಮನತಣಿಸುವ ಮನಮೋಹಕ ಪ್ರಕೃತಿತಾಣವನ್ನು ಪ್ರವಾಸೋದ್ಯಮ ಮಾಡುವುದು ಮತ್ತು ಇಲ್ಲಿನ ಜೀವವೈವಿದ್ಯಬಂಢಾರವನ್ನು ಬಹುರಾಷ್ಟ್ರೀಯ ಕಂಪನಿಗಳ, ದೇಶಿ ದೊಡ್ಡ ಬಂಡವಾಳಿಗರ ಲೂಟಿಗೆ ದಾರಿಮಾಡುವ ಉದ್ದೇಶವನ್ನು ಹೊಂದಿದೆ. ಅದಕ್ಕಾಗಿ ಕಾಡಿನ ಮಕ್ಕಳಾದ, ತಲತಲಾಂರಗಳಿಂದ ಇಲ್ಲಿನ ಪರಿಸರದ ಭಾಗವಾಗಿ ಬದುಕಿ ಬಾಳಿದ ಈ ನೆಲದ ಆದಿವಾಸಿ ಸಮುದಾಯಗಳನ್ನು ಒಕ್ಕಲೆಬ್ಬಿಸಿ ಕಾಡಿನ ಸಂಬಂಧದಿಂದ ಹೊರ ದಬ್ಬಲು ಮುಂದಾಗಿದೆ.

ಕು.ರಾ.ಉ. ಮತ್ತು ಹುಲಿಧಾಮದಿಂದಾಗುವ ಪರಿಣಾಮ

1) ತಲೆಮಾರುಗಳಿಂದ ಪರಿಸರದ ಭಾಗವಾಗಿ ಕಾಡನ್ನೇ ದೇವರೆಂದು ನಂಬಿಕೊಂಡು, ಕಾಡಿನ ಜೊತೆ ಅವಿನಾಬಾವ ಸಂಬಂಧ ಹೊಂದಿರುವ ಕಾಡಿನ ಮಕ್ಕಳಾದ ಆದಿವಾಸಿಗಳು ಕಾಡು, ಭೂಮಿ, ಮನೆ, ತಮ್ಮ ಕೊಡಿಗೆ, ದೈವ-ದೇವರು, ಅವರ ಆಚಾರ, ವಿಚಾರ, ಜೀವನದ ಪದ್ದತಿ, ಮತ್ತು ಅವರ ಪರಂಪರಾಗತ ಸಂಸ್ಕೃತಿ ಎಲ್ಲವನ್ನು ಕಳೆದುಕೊಂಡು ಒಂದು ಸಮುದಾಯವಾಗಿ ಗೌಡಲು ಮತ್ತು ಮಲೆಕುಡಿಯಾ ಆದಿವಾಸಿ ಬುಡಕಟ್ಟುಗಳು ನಾಶವಾಗಿ ಚರಿತ್ರೆಯ ಪುಟ ಸೇರುತ್ತದೆ.
2) ಸಾವಿರಾರು ರೈತ-ಕೂಲಿ ಕುಟುಂಬಗಳು ತಮ್ಮ ಮನೆ-ಮಠ ಕಳೆದುಕೊಂಡು ಬೀದಿಗೆ ಬೀಳುತ್ತಾರೆ.
3) ಕಾಡು ತನ್ನ ಮಕ್ಕಳನ್ನು, ರಕ್ಷಕರನ್ನು ಕಳೆದುಕೊಂಡು ಅನಾಥವಾಗಿ ಪರಕೀಯರ, ದೊಡ್ಡ ಬಂಡವಾಳಿಗರ ಕಪಿಮುಷ್ಠಿಗೆ ಸಿಲುಕುತ್ತದೆ.
4) ಸುಂದರ ಪ್ರಕೃತಿ ತಾಣವನ್ನು ಪ್ರವಾಸೋದ್ಯಮ ಮಾಡಿ ದೇಶ, ವಿದೇಶಗಳ ಶ್ರೀಮಂತರನ್ನು ಆಹ್ವಾನಿಸಲಾಗುತ್ತದೆ. ಅವರ ಮೋಜಿಗಾಗಿ ಈ ಪ್ರದೇಶದಲ್ಲಿ ಹೋಂಸ್ಟೇ, ರೆಸಾರ್ಟ್‌ಗಳ ನಿರ್ಮಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದು ಇಲ್ಲಿನ ಪರಿಸರದ ಸಹಜತೆಗೆ ದಕ್ಕೆ ಉಂಟುಮಾಡುವುದಲ್ಲದೆ, ಇಲ್ಲಿನ ಪರಿಸರಪ್ರೇಮಿ ಜನಸಂಸ್ಕೃತಿಯನ್ನು ನಾಶಗೊಳಿಸಿ ಅದರ ಜಾಗದಲ್ಲಿ ಪ್ರತಿಗಾಮಿ ಪರಕೀಯ ಸಂಸ್ಕೃತಿ ನೆಲೆಗೊಳ್ಳಲು ಅವಕಾಶ ಮಾಡಿಕೊಡುತ್ತದೆ.
5) ಹುಲಿಧಾಮ ಮಾಡುವುದರಿಂದ ಇಲ್ಲಿನ ಪರಿಸರದ ಪ್ರಾಕೃತಿಕ ಸಹಜತೆಗೆ ದಕ್ಕೆ ಉಂಟಾಗುತ್ತದೆ. ಈಗಾಗಲೇ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿವಿದ ಪರಿಸರವಿರೋಧಿ ಯೋಜನೆಗಳಿಂದ ಅಳಿವಿನಂಚಿಗೆ ತಲುಪಿರುವ ಇಲ್ಲಿ ಕಾಣಸಿಗುವ ಕಡವೆ, ಜಿಂಕೆ, ಕಾಡುಕೋಣ ಇನ್ನಿತರ ಪ್ರಾಣಿಗಳ ಸಂತತಿ ನಾಶವಾಗುವ ಅಪಾಯವಿದೆ.
6)ಹುಲಿಧಾಮದಲ್ಲಿ ಪ್ರವಾಸಿಗರಿಗೆ ಸಫಾರಿ ಮೂಲಕ ಹುಲಿಗಳನ್ನು ತೋರಿಸುವ ಉದ್ದೇಶ ಹೊಂದಿರುವುದರಿಂದ ಪ್ರವಾಸಿಗರ ಕ್ಯಾಮರಗಳಿಗೆ ನಿರಂತರ ದೇಹವೊಡ್ಡಿ ಸಹಜ ಜೀವನವನ್ನೇ ಕಳೆದುಕೊಳ್ಳುತ್ತವೆ. ಆ ಮೂಲಕ ಅವು ಏಕಾಂತವನ್ನು ಕಳೆದುಕೊಳ್ಳುತ್ತಾ ಬೆದೆಗೂ ಬರದೆ ಹುಲಿಗಳ ವಂಶಾಭಿವೃದ್ಧಿ ನಿಂತುಹೋಗಿ ಕ್ರಮೇಣ ಹುಲಿ ಸಂತತಿಯ ನಾಶಕ್ಕೂ ಕಾರಣವಾಗಲಿದೆ.

ಆದಿವಾಸಿಗಳಿಗೂ ಪರಿಸರಕ್ಕೂ ನಡುವಿನ ಸಂಬಂಧ

ಪಶ್ಚಿಮ ಘಟ್ಟದ ಮದ್ಯಮಲೆನಾಡಿನ ಈ ಬಾಗದಲ್ಲಿ ತಲೆ-ತಲಾಂತರಗಳಿಂದ ರೈತಾಪಿ ಜನರು ವಾಸಿಸುತ್ತಾ ಬಂದಿದ್ದಾರೆ ಅದರಲ್ಲೂ ಆದಿವಾಸಿಗಳು ಎರಡು ಸಾವಿರ ವರ್ಷಗಳಿಗೂ ಹಿಂದೆಯೇ ಇಲ್ಲಿ ವಾಸವಿದ್ದರು ಎಂಬುದಕ್ಕೆ ಹಲವು ಪುರಾವೆಗಳು ದೊರೆತಿವೆ. ಅಂದಿನಂದಲೂ ಪರಿಸರದ ಭಾಗವಾಗಿ ಅರಣ್ಯವನ್ನೇ ಅವಲಂಬಿಸಿಕೊಂಡು; ಕಾಡಿನಲ್ಲಿ ಸಿಗುವ ಗೆಡ್ಡೆ-ಗೆಣಸು, ಬೈನೆ ಹಿಟ್ಟಿನ ಗಂಜಿಯೇ ಇವರ ಪ್ರದಾನ ಆಹಾರವಾಗಿತ್ತು. ಬೇಟೆ ಅವರ ಬದುಕಿನ ಬಾಗವಾಗಿತ್ತು. ಇವರು ಕಾಡಿನೊಂದಿಗೆ ಬಿಡಿಸಲಾರದ ಅವಿನಾಬಾವ ಸಂಬಂಧವನ್ನು ಹೊಂದಿರುವವರು.

ದೀರ್ಘಕಾಲ ಪುರಾತನ ಕುಮರಿ ಬೇಸಾಯ ಮಾಡಿಕೊಳ್ಳುತ್ತಾ ಜೀವಿಸಿರುವ ಕುರುಹುಗಳು ಘಟ್ಟ ಪ್ರದೇಶದ ಹಲವುಕಡೆ ಕಾಣಸಿಗುತ್ತವೆ. ಕಾಲಕ್ರಮೇಣ ನೀರಿನ ಸರ್ಕ್ಲುಗಳ ಕೆಳಬಾಗದಲ್ಲಿ ಅಲ್ಪ-ಸ್ವಲ್ಪ ಗದ್ದೆಗಳನ್ನು ಕೊಚ್ಚಿಕೊಂಡು, ಸಣ್ಣ ಸಣ್ಣ ಹುಲ್ಲಿನ ಗುಡಿಸಲುಗಳನ್ನು ನಿರ್ಮಿಸಿಕೊಂಡು, ಕಿರು ಅರಣ್ಯ ಉತ್ಪತ್ತಿ ಸಂಗ್ರಹಿಸಿಕೊಂಡು ಸ್ಥಿರ ನೆಲೆಕಂಡವರು. ಎಷ್ಟೆ ಕಷ್ಟ-ಬಡತನ ಇದ್ದಾಗಲೂ ಕಾಡಿಗೆ ಇವರೇ ವಾರಸುದಾರರಾಗಿದ್ದರು.

ಬ್ರಿಟೀಷರ ಆಗಮಾನದೊಂದಿಗ ಆದಿವಾಸಿಗಳ ಬದುಕು ಮತ್ತು ಬದುಕುವ ಹಕ್ಕುಗಳಿಗೆ ಮೊದಲಬಾರಿಗೆ ಬಲವಾದ ಕೊಡಲಿಪೆಟ್ಟು ಬಿತ್ತು. ಬ್ರೀಟೀಷರು ತಮ್ಮ ವ್ಯಾಪಕ ಲೂಟಿಗಾಗಿ ನಮ್ಮ ದೇಶಕ್ಕೆ ರೈಲ್ವೆ ಮತ್ತು ಕೈಗಾರಿಕಾ ಯಂತ್ರಗಳನ್ನು ತಂದರು. ರೈಲ್ವೆ ಸ್ಲೀಪರ್, ಎಲಕ್ಟ್ರಿಕ್ ‌ಪೊಲ್ಸ್ ಮತ್ತು ಇತರ ನಿರ್ಮಾಣ ಕಾರ್ಯಗಳಿಗೆ ಬೇಕಾಗುವ ಮರ-ಮುಟ್ಟುಗಳಿಗಾಗಿ ಅರಣ್ಯಗಳಿಗೆ ಲಗ್ಗೆಇಟ್ಟರು. ನಮ್ಮ ಕಾಡಿನಲ್ಲಿರುವ ಬಲಿಗೆ ಇತ್ಯಾದಿ ತೈಲಭರಿತ ಗಟ್ಟಿಜಾತಿಯ ಮರಗಳನ್ನು ಲೋಡುಗಟ್ಟಲೆ ಕಡಿದು ಸಾಗಿಸಿದರು. ಅದಕ್ಕಾಗಿ ಪಶ್ಚಿಮಘಟ್ಟದ ಉದ್ದಕ್ಕೂ ಅರಣ್ಯದಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ನಿರ್ಮಿಸಿದರು. ಆ ಹೊತ್ತಿನಲ್ಲಿ ಸ್ಥಳೀಯ ಆದಿವಾಸಿಗಳನ್ನು ಬಲವಂತವಾಗಿ ಹೆದರಿಸಿ-ಬೆದರಿಸಿ, ಹೊಡೆದು-ಬಡಿದು ದುಡಿಸಿಕೊಂಡರು. ಆ ಸಂದರ್ಭದಲ್ಲಿ ದೇಶದ ಹಲವು ಕಡೆ ಆದಿವಾಸಿಗಳಿಂದ ಬ್ರಿಟೀಷರ ವಿರುದ್ದ ಸಮರಶೀಲ ಹೋರಾಟಗಳು, ದಂಗೆಗಳು ನಡೆದಿರುವ ಉದಾಹರಣೆಗಳು ಚರಿತ್ರೆಯ ಪುಟಗಳಲ್ಲಿ ಕಾಣಸಿಗುತ್ತವೆ.

ವಿನಾಶದೆಡೆಗೆ ಆದಿವಾಸಿ ಬುಡಕಟ್ಟುಗಳು

ಬ್ರಿಟೀಷರು ಭಾರತವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಂಡ ನಂತರ ಆದಿವಾಸಿಗಳು ಕೂಡ ತಮ್ಮ ವಾಸಸ್ಥಾನದ ಮೇಲಿನ ತಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ಹಂತ ಹಂತವಾಗಿ ಕಳೆದುಕೊಳ್ಳಲಾರಂಬಿಸಿದರು. ಅದು 1947 ರಲ್ಲಿ ಅಧಿಕಾರ ಹಸ್ತಾಂತರವಾದ ನಂತರ ಮತ್ತಷ್ಟು ತೀವ್ರಗತಿಯಲ್ಲಿ ಮುಂದುವರಿಯಿತು. ಸ್ವತಂತ್ರ ಭಾರತದ ಸರ್ಕಾರಗಳು ‘ನಾಡಿನ ಅಬ್ಯುದಯಕ್ಕಾಗಿ ಅರಣ್ಯ ಸಂಪತ್ತನ್ನು ಬಳಸಿ’ ಎಂಬ ಘೋಷಣೆ ಯೊಂದಿಗೆ ಪಶ್ಚಿಮ ಘಟ್ಟದ ಅರಣ್ಯ ಪ್ರವೇಶ ಮಾಡಿದರು.

ಈ ಸಂದರ್ಭದಲ್ಲಿ ನಾನಾ ಅಬಿವೃದ್ದಿ ಯೋಜನೆಗಳ ಹೆಸರಿನಲ್ಲಿ ಗಟ್ಟಿ, ಮೆದು ಜಾತಿಯ ಲಕ್ಷಾಂತರ ಟನ್ನು ಮರಗಳನ್ನು ಕಡಿದು ಸಾಗಿಸಲಾಯಿತು. ಒಣಗಿದ ಮರಗಳನ್ನು ತೆಗೆಯುವ ಕಾರ್ಯಕ್ರಮದಲ್ಲಿ ಒಣಮರಗಳು ಮಾತ್ರವಲ್ಲದೆ ಜೀವಂತ ಮರಗಳನ್ನು ಅದರ ಮೇಲ್ತೊಗಟೆ ತೆಗೆದು ಮರದಣ್ಣೆ ಹಚ್ಚಿ ಸಾಯಿಸಿ ನಂತರ ಕಟವು ಮಾಡಿ ಸಾಗಿಸಲಾಗಿತ್ತು. ಈ ಎಲ್ಲಾ ಸಂದರ್ಭದಲ್ಲಿ ಆದಿವಾಸಿಗಳ ಮೇಲೆ ಅಮಾನುಷ ದೌರ್ಜನ್ಯ, ಹಿಂಸೆ, ಶೋಷಣೆ ನಡೆದಿತ್ತು. ಈ ಲೂಟಿ ಸುಮಾರು 90 ರ ದಶಕದವರೆಗೂ ಮುಂದುವರಿದಿತ್ತು. ಆದರೆ 90 ರ ದಶಕದ ನಂತರ ಲೂಟಿಯ ವಿಧಾನ ಬದಲಾಯಿತು.

ಅಲ್ಲಿವರೆಗೆ ಅರಣ್ಯ ಕಾಯ್ದೆಗಳ ಬಗ್ಗೆ ಇಲ್ಲದ ಕಾಳಜಿ ಮತ್ತು ಮಹತ್ವ ನಂತರ ಹೆಚ್ಚಾಗಲಾರಂಬಿಸಿತು. ರಕ್ಷಣೆಯ ಹೆಸರಿನಲ್ಲಿ ಸಾಮ್ರಾಜ್ಯಶಾಹಿ ಪರ ಯೋಜನೆಗಳಾದ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ರಕ್ಷಿತಾರಣ್ಯ, ಹುಲಿಧಾಮ, ಆನೆಧಾಮ ಮುಂತಾದವುಗಳನ್ನು ಜಾರಿಮಾಡಲು ತೊಡಗಿ ಆದಿವಾಸಿಗಳನ್ನು ಕಾಡಿನ ಸಂಬಂದದಿಂದಲೇ ಹೊರಗಟ್ಟ ತೊಡಗಿದೆ. ಈಗಾಗಲೇ ನಮ್ಮ ದೇಶ ಮಾತ್ರವಲ್ಲದೆ ಪ್ರಪಂಚದಾದ್ಯಂತ ಈ ರೀತಿಯ ಅರಣ್ಯಕಾಯ್ದೆ ಮತ್ತು ಯೋಜನೆಗಳಿಂದ ಹಲವಾರು ಆದಿವಾಸಿ ಬುಡಕಟ್ಟುಗಳು ನಾಶವಾಗಿವೆ.

ನಾಶವೆಂದರೆ ಪರಂಪರಾಗತವಾಗಿ ತಾವು ಬದುಕಿ ಬಾಳಿದ ಹಾಡಿ-ಕೊಡಿಗೆಗಳ ಕೂಡು ಕುಟುಂಬ ಜೀವನ, ಕಾಡಿನ ಜೊತೆಗಿನ ಅವಿನಾಬಾವ ಸಂಬಂಧ, ದೇವರಕಾಡು; ಭನ; ಕಾನ್‌ದೇವರು; ಇತ್ಯಾದಿ ಹೆಸರಲ್ಲಿ ಕಾಡನ್ನೇ ದೇವರೆಂದು ನಂಬಿ ಪೂಜಿಸುವ ಪರಿಸರ ಪ್ರೇಮಿ ಸಂಸ್ಕೃತಿ, ಒಟ್ಟಾರೆಯಾಗಿ ಕಾಡಿನೊಂದಿಗೆ ಬೆರೆತ ಅವರ ಬದುಕು, ಆಚಾರ-ವಿಚಾರ, ನಂಬಿಕೆ ಎಲ್ಲವನ್ನು ಕಳೆದುಕೊಂಡು ಎಲ್ಲರೂ ಅತಂತ್ರರಾಗಿ ಒಂದು ಸಮುದಾಯವಾಗಿ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುವುದೇ ಆಗಿದೆ. ಇಂತಹ ಘೋರವಾದ ಹಾನಿ ಮತ್ತು ಪರಿಣಾಮಬೀರುವ ಈ ಯೋಜನೆ ಜನಪರ, ಪರಿಸರಪರವಾಗಲು ಹೇಗೆಸಾದ್ಯ?

ರಕ್ಷಕರಾರು? ಭಕ್ಷಕರಾರು?

ಎಲ್ಲರೂ ಗಮನಿಸಬೇಕಾದ ಬಹಳ ಮುಖ್ಯವಾದ ವಿಚಾರವೆಂದರೆ ಆದಿವಾಸಿಗಳು ಮತ್ತು ಸಣ್ಣ-ಬಡ ರೈತರು ಅರಣ್ಯ ಪ್ರದೇಶದಲ್ಲಿ ವಾಸವಾಗಿರುವುದರಿಂದ ಕಾಡಿನ ರಕ್ಷಣೆಯಾಗುತ್ತದೆ. ಅವರು ತಮ್ಮ ತುತ್ತು ಅನ್ನಕ್ಕಾಗಿ ತುಂಡು ಭೂಮಿ ಕೊಚ್ಚಿಕೊಂಡು ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುವುದರೊಂದಿಗೆ ದೇಶಕ್ಕೆ ಅನ್ನದಾತರಾಗಿದ್ದಾರೆ. ಇದು ದೇಶವನ್ನು ಅಬಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತದೆ. ಇವರು ಸಣ್ಣ ಪ್ರಮಾಣದ ನಾಶ, ದೊಡ್ಡಪ್ರಮಾಣದ ರಕ್ಷಣೆ ಮಾಡುವವರಾಗಿದ್ದಾರೆ. ಇದು ಮಾನವ ಮತ್ತು ಪ್ರಕೃತಿ ನಡುವಿನ ಸಂಬಂಧ-ಸಂಘರ್ಷದ ವಿಚಾರವಾಗಿದೆ. ಆದ್ದರಿಂದ ಅನ್ನದಾತರೆಂದೂ ಪರಿಸರದ ಶತ್ರುಗಳಾಗಲು ಸಾದ್ಯವಿಲ್ಲ ಬದಲಿಗೆ ಅದನ್ನು ರಕ್ಷಿಸಿ, ಕಾಪಾಡುವ ಅದರ ಮಿತ್ರರಾಗಿದ್ದಾರೆ ಎಂಬ ಗತಿತಾರ್ಕಿಕ ಸತ್ಯವನ್ನು ಯಾರೂ ಮರೆಯಬಾರದು.

ಅದೇ ಸಂದರ್ಭದಲ್ಲಿ ಪ್ರಕೃತಿಯನ್ನು ಬಂಡವಾಳ ಮತ್ತು ಲಾಭಗಳಿಕೆಯ ಮೂಲವೆಂದು ಬಾವಿಸಿರುವ ದೊಡ್ಡ ಭೂಮಾಲಿಕರು ಮತ್ತು ಬಂಡವಾಳಶಾಹಿ ಎಷ್ಟೇಟ್ ಮಾಲಿಕರುಗಳು ಅರಣ್ಯದ ಮೇಲೆ ಯಾವುದೇ ಕಾಳಜಿ, ಪ್ರೀತಿ, ಕನಿಕರವಿಲ್ಲದೆ ನೂರಾರು, ಸಾವಿರಾರು ಎಕ್ರೆ ಕಾಡು ಕಡಿದು ಇಚ್ಚಾನುಸಾರ ಲೂಟಿ ಮಾಡುತ್ತಾ ಬಂದಿದ್ದಾರೆ. ಈ ಲೂಟಿಗೆ ಅರಣ್ಯ ಇಲಾಖೆ ಮತ್ತು ಪ್ರಬುತ್ವ ಬೆಂಬಲವಾಗಿ ನಿಂತಿರುವುದು ವ್ಯವಸ್ಥೆಯ ದುರಂತವೇ ಸರಿ.

ಮತ್ತೂ ಮುಂದುವರಿದು ಪ್ರಕೃತಿಯ ಸಹಜ ಸೌಂದರ್ಯ ಮತ್ತು ಜೀವ ವೈವಿದ್ಯತೆಗಳನ್ನು ಸರಕಾಗಿ ನೋಡುವ ದೇಶದ ದೊಡ್ಡ ಬಂಡವಾಳಿಗರು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಲೂಟಿಯ ಬಾಗವಾಗಿ ವಿವಿದ ಪರಿಸರ ರಕ್ಷಣೆ ಹೆಸರಿನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ತಂದುಕೊಳ್ಳಲಾಗುತ್ತಿದೆ. ಮಲೆನಾಡಿನ ಈ ಬಾಗದಲ್ಲಿ ಬಹುಸಂಖ್ಯಾತರಾಗಿರುವ ಆದಿವಾಸಿಗಳು, ಬಡ-ಮದ್ಯಮ ರೈತಾಪಿಯ ಹಿಡಿತದಲ್ಲಿರುವ ಒಟ್ಟು ಕೃಷಿಭೂಮಿಗಿಂತ ದೊಡ್ಡ ಭೂಮಾಲಿಕರ ಮತ್ತು ಎಸ್ಟೇಟ್‌ ಮಾಲಿಕರ ಹಿಡಿತದಲ್ಲಿರುವ ಒಟ್ಟು ಭೂಮಿ ಹತ್ತುಪಟ್ಟು ಅಧಿಕ ಇದೆ. ಇದರಿಂದಾಗಿ ಯಾರು ಪರಿಸರದ ರಕ್ಷಕರು, ಯಾರು ಭಕ್ಷಕರು ಎಂಬುದು ಅರ್ಥವಾಗುತ್ತದೆ.

ಪಶ್ಚಿಮಘಟ್ಟದ ಪರಿಸರ ನಾಶಕ್ಕೆ ಕಾರಣವಾಗಿರುವರ‍್ಯಾರು? ಆದಿವಾಸಿಗಳೇ?, ರೈತಾಪಿ; ಜನಸಾಮಾನ್ಯರೇ?, ಅಥವಾ ದೊಡ್ಡಭೂಮಾಲಿಕರೇ?, ಬಂಡವಾಳಶಾಹಿಗಳೇ?, ಸರ್ಕಾರದ ವಿವಿದ ಯೋಜನೆಗಳೇ?, ಎಂಬುದನ್ನು ಪರಿಸರಾಸಕ್ತರು, ಪರಿಸರವಾದಿಗಳು, ನಾಡಿನ ಬುದ್ದಿಜೀವಿಗಳು, ಪ್ರಗತಿಪರರು ಎಲ್ಲರೂ ವಾಸ್ತವವನ್ನು ಸರಿಯಾಗಿ ಗ್ರಹಿಸುವ ಅಗತ್ಯವಿದೆ. ಎರಡೂ ಬಗೆಯ ಪರಿಸರ ನಾಶವನ್ನು ವಸ್ತುನಿಷ್ಟವಾಗಿ ವಿಂಗಡಿಸಿ ನೋಡಬೇಕಿದೆ. ಯಾವುದು ಬದುಕು ಮತ್ತು ಮಾನವ ಸಂತತಿಯ ಉಳಿವಿಗಾಗಿ, ಯಾವುದು ಲಾಭಕ್ಕಾಗಿ ಮತ್ತು ವಿನಾಶಕ್ಕಾಗಿ ಎಂಬುದನ್ನು ಸ್ಪಷ್ಟವಾಗಿ ಗೆರೆಎಳದು ವಿಭಾಗಿಸ ಬೇಕಾಗಿದೆ.

ಈ ವಿಚಾರದಲ್ಲಿ ಕೆಲವು ಪರಿಸರವಾಧಿಗಳು ಎಡವುತ್ತಾರೆ ಅಥವಾ ಗೊಂದಲದಲ್ಲಿರುತ್ತಾರೆ. ಈ ಎಡವಟ್ಟು ಎಥೇಚ್ಚ ಪರಿಸರ ನಾಶಕ್ಕೆ ಕಾರಣವಾಗಿರುವ ಶೋಷಕ ಬಂಡವಾಳ ಶಾಹಿಗಳಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸೇವೆ ಸಲ್ಲಿಸುತ್ತಿದೆ. ಆದ್ದರಿಂದ ಈ ಪರಿಸರಪರ-ಜನಪರ ದೃಷ್ಟಿಕೋನದ ಬೆಳಕಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ಅಲ್ಲಿ ನಿರ್ಮಿಸಲು ಮುಂದಾಗಿರುವ ಹುಲಿಧಾಮದಿಂದಾಗುವ ದುಷ್ಪರಿಣಾಮ ಮತ್ತು ಅನಾಹುತಗಳ ಬಗ್ಗೆ ಜಾಗೃತರಾಗುವುದು ಎಲ್ಲರ ಕರ್ತವ್ಯವಾಗಿದೆ.

ನೀಲಗುಳಿ ಪದ್ಮನಾಭ (ಲೇಖಕರು ಪ್ರಗತಿಪರ ಹೋರಾಟಗಾರರು)

(ಲೇಖನವನ್ನು 2012-13 ರಲ್ಲಿ ಅಂದಿನ ಕೇಂದ್ರಸರ್ಕಾರ ಹುಲಿಧಾಮಕ್ಕೆ ಅನುಮತಿ ನೀಡಿದಾಗ ಬರೆಯಲಾಗಿದ್ದು. ಈಗಿನ ಕೇಂದ್ರ ಸರ್ಕಾರ ಮತ್ತೆ ಅರಣ್ಯಕಾಯಿದೆಗೆ ಬಂಡವಾಳಶಾಹಿ ಲೂಟಿಗೆ ಪೂರಕವಾಗಿ ತಿದ್ದುಪಡಿ ಮಾಡಿರುವ ಸಂದರ್ಭದಲ್ಲಿ ಪ್ರಸ್ತುತವಾಗಿದೆ)


ಇಂದು ’ಜಾಗತಿಕ ಹುಲಿ ದಿನ’ | ಭಾರತದಲ್ಲಿವೆ ಅತಿ ಹೆಚ್ಚು ಹುಲಿಗಳು …!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...