Homeಮುಖಪುಟಬಲಪಂಥೀಯ ಧೋರಣೆಯ ಫೇಸ್‌ಬುಕ್ ಸೆನ್ಸಾರ್‌ಶಿಪ್‌ಗೆ ಮತ್ತೊಂದು ಹೆಸರು ‘ತಾಂತ್ರಿಕ ದೋಷ’

ಬಲಪಂಥೀಯ ಧೋರಣೆಯ ಫೇಸ್‌ಬುಕ್ ಸೆನ್ಸಾರ್‌ಶಿಪ್‌ಗೆ ಮತ್ತೊಂದು ಹೆಸರು ‘ತಾಂತ್ರಿಕ ದೋಷ’

ಯಾವುದೇ ವಾದಕ್ಕೆ ಒಂದು ಪ್ರತಿವಾದವಿರುತ್ತದೆ. ಯಾವ ಕಡೆ ಹೆಚ್ಚು ಜನರಿರುತ್ತಾರೋ ಅದನ್ನು ಬೆಂಬಲಿಸಿದರೆ ತಮ್ಮ ವ್ಯಾಪಾರ ಹೆಚ್ಚು ಸುಲಲಿತವಾಗಿ ನಡೆಯುತ್ತದೆ ಎಂಬುದು ಅದರ ನಿಲುವು.

- Advertisement -
- Advertisement -

ನಾನು ಗೌರಿ ಡಾಟ್ ಕಾಂ’ನ ಯುಆರ್‌ಎಲ್‌ಗಳನ್ನು ಹಂಚಿಕೊಳ್ಳದಂತೆ ಫೇಸ್‌ಬುಕ್ ನಿರ್ಬಂಧಿಸಿ ಆಮೇಲೆ ಕ್ಷಮೆಕೋರಿದ್ದು ನಮಗೆಲ್ಲಾ ತಿಳಿದಿರುವ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಬೆಂಬಲಿಸುವ ವಿಶ್ವದ ಹಲವೆಡೆ ಇರುವ ಅನೇಕರು ಫೇಸ್‌ಬುಕ್‌ನ ಈ ವರ್ತನೆಯನ್ನು ಖಂಡಿಸುತ್ತಿದ್ದಾಗಲೇ ಇದಕ್ಕೆ ‘ತಾಂತ್ರಿಕ ಕಾರಣ’ಗಳನ್ನು ಹುಡುಕುವುದರಲ್ಲಿ ಕೆಲವರು ನಿರತರಾಗಿದ್ದರು.

ಅಂದ ಹಾಗೆ ಇವರಾರೂ ಫೇಸ್‌ಬುಕ್‌ನ ನೌಕರರಲ್ಲ, ಝಕರ್‌ಬರ್ಗ್ ಅಭಿಮಾನಿ ಸಂಘದ ಸದಸ್ಯರಲ್ಲ. ನರೇಂದ್ರಮೋದಿ ಅಭಿಮಾನಿಗಳನ್ನೂ ಇಲ್ಲಿ ಪರಿಗಣಿಸಲಾಗಿಲ್ಲ. ಇವರಿಗಿದ್ದದ್ದು ಒಂದೇ ಒಂದು ಉದ್ದೇಶ. ‘ನಾನು ಗೌರಿ’ಯ ವೆಬ್‌ಸೈಟನ್ನು ಫೇಸ್‌ಬುಕ್ ಬ್ಲಾಕ್ ಮಾಡಿರುವುದರ ಹಿಂದೆ ಯಾವುದೇ ರಾಜಕಾರಣವಲ್ಲ ಎಂದು ತಮಗೆ ತಾವೇ ವಿವರಿಸಿಕೊಂಡು, ತಮ್ಮ ಗೆಳೆಯರಿಗೂ ವಿವರಿಸುವುದು!

ಇವರೆಲ್ಲರ ರಾಜಕೀಯ ಒಲವುಗಳನ್ನು ಬದಿಗಿಟ್ಟೇ ಅವರ ವಾದಗಳನ್ನು ನೋಡೋಣ. ಇವರು ಹೇಳುವಂತೆ ಫೇಸ್‌ಬುಕ್ ಯುಆರ್‌ಎಲ್ ಬ್ಲಾಕ್ ಮಾಡುವುದರ ಹಿಂದೆ ಯಾವುದೇ ರಾಜಕಾರಣವಿಲ್ಲ ಎಂಬುದನ್ನು ಒಪ್ಪಬಹುದೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಫೇಸ್‌ಬುಕ್‌ನ ಒಂದು ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಅದರ ಬಳಕೆದಾರನಿಗೆ ಎಷ್ಟು ಅವಕಾಶವಿದೆ ಎಂಬುನ್ನು ನೋಡಬೇಕು.

ಫೇಸ್‌ಬುಕ್ ಒಂದು ಯುಆರ್‌ಎಲ್‌ಅನ್ನು ನಿರ್ಬಂಧಿಸಿದರೆ ಅದನ್ನು ಪ್ರಶ್ನಿಸುವುದಕ್ಕೆ ಒಂದೇ ಒಂದು ಮಾರ್ಗವಿದೆ. ನಾವು ಫೇಸ್‌ಬುಕ್‌ನ ಡಿಬಗ್ಗರ್ ಸೇವೆಗೆ ಹೋಗಿ ನಮ್ಮ ಯುಆರ್‌ಎಲ್‌ಅನ್ನು ಅಲ್ಲಿ ನಮೂದಿಸಿ ಪರೀಕ್ಷಿಸಬೇಕು. ಅದರ “ಕಮ್ಯುನಿಟಿ ಸ್ಟ್ಯಾಂಡರ್ಡ್ ಉಲ್ಲಂಘನೆ” ಆಗಿದ್ದರೆ ಆ ಮಾಹಿತಿ ಅಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಅದು ತಪ್ಪಾಗಿದ್ದರೆ ಮುಂದೇನು ಮಾಡಬೇಕು ಎಂಬ ಮಾಹಿತಿ ಕಾಣಿಸಿಕೊಳ್ಳುತ್ತದೆ.

ವಿಷಯ ಇಲ್ಲಿಗೇ ಕೊನೆಗೊಂಡಿದ್ದರೆ ಎಲ್ಲವೂ ಸರಿಯಾಗಿದೆ ಎಂದು ಹೇಳಬಹುದಿತ್ತು.
ಆದರೆ ಅದು ಹಾಗಿಲ್ಲ. ಯಾವುದೇ ಕಮ್ಯುನಿಟಿ ಸ್ಟ್ಯಾಂಡರ್ಡ್ ಉಲ್ಲಂಘಿಸದ ವೆಬ್‌ಸೈಟುಗಳನ್ನೂ ಫೇಸ್‌ಬುಕ್ ಬ್ಲಾಕ್ ಮಾಡುತ್ತದೆ. ಡಿಬಗ್ಗರ್ ಕೂಡಾ ಕೇವಲ ಬ್ಲಾಕ್ ಆಗಿರುವ ಯುಆರ್‌ಎಲ್ ಇದೆ ಎಂದಷ್ಟೇ ಹೇಳುತ್ತದೆ. ಮುಂದೇನು ಮಾಡಬೇಕು ಎಂಬುದಕ್ಕೆ ಯಾವ ಸೂಚನೆಯನ್ನೂ ಇದು ಕೊಡುವುದಿಲ್ಲ.

ಇಂಥ ಸಂದರ್ಭಗಳಲ್ಲಿ ಬಳಕೆದಾರ ಏನು ಮಾಡಬೇಕು? ಇದಕ್ಕೆ ಸರಳ ಉತ್ತರಗಳಿಲ್ಲ. ಫೇಸ್‌ಬುಕ್ ಸಪೋರ್ಟ್ ಸೆಂಟರನ್ನು ಹೇಗಾದರೂ ಮಾಡಿ ಸಂಪರ್ಕಿಸಬೇಕು ಅಷ್ಟೇ. ಫೇಸ್‌ಬುಕ್ ಜೊತೆಗೆ ಡೆವಲಪರ್, ಜಾಹೀರಾತು ಖಾತೆ, ಕಾರ್ಪೊರೇಟ್ ಪಾರ್ಟ್‌ನರ್‌ಶಿಪ್‌ನಂಥ ಸಂಬಂಧವಿದ್ದರೆ ಸಂಪರ್ಕಿಸುವ ದಾರಿಗಳಿರುತ್ತವೆ. ಇಲ್ಲವಾದರೆ ಹೆಲ್ಪ್ ಸೆಂಟರ್‌ನಲ್ಲಿ ದೂರು ಕೊಡುವ ಅರ್ಜಿ ತುಂಬಿಸಿ ಪ್ರತಿಕ್ರಿಯೆಗೆ ಕಾಯಬೇಕಷ್ಟೆ.

ವಿಶ್ವವ್ಯಾಪಿಯಾಗಿ ತನ್ನ ಜಾಲವನ್ನು ಹರಡಿಕೊಂಡಿರುವ, ಬೇರೆ ಬೇರೆ
ಬಗೆಯ ಕಾನೂನುಗಳನ್ನು ಪಾಲಿಸಬೇಕಾಗಿರುವ ಬಹುರಾಷ್ಟ್ರಿಯ ಸಂಸ್ಥೆಯೊಂದು ತನ್ನನ್ನು ಸಂಪರ್ಕಿಸುವ ವಿಧಾನವನ್ನು ಇಷ್ಟೊಂದು ಕ್ಲಿಷ್ಟಗೊಳಿಸಿರುವುದರ ಉದ್ದೇಶವೇನು? ಈ ಪ್ರಶ್ನೆಗೆ ಬೆಂಬಲಿಗರು ನೀಡುವ ಉತ್ತರ: ‘ವಿಶ್ವವ್ಯಾಪಿಯಾಗಿ ಭಾರಿ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಸಂಸ್ಥೆ ಪ್ರತಿಯೊಬ್ಬನ ಪ್ರಶ್ನೆಗೆ ವೈಯಕ್ತಿಕವಾಗಿ ಉತ್ತರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ಬಗೆಯ ವ್ಯವಸ್ಥೆ ಮಾಡಿಕೊಂಡಿದೆ’. ತರ್ಕಕ್ಕಾಗಿ ಇದನ್ನು ಒಪ್ಪಿಕೊಳ್ಳೋಣ. ಫೇಸ್‌ಬುಕ್‌ನ ವ್ಯಾಪಾರ ಮಾದರಿಯೇ ಅದರ ಬಳಕೆದಾರರು ಮತ್ತು ಅವರು ಹಂಚಿಕೊಳ್ಳುವ ಮಾಹಿತಿ. ಅದಿಲ್ಲದೇ ಇದ್ದರೆ ಫೇಸ್‌ಬುಕ್‌ನ ಅಸ್ತಿತ್ವವೇ ಇರುವುದಿಲ್ಲ. ಅಂಥದ್ದರಲ್ಲಿ ಒಬ್ಬೊಬ್ಬ ಗ್ರಾಹಕನ ಸಮಸ್ಯೆಯನ್ನು ಅದು ಗಂಭೀರವಾಗಿ ಪರಿಗಣಿಸಬೇಕಲ್ಲವೇ? ಈ ಪ್ರಶ್ನೆಗೆ ಬರುವ ಹೊತ್ತಿಗೆ ಸಮರ್ಥಕರು ಸುಸ್ತಾಗಿರುತ್ತಾರೆ. ‘ನಿಮ್ಮನ್ನು ಫೇಸ್‌ಬುಕ್ ಬಳಸಲು ಹೇಳಿದವರು ಯಾರು?’ ಎಂಬಂಥ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ.

ದುರದೃಷ್ಟವೆಂದರೆ ಇದನ್ನು ನಮ್ಮೆಲ್ಲರಿಗಿಂತ ಚೆನ್ನಾಗಿ ಫೇಸ್‌ಬುಕ್ ಅರಿತಿದೆ. ಯಾವುದೇ ವಾದಕ್ಕೆ ಒಂದು ಪ್ರತಿವಾದವಿರುತ್ತದೆ. ಯಾವ ಕಡೆ ಹೆಚ್ಚು ಜನರಿರುತ್ತಾರೋ ಅದನ್ನು ಬೆಂಬಲಿಸಿದರೆ ತಮ್ಮ ವ್ಯಾಪಾರ ಹೆಚ್ಚು ಸುಲಲಿತವಾಗಿ ನಡೆಯುತ್ತದೆ ಎಂಬುದು ಅದರ ನಿಲುವು. ವೈಯಕ್ತಿಕ ಮಾಹಿತಿಯ ಹಂಚಿಕೆಗೆ ಸಂಬಂಧಿಸಿದಂತೆ ಪ್ರಬಲವಾದ ಕಾನೂನುಗಳಿರುವ ಯೂರೋಪಿನ ದೇಶಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆಯೂ ಫೇಸ್‌ಬುಕ್‌ನದ್ದು ಒಂದು ಬಗೆಯ ಸರ್ವಾಧಿಕಾರವೇ ಸರಿ. ಭಾರತದಲ್ಲಂತೂ ಫೇಸ್‌ಬುಕ್ ಮತ್ತು ಬಲಪಂಥೀಯ ಶಕ್ತಿಗಳು ಒಂದನ್ನೊಂದು ಬೆಂಬಲಿಸುತ್ತಲೇ ಪರಸ್ಪರ ಬೆಳೆದಿವೆ.

‘ನಾನು ಗೌರಿ’ ಬಲಪಂಥೀಯ ಶಕ್ತಿಗಳಿಗೆ ಇರಿಸುಮುರುಸುಂಟು ಮಾಡುವ ಸುದ್ದಿಗಳನ್ನು ಪ್ರಕಟಿಸುವ ಕರ್ನಾಟಕ ಬೆರೆಳಣಿಕೆಯ ಮುಖ್ಯವಾಹಿನಿ ಜಾಲತಾಣಗಳಲ್ಲಿ ಒಂದು. ಅದರ ಯುಆರ್‌ಎಲ್ ಅನ್ನು ಫೇಸ್‌ಬುಕ್ ಬ್ಲಾಕ್ ಮಾಡುವ ಮುಂಚೆಯೂ ಬಿಜೆಪಿ ಶಾಸಕರೊಬ್ಬರಿಗೆ ಸಂಬಂಧಿಸಿದ ಸುದ್ದಿಯನ್ನು ಅದು ಪ್ರಕಟಿಸಿತ್ತು. ಆಮೇಲೆ ತೆರವುಗೊಳಿಸುವ ಹೊತ್ತಿಗೆ ಇದೊಂದು ‘ತಾಂತ್ರಿಕ ಸಮಸ್ಯೆ’ ಆಗಿತ್ತು.

‘ವಾರ್ತಾಭಾರತಿ’ಯ ಯುಆರ್‌ಎಲ್ ಮತ್ತು ಅದರ ಫೇಸ್‌ಬುಕ್ ಪುಟ ಇದೇ ಬಗೆಯ ತೊಂದರೆಯನ್ನು ಎದುರಿಸಿತ್ತು. ರಾಷ್ಟ್ರಿಯ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಬ್ಲಾಕ್ ತೆರವಾಯಿತು. ಆಗಲೂ ಬ್ಲಾಕ್‌ಗೆ ಕಾರಣವಾದದ್ದು ತಾಂತ್ರಿಕ ಸಮಸ್ಯೆ. ವಾರ್ತಾಭಾರತಿ ಕೂಡಾ ಬಲಪಂಥೀಯ ವಿರೋಧಿ ನಿಲುವಿನ ಪತ್ರಿಕೆಯೇ ಆಗಿದೆ. ‘ಇಂಜಿಪೆಣ್ಣು’ ಹೆಸರಿನಲ್ಲಿ ಸಕ್ರಿಯರಾಗಿರುವ ಮಾನವ ಹಕ್ಕು ಕಾರ್ಯಕರ್ತೆಯ ಫೇಸ್‌ಬುಕ್ ಪುಟ/ಅಕೌಂಟ್, ‘ಕ್ಯಾರವಾನ್’ ಮಾಸಿಕದ ಜಾಹೀರಾತು ಹೀಗೆ ‘ತಾಂತ್ರಿಕ ಕಾರಣ’ಗಳಿಗೆ ಬ್ಲಾಕ್ ಆಗುವ ಎಲ್ಲಾ ಪ್ರಕರಣಗಳಲ್ಲಿಯೂ ಆಡಳಿತಾರೂಢರಿಗೆ ವಿರುದ್ಧವಾಗಿರುವ ವರದಿ ಇರುವುದು ಕೇವಲ ಕಾಕತಾಳೀಯ ಎಂದು ಹೇಳಲು ಸಾಧ್ಯವೇ?

‘ಕ್ಯಾರವಾನ್’ ಪ್ರಕರಣಕ್ಕೆ ಇನ್ನೊಂದು ತಿಂಗಳಲ್ಲಿ ಎರಡು ವರ್ಷ ತುಂಬುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಸಾಲದ ಕುರಿತಂತೆ ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣದ ಪತ್ರದಲ್ಲಿ ಪ್ರಸ್ತಾಪಿಸಿಲ್ಲ ಎಂಬುದರ ಬಗ್ಗೆ ಕ್ಯಾರವಾನ್ ವರದಿ ಪ್ರಕಟಿಸಿತ್ತು. ಎಲ್ಲಾ ಪತ್ರಿಕೆಗಳು ಮಾಡುವಂತೆಯೇ ತನ್ನ ವಿಶೇಷ ವರದಿಯನ್ನು ಫೇಸ್‌ಬುಕ್‌ನಲ್ಲಿ ಜಾಹೀರಾತಾಗಿ ಪ್ರಕಟಿಸಲು ಪ್ರಯತ್ನಿಸಿತು. ಆದರೆ ಈ ಜಾಹೀರಾತಿಗೆ ಫೇಸ್‌ಬುಕ್ ಒಪ್ಪಿಗೆ ನೀಡಲೇ ಇಲ್ಲ. ಇದ್ಯಾಕೆ ಹೀಗೆ ಎಂಬ ಪ್ರಶ್ನೆಗೆ ಫೇಸ್‌ಬುಕ್ ಕಡೆಯಿಂದ ಯಾವುದೇ ಉತ್ತರ ದೊರೆಯಲಿಲ್ಲ. ಹನ್ನೊಂದು ದಿನಗಳ ನಂತರ ಜಾಹೀರಾತು ಪ್ರಕಟಣೆಗೆ ಒಪ್ಪಿಯನ್ನು ನೀಡಿದ ಫೇಸ್‌ಬುಕ್ ತಾಂತ್ರಿಕ ತೊಂದರೆಯಿಂದ ಹೀಗಾಯಿತು ಎಂಬ ಸ್ಪಷ್ಟನೆ ನೀಡಿತು.

ಫೇಸ್‌ಬುಕ್ ಮತ್ತು ಕ್ಯಾರವಾನ್‌ಗಳು ಜೊತೆ ಜೊತೆಯಾಗಿ ಕಾರ್ಯಕ್ರಮಗಳನ್ನು ಸಂಘಟಿಸಿವೆ. ಎರಡೂ ಸಂಸ್ಥೆಗಳ ನಡುವೆ ವ್ಯಾವಹಾರಿಕ ಸಂಬಂಧವೂ ಇತ್ತು. ಇಷ್ಟಾಗಿಯೂ ಫೇಸ್‌ಬುಕ್‌ನ ‘ಸಂಪರ್ಕ ಜಾಲದ ಬಲೆ’ಯನ್ನು ದಾಟಿ ಹೋಗಲು ಕ್ಯಾರವಾನ್‌ಗೆ ಸಾಧ್ಯವಾಗಿರಲಿಲ್ಲ. ‘ಕ್ಯಾರವಾನ್ ಡೈಲಿ’, ‘ಬೋಲ್ತಾ ಹಿಂದುಸ್ತಾನ್’, ‘ಜನ್‌ಜ್ವಾರ್’ ಹೀಗೆ ಅನೇಕ ಸಣ್ಣ ಮತ್ತು ದೊಡ್ಡ ಪತ್ರಿಕೆಗಳು ನರೇಂದ್ರ ಮೋದಿ ಮತ್ತು ಬಿಜೆಪಿ ವಿರೋಧಿ ವರದಿಗಳನ್ನು ಪ್ರಕಟಿಸಿದಾಗಲೆಲ್ಲಾ ಯುಆರ್‌ಎಲ್ ಬ್ಲಾಕ್‌ನ ಸಮಸ್ಯೆಯನ್ನು ಎದುರಿಸಿವೆ.

ಇಲ್ಲಿ ಉಲ್ಲೇಖಿಸುವ ಎಲ್ಲಾ ಪತ್ರಿಕೆಗಳು ಗಮನಾರ್ಹ ಪ್ರಮಾಣದ ಓದುಗರನ್ನು ಹೊಂದಿವೆಯಷ್ಟೇ ಅಲ್ಲದೇ ತಮ್ಮನ್ನು ಬ್ಲಾಕ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಒಂದು ಗದ್ದಲ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದವು ಎಂಬುದೂ ಮುಖ್ಯವಾಗುತ್ತದೆ. ಇಂಥ ಶಕ್ತಿ ಇಲ್ಲದ ಅದೆಷ್ಟೋ ಮಂದಿಯ ವಿಷಯ ಹೊರಗೆ ಬಾರದೆಯೇ ಮುಚ್ಚಿ ಹೋಗಿರುವ ಸಾಧ್ಯತೆಗಳೇ ಹೆಚ್ಚು.

ಎನ್‌ಡಿಟಿವಿ ಇಂಡಿಯಾದ ಫೇಸ್‌ಬುಕ್ ಪುಟದಲ್ಲಿ ಸಂಭವಿಸುವ ಅದ್ಭುತ ಮತ್ತೊಂದು. ರವೀಶ್‌ಕುಮಾರ್ ತಮ್ಮ ಅಭಿಮಾನಿಗಳು ಮತ್ತು ವಿರೋಧಿಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರು. ಅವರನ್ನು ಬ್ಲಾಕ್ ಮಾಡುವುದು ಸ್ವಲ್ಪ ಕಷ್ಟದ ಸಂಗತಿ.

ಆದರೆ ಅವರು ಆಡಳಿತ ಪಕ್ಷದ ಸೋಲುಗಳನ್ನು ಸಾಕ್ಷ್ಯ ಸಮೇತ ಬಯಲಿಗೆಳೆಯುವ ಕಾರ್ಯಕ್ರಮಗಳು ಫೇಸ್‌ಬುಕ್‌ನಲ್ಲಿ ಕಡಿಮೆ ಜನರನ್ನು ತಲುಪುವಂತೆ ನೋಡಿಕೊಳ್ಳುವ ಪ್ರಕ್ರಿಯೆಯೊಂದರ ಬಗ್ಗೆ ಸಿರಿಲ್ ಸ್ಯಾಮ್ ಮತ್ತು ಪರಂಜೊಯ್ ಗುಹಾ ಥಾಕೂರ್ಥಾ ಅವರ ಪುಸ್ತಕದಲ್ಲಿ ಹೇಳಲಾಗಿದೆ. ಈ ‘ಅಲ್ಗಾರಿದಂ ಮಹಾತ್ಮೆ’ ಯಾವತ್ತೂ ಸಮಸ್ಯೆಯೇ.

ಫೇಸ್‌ಬುಕ್ ವಿಶ್ವವ್ಯಾಪಿಯಾಗಿ ಅನುಸರಿಸುತ್ತಿರುವ ವ್ಯಾಪಾರ ತಂತ್ರ ಒಂದೇ. ಜನರು ಹೆಚ್ಚು ಹೆಚ್ಚು ತನ್ನ ವೇದಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು. ಅರ್ಥಾತ್ ಅವರು ಹೆಚ್ಚು ವಿವರಗಳನ್ನು ಹಂಚಿಕೊಳ್ಳುವಂತೆ, ಹೆಚ್ಚು ಚರ್ಚಿಸುವಂತೆ ಮಾಡುವುದು. ಸದ್ಯಕ್ಕೆ ವಿಶ್ವವ್ಯಾಪಿಯಾಗಿ ಬಲಪಂಥ ಜನಪ್ರಿಯವಾಗಿದೆ. ಬಹುಸಂಖ್ಯಾತ ವಾದವನ್ನು ನೆಚ್ಚಿಕೊಂಡಿರುವ ಈ ರಾಜಕಾರಣಕ್ಕೆ ದೊಡ್ಡ ಸಂಖ್ಯೆಯ ಬೆಂಬಲಿಗರಿದ್ದಾರೆ. ಅವರ ಚಟುವಟಿಕೆಯನ್ನು ಬೆಂಬಲಿಸುವುದು ಫೇಸ್‌ಬುಕ್‌ನ ದೃಷ್ಟಿಯಲ್ಲಿ ಲಾಭದಾಯಕ. ಇದುವೇ ಫೇಸ್‌ಬುಕ್‌ನ ವ್ಯಾಪಾರ ಮಾದರಿ.

‘ನಾನು ಗೌರಿ’ಯೂ ಸೇರಿದಂತೆ ಜನರೆದುರು ವಾಸ್ತವವನ್ನು ತೆರೆದಿಡಲು ಪ್ರಯತ್ನಿಸುವ ಪ್ರತಿಯೊಂದು ಜಾಲತಾಣವೂ ಒಂದಲ್ಲಾ ಒಂದು ಸಂದರ್ಭದಲ್ಲಿ ಯುಆರ್‌ಎಲ್ ಬ್ಲಾಕ್ ಸಮಸ್ಯೆಯನ್ನು ಅನುಭವಿಸಿರುತ್ತವೆ. ಆದರೆ ಓಪಿಇಂಡಿಯಾದಂಥ ಸುಳ್ಳನ್ನೇ ಸದಾ ಹಂಚುವ ವೆಬ್‌ಸೈಟ್ ಇಲ್ಲಿಯ ತನಕ ಅಂಥ ಸಮಸ್ಯೆಯನ್ನು ಎದುರಿಸಿಲ್ಲ!.

ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕಾಗಿ ಎಂಟು ಸ್ವತಂತ್ರ ಸಂಸ್ಥೆಗಳನ್ನು ಫೇಸ್‌ಬುಕ್ ನೇಮಿಸಿಕೊಂಡಿದೆ. ಆದರೂ ಬಲಪಂಥೀಯ ಸುಳ್ಳು ಸುದ್ದಿ ತಾಣಗಳು ಯುಆರ್‌ಎಲ್ ಬ್ಲಾಕ್‌ನಂಥ ಸಮಸ್ಯೆಯನ್ನು ಎದುರಿಸುವುದಿಲ್ಲ. ಇದು ಯಾವ ಬಗೆಯ ತಾಂತ್ರಿಕ ದೋಷ? ಈ ಪ್ರಶ್ನೆಗೆ ‘ನಾನು ಗೌರಿ’ಯ ಯಆರ್‌ಎಲ್ ಬ್ಲಾಕ್ ಅನ್ನು ವಿವರಿಸಲು ಪ್ರಯತ್ನಿಸಿದ ಯಾವ ಎನ್‌ಆರ್‌ಐ ಲಿಬರಲ್ ಕೂಡಾ ಉತ್ತರಿಸುವುದಿಲ್ಲ ಎನ್ನುವುದರಲ್ಲಿ ಫೇಸ್‌ಬುಕ್‌ನ ಗೆಲುವಿದೆ.

– ಗೌತಮ ಶರ್ಮ


ಇದನ್ನೂ ಓದಿ: ನಾನುಗೌರಿ ಪೇಜ್ ನಿರ್ಭಂಧಿಸಿದ ಫೇಸ್‌ಬುಕ್: ಗೌರಿ ಮೀಡಿಯಾ ತಂಡ ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...