ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಸ್ವಯಂ ಪ್ರೇರಿತ ವಿಚಾರಣೆಯನ್ನು ವಿರೋಧಿಸಿರುವ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ 8ಕ್ಕೂ ಹೆಚ್ಚು ನಿವೃತ್ತ ನ್ಯಾಯಾಧೀಶರು, ಭೂಷಣ್ ಅವರೊಂದಿಗೆ ಐಕ್ಯಮತ್ಯ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪದಲ್ಲಿ ಪ್ರಶಾಂತ್ ಭೂಷಣ್ ಮತ್ತು ಟ್ವಿಟ್ಟರ್ ಇಂಡಿಯಾದ ಮೇಲೆ ಸ್ವಯಂ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್‌ನ ಕ್ರಮಕ್ಕೆ ದೇಶದ ಹಲವು ಚಿಂತಕರು, ಹೋರಾಟಗಾರರು, ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
10 ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮಾಜಿ ಐಎಎಸ್ ಅಧಿಕಾರಿಗಳು, ಲೇಖಕರು, ವಕೀಲರು ಸೇರಿದಂತೆ 131 ಜನರು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸಮಾಜದ ಬಡ ಮತ್ತು ದುರ್ಬಲ ವರ್ಗದವರು, ನ್ಯಾಯಾಂಗ ಪ್ರವೇಶಿಸಲು ದನಿಯಿಲ್ಲದವರ ಪರವಾಗಿ ಪ್ರಶಾಂತ್ ಭೂಷಣ್ ದಶಕಗಳ ಕಾಲ ವಕಾಲಿಕೆ ವಹಿಸಿದ್ದಾರೆ. ಸರ್ಕಾರದ ದೊಡ್ಡ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆದಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಮೇಲೆ ನ್ಯಾಯಾಂಗ ನಿಂದನೆ ಆರೋಪ ಸರ್ವಥಾ ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಸ್ಟೀಸ್ ಚಲಂಮೇಶ್ವರ್, ಜಸ್ಟೀಸ್ ಮದನ್ ಲೋಕುರ್, ಜಸ್ಟೀಸ್ ರುಮಾ ಪಾಲ್, ಜಸ್ಟೀಸ್ ಜಿ.ಎಸ್ ಸಿಂಗ್ವಿ, ಜಸ್ಟೀಸ್ ಅಶೋಕ್ ಕೆ ಗಂಗುಲಿ, ಜಸ್ಟೀಸ್ ಗೋಪಾಲಗೌಡ, ಜಸ್ಟೀಸ್ ಅಫ್ತಬ್ ಅಲಂ, ಜಸ್ಟೀಸ್ ವಿಕ್ರಮ್‌ಜಿತ್ ಸೆನ್, ಜಸ್ಟೀಸ್ ಅಂಜನಾ ಪ್ರಕಾಶ್ ಮುಂತಾದವರು ಹೇಳಿಕೆಗೆ ಸಹಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆಯು ಆಗಸ್ಟ್ 5 ರಂದು ನಡೆಯಲಿದೆ.
ಇದನ್ನೂ ಓದಿ; ಪ್ರಶಾಂತ್ ಭೂಷಣ್ ಸತ್ಯ ಹೇಳಿದ್ದಾರೆ, ಅದಕ್ಕಾಗಿ ತನಿಖೆ: ಭೂಷಣ್ ಪರ ನಿಂತ ಸಾಮಾಜಿಕ ಕಾರ್ಯಕರ್ತರು