ಭಾರತ Self-sufficient ಆಗುವುದು ಹೇಗೆ? : ಎಚ್.ಎಸ್ ದೊರೆಸ್ವಾಮಿ

ನಾವು Self-sufficient ಆಗಬೇಕು ನಿಜ. ಆದರೆ ಆತ್ಮನಿರ್ಭರದ ಘೋಷಣೆ ಕೂಗುವ ಮೊದಲು ನಮ್ಮ ಈಗಿನ ಅವಶ್ಯಕತೆಗಳ ಕೊರತೆ ಎಷ್ಟು ಎಂಬುದನ್ನು ಸರ್ಕಾರ ಮೊದಲು ಆಲೋಚನೆ ಮಾಡಬೇಕು.

0
28
NEP ’ಹೇಗೆ ಯೋಚಿಸಬೇಕು’ ಎಂಬ ಕುರಿತು ಒತ್ತು ನೀಡುತ್ತದೆ: ಪ್ರಧಾನಿ ಮೋದಿ

ನರೇಂದ್ರ ಮೋದಿಯವರು Slogan mongering ನಲ್ಲಿ ನಿಸ್ಸೀಮರು. ಘೋಷಣೆಗಳ ಮಾರಾಟ ಸಂಸ್ಥೆ ನಡೆಸುವಷ್ಟು ಪ್ರಚಂಡರು.

ದೇಶದ ಮುಂದಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಬೇಕಾದ Road Map ಅವರಲ್ಲಿಲ್ಲ. ಭಾರತ ತನ್ನ ಅಗತ್ಯತೆಗಳಿಗೆ ಪರಾವಲಂಬಿಯಾಗುವುದು ನಡೆದೇ ಇದೆ. ಅದಕ್ಕೆ ಪರಿಹಾರ ಕಂಡು ಹಿಡಿದುಕೊಳ್ಳುವ ಮಾರ್ಗಗಳನ್ನು ಅನ್ವೇಷಣೆ ಮಾಡದೆ ಬರೀ ಘೋಷಣೆ ಮಾಡಿದರೆ ಉದ್ಗಾರಗಳನ್ನು ತೆಗೆದರೆ ಏನು ಪ್ರಯೋಜನ?

ನಾವು Self-sufficient ಆಗಬೇಕು ನಿಜ. ಆದರೆ ಆತ್ಮನಿರ್ಭರದ ಘೋಷಣೆ ಕೂಗುವ ಮೊದಲು ನಮ್ಮ ಈಗಿನ ಅವಶ್ಯಕತೆಗಳ ಕೊರತೆ ಎಷ್ಟು ಎಂಬುದನ್ನು ಸರ್ಕಾರ ಮೊದಲು ಆಲೋಚನೆ ಮಾಡಬೇಕು. ಭಾರತದಲ್ಲಿ ಸೂರ್ಯನ ಶಾಖವನ್ನು ಬಳಸಿಕೊಂಡು ವಿದ್ಯುತ್ತನ್ನು ಪಡೆಯಲು ಅವಕಾಶವಿದೆ. ಅದಕ್ಕೆ ಬೇಕಾದ Solar Module ಭಾರತದಲ್ಲಿ ತಯಾರಾಗುತ್ತಿಲ್ಲ. 2018ರಲ್ಲಿ ಸೂರ್ಯನ ಶಾಖೋತ್ಪತ್ತಿ ಕೇಂದ್ರಕ್ಕೆ 2.59 ಬಿಲಿಯನ್ ಡಾಲರ್ ಬೆಲೆ ತೆತ್ತು ಬಿಡಿಭಾಗಗಳನ್ನು ಆಮದು ಮಾಡಿಕೊಂಡರೆ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅದರ ಬಿಡಿಭಾಗಗಳ ಆಮದಿಗಾಗಿ 60 ಬಿಲಿಯನ್ ಡಾಲರ್ ತೆತ್ತಿದೆ. ಮೊಬೈಲ್ ಫೋನ್‍ಗಳ ಶೇ 88ರಷ್ಟು ಬಿಡಿಭಾಗಗಳನ್ನು ನಾವು ಚೈನಾ ಮುಂತಾದ ಕಡೆಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ರಾಸಾಯನಿಕ ಗೊಬ್ಬರ ತಯಾರಿಕೆಯಲ್ಲೂ ನಮ್ಮ ದೇಶ ಸ್ವಾವಲಂಬಿಯಾಗಿಲ್ಲ. ಭಾರತ ತನ್ನ ಆಹಾರಧಾನ್ಯ ಉತ್ಪತ್ತಿಗೆ ಬೇಕಾದ ರಸಗೊಬ್ಬರದ 2/3 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಡಾಲ್ಡಾ ಮೊದಲಾದ ವನಸ್ಪತಿ ಆಮದು ಮಾಡಿಕೊಳ್ಳುವುದರಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದೆ. ಪ್ರಪಂಚದಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ 2018-19ರಲ್ಲಿ 247 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಅಲ್ಲದೆ ನಮ್ಮ ಕಲ್ಲಿದ್ದಲು ಗಣಿಗಳನ್ನೆಲ್ಲ ಹರಾಜು ಹಾಕಿ ಖಾಸಗಿಯವರಿಗೆ ನೀಡಿ, ಸರ್ಕಾರ ಪರದೇಶಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ತೀರ್ಮಾನ ಮಾಡಿದೆ. ಟೆಲಿಕಾಂ ವಿಭಾಗವನ್ನು ವೀಕ್ಷಿಸಿದಾಗ ಅದು ತನಗೆ ಬೇಕಾದ ಯಾವ ಬಿಡಿ ಭಾಗವನ್ನು ತಯಾರಿಸಲಾಗುತ್ತಿಲ್ಲ. ರಿಲಾಯನ್ಸ್ ಮತ್ತು ಜಿಯೋ ಬಳಸುತ್ತಿರುವ 4ಜಿ ತರಂಗ ತಂತ್ರಜ್ಞಾನ ಸಾಧನೆಗಳನ್ನು ಸ್ಯಾಮ್‍ಸಂಗ್ ಪೂರೈಸುತ್ತದೆ.

ಪರದೇಶಗಳಿಂದ ಮೇಲೆ ಹೇಳಿದ ನಮ್ಮ ಅನುದಿನದ ಬಳಕೆಯ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿರುವಾಗ ಮೋದಿ ಅವರು ನಮ್ಮ ದೇಶದ ಉದ್ಯಮಗಳಿಗೆ, ನೀವು ಆತ್ಮನಿರ್ಭರರಾಗಿ ಎಂದು ಉಪದೇಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಇದೆ. ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ದೇಶದ ರಕ್ಷಣೆ. ಆದರೆ ದೇಶದ ರಕ್ಷಣೆ ವಿಚಾರಕ್ಕೆ ಬಂದರೆ ಸೈನ್ಯಕ್ಕೆ ಬೇಕಾದ ಬಹುಮಟ್ಟಿನ ಆಯುಧಗಳಿಗೆ ನಾವು ಪರದೇಶಗಳನ್ನೇ ಅವಲಂಬನೆ ಮಾಡಿದ್ದೇವೆ. ಪರಿಸ್ಥಿತಿ ಇಷ್ಟು ಬಿಗಡಾಯಿಸಿದ್ದರೂ ಮೋದಿಯವರು ಆತ್ಮನಿರ್ಭರತೆಯ ಮಾತನ್ನಾಡುತ್ತಾರೆ. ಮೋದಿಯವರ ಮಾತಿಗೂ ಕೃತಿಗೂ ಅಜಗಜಾಂತರ.

ಬರೀ Slogan ಗಳನ್ನು ಹಾಕುತ್ತಾ ಕಾರ್ಖಾನೆಗಳ ಮಾಲೀಕರಿಗೆ ನೀವು Self-sufficient ಆಗಿ ಎಂದು ಬೋಧಿಸುವ ಮೋದಿ ಅವರು ಜವಾಬ್ದಾರಿಯುತವಾದ ಪ್ರಧಾನಿ ಸ್ಥಾನಕ್ಕೆ ಅರ್ಹರೇ ಎಂದು ಕೇಳಬೇಕೆನಿಸುತ್ತದೆ. ಎಲ್ಲ ಉದ್ಯಮಗಳು ತನ್ನ ಎಲ್ಲ ಸಲಕರಣೆಗಳಿಗೂ ಅನ್ಯ ದೇಶವನ್ನು ಅವಲಂಬಿಸುವ ಸನ್ನಿವೇಶವನ್ನು ಸೃಷ್ಟಿಮಾಡಿ ನೀವು ಸ್ವಾವಲಂಬಿಗಳಾಗಿ ಎಂದು ಹೇಳುವುದು ಪ್ರಧಾನಿಗಳಿಗೆ ಭೂಷಣವಲ್ಲ. ಯಾವುದೇ ಉದ್ಯೋಗ ನಡೆಯಬೇಕಾದರೆ ಅದಕ್ಕಾಗಿ ಬಳಸುವ ಯಂತ್ರಗಳು, ಉಪಕರಣಗಳು ಬೇಕು. ಈ ಯಂತ್ರಗಳು ಮತ್ತು ಉಪಕರಣಗಳೇ ಭಾರತದಲ್ಲಿ ತಯಾರಾಗುತ್ತಿಲ್ಲವೆಂದ ಮೇಲೆ, ಸ್ವಾವಲಂಬಿಯಾಗುವುದು ಹೇಗೆ? ಯಂತ್ರ ತಯಾರಿಕೆ ಅಥವಾ ಅದರ ಬಿಡಿಭಾಗಗಳ ಉತ್ಪನ್ನ ಭಾರತದಲ್ಲೇ ಆಗಬೇಕಾದರೆ R & D ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಮೊದಲು ಸ್ಥಾಪಿಸಬೇಕು. ಈ ಸಂಶೋಧನಾ ಸಂಸ್ಥೆಗೆ ಸೂಕ್ತ ಜನ ಬೇಕು, ಅಪಾರ ಹಣ ಅದಕ್ಕೆ ಸುರಿಯಬೇಕು, ಭಾರತದಲ್ಲಿ ಅಂತಹ ಸಂಸ್ಥೆ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆ ಸಂಸ್ಥೆ ಇದ್ದು ಏಕೆ ನಾವು ಗುರುತರವಾದ ಉತ್ಪನ್ನಗಳನ್ನು ಸೃಷ್ಟಿ ಮಾಡುವುದರಲ್ಲಿ ಸೋತಿದ್ದೇವೆ ಎಂಬುದನ್ನು ಕುರಿತು ವಿಚಾರಣೆ ಮಾಡಬೇಕು.

ಭಾರತ ಜಿಡಿಪಿಯಲ್ಲಿ ಶೇ 0.7ರಷ್ಟು ಹಣವನ್ನು R & D ಮೇಲೆ ಖರ್ಚು ಮಾಡುತ್ತಿದೆ. ಆದರೆ ಇಸ್ರೇಲ್ ಜಿಡಿಪಿಯ ಶೇ 4.4, ಜರ್ಮನಿ ಶೇ 3, ಅಮೆರಿಕ ಶೇ 2.8, ಕೆನಡಾ ಶೇ 1.6 ಖರ್ಚು ಮಾಡುತ್ತಿವೆ.

ಭಾರತ ಉನ್ನತ ಶಿಕ್ಷಣಕ್ಕೆ ಬಜೆಟ್‍ನಲ್ಲಿ ನೀಡುವ ಹಣದ ಶೇ 3.8ರಷ್ಟನ್ನು ಮಾತ್ರ ಖ & ಆ ಗೆ ಬಳಸಲಾಗುತ್ತಿದೆ. ಚೈನಾದಲ್ಲಿ ಶೇ 7, ಅಮೆರಿಕದಲ್ಲಿ ಶೇ 13, ಜರ್ಮನಿಯಲ್ಲಿ ಶೇ 17, ಪ್ರಾನ್ಸ್‍ನಲ್ಲಿ ಶೇ 20, ಆಸ್ಟ್ರೇಲಿಯಾದಲ್ಲಿ ಶೇ 31 ಮತ್ತು ಕೆನಡಾದಲ್ಲಿ ಶೇ 41ರಷ್ಟು R & D ಮೇಲೆ ಬಳಸಲಾಗುತ್ತದೆ. ಯುವಕರಲ್ಲಿ ಸಂಶೋಧನೆಯ ಮನೋಭಾವವನ್ನು ಬೆಳೆಸಿ ಅವರಿಂದ ನಮ್ಮ ಮುಂದಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರೋತ್ಸಾಹ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಪ್ರಯೋಗಗಳನ್ನು ಮಾಡಲು ಅವಕಾಶ ಮಾಡಿಕೊಟ್ಟು, ಆ ಪ್ರಯೋಗಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವುದು ಅತ್ಯಗತ್ಯ. ಈ ಸಂಶೋಧನೆಗಳ ಮೂಲಕ ಆತ್ಮನಿರ್ಭರ ಭಾರತವನ್ನು ಸೃಷ್ಟಿಸುವುದು ಸಾಧ್ಯವಾದೀತು. ಈ ದಿಶೆಯಲ್ಲಿ ಮೋದಿ ಸರ್ಕಾರ ಆಲೋಚನೆ ಮಾಡಬೇಕು. ಅದು ಬಿಟ್ಟು ಉದ್ಯಮ ನಡೆಸುವವರನ್ನು ಮಾರ್ಗೋಪಾಯ ಹುಡುಕಿ ಎಂದು ಹೇಳುವುದು ಸಮಂಜಸವಲ್ಲ. ಉದ್ಯಮಿಗಳು ಏನಿದ್ದರೂ ಜಾಲ್ತಿಯಲ್ಲಿರುವ ತಂತ್ರಜ್ಞಾನವನ್ನು ಬಳಸುವವರೇ ಹೊರತು ಹೊಸ ತಂತ್ರಜ್ಞಾನವನ್ನು ಸೃಷ್ಠಿಸಲಾರರು. ಈ ವಿಚಾರದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗದಿದ್ದರೆ ಮೋದಿಯವರ ಈ ಸ್ಲೋಗನ್ ಕೂಡ ಅವರ ಇತರ ಸ್ಲೋಗನ್‍ನಂತೆಯೇ ಬರೀ ಕಂಠಘೋಷಣೆಯಾಗುತ್ತದೆ.

ಈ ಲೇಖನ ಓದಿದ ಮತದಾರರಿಗೆ ಏನನಿಸುತ್ತದೆ? ಭಾರತ ಸರ್ಕಾರ ಸಂಪೂರ್ಣವಾಗಿ ಪರದೇಶಗಳನ್ನೇ ಅವಲಂಬಿಸಿ ಕೂತಿರುವಾಗ ಮೋದಿಯವರು ಸ್ವಾವಲಂಬನೆ ಉಪದೇಶವನ್ನು ನಮ್ಮ ಕೈಗಾರಿಕೆಗಳಿಗೆ ಹೇಳಿ ಜನಸಾಮಾನ್ಯರಿಗೆ ಪ್ರಚಾರ ಮಾಡಲು ಹೊರಟಿರುವುದು ಅವರ ಆಷಾಢಭೂತಿತನವನ್ನು ತೋರುವುದಿಲ್ಲವೇ? ಆಡುವುದೊಂದು ಮಾಡುವುದೊಂದು ಸರ್ಕಾರಕ್ಕೆ ಭೂಷಣವೇ? ಮೊದಲು ಮೋದಿಯವರು ಉಳಿದಿರುವ ಅಧಿಕಾರಾವಧಿಯೊಳಗೆ ಯಂತ್ರಗಳನ್ನೂ, ಅದರ ಬಿಡಿಭಾಗಗಳನ್ನೂ ಭಾರತದಲ್ಲಿ ತಯಾರಿಸಲು ಎಲ್ಲ ಪ್ರಯತ್ನಿಸುತ್ತೇವೆ ಎಂದು ಘೋಷಣೆ ಮಾಡಿ ಎಂದು ಮತದಾರರೆಲ್ಲ ಒಕ್ಕೊರಲಿನಿಂದ ಕೂಗು ಹಾಕಿ. ಈ ಜವಾಬ್ದಾರಿಯನ್ನು ಮೋದಿ ಸರ್ಕಾರ ನಿರ್ವಹಿಸುವಲ್ಲಿ ವಿಫಲವಾದರೆ ನಮ್ಮ ಮತ ಭಾಜಪಗಿಲ್ಲ ಎಂದು ಘೋಷಣೆ ಮಾಡಿ.


ಇದನ್ನು ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here