ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಲಾಕ್‌ಡೌನ್ ಇರುವ ಕಾರಣಕ್ಕೆ ಮದ್ಯಕ್ಕೆ ಬದಲಾಗಿ ಸ್ಯಾನಿಟೈಸರ್ ಸೇವಿಸಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಜನರು ನೀರು ಮತ್ತು ತಂಪು ಪಾನೀಯಗಳೊಂದಿಗೆ ಸ್ಯಾನಿಟೈಸರ್ ಬೆರೆಸಿ ಸೇವಿಸುತ್ತಿದ್ದಾರೆ ಎಂದು ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.
ಸ್ಯಾನಿಟೈಸರ್ ಅನ್ನು ಬೇರೆ ಯಾವುದೇ ವಿಷಕಾರಿ ಪದಾರ್ಥಗಳೊಂದಿಗೆ ಬೆರೆಸಲಾಗಿದೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಳೆದ ಹತ್ತು ದಿನಗಳಿಂದ ಈ ಜನರು ಸ್ಯಾನಿಟೈಸರ್ ಸೇವಿಸುತ್ತಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ಪ್ರಕಾಶಂ ಜಿಲ್ಲೆಯ ಕುರಿಚೆಡು ಲಾಕ್ ಡೌನ್ ಆಗಿದೆ. ಆದ್ದರಿಂದ ಕಳೆದ ಕೆಲವು ದಿನಗಳಿಂದ ಮದ್ಯದಂಗಡಿಗಳನ್ನು ಸಹ ಮುಚ್ಚಲಾಗಿದೆ. ಇದರಿಂದ ಮದ್ಯ ಸಿಗದ ಕಾರಣ ಕೆಲ ಜನರು ಆಲ್ಕೋಹಾಲಿಕ್ ಸ್ಯಾನಿಟೈಸರ್ ಮೊರೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿಕ್ಷುಕರು, ರಿಕ್ಷಾ ಚಾಲಕರು ಮತ್ತು ಹಮಾಲಿಗಳು ಸಾವನಪ್ಪಿರುವವರಾಗಿದ್ದಾರೆ. ದೇವಾಲಯದ ಬಳಿ ಇಬ್ಬರು ಭಿಕ್ಷುಕರು ಗುರುವಾರ ರಾತ್ರಿ ಮೊದಲು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಒಬ್ಬರು ಸ್ಥಳದಲ್ಲಿಯೇ ಶವವಾಗಿ ಪತ್ತೆಯಾಗಿದ್ದರೆ, ಇನ್ನೊಬ್ಬರು ದರ್ಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಪ್ರಜ್ಞೆ ತಪ್ಪಿದ ನಂತರ ಮೂರನೇ ವ್ಯಕ್ತಿಯನ್ನು ಗುರುವಾರ ತಡರಾತ್ರಿ ದರ್ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಗಲೇ ಸತ್ತಿದ್ದಾರೆ ಎಂದು ಘೋಷಿಸಲಾಯಿತು.
ಸ್ಯಾನಿಟೈಸರ್ ಸೇವಿಸಿದ ಆರೋಪದ ಮೇಲೆ ಅನಾರೋಗ್ಯಕ್ಕೆ ಒಳಗಾದ ಇತರ ಆರು ಮಂದಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಸ್ಯಾನಿಟೈಸರ್ ಸೇವಿಸಿದ ನಂತರ ಅನಾರೋಗ್ಯಕ್ಕೆ ಒಳಗಾದ ಇತರರು ಗ್ರಾಮದ ತಮ್ಮ ನಿವಾಸಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಜೀವಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ವಿಲೀನ ಮಾಡಿದ್ರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ


