ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳೊಂದಿಗೆ ಆಗಸ್ಟ್ 10 ರಿಂದ 2020-2021ರ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವುದಾಗಿ ದೆಹಲಿ ವಿಶ್ವವಿದ್ಯಾಲಯ ತಿಳಿಸಿದೆ. ಆಗಸ್ಟ್ 9 ರವರೆಗೆ ವಿಶ್ವವಿದ್ಯಾಲಯವು ಬೇಸಿಗೆ ರಜೆಯನ್ನು ಘೋಷಿಸಿತ್ತು.
ಗುರುವಾರ ಹೊರಡಿಸಿದ ಅಧಿಸೂಚನೆಯಲ್ಲಿ “ಯುಜಿ ಕೋರ್ಸ್‌ಗಳ III, V ಮತ್ತು VIIನೇ ಸೆಮಿಸ್ಟರ್ ಮತ್ತು ಪಿಜಿ ಕೋರ್ಸ್‌ಗಳ III ನೇ ಸೆಮಿಸ್ಟರ್‌ಗೆ ಆನ್‌ಲೈನ್ ತರಗತಿಗಳು ಪ್ರಾರಂಭವಾಗುವುದರೊಂದಿಗೆ ಆಗಸ್ಟ್ 10 ರಿಂದ ವಿಶ್ವವಿದ್ಯಾಲಯದ ಅಕಾಡೆಮಿಕ್ ಸೆಷನ್ 2020-2021 ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿರೋಧದ ಮಧ್ಯೆ ದೆಹಲಿ ವಿಶ್ವವಿದ್ಯಾಲಯವು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಗಸ್ಟ್ 10 ರಿಂದ ಆನ್‌ಲೈನ್ ಮುಕ್ತ ಪುಸ್ತಕ ಪರೀಕ್ಷೆಗಳನ್ನು ನಡೆಸಲಿದೆ.
ಹಿಂದಿನ ಸಾಧನೆ ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಬಡ್ತಿ ನೀಡಬೇಕು ಮತ್ತು ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಸುಪ್ರೀಂನಲ್ಲಿ ಅರ್ಜಿ ಸಹ ದಾಖಲಾಗಿದ್ದು, ಕೋರ್ಟ್ ವಿಚಾರಣೆ ನಡೆಸುತ್ತಿದೆ.
ವಿಶ್ವವಿದ್ಯಾನಿಲಯವು ತಮ್ಮ ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್‌ನಲ್ಲಿನ ಸಾಧನೆಯ ಆಧಾರದ ಮೇಲೆ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಶ್ರೇಣೀಕರಿಸಿದೆ.
ಇದನ್ನೂ ಓದಿ: ವಿಷಕಾರಿ ಮದ್ಯ ಸೇವಿಸಿ ಪಂಜಾಬ್‌ನಲ್ಲಿ 21 ಮಂದಿ ಸಾವು; ತನಿಖೆಗೆ ಆದೇಶ


