ಕಳೆದ ತಿಂಗಳಷ್ಟೇ ಭಾರತದಲ್ಲಿ ನಿಷೇಧಕ್ಕೊಳಗಾದ ಟಿಕ್ ಟಾಕ್ ಆಪ್ ಅನ್ನು ಅಮೇರಿಕದಲ್ಲಿಯೂ ಬ್ಯಾನ್ ಮಾಡುವುದಾಗಿ ಅಲ್ಲಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಸೇವೆಯು ಚೀನಾದ ಗುಪ್ತಚರ ಸಾಧನವಾಗಿರಬಹುದೆಂದು ಅಮೆರಿಕದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರಿಂದ ಡೊನಾಲ್ಡ್ ಟ್ರಂಪ್ ಟಿಕ್‌ಟಾಕ್ ಅನ್ನು ನಿರ್ಬಂಧಿಸುವುದಾಗಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕಾ ಅಧಿಕಾರಿಗಳು ಚೀನಾದ ವಿರುದ್ಧ ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರ ಭಾಗವಾಗಿ ಇ ಆಪ್ ನಿಷೇಧಿಸುವ ಪ್ರಸ್ತಾಪ ಬಂದಿದೆ. ಆದರೆ ಟಿಕ್ ಟಾಕ್ ಚೀನಾದೊಂದಿಗಿನ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಘೋಷಿಸಿದೆ.
ಇಡೀ ಟಿಕ್ ಟಾಕ್ ಕಂಪನಿಯನ್ನೇ ಅಮೆರಿಕ ಕೊಂಡುಕೊಳ್ಳುವುದಾಗಿ ಸುದ್ದಿ ಹರಿದಾಡುತ್ತಿದ್ದವು. ಆ್ಯಪ್‌ನ ಯುಎಸ್ ಕಾರ್ಯಾಚರಣೆಯನ್ನು ತನ್ನ ಚೀನಾದ ಮೂಲ ಸಂಸ್ಥೆ ಬೈಟ್‌ಡಾನ್ಸ್‌ನಿಂದ ಟ್ರಂಪ್‌ಗೆ ನೀಡಲಾಗುವುದು ಎಂದು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಟ್ರಂಪ್ ನಿಷೇಧವನ್ನು ಘೋಷಿಸಿದ್ದಾರೆ.
ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಟಿಕ್‌ಟಾಕ್‌ಗೆ ಸಂಬಂಧಿಸಿದಂತೆ, ನಾವು ಅವರನ್ನು ಅಮೆರಿಕದಿಂದ ನಿಷೇಧಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಅಮೆರಿಕದ ವಿದೇಶಿ ಹೂಡಿಕೆ ಸಮಿತಿ (ಸಿಎಫ್‌ಐಯುಎಸ್) ಅಮೆರಿಕದ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ ನಂತರ ಟ್ರಂಪ್ ಅವರ ಈ ಘೋಷಣೆ ಮಾಡಿದ್ದಾರೆ.
ವಿಶ್ವಾದ್ಯಂತ ನೂರು ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಟಿಕ್ ಟಾಕ್ ಯುವಜನರಲ್ಲಿ ಹೆಚ್ಚು ಜನಪ್ರಿಯ ಆಪ್ ಆಗಿದೆ. ಸಾಮಾನ್ಯ ಜನರು ಸುಲಭವಾಗಿ ಬಳಸಬಹುದಾಗಿದ್ದ ಈ ಆಪ್ ಸಣ್ಣ ಸಣ್ಣ ವಿಡಿಯೋಗಳಿಗೆ ಪ್ರಸಿದ್ದಿಯಾಗಿತ್ತು.
ಭಾರತ ಮತ್ತು ಚೀನಾ ನಡುವೆ ಸಂಘರ್ಷ ಆರಂಭವಾದಾಗಿನಿಂದ ಕಳೆದ ತಿಂಗಳು ಭಾರತವು ಈ ಆಪ್ ಅನ್ನು ನಿಷೇಧಿಸಿದೆ. “ಟಿಕ್‌ಟಾಕ್‌ನ ದೀರ್ಘಕಾಲೀನ ಯಶಸ್ಸಿನ ಬಗ್ಗೆ ನಮಗೆ ವಿಶ್ವಾಸವಿದೆ” ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.
“ನಾವು ರಾಜಕೀಯ ಮಾಡುವುದಿಲ್ಲ, ನಾವು ರಾಜಕೀಯ ಜಾಹೀರಾತನ್ನು ಸ್ವೀಕರಿಸುವುದಿಲ್ಲ ಮತ್ತು ಯಾವುದೇ ಕಾರ್ಯಸೂಚಿಯನ್ನು ಹೊಂದಿಲ್ಲ. ಪ್ರತಿಯೊಬ್ಬರೂ ಆನಂದಿಸಲು ರೋಮಾಂಚಕ, ಕ್ರಿಯಾತ್ಮಕ ವೇದಿಕೆಯಾಗಿ ಉಳಿಯುವುದು ನಮ್ಮ ಏಕೈಕ ಉದ್ದೇಶ” ಎಂದು ಟಿಕ್‌ಟಾಕ್ ಸಿಇಒ ಕೆವಿನ್ ಮೇಯರ್ ತಿಳಿಸಿದ್ದಾರೆ.
2017 ರಲ್ಲಿ ಬೈಟ್‌ಡ್ಯಾನ್ಸ್ ಯುಎಸ್ ಮೂಲದ ಅಪ್ಲಿಕೇಶನ್ ಮ್ಯೂಸಿಕಲ್.ಲೈ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಅದನ್ನು ತನ್ನದೇ ಆದ ವೀಡಿಯೊ ಸೇವೆಯೊಂದಿಗೆ ವಿಲೀನಗೊಳಿಸಿದ ನಂತರ ವೇದಿಕೆಯ ಜನಪ್ರಿಯತೆ ಹೆಚ್ಚಾಯಿತು.
ಇದನ್ನೂ ಓದಿ: ಅಮೇರಿಕಾದ ಹೂಡಿಕೆದಾರರಿಗೆ ತನ್ನ ಪಾಲನ್ನು ಮಾರಾಟ ಮಾಡಲಿದೆಯೆ ಟಿಕ್‌ಟಾಕ್?


