2020ನೇ ಸಾಲಿನ ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ ಪ್ರೇಮ್ ಭಾಟಿಯಾ ಪ್ರಶಸ್ತಿಯು ಪಿ ಸಾಯಿನಾಥ್‌ರವರ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಮತ್ತು ಪತ್ರಕರ್ತ ದೀಪಂಕರ್ ಘೋಷ್ ಅವರಿಗೆ ಸಂದಿದೆ.
COVID-19 ಸಾಂಕ್ರಾಮಿಕ ಮತ್ತು ಸಂಬಂಧಿತ ವಿಷಯಗಳ ಪ್ರಸಾರಕ್ಕಾಗಿ ಘೋಷ್ ಮತ್ತು PARI ತಂಡವನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರೇಮ್ ಭಾಟಿಯಾ ಮೆಮೋರಿಯಲ್ ಟ್ರಸ್ಟ್‌ನ ಪತ್ರಿಕಾ ಹೇಳಿಕೆ ತಿಳಿಸಿದೆ.
PARI ತಂಡವು “ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಗ್ರಾಮೀಣ ಭಾರತದ ಮೇಲೆ ಸಾಂಕ್ರಾಮಿಕದ ಪ್ರಭಾವ ಸೇರಿದಂತೆ ಅವರ ವ್ಯಾಪಕ ಕ್ಷೇತ್ರ ವರದಿಗಳಿಗಾಗಿ” ಪ್ರಶಸ್ತಿಯನ್ನು ಸ್ವೀಕರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದುವರೆಗೂ ಪ್ರಶಸ್ತಿಯನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ನೀಡಲಾಗುತ್ತಿತ್ತು. ಆದರೆ ಈ ಭಾರಿ ಆ ಸಂಪ್ರದಾಯವನ್ನು ಮುರಿದಿದ್ದು “PARI ಒಟ್ಟಾರೆ ಕ್ಷೇತ್ರ ವರದಿಗಾರರು, ಸ್ವಯಂಸೇವಕರು ಮತ್ತು ಅದರ ಸಮರ್ಪಿತ ತಂಡಕ್ಕಾಗಿ” ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರೇಮ್ ಭಾಟಿಯಾ ಟ್ರಸ್ಟ್ ಹೇಳಿದೆ.

ವಲಸೆ ಕಾರ್ಮಿಕರ ಬಗ್ಗೆ, ಸೂಕ್ಷ್ಮವಾಗಿ ಹೆಣೆದುಕೊಂಡಿರುವ ಗ್ರಾಮೀಣ ಭಾರತದ ಆರ್ಥಿಕತೆಯ ಮೇಲೆ, ರೈತರು, ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಕಾರ್ಮಿಕರು, ಕಬ್ಬು ಕತ್ತರಿಸುವವರು, ನೇಕಾರರು, ಆಟಿಕೆ ತಯಾರಕರು, ಇತರ ಕುಶಲಕರ್ಮಿಗಳು, ನೈರ್ಮಲ್ಯ ಕಾರ್ಮಿಕರು, ಸ್ಥಳಾಂತರಗೊಂಡ ಕಾರ್ಮಿಕರು, ಮುಂಬಯಿಯ ಪ್ರಮುಖ ಆಸ್ಪತ್ರೆಗಳ ಹೊರಗಿನ ಫುಟ್‌ಪಾತ್‌ಗಳಲ್ಲಿ ಕಾಯುತ್ತಿರುವ ಗ್ರಾಮೀಣ ಪ್ರದೇಶದ ಕ್ಯಾನ್ಸರ್ ರೋಗಿಗಳು, ಅಲೆಮಾರಿ ಪಾದ್ರಿಗಳು, ದೈನಂದಿನ ಬಾಜಿ ಕಟ್ಟುವವರು, ಜಾನಪದ ಕಲಾವಿದರು, ಮೀನುಗಾರರು, ಕ್ಷೌರಿಕರು, ಇಟ್ಟಿಗೆ ಗೂಡು ಕಾರ್ಮಿಕರು, ಹಾರ್ಮೋನಿಯಂ ರಿಪೇರಿ ಮಾಡುವವರು, ದಲಿತರು ಮತ್ತು ಆದಿವಾಸಿಗಳು… ಹೀಗೆ ವಿವಿಧ ಉದ್ಯೋಗಿಗಳ ಬಗ್ಗೆ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುತ್ತಾಡಿ ನೂರಾರು ವರದಿಗಳು ಮತ್ತು ವಿಡಿಯೋ ದಾಖಲೆಗಳನ್ನು ಪರಿ ಕಲೆಹಾಕಿದೆ ಎಂದು ಪರಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರು 2014 ರಲ್ಲಿ ಸ್ಥಾಪಿಸಿದ ವೆಬ್‌ಸೈಟ್ ‘ಪರಿ’ ವರದಿಗಾರಿಕೆಯ ಮೂಲಕ ಗ್ರಾಮೀಣ ಭಾರತದ ಕುರಿತಾದ ದಾಖಲಾತಿಗಳ ಸಂಗ್ರಹವಾಗಿದೆ. “ಪಾರಿ ಜೀವಂತ ಜರ್ನಲ್ ಮತ್ತು ಆರ್ಕೈವ್ ಆಗಿದೆ. ಇದು ಪ್ರಸ್ತುತ ಗ್ರಾಮೀಣ ಭಾರತದ ಮೂಲೆಗೆ ತಳ್ಳಲ್ಪಟ್ಟ ವರದಿಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತದೆ. ಈಗಾಗಲೇ ಪ್ರಕಟವಾದ ಕಥೆಗಳು, ವರದಿಗಳು, ವೀಡಿಯೊಗಳು ಮತ್ತು ಆಡಿಯೊಗಳ ಡೇಟಾಬೇಸ್ ಅನ್ನು ಸಾಧ್ಯವಾದಷ್ಟು ಮೂಲಗಳಿಂದ ಸಂಗ್ರಹಿಸಲಾಗಿದೆ. PARIಯ ಒಂದು ಕುತೂಹಲಕಾರಿ ಅಂಶವೆಂದರೆ, ಜನರ ದೈನಂದಿನ ಜೀವನದ ಬಗ್ಗೆ ಬರೆಯುತ್ತಿರುವ ಮತ್ತು ನಮ್ಮ ಯೋಜನೆಯ ಮಾನದಂಡಗಳನ್ನು ಪೂರೈಸುವ, ಯೋಜನೆಯ ಆದೇಶವನ್ನು ಅನುಸರಿಸಲು ಸಿದ್ಧರಿರುವ ಯಾರಾದರೂ ವೆಬ್‌ಸೈಟ್‌ಗೆ ಕೊಡುಗೆ ನೀಡಬಹುದು. ಇಲ್ಲಿರುವ ಎಲ್ಲವನ್ನು ಉಚಿತವಾಗಿ ಓದಬಹುದು” ಎಂದು ಪಿ ಸಾಯಿನಾಥ್ ಹೇಳುತ್ತಾರೆ.
ಮತ್ತೊರ್ವ ಪರ್ತಕರ್ತ, ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಜಕೀಯ ವಿಭಾಗದ ಮುಖ್ಯಸ್ಥ ದೀಪಂಕರ್ ಘೋಷ್ ಅವರಿಗೂ ಸಹ ಪ್ರೇಮ್ ಭಾಟಿಯಾ ಪ್ರಶಸ್ತಿ ನೀಡಲಾಗಿದೆ.

ಪ್ರಖ್ಯಾತ ಪತ್ರಕರ್ತ ಪ್ರೇಮ್ ಭಾಟಿಯಾ (1911-1995) ಅವರ ನೆನಪಿಗಾಗಿ 1995 ರಲ್ಲಿ ಪ್ರೇಮ್ ಭಾಟಿಯಾ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ವಸ್ತುನಿಷ್ಠ ವರದಿಗಾರಿಕೆ, ಸತ್ಯದ ನಿರ್ಭೀತ ಅನ್ವೇಷಣೆ ಮತ್ತು ಭಾರತದಲ್ಲಿ ಪತ್ರಿಕೋದ್ಯಮದ ಗುಣಮಟ್ಟವನ್ನು ಸುಧಾರಿಸುವ ಬದ್ಧತೆಯ ಮೌಲ್ಯಗಳನ್ನು ಪ್ರಚುರ ಪಡಿಸುವುದು ಅದರ ಉದ್ದೇಶವಾಗಿದೆ.
ಇದನ್ನೂ ಓದಿ: ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಗೌರವ ಡಾಕ್ಟರೇಟ್


