– ಗೌರಿ ಲಂಕೇಶ್
ಆಗಸ್ಟ್ 10, 2005 (`ಕಂಡಹಾಗೆ’ ಸಂಪಾದಕೀಯದಿಂದ) |
ಪತ್ರಕರ್ತೆಯಾಗಿ ನನ್ನ 22 ವರ್ಷದ ಅನುಭವದಲ್ಲಿ ಪತ್ರಿಕೋದ್ಯಮ ಹೊಸ ಆಯಾಮಗಳನ್ನು ಪಡೆಯುತ್ತಿರುವುದನ್ನು ಕಂಡಿದ್ದೇನೆ. ಇಂದು ನನ್ನ ಸಹೋದ್ಯೋಗಿ ಮಿತ್ರರು ಮುಂಬೈ, ದೆಹಲಿ, ಅಮೆರಿಕಾ, ಇಂಗ್ಲೆಂಡ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಿಂಗಳಿಗೆ ಮೂರು ಲಕ್ಷ ರೂಪಾಯಿ ಪಡೆಯುತ್ತಿದ್ದರೆ, ಮುಂಬೈ ಮತ್ತು ದೆಹಲಿಯಲ್ಲಿರುವವರು ಐವತ್ತು ಸಾವಿರದಷ್ಟು ಸಂಬಳ ಪಡೆಯುತ್ತಿದ್ದಾರೆ.
ಪತ್ರಿಕಾ ವೃತ್ತಿ ಎಂಬುದು ಪತ್ರಿಕೋದ್ಯಮವಾಗಿ ಪರಿವರ್ತನೆಗೊಂಡಿರುವುದರ ಪರಿಣಾಮ ಇದು. ಇವತ್ತು ದೊಡ್ಡ ಉದ್ಯಮಪತಿಗಳು, ಶ್ರೀಮಂತ ರಾಜಕಾರಣಿಗಳು ಪತ್ರಿಕಾ ಮಾಲಿಕರಾಗಿದ್ದಾರೆ. ಇದರಿಂದಾಗಿ ಬಹುತೇಕ ಎಲ್ಲಾ ಪತ್ರಿಕೆಗಳೂ ಕಾಪೆರ್ರೇಟ್ ಮತ್ತು ರಾಜಕಾರಣಿಗಳ ಹಂಗಿನಲ್ಲಿರುತ್ತವೆ. ಅಂತಹವರಿಂದ ಸಮಾಜಿಕ ಬದ್ಧತೆ, ಜನಪರ ಕಾಳಜಿಗಳನ್ನು ನಿರೀಕ್ಷಿಸುವುದು ಅಸಾಧ್ಯ. ಇದಕ್ಕೆ ಒಂದು ಉದಾಹರಣೆ ಕೊಡಬಹುದು. ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ಸುತ್ತಮುತ್ತ ಅರ್ಕಾವತಿ, ದಕ್ಷಿಣ ಪಿನಾಕಿನಿ ನದಿಗಳಿವೆ. ಇವುಗಳ ಅಂತರ್ಜಲ ಬತ್ತಿ ಹೋಗುತ್ತಿರುವಾಗಲೇ ಖಾಸಗಿ ಕಾರ್ಖಾನೆಗಳು ತಮ್ಮtoxic wasteಗಳನ್ನು ಈ ನದಿಗಳಿಗೇ ಹರಿಸಿ ಜಲಮಾಲಿನ್ಯ ಮಾಡುತ್ತಿವೆ. ಇದರ ವಿರುದ್ಧ ಹೋರಾಟ ಪ್ರಾರಂಭಿಸಿರುವ ವಕೀಲ ಜಯರಾಂ ಮತ್ತು ಸ್ನೇಹಿತರು ಪತ್ರಕರ್ತರನ್ನು ಕರೆದು ಕೊಂಡು ಪೆಪ್ಸಿಯ ಘಟಕವೊಂದು ಹೀಗೆ ಜಲಮಾಲಿನ್ಯ ಮಾಡುತ್ತಿರುವುದನ್ನು ತೋರಿಸಿ ದರು. ಆದರೆ ಅದು ಯಾವ ಪತ್ರಿಕೆಗಳಲ್ಲೂ ಪ್ರಕಟವಾಗಲಿಲ್ಲ. ಇದಕ್ಕೆ ಕಾರಣವೇನೆಂದು ಜಯರಾಂರವರು ವಿಚಾರಿಸಿದಾಗ ಪತ್ರಿಕೆಯ ಮಾಲೀಕರು ಪೆಪ್ಸಿಯ ಜಾಹೀರಾತುಗಳು ಸಿಗುವುದಿಲ್ಲವೆಂದು ಹೆದರಿ ಅದನ್ನು ಪ್ರಕಟಿಸದಿರಲು ನಿರ್ಧರಿಸಿದ್ದು ಗೊತ್ತಾಯಿತು. ಅಂದರೆ ಪತ್ರಿಕಾ ಮಾಲೀಕರಿಗೆ ಪೆಪ್ಸಿಯ ಹಣ ಬೇಕೆ ಹೊರತು ಬೆಂಗಳೂರಿಗೆ ಶೇ. 30ರಷ್ಟು ಕುಡಿಯುವ ನೀರನ್ನು ನೀಡುತ್ತಿರುವ ನದಿಗಳ ಸ್ವಚ್ಛತೆ ಅಲ್ಲ!
ಇತ್ತೀಚೆಗೆ ಎಲ್ಲ ಪತ್ರಿಕೆಗಳಲ್ಲಿ ವಾಚಕರು “ಪ್ರತಿಭಟನೆಗಳಿಂದಾಗಿ ಸಾರ್ವಜನಿಕರಾದ ನಮಗೆ ಅನಾನುಕೂಲವಾಗುತ್ತಿದೆ” ಎಂದು ಬರೆದಿರುವ ಪತ್ರಗಳನ್ನೇ ಗಮನಿಸಿ. ಈ ವಾಚಕರಿಗೆ ಬೀದಿಗೆ ಬಿದ್ದು ಪ್ರತಿಭಟಿಸುತ್ತಿರುವವರೂ ಸಾರ್ವಜನಿಕರು ಎಂದು ಯಾಕೆ ಅರ್ಥವಾಗುತ್ತಿಲ್ಲ; ಅಥವಾ ಪತ್ರಿಕೆಗಳು ಯಾಕೆ ಅರ್ಥ ಮಾಡಿಕೊಡುತ್ತಿಲ್ಲ. ಇವತ್ತು ಅಂದರೆ ಭಾನುವಾರದ ಪತ್ರಿಕೆಗಳು ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಕಾರ್ಮಿಕರಿಂದ ನಡೆದ ರ್ಯಾಲಿಯಿಂದಾಗಿ ಎಲ್ಲೆಡೆ ಸಂಚಾರ ಅಸ್ತವ್ಯಸ್ಥ ಗೊಂಡಿತು ಎಂದೇ ವರದಿ ಮಾಡಿವೆ. ಆದರೆ ಅದೇ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಕಾರ್ಮಿಕರ ಶೋಷಣೆ ಬಗ್ಗೆ ಮಾತ್ರ ಯಾರೂ ಬರೆದಿಲ್ಲ.


