ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ಬಹಳಷ್ಟು ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿಯೂ ಕೂಡ ನೂರಾರು ಖಾಸಗಿ ಶಾಲೆಗಳು ಶಾಲಾ ಶುಲ್ಕ ಹೆಚ್ಚಿಸಿ ಈಗಲೇ ಕಟ್ಟುವಂತೆ ಒತ್ತಾಯಿಸುತ್ತಿರುವ ಹಲವು ವರದಿಗಳು ಬರುತ್ತಿವೆ. ಸರ್ಕಾರ ಒತ್ತಾಯ ಮಾಡಬೇಡಿ ಎಂದರೂ ಕೇಳದ ಹತ್ತಾರು ಖಾಸಗಿ ಶಾಲೆಗಳನ್ನು ನೋಡಿದ್ದೇವೆ. ಅವುಗಳೆಲ್ಲದರ ನಡುವೆ ಈ ಬೆಂಗಳೂರಿನ ಶಾಲೆಯೊಂದು ವಿಭಿನ್ನವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದಿ ಫ್ರೀಥಿಂಕಿಂಗ್ ಶಾಲೆಯು ತಮ್ಮ ಶಾಲೆಯ ಮಕ್ಕಳ ಪೋಷಕರಿಗೆ Freedom from Fees (ಶುಲ್ಕದಿಂದ ಸ್ವಾತಂತ್ರ್ಯ) ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂತೆ ಪೋಷಕರು ಯಾವಾಗ ಸಾಧ್ಯವೋ ಆಗ, ಎಷ್ಟು ಸಾಧ್ಯವೋ ಅಷ್ಟು ಶುಲ್ಕ ಕಟ್ಟಿ ಎಂದು ಹೇಳುವ ಮೂಲಕ ಗಮನ ಸೆಳೆದಿದೆ.
ಮಾಂಟೆಸ್ಸರಿ ಶಿಕ್ಷಣ ವಿಧಾನವನ್ನು ಅನುಸರಿಸುತ್ತಿರುವ ಈ ಶಾಲೆಯು ಪೋಷಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಶಾಲಾ ಶುಲ್ಕ ಕಟ್ಟಲು ಕೇಳಿಕೊಂಡಿದೆ. ಅದು ಅಲ್ಲದೇ ತಮಗೆ ಅನುಕೂಲವಾದಾಗ ಶುಲ್ಕ ಕಟ್ಟಿ ಎಂದಿದೆ. ಇದು ಆರಂಭಿಕ ತರಗತಿಗಳಿಗೆ ಅನ್ವಯವಾಗಲಿದ್ದು, ಮಾಸಿಕ ಚಂದಾದಾರಿಕೆಯಿಂದ ಕೂಡಿದ್ದು, 2021ರ ಮಾರ್ಚ್‌ವರೆಗೂ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ ಎಂದು ಶಾಲೆಯ ವೆಬ್‌ಸೈಟ್ ತಿಳಿಸಿದೆ.
ನಿಮ್ಮ ಮನೆಯಲ್ಲಿ ಕೆಲಸ ಮಾಡುವ ಚಾಲಕರು, ಸಹಾಯಕ ಸಿಬ್ಬಂದಿ ಸೇರಿದಂತೆ ಇತರರು ಸಹ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಬಹುದು. ಅವರಿಗೆ ಶಿಕ್ಷಣ ಬೇಕು ಅನ್ನಿಸಿದ್ದಲ್ಲಿ ಇಲ್ಲಿ ಸೇರಿಸಿ ಎಂದು ಶಾಲೆ ಕೇಳಿಕೊಂಡಿದೆ.
“ಸೌಹಾರ್ದತೆ ಮತ್ತು ಸ್ವಾತಂತ್ರ್ಯದ ಸ್ಫೂರ್ತಿಯಲ್ಲಿ ಈ ಕಾರ್ಯಕ್ರಮವನ್ನು ಕೋವಿಡ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ ಕಾರ್ಮಿಕರು, ದಾದಿಯರು ಮತ್ತು ಇತರ ಕೋವಿಡ್ ಯೋಧರಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಮಾಂಟೆಸ್ಸರಿಯನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವುದು ನನ್ನ ಕನಸಾಗಿದೆ. ಗುಣಮಟ್ಟದ ಶಿಕ್ಷಣವು ಎಲ್ಲರಿಗೂ ಕೈಗೆಟುವಂತಾಗಬೇಕು ಎಂಬುದು ನನ್ನ ಗುರಿಯಾಗಿದೆ, ಅದನ್ನು ಸಾಧಿಸಲು ಈ ಕಾರ್ಯಕ್ರಮ ಸಹಾಯಕವಾಗಲಿದೆ” ಎಂದು ದಿ ಫ್ರೀಥಿಂಕಿಂಗ್ ಶಾಲೆಯ ನಿರ್ದೇಶಕಿ ಸ್ಯಾಂಡಿ ಫಿಲಿಪ್ಸ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ಶಾಲಾ ವೆಬ್‌ಸೈಟ್‌ನಲ್ಲಿ ತಿಳಿಯಿರಿ.
ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ಶಾಲಾ ಶುಲ್ಕ ಪಾವತಿಗೆ ಕಾಲಾವಕಾಶ ಕೋರಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ


