ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಲು ಬಿಹಾರ ಸರ್ಕಾರ ಶಿಫಾರಸು ಮಾಡಿದೆ ಎಂದು ಆಡಳಿತ ಪಕ್ಷ ಜೆಡಿಯು ವಕ್ತಾರರಾದ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆ ಕೋರಿ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಸರ್ಕಾರದ ನಿರ್ಧಾರ ಹೊರಬಿದ್ದಿದೆ. ಪ್ರಕರಣದ ಕುರಿತು ಬಾಂಬೆ ಹೈಕೋರ್ಟ್ ಇಮದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ನಡೆಸಲಿದೆ.
ಈ ಹಿಂದೆ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖಂಡ ಚಿರಾಗ್ ಪಾಸ್ವಾನ್ ಕೂಡ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸಿಎಂಗೆ ಮನವಿ ಮಾಡಿದ್ದರು.
ತನ್ನ ಮಗನ ಪ್ರಾಣಕ್ಕೆ ಅಪಾಯವಿದೆ ಎಂದು ಆರೋಪಿಸಿ ಫೆಬ್ರವರಿಯಲ್ಲಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾಗಿ ಸುಶಾಂತ್ ತಂದೆ ಸೋಮವಾರ ಹೇಳಿದ್ದಾರೆ. ತನ್ನ ಮಗನ ಹಠಾತ್ ಮರಣದ 40 ದಿನಗಳ ನಂತರವೂ ಮುಂಬೈ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಮಗನ ಸಾವಿನ ಪ್ರಕರಣದ ಆರೋಪಿಗಳು ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಹಾಗಾಗಿ ಅವರನ್ನು ಶಿಕ್ಷಿಸಲು ಮುಂಬೈ ಪೊಲೀಸರು ಪಾಟ್ನಾ ಪೊಲೀಸರಿಗೆ ಸಹಾಯ ನೀಡಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.
ಐಪಿಸಿಯ ಹಲವಾರು ವಿಭಾಗಗಳ ಅಡಿಯಲ್ಲಿ ನಟ ರಿಯಾ ಚಕ್ರವರ್ತಿ ವಿರುದ್ಧ ಸಿಂಗ್ ನೀಡಿದ ದೂರಿನ ಮೇರೆಗೆ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಹಾರ ಪೊಲೀಸರು ತನಿಖೆ ಆರಂಭಿಸಿ ತಂಡವನ್ನು ಮುಂಬೈಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿಯನ್ನು ಪತ್ತೆ ಮಾಡಲಾಗುತ್ತಿಲ್ಲವೆಂದ ಬಿಹಾರ ಪೊಲೀಸರು!


