ಗುಜರಾತ್ ಮತ್ತು ರಾಜಸ್ಥಾನದ ಸಮೀಪವಿರುವ ಅಂತರರಾಷ್ಟ್ರೀಯ ಗಡಿಯ ಬಳಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ನುಸುಳಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ಗುಂಡಿಕ್ಕಿ ಕೊಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಗಸ್ಟ್ 7 ಮತ್ತು 8 ರ ಮಧ್ಯರಾತ್ರಿಯಲ್ಲಿ ಘಟನೆ ನಡೆದಿದೆ. ಬಿಎಸ್ಎಫ್ ನ ರಾತ್ರಿ ಗಸ್ತು ತಂಡವು ಗಡಿ ಬೇಲಿ ಮೇಲೆ ಹತ್ತಿದ ವ್ಯಕ್ತಿಯನ್ನು ಗುರುತಿಸಿ ಶರಣಾಗಲು ಸೂಚಿಸಿತ್ತು ಎನ್ನಲಾಗಿದೆ.
ಬಿಎಸ್ಎಫ್ ಅಧಿಕಾರಿಗಳ ಪ್ರಕಾರ, ನುಸುಳುಕೋರನು ಸವಾಲು ಹಾಕಿ, ಗಡಿ ಬೇಲಿ ದಾಟಿದ ನಂತರ ಗುಂಡು ಹಾರಿಸಿದ್ದಾನೆ. ಆಗ ಕತ್ತಲೆಯಾಗಿದ್ದರಿಂದ ನಮ್ಮ ಪಡೆಗಳು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಆತ ಗಡಿ ದಾಟಲು ಪ್ರಯತ್ನಿಸುತ್ತಿದ್ದಾನೆಯೇ ಎಂಬುದು ನಮಗೆ ತಿಳಿದಿಲ್ಲ ಎಂದು ಬಿಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುಂಡು ಹಾರಿಸಿದ ನಂತರ ನುಸುಳುಕೋರ ಪೊದೆಯ ಒಳಗೆ ಓಡಿಹೋಗಿದ್ದ ಎನ್ನಲಾಗಿದೆ. ಬಿಎಸ್ಎಫ್ ಸಿಬ್ಬಂದಿ ಈ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ನಂತರ ಬೇಲಿಯ ಈಚೆಗೆ ಭಾರತದ ಭಾಗದಲ್ಲಿ ಶವ ಪತ್ತೆಯಾಗಿದೆ.
ಘಟನೆ ನಡೆದ ಸ್ಥಳ ಗುಜರಾತ್-ರಾಜಸ್ಥಾನ್ ಗಡಿಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ರಾನ್ ಆಫ್ ಕಚ್ ಕೊನೆಗೊಳ್ಳುತ್ತದೆ ಮತ್ತು ರಾಜಸ್ಥಾನದ ಬಾರ್ಮರ್‌ನ ಮೊದಲ ಬಿಒಪಿ (ಬಾರ್ಡರ್ ಅಬ್ಸರ್ವೇಶನ್ ಪೋಸ್ಟ್) ಇದೆ ಎಂದು ಬಿಎಸ್ಎಫ್ ನ ಗಾಂಧಿನಗರ ಪ್ರಧಾನ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.
ಬಿಎಸ್ಎಫ್ ನ ಅಧಿಕೃತ ಪ್ರಕಟಣೆಯ ಪ್ರಕಾರ, “ಅದೇ ಕ್ಷಣದಲ್ಲಿ, ಬಿಎಸ್ಎಫ್ ಪಡೆಗಳು ಪಾಕಿಸ್ತಾನದ ಕಡೆಯಿಂದ ಒಬ್ಬ ವ್ಯಕ್ತಿಯ ಚಲನೆಯನ್ನು ಗಮನಿಸಿತ್ತು. ಈ ಮೊದಲು, ಪಾಕಿಸ್ತಾನವು ಹಗಲಿನ ವೇಳೆಯಲ್ಲಿ ಮಾಡಿದ ಇದೇ ರೀತಿಯ ಪ್ರಯತ್ನಗಳನ್ನು ಬಿಎಸ್ಎಫ್ ವಿಫಲಗೊಳಿಸಿತ್ತು. ಆದಾಗ್ಯೂ, ಈ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಒಳನುಸುಳುವಿಕೆ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು” ಎಂದು ತಿಳಿಸಿದೆ.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಬಿಎಸ್ಎಫ್ ಹೆಚ್ಚಿನ ಎಚ್ಚರಿಕೆ ವಹಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ‘ಗಡಿಯಲ್ಲಿ ಏನೂ ಆಗಿಲ್ಲ, ಭಾರತ ಹಸಿ ಸುಳ್ಳುಗಳ ಸರಮಾಲೆ ಕಟ್ಟುತ್ತಿದೆ’: ಪಾಕ್


