ಜಪಾನ್‌ನ ಹಿರೋಷಿಮಾ ನಗರದ ಮೇಲೆ ವಿಶ್ವದ ಮೊದಲ ಪರಮಾಣು ಬಾಂಬ್ ದಾಳಿಗೆ 75 ವರ್ಷ ತುಂಬಿದೆ. ಆಗಸ್ಟ್ 6 ರಂದು ಪ್ರಾರಂಭವಾಗಿ ಮೂರು ದಿನಗಳ ನಂತರ ಎರಡನೆಯ ಬಾರಿ ಮತ್ತು ಕೊನೆಯದಾಗಿ ನಾಗಸಾಕಿಯ ಮೇಲೆ ನಡೆದ ದಾಳಿಯು ಎರಡನೆಯ ಮಹಾಯುದ್ಧದ ಅಂತ್ಯಕ್ಕೆ ಕಾರಣವಾಯಿತು.
ಈ ದಾಳಿಯಲ್ಲಿ 2,00,000ಕ್ಕೂ ಹೆಚ್ಚು ಜೀವ ಹಾನಿ ಮತ್ತು ಊಹಿಸಲಾಗದಷ್ಟು ಆಸ್ತಿಪಾಸ್ತಿ ಹಾನಿಗೊಳಗಾಗಿದ್ದವು.
ಆಗಸ್ಟ್ 6, 1945 ರಂದು, ಎನೋಲಾ ಗೇ ಎಂಬ ಯುಎಸ್ ಬಿ -29 ಯುದ್ಧ ವಿಮಾನವು ಜಪಾನ್‌ನ ನೈಋತ್ಯ ನಗರವಾದ ಹಿರೋಷಿಮಾದಲ್ಲಿ “ಲಿಟಲ್ ಬಾಯ್” ಎಂಬ ಅಡ್ಡಹೆಸರನ್ನು ಹೊಂದಿದ್ದ ಬಾಂಬನ್ನು ಹಾಕಿ, 1,40,000ಕ್ಕು ಹೆಚ್ಚು ಜನರನ್ನು ಕೊಂದಿತ್ತು. ಲಕ್ಷಾಂತರ ಜನರು ಗಾಯಗೊಂಡಿದ್ದರು. ಅವರಲ್ಲಿ ಹಲವರು ಮುಂದಿನ ವರ್ಷಗಳಲ್ಲಿ ಸಾವನ್ನಪ್ಪಿದರು.
ಸ್ಫೋಟದ ತಾಪಮಾನವು ಅಂದಾಜು 7,000 ಡಿಗ್ರಿ ಸೆಲ್ಸಿಯಸ್ (12,600 ಫ್ಯಾರನ್‌ಹೀಟ್) ತಲುಪಿತ್ತು. ಇದು ವೃತ್ತಾಕಾರವಾಗಿ ಸುಮಾರು ಮೂರು ಕಿಲೋಮೀಟರ್ ವರೆಗೂ ಮಾರಣಾಂತಿಕವಾಗಿ ವ್ಯಾಪಿಸಿತ್ತು.
ಆಗಸ್ಟ್ 9 ರಂದು, ಯುನೈಟೆಡ್ ಸ್ಟೇಟ್ಸ್ ನಾಗಾಸಾಕಿ ನಗರದ ಮೇಲೆ “ಫ್ಯಾಟ್ ಮ್ಯಾನ್” ಎಂಬ ಮತ್ತೊಂದು ಅಡ್ಡಹೆಸರಿನ ಬಾಂಬ್ ಅನ್ನು ಬೀಳಿಸಿ 75,000 ಕ್ಕೂ ಹೆಚ್ಚು ಜನರನ್ನು ಕೊಂದಿತು.
ದುರಂತ ಘಟನೆಯಿಂದ ದಟ್ಟ ಮೋಡ ಬೆಳೆಯಿತು. ಅದು 9,000 ಮೀಟರ್ (30,000 ಅಡಿ) ಎತ್ತರವಿತ್ತು ಎಂಬುದಕ್ಕೆ ಹಲವಾರು ಐತಿಹಾಸಿಕ ಚಿತ್ರಗಳು ಸಾಕ್ಷಿಯಾಗಿವೆ.
ಈ ದಾಳಿಯ ಬಳಿಕ ಜಪಾನ್ ಆರು ದಿನಗಳ ನಂತರ ಶರಣಾಗಿ, ಎರಡನೆಯ ಮಹಾಯುದ್ಧ ಕೊನೆಗೊಂಡಿತು. ಈ ಎರಡು ಬಾಂಬ್ ದಾಳಿಯು ಯುದ್ಧಕಾಲದಲ್ಲಿ ಪರಮಾಣು ಬಾಂಬುಗಳನ್ನು ಬಳಸಿದ ಏಕೈಕ ಸಮಯವಾಗಿದೆ.
ಪರಮಾಣು ದಾಳಿಗೆ 75 ವರ್ಷ ತುಂಬಿದ ಸ್ಮರಣಾರ್ಥವಾಗಿ ಜಗತ್ತಿನ ಹಲವೆಡೆ ಮಡಿದವರಿಗಾಗಿ ಮೌನಾಚರಣೆ ಮಾಡಲಾಯಿತು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಸ್ಮರಣಾರ್ಥ ಸಮಯವನ್ನು ಕಡಿಮೆಗೊಳಿಸಲಾಗಿದೆ.
ಇದನ್ನೂ ಓದಿ: ಮಾನವ ನಿರ್ಮಿತ ಪಿಡುಗಿಗೆ 75 ವರ್ಷ: ಹಿರೋಶಿಮಾ ಬಾಂಬ್ ದಾಳಿಯಿಂದ ಜಗತ್ತು ಕಲಿತ ಪಾಠವೆಷ್ಟು?


