ಬಾಬಿ ಜೀ ಬ್ರಾಂಡ್‌ನ ಹಪ್ಪಳ ತಿಂದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚಳವಾಗಿ ಕೊರೊನಾ ತಡೆಗಟ್ಟಬಹುದು ಎಂದು ಹೇಳಿ ನಗೆಪಾಟಲಿಗೀಡಾಗಿದ್ದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಲ್‌ರವರಿಗೆ ಕೊರೊನಾ ಸೋಂಕು ತಗುಲಿದೆ.
ಶನಿವಾರ ಅವರ ಕೋವಿಡ್ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಕೊರೊನಾ ಪಾಸಿಟಿವ್ ದೃಢವಾದ ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬೃಹತ್ ಕೈಗಾರಿಕೆ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯಸಚಿವರಾದ ಅರ್ಜುನ್ ರಾಮ್ ಮೇಘಾವಲ್‌ಗೆ ಕೊರೊನಾ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಎರಡು ಬಾರಿ ಪರೀಕ್ಷೆ ಮಾಡಿಸಿದ್ದರು. ಎರಡನೇ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡ ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾನು ಚೆನ್ನಾಗಿದ್ದೇನೆ. ಆದರೆ ನನ್ನ ಎರಡನೇ ವರದಿಯಲ್ಲಿ ಪಾಸಿಟಿವ್ ಬಂದ ನಂತರ ಡಾಕ್ಟರ್‌ಗಳ ಸಲಹೆ ಮೇರೆಗೆ ಏಮ್ಸ್‌ನಲ್ಲಿ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲಾ ದಯವಿಟ್ಟು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಚಿವರು ತಿಳಿಸಿದ್ದಾರೆ.
ಜುಲೈ ತಿಂಗಳಿನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಅರ್ಜುನ್ ರಾಮ್ ಮೇಘಾವಲ್ “ಬಾಬಿ ಜೀ ಪಾಪಡ್” ಬ್ರಾಂಡ್‌ನ ಹಪ್ಪಳವನ್ನು ಊಟದ ಜೊತೆ ತಿಂದರೆ ಅದು ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ” ಎಂದಿದ್ದರು. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವ್ಯಂಗ್ಯ ಕಂಡುಬಂದಿತ್ತು.
ವೋಕಲ್ ಫಾರ್ ಲೋಕಲ್ ಪ್ರಚಾರಾಂದೋಲನದ ಭಾಗವಾಗಿ ಹಪ್ಪಳ ಸೇವಿಸಬೇಕೆಂದು ಸಚಿವರು ಕರೆ ನೀಡಿದ್ದರು. ಆದರೆ ಈಗ ಅವರಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಹಪ್ಪಳ ತಿನ್ನುವುದನ್ನು ಬಿಟ್ಟು ಏಮ್ಸ್‌ಗೆ ಏಕೆ ದಾಖಲಾಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಕುರಿತು ಪೋಸ್ಟ್: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ರಮ್ಯಾ ದಿವ್ಯಸ್ಪಂದನ!


