ಮಣಿಪುರದಲ್ಲಿ ಅಂತಂತ್ರ ಸರ್ಕಾರ ನಿರ್ಮಾಣವಾಗಿದ್ದು ಆಡಳಿತರೂಢ ಎನ್‌ಡಿಎ ಮತ್ತು ವಿಪಕ್ಷ ಕಾಂಗ್ರೆಸ್ ಎರಡು ಸಂಕಷ್ಟದಲ್ಲಿವೆ. ಕಾಂಗ್ರೆಸ್ ತನ್ನ ಇಬ್ಬರು ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ಆಗಸ್ಟ್ 10 ಸೋಮವಾರದಂದು ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ.
ರಾಜ್ಯಸಭಾ ಚುನಾವಣೆಯ ವೇಳೆ ತಮ್ಮ ಪಕ್ಷದ ಇಬ್ಬರು ಶಾಸಕರು ವಿಪ್ ಉಲ್ಲಂಘಿಸಿರುವುದರ ಕುರಿತು ನೀಡಿರುವ ನೋಟಿಸ್‌ಗೆ ಅವರ ಉತ್ತರ ತೃಪ್ತಿದಾಯಕವಾಗಿಲ್ಲ. ಇಂತಹ ಸಮಯದಲ್ಲಿ ವಿಶ್ವಾಸಮತ ಯಾಚನೆ ನಡೆಯುವುದು ಸರಿಯಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಮುಖ್ಯಮಂತ್ರಿಯವರು ವಿಶ್ವಾಸಮತ ಯಾಚನೆಗೆ ಮುಂದಾಗಿರುವುದರಿಂದ ಕಾಂಗ್ರೆಸ್ ಈ ಹಿಂದೆ ಮಂಡಿಸಿದ ವಿಶ್ವಾಸಮತಮತದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಲಾಗಿದೆ ಎಂದು ಮಣಿಪುರ ವಿಧಾನಸಭಾ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
60 ಸದಸ್ಯ ಬಲದ ಮಣಿಪುರ ವಿಧಾನ ಸಭೆಯಲ್ಲಿ ಒಬ್ಬರು ರಾಜಿನಾಮೆ ನೀಡಿದ್ದಾರೆ. 6 ಜನರನ್ನು ಅನರ್ಹಗೊಳಿಸಲಾಗಿದೆ. ಉಳಿದ 53 ಸದಸ್ಯರಲ್ಲಿ ಕಾಂಗ್ರೆಸ್ 24, ಬಿಜೆಪಿ 18, ಎನ್‌ಪಿಪಿ 4, ಎನ್‌ಪಿಎಫ್ 4, ಎಲ್‌ಜೆಪಿ 1, ಟಿಎಂಸಿ 1 ಹಾಗೂ ಒಬ್ಬ ಸ್ವಾತಂತ್ರ್ಯ ಸದಸ್ಯರನ್ನು ಹೊಂದಿದೆ.
ಜೂನ್‌ನಲ್ಲಿ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ ಲೀಶೆಂಬಾ ಸನಾಜೋಬಾ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಇಬ್ಬರು ಶಾಸಕರಾದ ಆರ್‌ಕೆ ಇಮೋ ಸಿಂಗ್ ಮತ್ತು ಒಕ್ರಮ್ ಹೆನ್ರಿ ಸಿಂಗ್ ತಮಗೆ ನೀಡಿದ ಶೋ-ಕಾಸ್ ನೋಟಿಸ್‌ಗೆ ನೀಡಿದ ಉತ್ತರದಿಂದ ಪಕ್ಷವು ತೃಪ್ತಿ ಹೊಂದಿಲ್ಲ ಎಂದು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಎಂ ಒಕೆಂಡ್ರೊ ಹೇಳಿದ್ದಾರೆ.
“ನಾವು ಈ ಪ್ರಕರಣವನ್ನು ಮುಂದಿನ ಕ್ರಮಗಳಿಗಾಗಿ ಪಕ್ಷದ ಶಿಸ್ತಿನ ಕ್ರಿಯಾ ಸಮಿತಿಗೆ ಕಳುಹಿಸುತ್ತಿದ್ದೇವೆ. ಏಕೆಂದರೆ ಅವರ ವಿವರಣೆಗಳು ತೃಪ್ತಿಕರವಾಗಿಲ್ಲ” ಎಂದು ಒಕೆಂಡ್ರೊ ತಿಳಿಸಿದ್ದಾರೆ.
ಆಗಸ್ಟ್ 10 ರಂದು ನಡೆಯುವ ಒಂದು ದಿನದ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಲು ಮತ್ತು ಅವಿಶ್ವಾಸ ನಿರ್ಣಯಕ್ಕೆ ಬೆಂಬಲವಾಗಿ ಮತ ಚಲಾಯಿಸಲು 24 ಜನ ಶಾಸಕರಿಗೆ ಕಾಂಗ್ರೆಸ್ ವಿಪ್ ನೀಡಿದೆ. ಅದರಲ್ಲಿ ಆ ಇಬ್ಬರು ಶಾಸಕರು ಸೇರಿದ್ದಾರೆ.
ಓ ಇಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರಕ್ಕೆ ಅನುಗುಣವಾಗಿ ಮತ ಚಲಾಯಿಸುವಂತೆ ಎಲ್ಲ ಸದಸ್ಯರಿಗೆ ನಿರ್ದೇಶಿಸಲಾಗಿದೆ ಎಂದು ಪಕ್ಷದ ಮುಖ್ಯಸ್ಥ ಗೋವಿಂದಾಸ್ ಕೊಂಥೌಜಮ್ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಂತೆಯೇ ಸೋಮವಾರ ವಿಶ್ವಾಸಮತಯಾಚನೆ ನಡೆದರೂ ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಆದರೂ ಕಾಂಗ್ರೆಸ್ ಮುಖಂಡ ಒಕೆಂಡ್ರೊ ಆತ್ಮವಿಶ್ವಾಸದಿಂದ “ಸ್ವಲ್ಪ ಕಾದು ನೋಡಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಆಪರೇಷನ್ ಹಸ್ತ: ಸರ್ಕಾರ ಉಳಿಸಿಕೊಳ್ಳಲು CBI ಅಸ್ತ್ರ ಬಳಸಿತೇ BJP?


