ಬೆಂಗಳೂರಿನ ಗಲಭೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಆರೋಪಿಸಿರುವ 24 ವರ್ಷದ ಯುವಕ, ಎದೆ ನೋವು, ಹೊಟ್ಟೆ ನೋವು ಮತ್ತು ಉಸಿರಾಟದ ತೊಂದರೆಗಳಿಂದ ಶನಿವಾರ ಮೃತಪಟ್ಟಿದ್ದಾನೆ.
ಆಗಸ್ಟ್ 12 ರಂದು ಬೆಳಿಗ್ಗೆ ಬಂಧಿಸಲ್ಪಟ್ಟ ಕೆ.ಜಿ.ಹಳ್ಳಿ ನಿವಾಸಿ ಸಯ್ಯದ್ ನದೀಮ್ ಎಂಬುವವನು ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಲಾಗಿದೆ.
ಬಲವಾದ ಪೆಟ್ಟುಬಿದ್ದ ಗಾಯದಿಂದಾಗಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆತನಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ. ಆತನಿಗೆ ಬುಲೆಟ್ ಗಾಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯದಲ್ಲಿ ತೊಡಕು ಉಂಟಾದಾಗ ಶುಕ್ರವಾರ ರಾತ್ರಿ ಬೌರಿಂಗ್ ಆಸ್ಪತ್ರೆಗೆ ಕರೆತರಲಾಯಿತು. ಹೊಟ್ಟೆಯಲ್ಲಿ ರಂಧ್ರವಿದ್ದ ಕಾರಣ ಅವನಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅಗತ್ಯವಾಗಿತ್ತು. ಇಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಹೆಚ್ಚಿನ ರಕ್ತದೊತ್ತಡ ಹೊಂದಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ ಫೇಸ್‌ಬುಕ್ ಪೋಸ್ಟ್‌ನಿಂದ ಪ್ರಚೋದನೆಗೆ ಒಳಗಾದ ಜನಸಮೂಹ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 200 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಸೋದರಳಿಯ ನವೀನ್ ಎಂಬುವವನು, ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಫೇಸ್‌ಬುಕ್ ಕಾಮೆಂಟ್ ಮಾಡಿದ ನಂತರ ಎರಡು ಪೊಲೀಸ್ ಠಾಣೆಗಳು ಮತ್ತು ಕಾಂಗ್ರೆಸ್ ಶಾಸಕ ಅಖಂಡ್ ಶ್ರೀನಿವಾಸ್ ಮೂರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು. ನವೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಗಲಭೆಯ ಸಮಯದಲ್ಲಿ ಗುಂಡೇಟಿನಿಂದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ರಾತ್ರಿ ಹಿಂಸಾಚಾರ ಉಲ್ಬಣಗೊಂಡ ನಂತರ ಪೊಲೀಸರು ಜನಸಮೂಹದ ಮೇಲೆ ಗುಂಡು ಹಾರಿಸಿದರು.
ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?


