ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆಯಡಿ ದುಡಿಯುತ್ತಿರುವ ಬಿಸಿಯೂಟ ಕಾರ್ಯಕರ್ತೆಯರಿಗೆ ಐದು ತಿಂಗಳಾದರೂ ಗೌರವಧನ ಬಿಡುಗಡೆಯಾಗಿಲ್ಲ. ಹತ್ತು-ಹದಿನೈದು ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತೆಯರು ಇದೀಗ ಕೊರೊನಾ ಲಾಕ್‌ಡೌನ್ ನಡುವೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಯಾವುದೇ ಅಧಾಯದ ಮೂಲಗಳು ಇಲ್ಲದ ಅವರು ಇದೇ ವೃತ್ತಿಯನ್ನು ನಂಬಿ ಜೀವನ ದೂಡುತ್ತಿದ್ದು, ಗೌರವಧನ ಸಿಗದೆ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ಬಂದಿದೆ.
ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಕೆಗೆ ಇವರನ್ನು ಗೌರವಧನದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಶಾಲೆಗಳು ಆರಂಭವಾಗುವ ಸಮಯಕ್ಕೆ ಕೆಲಸಕ್ಕೆ ಹಾಜರಾಗುವ ಬಿಸಿಯೂಟ ಕಾರ್ಯಕರ್ತೆಯರಿಗೆ ಸಂಜೆ 4 ಗಂಟೆಯವರೆಗೂ ಕೆಲಸವಿರುತ್ತದೆ.
ಯಾವುದೇ ಸರ್ಕಾರಿ ಶಾಲೆಗಳಲ್ಲಿ ಡಿ ಗ್ರೂಪ್ ನೌಕರರು ಇಲ್ಲ. ಹಾಗಾಗಿ ಬಿಸಿಯೂಟ ಮಾಡುವ ಮೊದಲು ಕೊಠಡಿಗಳು ಮತ್ತು ಆವರಣ ಸ್ವಚ್ಚಗೊಳಿಸುವ ಕೆಲಸವೂ ಬಿಸಿಯೂಟ ಕಾರ್ಯಕರ್ತೆಯರ ಮೇಲೆ ಬೀಳುತ್ತದೆ. ಕೈತೋಟಗಳನ್ನು ಆರೈಕೆ ಮಾಡುವ ಕೆಲಸವನ್ನು ನೋಡಿಕೊಳ್ಳಬೇಕಾಗುತ್ತದೆ. ಬಿಸಿಯೂಟ ಮಾಡಿ ಮಕ್ಕಳಿಗೆ ಊಟ ಬಡಿಸಿದ ಮೇಲೆ ಪಾತ್ರೆಗಳ ಶುಚಿಗೊಳಿಸುವುದು ನಂತರ ಶಾಲಾ ಕೈತೋಟದಲ್ಲಿ ಕೆಲಸ ಇರುತ್ತದೆ.

ದಿನದ ಸುಮಾರು ಆರು ಗಂಟೆಗಳನ್ನು ಶಾಲೆಯಲ್ಲೇ ಕಳೆಯಬೇಕಾಗುತ್ತದೆ. ಹಾಗಾಗಿ ಬಿಸಿಯೂಟದವರು ಬೇರೆ ಕೂಲಿ ಕೆಲಸಗಳಿಗೂ ಹೋಗಲು ಸಾಧ್ಯವಿಲ್ಲ. ಅಕ್ಷರದಾಸೋಹ ಯೋಜನೆಯಡಿ ಬರುವ ಮಾಸಿಕ 2600 ರೂ ಗೌರವಧನ ಹೊರತುಪಡಿಸಿ ಬೇರೆ ಹಣಕಾಸಿನ ಮೂಲಗಳು ಇಲ್ಲ. ಬರುವ ಕಡಿಮೆ ಗೌರವಧನದಲ್ಲಿ ಕುಟುಂಬವನ್ನು ನಿರ್ವಹಣೆ ಮಾಡಬೇಕಾಗಿದೆ.
ಕೊರೊನ ಸೋಂಕು ವ್ಯಾಪಕವಾಗಿ ಸಮುದಾಯದ ನಡುವೆ ಹರಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಶಾಲೆಗಳು ಆರಂಭವಾಗಿಲ್ಲ. ಕೋವಿಡ್-19 ಮತ್ತು ಲಾಕ್ ಡೌನ್‌ನಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತೆ ಮಾಡಿದೆ. ಐದು ತಿಂಗಳಿಂದ ಗೌರವಧನ ಸಿಕ್ಕಿಲ್ಲ. ಕೂಲಿಯೂ ಇಲ್ಲ, ಮನೆ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಬಿಸಿಯೂಟ ಮಹಿಳೆಯರು ನಾನುಗೌರಿ.ಕಾಂ ಜೊತೆ ನೋವು ತೋಡಿಕೊಂಡರು.
ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ ಮಾತನಾಡಿ “ರಾಜ್ಯದ 54 ಸಾವಿರ ಶಾಲೆಗಳಲ್ಲಿ ಒಟ್ಟು 1,17,919 ಮಂದಿ ಅಡುಗೆಯವರು ಮತ್ತು ಅಡುಗೆ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ 2700 ರೂ ಮತ್ತು ಅಡುಗೆ ಸಹಾಯಕರಿಗೆ 2600 ರೂಪಾಯಿ ಗೌರವಧನ ನೀಡಲಾಗುತ್ತಿದೆ. ಆದರೆ ಕಳೆದ 5 ತಿಂಗಳಿನಿಂದಲೂ ಹಣ ಬಿಡುಗಡೆ ಮಾಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೌರವಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಹಲವು ಮನವಿಗಳನ್ನು ನೀಡಿದ್ದೇವೆ. ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇವೆ. ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದೇವೆ. ಅವರೆಲ್ಲರೂ ಕೊಡುವ ಮಾತನಾಡುತ್ತಾರೆಯೇ ಹೊರತು ಕೊಟ್ಟಿಲ್ಲ. ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿದ್ದೇವೆ. ಕೊಡುವ ಭರವಸೆಗಳನ್ನು ನೀಡಿದರು. ಆದರೂ ಹಣ ಬಂದಿಲ್ಲ. ಹಾಗಾಗಿ ಆಗಸ್ಟ್ 11 ರಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ನಿನ್ನೆ ಮತ್ತು ಇಂದು ರಜೆ ಇದ್ದರಿಂದ ಉಪವಾಸವನ್ನು ನಿಲ್ಲಿಸಿದ್ದೆವು. ಆಗಸ್ಟ್ 17ರಿಂದ ಮತ್ತೆ ಉಪವಾಸ ಕೂರುತ್ತೇವೆ ಎಂದು ಅವರು ಹೇಳಿದರು.
ಏಪ್ರಿಲ್ ತಿಂಗಳಿಂದಲೂ ಹಣ ಬಿಡುಗಡೆಯಾಗದೇ ಇರುವುದು ಬಡತನದಲ್ಲಿರುವ ಮುಖ್ಯ ಅಡುಗೆಯವರು ಮತ್ತು ಸಹಾಯಕಿಯರು ಕುಟುಂಬಗಳನ್ನು ಸಂಭಾಳಿಸುವುದು ಕಷ್ಟವಾಗಿದೆ. ಕೂಡಲೇ ಸರ್ಕಾರ ಗೌರವಧನ ಬಿಡುಗಡೆ ಮಾಡಬೇಕು. ಅವರ ಕುಟುಂಬಗಳನ್ನು ರಕ್ಷಣೆ ಮಾಡಬೇಕು ಎಂದು ಮಾಲಿನಿ ಮೆಸ್ತ ಆಗ್ರಹಿಸಿದರು.
ಇದನ್ನೂ ಓದಿ: ಬಾಕಿ ಸಂಬಳ ಹಾಗೂ ಇತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ


