ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ರವರ ವಿರುದ್ಧ ನೀಡಿದ ತೀರ್ಪನ್ನು ಪುನರ್ ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಎಲ್ಲಾ ಪ್ರಗತಿಪರ ವಕೀಲರು ಮನವಿ ಸಲ್ಲಿಸಬೇಕೆಂದು ಪ್ರಗತಿಪರ ಚಿಂತಕ ವಕೀಲರ ವೇದಿಕೆಯ ಸಂಚಾಲಯಕರಾದ ಅನೀಸ್ ಪಾಶರವರು ಕರೆ ನೀಡಿದ್ದಾರೆ.
14-08-2020 ರಂದು ಸರ್ವೋಚ್ಚ ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ರವರು ತಪ್ಪಿತಸ್ತರೆಂದು ತೀರ್ಪು ನೀಡಿರುತ್ತದೆ. ಈ ತೀರ್ಪು ಇಡೀ ವಕೀಲ ವೃಂದದಲ್ಲಿ ಸಂಚಲನವನ್ನು ಮೂಡಿಸಿದ್ದು, ತುಂಬಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಬಹಳಷ್ಟು ಪ್ರಕರಣಗಳಲ್ಲಿ ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಪತ್ರಿಕಾ ಮಾಧ್ಯಮ (ತಾಂತ್ರಿಕ ಮಾಧ್ಯಮ) ಗಳಲ್ಲಿ ಪ್ರಸಾರವಾಗುವ ವಿಚಾರಗಳು ನಿರ್ಣಾಯಕ ಸಾಕ್ಷ್ಯವಾಗಿ ಪರಿಗಣಿಸಲು ಬರುವುದಿಲ್ಲ ಎಂದು ತೀರ್ಪನ್ನು ನೀಡಿದೆ. ಹಿರಿಯ ವಕೀಲರು ಮಾಡಿರುವಂತಹ ಆರೋಪಗಳು ಸರಿ ಇದೇಯೋ ಇಲ್ಲವೋ ಎಂದು ತನಿಖೆ ನಡೆಸದೆ ನೇರವಾಗಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿ ಒಬ್ಬ ಸಾಮಾಜಿಕ ಹೋರಾಟಗಾರರಾದ ವಕೀಲರನ್ನು ಶಿಕ್ಷಿಸಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಎಂಬ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ ದೇಶದ ಇತಿಹಾಸವನ್ನು ಗಮನಿಸಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಬಹಳ ಮಹತ್ವದ್ದಾಗಿತ್ತು, ಸಂವಿಧಾನವನ್ನು ರಚನೆ ಮಾಡಿರುವಂತಹ ಬಾಬಾ ಸಾಹೇಬ್ ಅಂಬೇಡ್ಕರ್ ರವರೂ ಕೂಡ ಒಬ್ಬ ವಕೀಲರಾಗಿದ್ದರು. ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ದೇಶದ ಏಕತೆ ಮತ್ತು ಅಖಂಡತೆ ಮತ್ತು ನ್ಯಾಯಾದಾನದ ವ್ಯವಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಬಹಳ ಮಹತ್ವದ್ದಾಗಿದೆ.
ಕೊರೋನ ಕಾಯಿಲೆ ಸಲುವಾಗಿ ನ್ಯಾಯಾಲಯಗಳಲ್ಲಿ ತುರ್ತು ವಿಷಯಗಳನ್ನು ಹೊರತುಪಡಿಸಿ ಬೇರೆ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳದೆ ಇರುವುದರಿಂದ ದೇಶದ ಹೆಚ್ಚಿನ ವಕೀಲರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ತುರ್ತು ಪ್ರಕರಣಗಳನ್ನು ಕೂಡ ಆನ್ ಲೈನ್ ಮುಖಾಂತರ ಮಂಡನೆ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಹಳೆಯ ಪ್ರಕರಣಗಳನ್ನು ಇತ್ಯಾರ್ಥ ಪಡಿಸುವುದನ್ನು ಬಿಟ್ಟು ಹೊಸ ಪ್ರಕರಣವನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡು ತೀರ್ಪು ನೀಡಿರುವುದು ಇಡೀ ಭಾರತ ದೇಶದ ಜನತೆಗೆ ಆಶ್ಚರ್ಯಚಕಿತರನ್ನಾಗಿಸಿದೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಮತ್ತು ವಕೀಲ ವೃಂದದ ಘನತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ವಕೀಲರಾದ ನಮ್ಮ ಮೇಲೆ ಹೆಚ್ಚು ಇದೆ. ಹಾಗಾಗಿ ಎಲ್ಲರೂ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕೆಂದು ಕೋರಲಾಗಿದೆ ಎಂದು ಹೇಳಿಕೆಯಲ್ಲಿ ಅನೀಸ್ ಪಾಶ ತಿಳಿಸಿದ್ದಾರೆ.
ಪ್ರಶಾಂತ್ ಭೂಷಣ್ ರವರು ತಮ್ಮ ಟ್ವೀಟ್‌ಗಳಲ್ಲಿ ಆರೋಪಿಸಿದಂತಹ ಅಂಶಗಳು ಸರಿಯೋ ತಪ್ಪೋ ಎಂದು ತನಿಖೆ ಮಾಡಲು ಒಂದು ನ್ಯಾಯಮೂರ್ತಿಗಳ ತಂಡವನ್ನು ರಚಿಸಬೇಕೆಂದು, ತದನಂತರದಲ್ಲಿ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಕಂಡುಬಂದಾಗ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಶಿಕ್ಷೆಯನ್ನು ವಿಧಿಸಿದರೆ ಇಡೀ ಭಾರತ ದೇಶದ ಜನತೆ ನ್ಯಾಯಾಲಯದ ಮೇಲೆ ಇಟ್ಟಿರುವ ಗೌರವ ಮತ್ತು ಘನತೆಯು ಇನ್ನೂ ಹೆಚ್ಚಾಗುವುದು ಹಾಗೂ ಸಂವಿಧಾನ ನಮಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಪ್ರಜಾ ಪ್ರಭುತ್ವವನ್ನು ನ್ಯಾಯಾಲಯ ಎತ್ತಿ ಹಿಡಿದಂತಾಗುವುದು ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಲಯಗಳ ಮತ್ತು ವಕೀಲ ವೃಂದದ ಗೌರವವನ್ನು ಹೆಚ್ಚಿಸಲು ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ನಾವೆಲ್ಲ ಈ ತಕ್ಷಣ ಕಾರ್ಯಪ್ರವೃತ್ತರಾಗಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ರಿಜಿಸ್ಟ್ರಾರ್ ರವರ ಮೂಲಕ ದಿನಾಂಕ:14-8-2020 ರಂದು ಪ್ರಶಾಂತ್ ಭೂಷಣ್ ರವರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಬೇಕು ಮತ್ತು ಪ್ರಶಾಂತ್ ಭೂಷಣ್ ರವರು ಆರೋಪಿಸಿರುವ ಆರೋಪಗಳನ್ನು ಕೂಲಂಕುಂಶವಾಗಿ ತನಿಖೆ ಮಾಡಬೇಕು ಎಂದು ಇ-ಮೇಲ್ ಮೂಲಕ ಮನವಿ ಸಲ್ಲಿಸಲು ಎಲ್ಲಾ ಪ್ರಗತಿಪರ ವಕೀಲರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಭೂಷಣ್ ಗಂಭೀರ ನ್ಯಾಯಾಂಗ ನಿಂದನೆ ಎಸಗಿದ್ದಾರೆ: ಸುಪ್ರೀಂ ಕೋರ್ಟ್


