- Advertisement -
- Advertisement -
ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಸಿಬಿಐ ವಹಿಸಲು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಸುಶಾಂತ್ ಸಿಂಗ್ ತಂದೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಪಾಟ್ನಾದಲ್ಲಿ ನೋಂದಾಯಿಸಲಾದ ಎಫ್ಐಆರ್ ಸರಿಯಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಬಿಹಾರ ಸಮರ್ಥವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಪ್ರಕರಣದ ಪ್ರಮುಖ ಅಂಶಗಳು ಇಲ್ಲಿವೆ:
- ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ, ನಟ ರಿಯಾ ಚಕ್ರವರ್ತಿ ಪಾಟ್ನಾದಲ್ಲಿ ಸುಶಾಂತ್ ಕುಟುಂಬ ನೋಂದಾಯಿಸಿರುವ ಎಫ್‌ಐಆರ್ ಅಥವಾ ಪ್ರಾಥಮಿಕ ಮಾಹಿತಿ ವರದಿಯನ್ನು ಮುಂಬೈಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೋರೆ ಹೊಗಿದ್ದರು.
- ಮುಂಬೈ ಪೊಲೀಸರು ‘ಆಕಸ್ಮಿಕ ಸಾವು’ ಮಾತ್ರ ಎಂದು ವರದಿ ದಾಖಲಿಸಿದ್ದರಿಂದ, ಅದು ಸೀಮಿತ ತನಿಖಾ ವ್ಯಾಪ್ತಿಯನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಬಿಹಾರ ಪೊಲೀಸರು “ಪೂರ್ಣ ಪ್ರಮಾಣದ ಎಫ್ಐಆರ್” ಅನ್ನು ದಾಖಲಿಸಿದ್ದಾರೆ. ಹಾಗಾಗಿ ಇದನ್ನು ಸಿಬಿಐಗೆ ವಹಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
- ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ ಚಲನಚಿತ್ರ ಜಗತ್ತಿನಲ್ಲಿ ಪ್ರತಿಭಾನ್ವಿತ ನಟರಾಗಿದ್ದರು. ಆದರೆ ಈ ಉದಯೋನ್ಮುಖ ನಟನ ಪೂರ್ಣ ಸಾಮರ್ಥ್ಯ ಬೆಳಕಿಗೆ ಬರುವ ಮೊದಲೇ ಅವರು ನಿಧನರಾದರು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ತನಿಖೆಯ ಫಲಿತಾಂಶಕ್ಕಾಗಿ ತೀವ್ರವಾಗಿ ಕಾಯುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
- ಸಿಬಿಐ ತನಿಖೆಗೆ ಸಹಕರಿಸಲು ಮತ್ತು ಎಲ್ಲಾ ಸಹಾಯವನ್ನು ನೀಡಲು ಮಹಾರಾಷ್ಟ್ರಕ್ಕೆ ಆದೇಶಿಸಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿದ್ದರೆ, ಅದನ್ನೂ ಸಹ ಸಿಬಿಐ ತನಿಖೆ ನಡೆಸಲಿದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.
- ಸುಶಾಂತ್, ಮುಂಬೈನ ಅವರದೇ ಅಪಾರ್ಟ್ಮೆಂಟ್‌ನಲ್ಲಿ ಜೂನ್ 14 ರಂದು ಶವವಾಗಿ ಪತ್ತೆಯಾಗಿದ್ದರು. ಇದು ಆತ್ಮಹತ್ಯೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ಜೊತೆಗೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿತ್ತು.
- ಒಂದು ತಿಂಗಳ ನಂತರ, ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ಅವರು, ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬವು ತನ್ನ ಮಗನನ್ನು ಹಣಕಾಸಿನ ವಿಷಯದಲ್ಲಿ ಮೋಸ ಮಾಡಿದ್ದಾರೆ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಿಹಾರದಲ್ಲಿ ಪ್ರಕರಣ ದಾಖಲಿಸಿದರು.
- ನಟನ ಆರ್ಥಿಕ ಸ್ಥಿತಿ ಮತ್ತು ಅವರ ಖಾತೆಯಿಂದ ಕೋಟಿಗಟ್ಟಲೆ ಹಣ ತೆಗೆದುಕೊಳ್ಳಲಾಗಿದೆ ಎನ್ನುವ ದೂರಿನ ಮೇರೆಗೆ ಬಿಹಾರ ಪೊಲೀಸ್ ದೂರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ತನಿಖೆ ನಡೆಸಲು ಕಾರಣವಾಯಿತು.
- ರಿಯಾ ಚಕ್ರವರ್ತಿ ಸುಶಾಂತ್ ಅವರ ತಂದೆಯ ಆರೋಪವನ್ನು “ಸಂಪೂರ್ಣ ಅಸಂಬದ್ಧ” ಎಂದು ನಿರಾಕರಿಸಿದ್ದಾರೆ. ತಾನು ನ್ಯಾಯಾಲಯದ ವಾದಗಳಲ್ಲಿ, ಮುಂಬೈ ಪೊಲೀಸ್ ತನಿಖೆಯನ್ನು ರದ್ದುಗೊಳಿಸುವ ಕ್ರಮವು ಬಿಹಾರ ಚುನಾವಣೆಗೆ ಮುನ್ನ ರಾಜಕೀಯವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
- ನ್ಯಾಯಾಲಯದ ಆದೇಶದ ನಂತರ, ಬಿಹಾರದಿಂದ ಮತ್ತು ಚಲನಚಿತ್ರೋದ್ಯಮದಿಂದಲೂ ಹಲವು ಪ್ರತಿಕ್ರಿಯೆಗಳು ಬಂದವು. “ಬಿಹಾರದಲ್ಲಿ ದಾಖಲಾದ ಎಫ್‌ಐಆರ್ ಆಧಾರದ ಮೇಲೆ ಸಿಬಿಐ, ಸುಶಾಂತ್ ಸಾವಿನ ಪ್ರಕರಣದ ತನಿಖೆಯನ್ನು ಮುಂದುವರಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ” ಎಂದು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಟ್ವೀಟ್ ಮಾಡಿದ್ದಾರೆ.
- ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದ ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, “ದೇವರಿಗೆ ಧನ್ಯವಾದಗಳು! ನೀವು ನಮ್ಮ ಪ್ರಾರ್ಥನೆಗೆ ಉತ್ತರಿಸಿದ್ದೀರಿ !! ಆದರೆ ಇದು ಕೇವಲ ಪ್ರಾರಂಭ. ಸತ್ಯದತ್ತ ಮೊದಲ ಹೆಜ್ಜೆ! ಸಂಪೂರ್ಣ ನಂಬಿಕೆಯಿದೆ. ಸಿಬಿಐ !!” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಬಿಹಾರ ಸರ್ಕಾರ


