ಆಗಸ್ಟ್ 14 ರಂದು ರಾಜಸ್ಥಾನ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಂಡಿಸಿದ ವಿಶ್ವಾಸ ನಿರ್ಣಯಕ್ಕೆ ಗೈರಾಗಿದ್ದ ರಾಜಸ್ಥಾನದ ನಾಲ್ಕು ಬಿಜೆಪಿ ಶಾಸಕರಿಗೆ ಪಕ್ಷವು ಸಮನ್ಸ್ ನೀಡಿ, ವಿವರಣೆಯನ್ನು ಕೇಳಿದೆ.
ಶಾಸಕರು ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಮತ್ತು ರಾಜ್ಯ ಪಕ್ಷದ ಅಧ್ಯಕ್ಷ ಸತೀಶ್ ಪೂನಿಯಾ ಅವರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.
ನಾಲ್ಕೂ ಶಾಸಕರಾದ ಗೋಪಿ ಚಂದ್ ಮೀನಾ, ಕೈಲಾಶ್ ಚಂದ್ರ ಮೀನಾ, ಹರೇಂದ್ರ ನಿನಾಮಾ ಮತ್ತು ಗೌತಮ್ ಲಾಲ್ ಅವರು ಆರಂಭದಲ್ಲಿ ಅಸೆಂಬ್ಲಿಯಲ್ಲಿ ಹಾಜರಿದ್ದೇವೆ, ಆದರೆ ಸಭೆಯನ್ನು ಮಧ್ಯಾಹ್ನ 1 ಗಂಟೆಯವರೆಗೆ ಮುಂದೂಡಿದ ನಂತರ ಗೈರಾದೆವು ಎಂದು ಹೇಳಿದ್ದಾರೆ.
ವಿಧಾನಸಭೆ ಅಧಿವೇಶನಕ್ಕೆ ಮುನ್ನ ಕುದುರೆ ವ್ಯಾಪರಾಕ್ಕೊಳಕ್ಕಾಗಬಹುದು ಎಂಬ ಭಯದಿಂದ ಗುಜರಾತ್‌ನ ರೆಸಾರ್ಟ್‌ಗೆ ಕಳುಹಿಸಲಾದ 18 ಬಿಜೆಪಿ ಶಾಸಕರಲ್ಲಿ ಈ ನಾಲ್ವರು ಸೇರಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಪೂನಿಯಾ, “ಇದು ಅಷ್ಟಾಗಿ ಏನೂ ಗಂಭೀರವಾಗಿರಲಿಲ್ಲ. ಆದರೆ ಇದು ಅವರ ಅನುಪಸ್ಥಿತಿಯನ್ನು ಪರಿಗಣಿಸುತ್ತದೆ ಅಷ್ಟೆ. ಹಾಗಾಗಿ ನಾನು ಪ್ರತಿಪಕ್ಷದ ನಾಯಕನೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
‘ಅತೃಪ್ತ ಶಾಸಕರು ಮತ್ತೆ ಒಂದಾಗಿದ್ದಾರೆ. ಹಾಗಾಗಿ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಕೈಬಿಟ್ಟು, ಕೊರೊನಾ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು. ನಾವು ಗೈರಾಗಲು ಇದೇ ಕಾರಣ’ ಎಂದು ಶಾಸಕ ಗೋಪಿ ಚಂದ್ ಮೀನಾ ಹೇಳಿದರು.
ಆರೋಗ್ಯ ಸರಿಯಿಲ್ಲದ ಕಾರಣ ಆಗಸ್ಟ್ 13 ರಂದು ಅತಿಸಾರ ಉಂಟಾಗಿ ನಾನು ಅಸ್ವಸ್ಥನಾಗಿದ್ದೆ. ತಮ್ಮ ಕ್ಷೇತ್ರವು ಜೈಪುರದಿಂದ 500 ಕಿ.ಮೀ ದೂರದಲ್ಲಿದೆ. ಗುಜರಾತ್‌ನಲ್ಲಿ ರಸ್ತೆ ಮೂಲಕ ಮತ್ತು ನಂತರ ರಾಜಸ್ಥಾನ ರಸ್ತೆ ಮೂಲಕ ಜೈಪುರಕ್ಕೆ ಪ್ರಯಾಣಿಸುವುದು ನನ್ನ ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಅಂದು ಬೆಳಿಗ್ಗೆ ನಾನು ಸಭೆಯಲ್ಲಿದ್ದೆ. ಆದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ಬಂತು. ಇದು ಅಲ್ಲಿ ಸಾಧ್ಯವಿಲ್ಲದ್ದರಿಂದ, ಎಂಎಲ್‌ಎ ಕ್ವಾರ್ಟ್ರಸ್‌ಗೆ ಹೋಗಬೇಕಾಯಿತು. ಅಲ್ಲಿಗೆ ಹೊದ ಮೇಲೆ ವಿಶ್ವಾಸ ನಿರ್ಣಯದ ವಿಷಯ ತಿಳಿಯಿತು. ಹಾಗಾಗಿ ಅಲ್ಲಿಯೇ ನಿದ್ರೆಗೆ ಜಾರಿದೆ ಎಂದು ಗೋಪಿ ಚಂದ್ ಮೀನಾ ಹೇಳಿದ್ದಾರೆ.
ಆದರೆ ಬಿಜೆಪಿಗಾಗಿ ದುಡಿದಿರುವ ನನಗೆ ಸಮನ್ಸ್ ನೀಡಿರುವುದು ಬೇಸರ ತಂದಿದೆ. ಅದರೂ ನನ್ನ ಆರೋಗ್ಯದ ಕಾರಣದಿಂದ ಆ ದಿನ ಸದನವನ್ನು ತೊರೆಯುವ ಮೂಲಕ ನಾನು ತಪ್ಪು ಮಾಡಿದ್ದೇನೆ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನನ್ನ ಕಾರು ದುರಸ್ಥಿಯಲ್ಲಿತ್ತು. ಹಾಗಾಗಿ ನಾನು ಆಟೋ ರಿಕ್ಷಾದಲ್ಲಿ ಹೊರಟೆ. ಆದರೂ ಮಳೆಯಲ್ಲಿ ಸಿಲುಕಿಕೊಂಡೆ. ಹಾಗಾಗಿ ಸಭೆಗೆ ಹಾಜರಾಗಲು ತಡವಾಯಿತು ಎಂದು ಗರ್ಹಿ ಶಾಸಕ ಕೈಲಾಶ್ ಚಂದ್ರ ಹೇಳಿದ್ದಾರೆ.
ಮರುದಿನ ಸ್ವಾತಂತ್ರ್ಯ ದಿನಾಚರಣೆಗೆ ತಮ್ಮ ಕ್ಷೇತ್ರಕ್ಕೆ ಹೋಗಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದರಿಂದ, ಮತ್ತು ಸದನವನ್ನು 1 ಗಂಟೆಗೆ ಮುಂದೂಡಿದ್ದರಿಂದ ನಾನು ಗೈರಾಗಬೇಕಾಯಿತು ಎಂದು ಘಾಟೋಲ್ ಶಾಸಕ ಹರೇಂದ್ರ ನಿನಾಮಾ ವಿವರಣೆ ನೀಡಿದ್ದಾರೆ.
“ಅವಿಶ್ವಾಸ ನಿರ್ಣಯ ಮಂಡಿಸದಿರಲು ಪಕ್ಷ ನಿರ್ಧರಿಸಿತು. ಕಾಂಗ್ರೆಸ್ ಬಣಗಳು ಮತ್ತೆ ಒಂದಾಗಿದ್ದವು. ಆದ್ದರಿಂದ ಇನ್ನು ಏನೂ ಉಳಿದಿಲ್ಲ. ಇದಲ್ಲದೆ ನಾನು ಸ್ವಾತಂತ್ರ್ಯ ದಿನಾಚರಣೆಗೆ ನನ್ನ ಕ್ಷೇತ್ರದಲ್ಲಿ ಇರಬೇಕಾಗಿತ್ತು. ಆದ್ದರಿಂದ ಸದನವನ್ನು ಮುಂದೂಡಿದ ನಂತರ, ನಾನು ಎಂ ಎಲ್ ಎ ಕ್ವಾರ್ಟ್ರಸ್ ಗೆ ಮರಳಿದೆ. ಊಟದ ನಂತರ ಸ್ವಕ್ಷೇತ್ರಕ್ಕೆ ಹೊರಟೆ” ಎಂದು ಶಾಸಕ ಗೌತಮ್ ಲಾಲ್ ಹೇಳಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಶಾಸಕರ ಬಂಡಾಯದ ನಂತರ, ರಾಜಸ್ಥಾನದಲ್ಲಿ ಒಂದು ತಿಂಗಳ ಕಾಲ ರಾಜಕೀಯ ಬಿಕ್ಕಟ್ಟು ಸಂಭವಿಸಿತ್ತು. ಅಶೋಕ್ ಗೆಹ್ಲೋಟ್ ಶಿಬಿರದೊಂದಿಗೆ ಮತ್ತೆ ಒಂದಾದ ಅತೃಪ್ತರ ಬಣ ಆಗಸ್ಟ್ 14 ರಂದು ವಿಶ್ವಾಸಾರ್ಹ ನಿರ್ಣಯವನ್ನು ಮಂಡಿಸಿ, ಅದನ್ನು ಧ್ವನಿ ಮತದ ಮೂಲಕ ಗೆದ್ದುಕೊಂಡಿತು.
ರಾಜ್ಯ ಕಾಂಗ್ರೆಸ್‌ನಲ್ಲಿನ ದಂಗೆಯು ಬಿಜೆಪಿಯ ರಾಜ್ಯ ಘಟಕದೊಳಗೆ ಇರುವ ಬಿರುಕನ್ನು ಹೊರಗೆಳೆದಿದೆ. ಮಾಜಿ ಸಿಎಂ ವಸುಂಧರಾ ರಾಜೆ ಸುದೀರ್ಘ ಮೌನವನ್ನು ಕಾಯ್ದುಕೊಂಡಿದ್ದಾರೆ ಮತ್ತು ಅವರ ನಿಷ್ಠಾವಂತ ಮಾಜಿ ಸ್ಪೀಕರ್ ಕೈಲಾಶ್ ಮೇಘವಾಲ್ ಕುದುರೆ ವ್ಯಾಪಾರದ ವಿರುದ್ಧ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟು: ವಿಶ್ವಾಸ ಮತ ಗೆದ್ದ ಗೆಹ್ಲೋಟ್; ಸರ್ಕಾರ ಭದ್ರ


