ಸುಪ್ರೀಂ ಕೋರ್ಟ್ ಮತ್ತು ಸಿಜೆಐನ ಕಾರ್ಯವೈಖರಿಗೆ ಸಂಬಂಧಿಸಿದ ಟ್ವೀಟ್‌ಗಳ ವಿಚಾರಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಾನು ಕ್ಷಮೆ ಕೇಳುವುದಿಲ್ಲ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪುನರುಚ್ಚರಿಸಿದ್ದಾರೆ. ಕ್ಷಮೆ ಕೇಳುವುದು ತನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ ಎಂದು ಪ್ರಶಾಂತ್ ಭೂಷಣ್ ಸಾರಿದ್ದಾರೆ.
ಈ ಕುರಿತು ಸುಪ್ರೀಂ ಕೋರ್ಟ್‌ಗೆ ಪೂರಕ ಅಫಿಡವಿಟ್ ಸಲ್ಲಿಸಿರುವ ಅವರು, “ತನ್ನ ಹೇಳಿಕೆಗಳು ನ್ಯಾಯಾಲಯದ “ರಚನಾತ್ಮಕ ವಿಮರ್ಶೆ”ಯಾಗಿದೆ. ಆದ್ದರಿಂದ ಅದನ್ನು ಹಿಂತೆಗೆದುಕೊಳ್ಳುವುದು ‘ಅಪ್ರಾಮಾಣಿಕ ಕ್ಷಮೆಯಾಚನೆ’ಯಾಗುತ್ತದೆ” ಎಂದಿದ್ದಾರೆ.
ನ್ಯಾಯಾಲಯದ ಒಬ್ಬ ಪ್ರತಿನಿಧಿಯಾಗಿ ನ್ಯಾಯಾಂಗ ಸಂಸ್ಥೆಯು ತನ್ನ ಅಸಲಿ ಕಾರ್ಯದಿಂದ ವಿಮುಖವಾಗುತ್ತಿದೆ ಎಂದು ತಿಳಿದಾಗ ಅದರ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
“ನಾನು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ನಂಬಿದ್ದೇನೆ. ಸುಪ್ರೀಂ ಕೋರ್ಟ್ ಅಥವಾ ಯಾವುದೇ ನಿರ್ದಿಷ್ಟ ಮುಖ್ಯ ನ್ಯಾಯಾಧೀಶರನ್ನು ಕೆಣಕುವಂತೆ ನನ್ನ ಹೇಳಿಕೆಗಳನ್ನು ನೀಡಿಲ್ಲ” ಎಂದು ಅವರು ಹೇಳಿದ್ದಾರೆ.
“ನನ್ನ ಟ್ವೀಟ್‌ಗಳು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ಷರತ್ತುಬದ್ಧ ಅಥವಾ ಬೇಷರತ್ತಾದ ಕ್ಷಮೆಯು ಈ ನಂಬಿಕೆಗಳಿಗೆ ಅಪ್ರಾಮಾಣಿಕ ಎಂದು ಭಾವಿಸುತ್ತೆನೆ. ಯಾವುದೇ ಕ್ಷಮೆಯಾಚನೆಯು ನ್ಯಾಯಾಲಯವು ಹೇಳಿದಂತೆ ಕೇವಲ ಪ್ರಚೋದನೆಯಾಗಿರಬಾರದು. ಅದು ಪ್ರಾಮಾಣಿಕವಾಗಿರಬೇಕು” ಎಂದು ಭೂಷಣ್ ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ರಕ್ಷಣೆಯ ಕಾವಲು ಸಂಸ್ಥೆ. ಇದು ನಿಜಕ್ಕೂ ಸಾಂವಿಧಾನಿಕ ಪ್ರಜಾಪ್ರಭುತ್ವದ ಭರವಸೆಯ ಕೊನೆಯ ಭದ್ರಕೋಟೆ ಎಂದು ನಾನು ನಂಬುತ್ತೇನೆ. ಇದನ್ನು ಪ್ರಜಾಪ್ರಭುತ್ವ ಜಗತ್ತಿನ ಅತ್ಯಂತ ಶಕ್ತಿಶಾಲಿ ನ್ಯಾಯಾಲಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಜಗತ್ತಿನಾದ್ಯಂತ ನ್ಯಾಯಾಲಯಗಳಿಗೆ ಇದು ಒಂದು ಉದಾಹರಣೆಯಾಗಿದೆ. ಇಂದು ಈ ಸಂಕಷ್ಟದ ಕಾಲದಲ್ಲಿ, ಭಾರತದ ಜನರ ಆಶಯಗಳು ಈ ನ್ಯಾಯಾಲಯದಲ್ಲಿ ಅಭಿವ್ಯಕ್ತವಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕೇ ಹೊರತು ಅಧಿಕಾರದ ಅನಿಯಂತ್ರಿತ ನಿಯಮವನ್ನಲ್ಲ” ಎಂದು ಅವರು ಹೇಳಿದ್ದಾರೆ.
ನ್ಯಾಯಪೀಠ ಈ ಹಿಂದೆ ಭೂಷಣ್‌ಗೆ ಕೆಲವು ದಿನಗಳ ಸಮಯ ತೆಗೆದುಕೊಂಡು ಹೇಳಿಕೆಯನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿತ್ತು. ಆಗಸ್ಟ್ 25ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: ಪ್ರಶಾಂತ್ ಭೂಷಣ್ ಮೇಲಿನ ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ: ನ್ಯಾಯಮೂರ್ತಿ ಕರ್ಣನ್


