ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ಕೇರಳ ವಿಧಾನಸಭೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.
ಬಿಜೆಪಿ ಶಾಸಕ ಒ ರಾಜಗೋಪಾಲ್ ವಿಧಾನಸಭೆಯಲ್ಲಿ ಮಾತನಾಡಲು ಅನುಮತಿ ನಿರಾಕರಿಸಿದ್ದರಿಂದ ಸಭಯನ್ನು ಬಹಿಷ್ಕರಿಸಿ ಹೊರ ನಡೆದರು. ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಯನ್ನು ಕೋರಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ಪಕ್ಷದ ಕೆಲವು ಮುಖಂಡರನ್ನು ವಿಧಾನಸಭೆಯ ಹೊರಗೆ ಧರಣಿ ನಡೆಸಿದ್ದಕ್ಕಾಗಿ ಪೊಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ನಿರ್ಣಯವನ್ನು ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಕೇಂದ್ರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ರಾಜ್ಯ ಸರ್ಕಾರವು ಹೆಚ್ಚಿನ ಪಾಲನ್ನು ಹೊಂದಿರುವ ಸ್ಪೆಷಲ್ ಪರ್ಪಸ್ ವೆಹಿಕಲ್ ಕಂಪನಿಗೆ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಅವಕಾಶ ನೀಡಬೇಕ ಎಂದು ಹೇಳಿದರು.
ಇದನ್ನೂ ಓದಿ: ವಿಶ್ವದ ಉನ್ನತ ಚಿಂತಕರ ಪಟ್ಟಿಯಲ್ಲಿ ಕೇರಳ ಆರೋಗ್ಯ ಮಂತ್ರಿ ಕೆ.ಕೆ. ಶೈಲಜಾ ಹೆಸರು!
“ಕಳೆದ ಎರಡು ವರ್ಷಗಳಿಂದ ರಾಜ್ಯವು ಈ ಕ್ರಮವನ್ನು ವಿರೋಧಿಸುತ್ತಿದೆ. ನಾನು ಪ್ರಧಾನಿ ಮೋದಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಇಷ್ಟಾಗಿಯು ರಾಜ್ಯದ ಪ್ರತಿಭಟನೆಯನ್ನು ನಿರ್ಲಕ್ಷಿಸಿ ಖಾಸಗಿ ಘಟಕಕ್ಕೆ ಹಸ್ತಾಂತರಿಸಲಾಯಿತು. ಕೇಂದ್ರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇರಳ ವಿಧಾನಸಭೆಯು ಸರ್ವಾನುಮತದಿಂದ ಒತ್ತಾಯಿಸುತ್ತದೆ” ಎಂದು ಸಿಎಂ ನಿರ್ಣಯವನ್ನು ಪರಿಚಯಿಸಿದರು.
ಕಳೆದ ವಾರ ಕೇರಳ ಸರ್ಕಾರ ಈ ಕೇಂದ್ರದ ನಿರ್ಧಾರವನ್ನು ತಡೆಹಿಡಿಯಲು ಹೈಕೋರ್ಟ್‌ಗೆ ಮೊರೆ ಹೋಗಿತ್ತು ಮತ್ತು ಇದು ಒಂದೆರಡು ದಿನಗಳಲ್ಲಿ ನ್ಯಾಯಾಲಯದ ಮುಂದೆ ಬರಲಿದೆ. ಅಷ್ಟೇ ಅಲ್ಲದೆ ಈ ನಿರ್ಧಾರವನ್ನು ವಿರೋಧಿಸಲು ಸರ್ವಪಕ್ಷ ಸಭೆಯನ್ನು ಕರೆದಿತ್ತು. ಆದರೆ ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಖಾಸಗಿ ಕಂಪೆನಿಗೆ ನೀಡಿದರೆ ಹೆಚ್ಚು ಅಗತ್ಯವಿರುವ ಅಭಿವೃದ್ಧಿಗೆ ಸಹಾಯ ಆಗುತ್ತದೆ ಎಂದು ಹೇಳಿದ್ದರು.
ನಿರ್ಣಯವನ್ನು ಬೆಂಬಲಿಸುವಾಗ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಲಾ, ಅದೇ ಕೈಗಾರಿಕಾ ಗುಂಪು ಪ್ರತಿನಿಧಿಸುವ ಬಿಡ್ಡಿಂಗ್ ಅನ್ನು ನಿರ್ವಹಿಸಲು ಸರ್ಕಾರವು ಕಾನೂನು ಏಜೆನ್ಸಿಯನ್ನು ನೇಮಿಸಿರುವುದು ವಿಮಾನ ನಿಲ್ದಾಣವನ್ನು ಅದಾನಿ ಗುಂಪಿಗೆ ಹಸ್ತಾಂತರಿಸುವ ಕ್ರಿಮಿನಲ್ ಪಿತೂರಿ ಇದೆ ಎಂದು ಹೇಳಿದರು. ಈ ಬಗ್ಗೆ ರಾಜ್ಯ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಪ್ರತಿಕ್ರಿಯಿಸಿದ್ದು ಕಾನೂನು ಏಜೆನ್ಸಿಯ ಹಿನ್ನೆಲೆ ಬಗ್ಗೆ ಸರ್ಕಾರಕ್ಕೆ ತಿಳಿದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಹಿಂದೂ ದೇವಾಲಯ ನಿಯಂತ್ರಿಸುವ ಅಧಿಕಾರವನ್ನು ಕೇರಳ ಸರ್ಕಾರ ಅನ್ಯಧರ್ಮಿಯರಿಗೆ ನೀಡಿದೆಯೆ?
ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವುದನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ ಮತ್ತು ಅನೇಕ ಕಾನೂನು ಹೋರಾಟಗಳನ್ನು ನಡೆಸಿದೆ ಆದರೆ ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ, ಇದು ನೀತಿ ನಿರ್ಧಾರದ ಭಾಗವಾಗಿದೆ ಎಂದು ಹೇಳಿದೆ.
2019 ರ ಫೆಬ್ರವರಿಯಲ್ಲಿ, ಸರ್ಕಾರಿ ಸ್ವಾಮ್ಯದ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ) ವಿಮಾನ ನಿಲ್ದಾಣಕ್ಕಾಗಿ ಮುಕ್ತ ಬಿಡ್ಡಿಂಗ್‌ನಲ್ಲಿ ಭಾಗವಹಿಸಿತ್ತು ಆದರೆ ಅದಾನಿ ಎಂಟರ್‌ಪ್ರೈಸಸ್ ಅತ್ಯಧಿಕ ಮೊತ್ತವನ್ನು ಉಲ್ಲೇಖಿಸಿ ಅದನ್ನು ಗೆದ್ದುಕೊಂಡಿತ್ತು. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಬಿಡ್ ಕಳೆದುಕೊಂಡ ನಂತರ ಈ ಕ್ರಮವನ್ನು ವಿರೋಧಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.
ಓದಿ: ಸಹ ಕಾರ್ಯಕರ್ತನ ಕೊಲೆ ಪ್ರಕರಣ: ಕೇರಳದ 9 RSS ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ


