Homeಮುಖಪುಟಅಮೆರಿಕದ ಶಾಖಕ್ಕೆ ಭಾರತದಲ್ಲಿ ಬೆವರಿದ ಫೇಸ್‌ಬುಕ್ - ರಾಜಾರಾಂ ತಲ್ಲೂರು

ಅಮೆರಿಕದ ಶಾಖಕ್ಕೆ ಭಾರತದಲ್ಲಿ ಬೆವರಿದ ಫೇಸ್‌ಬುಕ್ – ರಾಜಾರಾಂ ತಲ್ಲೂರು

ಸಾಮಾನ್ಯವಾಗಿ ಎಲ್ಲ ಕಾರ್ಪೊರೇಟ್ ಸಂಸ್ಥೆಗಳಂತೆಯೇ ಫೇಸ್‌ಬುಕ್ ಕೂಡ ತಾನು ಹೊಕ್ಕ ದೇಶಗಳಲ್ಲೆಲ್ಲ ಅಲ್ಲಿನ ಆಳುವವರನ್ನು ಖುಷಿಯಾಗಿಟ್ಟುಕೊಳ್ಳುವ ಕೌಶಲವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದೆ. ಈ ಗೆದ್ದೆತ್ತಿನ ಬಾಲ ಹಿಡಿಯುವ ಕೌಶಲಕ್ಕೆ ವ್ಯಾಪಾರ ಬಿಟ್ಟರೆ ಬೇರೆ ಹಂಗಿಲ್ಲ.

- Advertisement -
- Advertisement -

ಈ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದರ ಕಾವು ಏರುತ್ತಿರುವಂತೆಯೇ ಫೇಸ್‌ಬುಕ್, ಟ್ವಿಟ್ಟರ್ ಮೊದಲಾದ ಸೋಷಿಯಲ್ ಮೀಡಿಯಾ ಕಂಪನಿಗಳ ಮ್ಯಾನೇಜ್ಮೆಂಟ್ ಕೋಣೆಗಳಲ್ಲಿ ಬೆವರು ಮೂಡತೊಡಗಿದೆ. ತಮಾಷೆ ಎಂದರೆ, ಡೆಮೊಕ್ರಾಟರು ಮತ್ತು ರಿಪಬ್ಲಿಕನ್ನರಿಬ್ಬರೂ ಮಿಲಿಯಗಟ್ಟಲೆ ಡಾಲರ್ ಜಾಹೀರಾತುಗಳನ್ನು ಇದೇ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೆ ಸುರಿಯುತ್ತಾ, ಅಲ್ಲೇ ಅದೇ ಸೋಷಿಯಲ್ ಮೀಡಿಯಾಗಳಿಗೆ ವಾಚಾಮಗೋಚರ ಬೈಗುಳಮಳೆಯನ್ನೂ ಸುರಿಸುತ್ತಾ ತಮ್ಮ ಚುನಾವಣಾ ಪ್ರಚಾರಕ್ಕೆ ಬಿಸಿಯೇರಿಸಿಕೊಳ್ಳುತ್ತಿದ್ದಾರೆ.

2012ರ ಹೊತ್ತಿಗೇ ಸೋಷಿಯಲ್ ಮೀಡಿಯಾಗಳು ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ ಎಂಬುದು ಸಾಬೀತಾಗಿತ್ತು. 2016ರ ಚುನಾವಣೆಯಲ್ಲಿ ಅದನ್ನು ಕಾರ್ಯರೂಪಕ್ಕೂ ತಂದು ತೋರಿಸಿದ ಟ್ರಂಪ್ ಅಮೆರಿಕದ ಅಧ್ಯಕ್ಷರಾದದ್ದು ಈಗ ಇತಿಹಾಸ. ಈಗ 2020ರ ಚುನಾವಣೆಯ ಹೊತ್ತಿಗೆ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಡೆಮೊಕ್ರಾಟರು ಮತ್ತು ರಿಪಬ್ಲಿಕನ್ನರಿಬ್ಬರೂ ಸೋಷಿಯಲ್ ಮೀಡಿಯಾದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ತೀರ್ಮಾನಿಸಿಕೊಂಡೇ ರಂಗಕ್ಕಿಳಿದಿರುವುದು ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿಗಳ ತಲೆಬಿಸಿಗೆ ಮೂಲ ಕಾರಣ.

ಅಮೆರಿಕದ ಚುನಾವಣೆಯ ಹಾದಿಯಲ್ಲಿ ನಡೆದಿರುವ ಸೋಷಿಯಲ್ ಮೀಡಿಯಾ ಜಿದ್ದಾಜಿದ್ದಿ ಪ್ರಹಸನದಲ್ಲಿ ಒಂದು ಹೆಚ್ಚುವರಿ ಫಿಟ್ಟಿಂಗ್ ಆಗಿ ಕುಳಿತಿರುವ ಭಾರತಕ್ಕೆ ಮನಸ್ಸಿದ್ದರೆ, ಈ ಆಟವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದೊಂದು ಅವಕಾಶವೇ ಹೊರತು, ಈಗ ಭಾರತದಲ್ಲಿ ಎದ್ದಿರುವ ಫೇಸ್‌ಬುಕ್ ಭಾರತ ಸರ್ಕಾರದ ನಡುವಿನ ಸಂಬಂಧಗಳ ಚರ್ಚೆ ಅಲ್ಲಿಂದ ಮುಂದೆ ಸಾಗಲು ಈ ಪ್ರಕರಣ ಹಾದಿಮಾಡಿಕೊಟ್ಟೀತೆಂದು ಅನ್ನಿಸುವುದಿಲ್ಲ.

ಅಮೆರಿಕದ ಸಂವಹನ ಸಭ್ಯತೆಯ ಕಾಯಿದೆಯ ಸೆಕ್ಷನ್ 230ರ ಅಡಿಯಲ್ಲಿ, ಈ ಸೋಷಿಯಲ್ ಮೀಡಿಯಾಗಳನ್ನು ವೇದಿಕೆಗಳು (platforms) ಎಂದು ಪರಿಗಣಿಸಲಾಗಿರುವುದರಿಂದ ಅವಕ್ಕೆ ಪ್ರಕಾಶಕರಿಗೆ (publisher)ಗೆ ಅನ್ವಯವಾಗುವ ಸಾಂಪ್ರದಾಯಿಕ ಕಟ್ಟುನಿಟ್ಟಿನ ಕಾನೂನುಗಳು ಅನ್ವಯ ಆಗುವುದಿಲ್ಲ. ಆದರೆ ಈ ಚುನಾವಣೆಯ ಹೊತ್ತಿಗೆ ಈ ವೇದಿಕೆಗಳು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ವೇದಿಕೆಗಳಲ್ಲ, ಅವರು ತಮ್ಮಲ್ಲಿ ಕಾಣಿಸಿಕೊಳ್ಳುವ ಪೋಸ್ಟ್‌ಗಳನ್ನು ಸೆನ್ಸಾರ್ ಮಾಡುವ, ನಿಯಂತ್ರಿಸುವ, ತಿದ್ದುವ, ಅಡಗಿಸಿಡುವ ಹತ್ಯಾರುಗಳನ್ನು ಹೊಂದಿವೆ ಎಂಬುದು ಬಹಿರಂಗಗೊಂಡಿದೆ. ಎಲ್ಲರ ಕಣ್ಣುಗಳೂ ಅವರ ಮೇಲೆ ನೆಟ್ಟಿವೆ. ವಿಶೇಷವಾಗಿ ಫೇಸ್‌ಬುಕ್, ಟ್ವಿಟ್ಟರ್‌ಗಳೆರಡೂ ಈ ಚುನಾವಣೆಯಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡತೊಡಗಿವೆ. ಹಾಗಾಗಿ ರಿಪಬ್ಲಿಕನ್ನರು ಮತ್ತು ಡೆಮೊಕ್ರಾಟರಿಬ್ಬರಿಗೂ ಕಾಸುಕೊಟ್ಟು ಬೈದುಕೊಳ್ಳಲು ಸಮಾನಾವಕಾಶಗಳು ಸಿಗತೊಡಗಿವೆ.

2020 ಜುಲೈ: ಭಾರತ ಅಮೆರಿಕಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆಯ ಹೋಲಿಕೆ

ಮೀಡಿಯಾ                   ಭಾರತ (ಕೋಟಿಗಳಲ್ಲಿ)        ಅಮೆರಿಕ (ಕೋಟಿಗಳಲ್ಲಿ)

ಟ್ವಿಟ್ಟರ್ ಖಾತೆಗಳು          1.7                                 6.2

ಫೇಸ್‌ಬುಕ್ ಖಾತೆಗಳು       29                                  19

ಇನ್ಸ್ಟಾಗ್ರಾಂ ಖಾತೆಗಳು      10                                  13

 

ಭಾರತದಲ್ಲಿ ಫೇಸ್‌ಬುಕ್ ಆಟ

ಸಾಮಾನ್ಯವಾಗಿ ಎಲ್ಲ ಕಾರ್ಪೊರೇಟ್ ಸಂಸ್ಥೆಗಳಂತೆಯೇ ಫೇಸ್‌ಬುಕ್ ಕೂಡ ತಾನು ಹೊಕ್ಕ ದೇಶಗಳಲ್ಲೆಲ್ಲ ಅಲ್ಲಿನ ಆಳುವವರನ್ನು ಖುಷಿಯಾಗಿಟ್ಟುಕೊಳ್ಳುವ ಕೌಶಲವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದೆ. ಈ ಗೆದ್ದೆತ್ತಿನ ಬಾಲ ಹಿಡಿಯುವ ಕೌಶಲಕ್ಕೆ ವ್ಯಾಪಾರ ಬಿಟ್ಟರೆ ಬೇರೆ ಹಂಗಿಲ್ಲ. ಭಾರತದಲ್ಲೂ ಮೊದಲ ಪೂರ್ಣಪ್ರಮಾಣದ ಸೋಷಿಯಲ್ ಮೀಡಿಯಾ ಕಾಳಗದ ಚುನಾವಣೆ 2019ರಲ್ಲಿ ನಡೆದ ಬಳಿಕ, ವಿಶೇಷವಾಗಿ ಫೇಸ್‌ಬುಕ್ ಸ್ವಲ್ಪ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಾರಂಭಿಸಿದೆ; ಆದರೆ ಅದಕ್ಕೆ ಭಾರತದ ಸನ್ನಿವೇಶದ ಅರಿವಿಲ್ಲದಿರುವುದು, ಅದನ್ನು ಇನ್ನಷ್ಟು ಸಂಕಟಕ್ಕೆ ಸಿಕ್ಕಿಸಿಹಾಕಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಸಾಕಷ್ಟು ಹಾನಿಮಾಡಿದೆ.

2014ರ ಚುನಾವಣೆಯಲ್ಲಿ ಆಗ ಪ್ರತಿಪಕ್ಷವಾಗಿದ್ದ NDA ಸೋಷಿಯಲ್ ಮೀಡಿಯಾ ಮೆಂದಷ್ಟೂ ಹಸುರಿದ್ದ ಹುಲ್ಲುಗಾವಲಾಗಿತ್ತು. ಆಗ ಪರಿಸ್ಥಿತಿ ಹಾಗಿತ್ತು. ಸೋಷಿಯಲ್ ಮೀಡಿಯಾದ ಮಟ್ಟಿಗೆ ಅದು ಮೋದಿಯವರ ಪಕ್ಷಕ್ಕೆ ಏಕಪಕ್ಷೀಯವಾದ ಗೆಲುವಾಗಿತ್ತು. ಆದರೆ 2018ರ ಹೊತ್ತಿಗೆ ಪ್ರತಿಪಕ್ಷಗಳು ಸ್ವಲ್ಪಮಟ್ಟಿಗೆ ಎಚ್ಚೆತ್ತುಕೊಂಡದ್ದರಿಂದಾಗಿ ಸೋಷಿಯಲ್ ಮೀಡಿಯಾ ಕೂಡ ಪೈಪೋಟಿಯ ಕಣವಾಯಿತು. ಆದರೆ, ಆಗಷ್ಟೇ ಸೋಷಿಯಲ್ ಮೀಡಿಯಾಕ್ಕೆ ಕಣ್ಣು ತೆರೆದಿದ್ದ ಪ್ರತಿಪಕ್ಷಗಳಿಗೆ ಸ್ಪಷ್ಟ ಗುರಿ ಇಲ್ಲದ್ದರಿಂದಾಗಿ, 2019ರಲ್ಲಿ ಮತ್ತೆ NDA ಮೇಲುಗೈ ಸಾಧಿಸಿತು. ಆದರೆ, ಫೇಸ್‌ಬುಕ್ ಪರಿಸ್ಥಿತಿ ಮೊದಲಿನಂತೆ ನಿಷ್ಕಳಂಕವಾಗಿ ಉಳಿದಿರಲಿಲ್ಲ. ಅದು ಎಲ್ಲರಿಗೂ ಸಮಾನಾವಕಾಶಗಳನ್ನು ಒದಗಿಸುವ ವೇದಿಕೆ ಅಲ್ಲ ಎಂಬುದು ನಿಧಾನಕ್ಕೆ ಬಯಲಿಗೆ ಬರತೊಡಗಿತು. ಚುನಾವಣೆ ತಯಾರಿಯ ಹೊತ್ತಿಗೇ ಇದು ಸುದ್ದಿಯಾಗತೊಡಗಿದ್ದರಿಂದಾಗಿ, ಆ ಮೊದಲು ಫೇಕ್ ಸುದ್ದಿಗಳು ಫೇಸ್‌ಬುಕ್‌ನಲ್ಲಿ ಹರಿದಾಡಿದ್ದನ್ನು ಒಪ್ಪಿಕೊಂಡ ಫೇಸ್‌ಬುಕ್, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಂತಹ ಫೇಕ್ ಸುದ್ದಿಗಳನ್ನು ಗುರುತಿಸಿ, ಹರಡದಂತೆ ನಿಲ್ಲಿಸಲು, ಈಗಾಗಲೇ ಇರುವ 7500 ಮಾಡರೇಟರ್‌ಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿ, ಅಂದಾಜು 20000 ಮಾಡರೇಟರ್‌ಗಳನ್ನು ನೇಮಿಸಿಕೊಳ್ಳುತ್ತಿರುವುದಾಗಿ 2018ರ ಸೆಪ್ಟಂಬರ್ ವೇಳೆಗೆ ಹೇಳಿತು. ಜೆನ್‌ಪ್ಯಾಕ್ಟ್, ಕಾಗ್ನಿಜೆಂಟ್ ಮತ್ತು ಎಕ್ಸೆಂಚರ್ ಸಂಸ್ಥೆಗಳು ಈ ಮಾಡರೇಷನ್‌ನ ಮಾನವಸಂಪನ್ಮೂಲಗಳನ್ನು ಒದಗಿಸುವ ಬಹುತೇಕ ಜಾಗತಿಕ ಗುತ್ತಿಗೆ ಹಿಡಿದಿವೆ.

ಈ ರೀತಿಯ ಕಂಟೆಂಟ್ ಮಾಡರೇಷನ್ ಎಂಬುದು ಬಹಳ ಮಾಯಕದ ಕೆಲಸ. ಯಾವುದು ಪ್ರಕಟಣೆಗೆ ಅನರ್ಹ ಎಂಬ ಒಂದು ಗ್ಲೋಬಲ್ ಮಾನದಂಡ ಮತ್ತು ಫೇಸ್‌ಬುಕ್‌ನ ವ್ಯಾವಹಾರಿಕ ಹಿತಾಸಕ್ತಿಗಳ ತಾಕಲಾಟದ ನಡುವೆ ಭಾರತದಂತಹ ವಿಸ್ತಾರವಾದ, ವೈವಿಧ್ಯಮಯವಾದ ದೇಶವೊಂದರ ಕೋಟಿಗಟ್ಟಲೆ ಫೇಸ್‌ಬುಕ್ ಪುಟಗಳ ಮೇಲೆ ಕಣ್ಣಿಡುವುದು ಮತ್ತು 24 ತಾಸುಗಳಲ್ಲಿ ಅದಕ್ಕೆ ಅಬದ್ಧವೆನ್ನಿಸಿದ್ದನ್ನು ಅಳಿಸಿಹಾಕುವುದು ಸವಾಲೆಂಬುದರಲ್ಲಿ ಸಂಶಯ ಇಲ್ಲ. ಆದರೆ ಈ ರೀತಿ ಕಣ್ಣಿಡುವವರು ಯಾರು? ಅವರನ್ನು ನೇಮಿಸಿಕೊಂಡವರು ಯಾರು? ಅವರ ಉದ್ದೇಶಗಳೇನು? ಎಂಬುದನ್ನೆಲ್ಲ ನಿಯಂತ್ರಿಸುವುದು ಸಾಂಸ್ಥಿಕವಾಗಿ ಬಹುತೇಕ ಅಸಾಧ್ಯ ಸನ್ನಿವೇಶ. ಭಾರತದಂತಹ ಪ್ರಮುಖ ಮಾರುಕಟ್ಟೆಯಲ್ಲಿ ತನ್ನದೇ ವ್ಯವಹಾರ ಹಿತಾಸಕ್ತಿಗಳನ್ನೂ ಹೊಂದಿರುವ ಫೇಸ್‌ಬುಕ್‌ನಂತಹ ಖಾಸಗಿ ಸಂಸ್ಥೆಗಂತೂ ಇದು ಕತ್ತಿಯ ಮೇಲಿನ ನಡಿಗೆ. ಇಲ್ಲಿನ ಆಳುವವರನ್ನು ಸಂತುಷ್ಟಗೊಳಿಸಿಕೊಂಡು ಮುಂದುವರಿಯುವುದು ಅದಕ್ಕೆ ಅನಿವಾರ್ಯ. ಹಾಗಾಗಿ ಇಂದು, ಭಾರತದಲ್ಲಿ ಫೇಸ್‌ಬುಕ್ ಗೋಡೆಯ ಮೇಲೆ ಯಾವ ಕಂಟೆಂಟ್ ಉಳಿಯುತ್ತದೆ- ಯಾವ ಕಂಟೆಂಟ್ ಅನ್ನು ಅಳಿಸಲಾಗುತ್ತದೆ ಎಂಬುದು ಉದಾಹರಣೆಗಳ ಸಮೇತ ಸುದ್ದಿಯಾಗತೊಡಗಿದೆ.

ಆಗಬೇಕಾದ್ದು ಏನು?

ಸೋಷಿಯಲ್ ಮೀಡಿಯಾ ಎಂಬುದು ಸರ್ವಸಮರ್ಥ ಮಾಧ್ಯಮ ಎಂಬುದು ಸಾಬೀತಾದ ಮೇಲೆ ಅದರ ಸುಸೂತ್ರ ನಿರ್ವಹಣೆಗಾಗಿ ಬೇರೆ ಮಾಧ್ಯಮಗಳಿಗಿರುವಂತಹ ಕಾನೂನುಬದ್ಧ ನಿಯಂತ್ರಣಗಳು ಒಂದು ಜಾಗತಿಕ ನಿಯಮಗಳ ಚೌಕಟ್ಟಿನಲ್ಲಿ ರೂಪುಗೊಳ್ಳುವುದು ಅಗತ್ಯವಿದೆ.

ಆನ್‌ಲೈನ್ ದ್ವೇಷಸಾಧನೆಯ ಮಾತುಗಳು, ಲೈಂಗಿಕವಾದ ಕಂಟೆಂಟ್‌ಗಳನ್ನು ಆನ್‌ಲೈನ್‌ನಿಂದ ಹೊರತೆಗೆಯಲು ಸಮರ್ಥವಾದ ಪರಿಕರಗಳನ್ನು ಈಗ ಬಹುತೇಕ ಎಲ್ಲ ಸೋಷಿಯಲ್ ಮೀಡಿಯಾಗಳೂ ಹೊಂದಿವೆ. ಅದಕ್ಕೆ ಜಾಗತಿಕವಾದ ವ್ಯವಸ್ಥೆಯೂ ಇದೆ.

ಆದರೆ, ಇದರ ಮುಸುಕಿನಲ್ಲಿ ರಾಜಕೀಯ ಉದ್ದೇಶಗಳ ಕಾರಣಕ್ಕಾಗಿ ಒಂದು ರಾಜಕೀಯ ಪಕ್ಷದ ಹಿತಾಸಕ್ತಿಗಳನ್ನು ರಕ್ಷಿಸುವ, ಇನ್ನೊಂದರ ಹಿತಾಸಕ್ತಿಗಳಿಗೆ ಹಾನಿ ಮಾಡುವ ಕಂಟೆಂಟ್‌ಗಳನ್ನು ಹಾಗೇ ಉಳಿಸುವಂತಹ ರಂಗೋಲಿಯಡಿ ತೂರಿ ನಡೆಯುವ ಆಟಗಳನ್ನು ಸಾಂಸ್ಥಿಕ ನಿಯಮಗಳು ನಿಭಾಯಿಸುವುದು ಭಾರತದ ಸಂದರ್ಭದಲ್ಲಿ ಕಷ್ಟ ಇದೆ. ಇಲ್ಲಿ ಭಾವನೆಗಳಿಗೆ ಧಕ್ಕೆ ಉಂಟಾದ ಕುರಿತು ಸೈಬರ್ ಕ್ರೈಮ್ ದೂರುಗಳು ಚಾಲ್ತಿಯಲ್ಲಿವೆಯಾದರೂ ಅದು ಅಂತಹ ಪ್ರಕಟಣೆಗಳಿಗೆ ಅವಕಾಶಕೊಡುವ, ಅದನ್ನು ಹರಡುವ ಸಮಾನ ದೋಷಿ ಆಗಿರುವ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂಅನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಈ ಫ್ಲಾಟ್‌ಫಾರಂಗಳು ಅವು ಕಾರ್ಯಾಚರಿಸುವ ದೇಶದ ನೆಲದ ಕಾನೂನಿಗೆ ಉತ್ತರದಾಯಿ ಆಗುವ ತನಕ ಈ ಸಮಸ್ಯೆ ಪರಿಹಾರ ಆಗುವ ಲಕ್ಷಣಗಳು ಕಾಣುತ್ತಿಲ್ಲ.


ಇದನ್ನೂ ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ – ರಾಜಾರಾಂ ತಲ್ಲೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...