ನೆಟ್‌ಫ್ಲಿಕ್ಸ್ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿರುವ ‘ಬ್ಯಾಡ್ ಬಾಯ್ ಬಿಲಿಯನೇರ್ಸ್’ ಸಾಕ್ಷ್ಯಚಿತ್ರದ ವಿರುದ್ಧ ಪಿಎನ್‌ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬ್ಯಾಡ್ ಬಾಯ್ ಬಿಲಿಯನೇರ್ಸ್ ಎಂಬ ಈ ಸಾಕ್ಷ್ಯಚಿತ್ರವು ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದ್ದು, ಚಿತ್ರವು ಭಾರತದ ಅತ್ಯಂತ ಕುಖ್ಯಾತ ಉದ್ಯಮಿಗಳ ದುರಾಸೆ, ವಂಚನೆ ಮತ್ತು ಭ್ರಷ್ಟಾಚಾರವನ್ನು ಪರಿಶೋಧಿಸುತ್ತದೆ ಎಂದು ನೆಟ್‌ಫ್ಲಿಕ್ಸ್ ಹೇಳಿತ್ತು.
ಮೆಹುಲ್ ಚೋಕ್ಸಿ ಪರವಾಗಿ ಹಾಜರಾದ ವಕೀಲರು “ಸಾಕ್ಷ್ಯಚಿತ್ರವು ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಅದರ ಬಿಡುಗಡೆಯ ಮೊದಲು ನಾವು ಅದರ ಪೂರ್ವವೀಕ್ಷಣೆಯನ್ನು ವೀಕ್ಷಿಸಲು ಬಯಸುತ್ತೇವೆ” ಎಂದು ನ್ಯಾಯಲಯದಲ್ಲಿ ಮನವಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸಾಕ್ಷ್ಯ ಚಿತ್ರದ ಪೂರ್ವ ಸ್ಕ್ರೀನಿಂಗ್ ಅನ್ನು ಒದಗಿಸಬಹುದೇ ಎಂದು ನೆಟ್‌ಫ್ಲಿಕ್ಸ್ ಅನ್ನು ಕೇಳಿದೆ. ವಿಚಾರಣೆ ವೇಳೆಯಲ್ಲಿ ಪ್ರತಿಕ್ರಿಯಿಸಿದ ನೆಟ್‌ಫ್ಲಿಕ್ಸ್ ಸಾಕ್ಷ್ಯ ಚಿತ್ರವು ನೀರವ್ ಮೋದಿ ಹಾಗೂ ಇತರ ಜನರ ಬಗ್ಗೆಯಿದೆ, ಅದರಲ್ಲಿ ಮೆಹುಲ್ ಚೋಕ್ಸಿ ಬಗೆಗೆ ಕೇವಲ ಎರಡು ನಿಮಿಷವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳಿದೆ.
ಸಾಕ್ಷ್ಯಚಿತ್ರ ಬಿಡುಗಡೆಯನ್ನು ಮುಂದೂಡಲು ಮೆಹುಲ್ ಚೋಕ್ಸಿ ವಕೀಲರು ಕೋರಿದ್ದಾರೆ. ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಆಗಸ್ಟ್ 28 ರಂದು ನಿಗದಿಪಡಿಸಿದೆ.
13,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಗೀತಾಂಜಲಿ ಜೆಮ್ಸ್‌ನ ಪ್ರವರ್ತಕ ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಆರೋಪಿಯಾಗಿದ್ದಾರೆ. ಮೆಹುಲ್ ಚೋಕ್ಸಿ ಕಳೆದ ವರ್ಷ ಭಾರತದಿಂದ ಪಲಾಯನವಾಗಿದ್ದು, ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿದ್ದಾರೆ.
ಇದನ್ನೂ ಓದಿ: ಇದುವರೆಗೂ ಯಾವುದೇ ಲವ್ ಜಿಹಾದ್ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ..


