Homeಮುಖಪುಟಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!

ಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!

ಎಷ್ಟೆಲ್ಲಾ ಕಟಿಬದ್ಧ ಐಟಿ ಸೆಲ್, ದೇಶದ ತುಂಬಾ ಅತಿ ದೊಡ್ಡ ಜಾಲವಿದ್ದರೂ ಸಹ ಲೈಕ್‌ಗಳಿಗಿಂತ ಡಿಸ್‌ಲೈಕ್‌ಗಳ ಸಂಖ್ಯೆ ಏಳೆಂಟು ಪಟ್ಟು ಹೆಚ್ಚಾಗಿರುವುದು ಬಿಜೆಪಿಗೆ ದೊಡ್ಡ ತಲೆನೋವಿನ ವಿಷಯವಾಗಿದೆ.

- Advertisement -
- Advertisement -

ಪ್ರತಿ ಬಾರಿ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ ಈ ಬಾರಿಯ ಮನ್ ಕಿ ಬಾತ್‌ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೋದಿಯವರ ಜನಪ್ರಿಯತೆ ಕುಸಿದಿದೆ ಎಂಬ ಚರ್ಚೆ ಆರಂಭವಾಗಿದೆ.

ನಿನ್ನೆ ಮನ್ ಕಿ ಬಾತ್ ಪ್ರಸಾರವಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹೊತ್ತಲ್ಲಿ, ವಿದ್ಯಾರ್ಥಿಗಳ, ಹಲವು ರಾಜ್ಯಗಳ ವಿರೋಧದ ನಡುವೆಯೂ NEET ಮತ್ತು JEE ಪರೀಕ್ಷೆಗಳನ್ನು ನಡೆಸಲು ಕೇಂದ್ರ ತಯಾರಿ ನಡೆಸಿರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಮನ್‌ ಕಿ ಬಾತ್ ಕಾರ್ಯಕ್ರಮವನ್ನು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಅಲ್ಲೆ ಅತ್ಯಧಿಕ ಜನ ಡಿಸ್‌ಲೈಕ್ ಮಾಡುವ ಮೂಲಕ ತಮ್ಮ ವಿರೋಧ ದಾಖಲಿಸಿದ್ದಾರೆ. ಈ ವರದಿ ಬರೆಯುವ ವೇಳೆಗೆ ಆ ವಿಡಿಯೋಗೆ 63,000 ಜನರು ಲೈಕ್ ಒತ್ತಿದರೆ, 4,37,000 ಜನರು ಡಿಸ್‌ಲೈಕ್‌ ಒತ್ತುವ ಮೂಲಕ ಮೋದಿಯವರನ್ನು ಮುಜುಗರಕ್ಕೀಡುಮಾಡಿದ್ದಾರೆ.

ಇನ್ನು ಪ್ರಧಾನಿ ಕಛೇರಿಯ ಅಧಿಕೃತ ಯೂಟ್ಯೂಬ್‌ನಲ್ಲಿ 35,000 ಜನ ಇಷ್ಟಪಟ್ಟರೆ 69,000 ಜನ ತಿರಸ್ಕರಿಸಿದ್ದಾರೆ. ಒಟ್ಟಿನಲ್ಲಿ ಎಲ್ಲಾ ವೇದಿಕೆಗಳಲ್ಲಿಯೂ ಮೋದಿಯವರ ಮನ್‌ಕಿ ಬಾತ್‌ಗೆ ಲೈಕ್‌ಗಳಿಗಿಂತ ಡಿಸ್‌ಲೈಕ್‌ಗಳೇ ಅಧಿಕವಾಗಿವೆ.

ನಿನ್ನೆ ಸಂಜೆಯೇ ಮೋದಿಯವರ ವಿಡಿಯೋಗಳಿಗೆ ಡಿಸ್‌ಲೈಕ್‌ಗಳು ಜಾಸ್ತಿಯಾಗುತ್ತಿರುವುದು ಬಿಜೆಪಿ ಗಮನಕ್ಕೆ ಬಂದಿದೆ. ಕೂಡಲೇ ಐಟಿ ಸೆಲ್‌ ಗಮನಕ್ಕೆ ತಂದು ಲೈಕ್‌ಗಳ ಸಂಖ್ಯೆ ಜಾಸ್ತಿ ಮಾಡುವಂತೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಎಷ್ಟೆಲ್ಲಾ ಕಟಿಬದ್ಧ ಐಟಿ ಸೆಲ್, ದೇಶದ ತುಂಬಾ ಅತಿ ದೊಡ್ಡ ಜಾಲವಿದ್ದರೂ ಸಹ ಲೈಕ್‌ಗಳಿಗಿಂತ ಡಿಸ್‌ಲೈಕ್‌ಗಳ ಸಂಖ್ಯೆ ಏಳೆಂಟು ಪಟ್ಟು ಹೆಚ್ಚಾಗಿರುವುದು ಬಿಜೆಪಿಗೆ ದೊಡ್ಡ ತಲೆನೋವಿನ ವಿಷಯವಾಗಿದೆ.

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದ್ದು, ಮನ್ ಕಿ ಬಾತ್ ಬಿಟ್ಟು, ಕಾಮ್ ಕಿ ಬಾತ್ ಹೇಳಿ ಎಂಬ ಕಾಮೆಂಟ್‌ಗಳು ಬಂದಿವೆ. ಗೊಂಬೆಗಳ ಬದಲು ಸಮಸ್ಯೆಗಳ ಬಗ್ಗೆ ಮಾತನಾಡಿ, ಪರಿಹಾರ ನೀಡಿ ಎಂಬಂತ ಕಾಮೆಂಟ್‌ಗಳು ಬರತೊಡಗಿದವು. ಯೂಟ್ಯೂಬ್‌ನಲ್ಲಿ ಕಾಮೆಂಟ್‌ಗಳಲ್ಲಿ ಪ್ರಶ್ನೆಗಳು ಹೆಚ್ಚಾಗತೊಡಗಿದಂತೆ ಬಿಜೆಪಿಯು ತಕ್ಷಣ ಕಾಮೆಂಟ್‌ಗಳನ್ನು ಸಾರ್ವಜನಿಕರಿಗೆ ಕಾಣಿಸದಂತೆ ಮರೆಮಾಚಿದೆ. ಜನ ಅದಕ್ಕೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್ ಚಾನೆಲ್‌ಗಳಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಜನ ಈಗಲೂ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಡಿಸ್‌ಲೈಕ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬ್ಯಾಂಕಿಂಗ್ ಪರೀಕ್ಷೆಗಳು, ನೀಟ್, ಜೆಇಇ ಪರೀಕ್ಷೆ ಮುಂದೂಡಿ, ಸರ್ಕಾರ ನಡೆಸಿರುವ ಪರೀಕ್ಷೆಗಳ ಫಲಿತಾಂಶ ಬಿಡುಗಡೆ ಮಾಡಿ, ಪರೀಕ್ಷೆಗಳ ಬಗ್ಗೆ ಮಾತನಾಡಿ ಎಂದರೆ ಗೊಂಬೆಗಳ ಬಗ್ಗೆ ಮಾತನಾಡುತ್ತಾರೆ ಎಂಬಂತ ಕಾಮೆಂಟ್‌ಗಳನ್ನು ಅಲ್ಲಿ ಕಾಣಬಹುದು.

ಖ್ಯಾತ ಯೂಟ್ಯೂಬರ್ ಮತ್ತು ಯುವ ಚಿಂತಕ ಧೃವ್ ರಾಠೀ ಟ್ವೀಟ್ ಮಾಡಿ “ಪಿಎಂಓ ಸರ್ಕಾರವನ್ನು ಟೀಕಿಸಿ, ಟೀಕೆಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ ಎಂದು ಬರದುಕೊಂಡಿದ್ದಾರೆ. ಆದರೆ ಕಮೆಂಟ್ ಮೂಲಕ ಟೀಕೆ ಮಾಡಲು ಹೋದರೆ ಕಮೆಂಟ್ ಸೆಕ್ಷನ್ ಅನ್ನೇ ತೆಗೆದುಹಾಕಲಾಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.

ಇಷ್ಟು ದಿನ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮಾತ್ರ ಪರೀಕ್ಷೆ ವಿರೋಧಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದರೆ ನಿನ್ನೆಯಿಂದ ನಡೆಯುತ್ತಿರುವ ಈ ಡಿಸ್‌ಲೈಕ್ ಪ್ರಕ್ರಿಯೇ ಇಡೀ ದೇಶದ ಜನರು ಕೂಡ ಪರೀಕ್ಷೆ ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿಗೆ ಭಾರೀ ವಿರೋಧ ಇದೆ ಎಂಬುದನ್ನು ಸಾಬೀತುಪಡಿಸುತ್ತಿದೆ.

ನಾಳೆಯಿಂದ ಜೆಇಇ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ವಿರೋಧ ಪಕ್ಷಗಳು ಪರೀಕ್ಷೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.


ಇದನ್ನೂ ಓದಿ: ಜೆಇಇ, ನೀಟ್ ಪರೀಕ್ಷೆಗಳ ಬಗ್ಗೆ ಚರ್ಚಿಸಿ ಎಂದರೆ, ಪ್ರಧಾನಿ, ಗೊಂಬೆಗಳ ಬಗ್ಗೆ ಮಾತನಾಡಿದ್ದಾರೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...