ಹಾಲಿ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಕಾರ್ಯವೈಖರಿ ಬಗ್ಗೆ ಟೀಕಿಸಿದ್ದಕ್ಕಾಗಿನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ “ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ ಮತ್ತು ಮೂರು ತಿಂಗಳ ವಕೀಲ ವೃತ್ತಿಗೆ ನಿಷೇಧ” ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪಿತ್ತಿದೆ.
ಆಗಸ್ಟ್ 5 ರಂದು ಭೂಷಣ್ ವಿರುದ್ಧ ವಿಚಾರಣೆ ಆರಂಭವಾಗಿತ್ತು. ಆಗಸ್ಟ್ 14 ರಂದು ಅವರು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿ, ಆಗಸ್ಟ್ 20 ರಂದು ಶಿಕ್ಷೆ ಪ್ರಮಾಣ ಘೊಷಿಸುವುದಾಗಿ ಹೇಳಿತ್ತು. ಆದರೆ ಆಗಸ್ಟ್ 20 ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ನಿರ್ದೇಶನದಂತೆ ಬೇಷರತ್ ಕ್ಷಮೆಯಾಚಿಸಲು ಭೂಷಣ್ ನಿರಾಕರಿಸಿದರು. ನೀವೆಷ್ಟೇ ಸಮಯ ಕೊಟ್ಟರೂ ತನ್ನ ಪ್ರಯೋಜನವಿಲ್ಲ ಎಂದಿದ್ದರು.
“ನನ್ನ ಉದ್ದೇಶವನ್ನು ಅರಿಯದೇ, ಸ್ವಷ್ಟ ವಿಚಾರಣೆ ನಡೆಸದೆ ನ್ಯಾಯಾಲಯವು ಈ ತೀರ್ಮಾನಕ್ಕೆ ಬಂದು ತಲುಪಿದ ಬಗ್ಗೆ ನನಗೆ ಆಘಾತವಾಗಿದೆ. ನನ್ನ ಟ್ವೀಟ್‌ಗಳು ನಾಗರಿಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ. ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯವು ವಿಧಿಸಬಹುದಾದ ಯಾವುದೇ ದಂಡವನ್ನು ನಾನು ಸಲ್ಲಿಸುತ್ತೇನೆ. ಕ್ಷಮೆಯಾಚಿಸುವುದಿಲ್ಲ” ಎಂದು ಭೂಷಣ್ ತಿಳಿಸಿದ್ದರು.
ಆದರೂ ಸುಪ್ರೀಂ ಕೋರ್ಟ್ ಅವರಿಗೆ ಕ್ಷಮೆ ಕೇಳಲು ಮತ್ತು ತಮ್ಮ ಹೇಳಿಕೆಯನ್ನು ಬದಲಿಸಲು ಮೂರುದಿನಗಳ ಸಮಯ ನೀಡಿತ್ತು. ಆಗಸ್ಟ್ 24 ರಂದು ಮತ್ತೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ ಅಂದೂ ಸಹ ಸಮಯ ನೀಡಿ ಕ್ಷಮೆ ಕೇಳುವಂತೆ ನಿರ್ದೇಶಿಸಿತ್ತು. ಆದರೆ ಅಂದು ಕೂಡ ಭೂಷಣ್ ಕ್ಷಮೆಯಾಚಿಸಲಿಲ್ಲ.
“ನನ್ನ ಟ್ವೀಟ್‌ಗಳು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ಷರತ್ತುಬದ್ಧ ಅಥವಾ ಬೇಷರತ್ತಾದ ಕ್ಷಮೆಯು ಈ ನಂಬಿಕೆಗಳಿಗೆ ಅಪ್ರಾಮಾಣಿಕ ಎಂದು ಭಾವಿಸುತ್ತೆನೆ. ಯಾವುದೇ ಕ್ಷಮೆಯಾಚನೆಯು ನ್ಯಾಯಾಲಯವು ಹೇಳಿದಂತೆ ಕೇವಲ ಪ್ರಚೋದನೆಯಾಗಿರಬಾರದು. ಅದು ಪ್ರಾಮಾಣಿಕವಾಗಿರಬೇಕು. ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ” ಎಂದು ಭೂಷಣ್ ನುಡಿದಿದ್ದರು.
ಇದನ್ನೂ ಓದಿ; ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ: ಪ್ರಶಾಂತ್ ಭೂಷಣ್
ವಕೀಲ, ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಿ, ಪ್ರಕರಣ ಬಿಡಬೇಕು ಎಂದು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಆಗಸ್ಟ್ 25ರಂದು ಮನವಿ ಮಾಡಿದ್ದರು. ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್ ಗವಾಯಿ ಮತ್ತು ಕೃಷ್ಣಮುರಾರಿಯವರಿದ್ದ ಪೀಠದ ಎದುರು ಭೂಷಣ್ ಪರವಾಗಿ ಹಿರಿಯ ವಕೀಲರಾದ ದುಷ್ಯಂತ್ ಧವೆ ಮತ್ತು ರಾಜೀವ್ ಧವನ್ ವಾದಿಸಿದ್ದರು.
ಇದನ್ನೂ ಓದಿ: ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ – ದೇವನೂರ ಮಹಾದೇವ


