ಇಂದು ಚಿಕ್ಕಬಳ್ಳಾಪುರದಲ್ಲಿ ಗೋಶಾಲೆ ಉದ್ಘಾಟನೆ ಮಾಡಿ ಮಾತನಾಡಿರುವ ಸಚಿವ ಸುಧಾಕರ್ ರಾಜ್ಯದಲ್ಲಿ ಮತ್ತೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವುದಾಗಿ ಘೋಷಿಸಿ, ಆ ಕುರಿತು ಚರ್ಚೆ ಹುಟ್ಟುಹಾಕಿದ್ದಾರೆ.
ಗೋವುಗಳು ನಮ್ಮ ಮನೆಯ ಸದಸ್ಯರಿದ್ದಂತೆ ಅವುಗಳನ್ನು ಹತ್ಯೆ ಮಾಡುವುದು ಅಪರಾಧ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಸದ್ಯದಲ್ಲೇ ಜಾರಿಗೆ ತರಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಜೊತೆಗೆ ಜನರು ಸಹ ಗೋ ವಧೆ ತಡೆ ಬಗ್ಗೆ ಜಾಗೃತಿ ಮೂಡಿಸಬೇಕು. ಭಾರತೀಯರಾದ ನಾವು ಎಲ್ಲಾ ರಾಜ್ಯಗಳಲ್ಲೂ ಗೋಹತ್ಯೆ, ಗೋ ಮಾಂಸ ರಫ್ತು ನಿಲ್ಲಿಸಬೇಕು ಎಂದರು. ಎರಡು ಸದನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆಯಾಗಬೇಕು. ನಮ್ಮ ಪಕ್ಷ ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪರೋಕ್ಷವಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವ ಕುರಿತು ಸುಳಿವು ನೀಡಿದ್ದಾರೆ.
ಕಳೆದ ತಿಂಗಳು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಕೂಡ ಶೀಘ್ರವೇ ಕರ್ನಾಟಕ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿದೆ ಎಂದು ಹೇಳಿದ್ದರು. ಕೊರೋನಾ ಸೋಂಕು ಕಡಿಮೆಯಾದಾಗ ಅಧ್ಯಯನಕ್ಕಾಗಿ ದೇಶದಲ್ಲಿ ಈಗಾಗಲೇ ಕಾನೂನು ಜಾರಿಯಿರುವ ಗುಜರಾತ್, ಉತ್ತರಪ್ರದೇಶಗಳಿಗೆ ತಜ್ಞರ ಸಮಿತಿ ಕಳುಹಿಸಲಾಗುವುದು ಎಂದು ತಿಳಿಸಿದ್ದರು.
ಇನ್ನು, 2010ರಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಸದನದಲ್ಲಿ ಯಡಿಯೂರಪ್ಪ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದ್ದರು. ಆದರೆ ಕಾನೂನು ಜಾರಿಗೆ ಬರಲಿಲ್ಲ. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದು ಸಂವಿಧಾನ ವಿರೋಧಿ ಎಂದು ಕಾಯ್ದೆಯನ್ನು ಹಿಂಪಡೆದಿತ್ತು.
1964ರ ಜಾನುವಾರು ವಧೆ ಕಾಯ್ದೆಯನ್ನೇ ಕರ್ನಾಟಕದಲ್ಲಿ ಮುಂದುವರೆಸಲಾಗುತ್ತಿದೆ. ಈ ಕಾನೂನಿನ ಪ್ರಕಾರ 12 ವರ್ಷ ಮೇಲ್ಪಟ್ಟ ಮತ್ತು ಸಂತಾನೋತ್ಪತ್ತಿಗೆ ಅಶಕ್ತವಾಗಿರುವ, ಹಾಲು ನೀಡದ ಹಸು, ಎತ್ತು, ಎಮ್ಮೆ, ಕೋಣವನ್ನು ಮಾತ್ರ ವಧೆ ಮಾಡಬಹುದು.
2019ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಒತ್ತಡವಿದೆ. ಪಕ್ಷದ ಹಲವು ನಾಯಕರು ಮುಖ್ಯಮಂತ್ರಿಗೆ ಮನವಿ ಪತ್ರವನ್ನು ನೀಡಿದ್ದಾರೆ. ಸದ್ಯ ಸಚಿವರಾದ ಪ್ರಭು ಚೌಹಾಣ್ ಮತ್ತು ಸುಧಾಕರ್ ಗೋಹತ್ಯೆ ನಿಷೇಧ ಚರ್ಚೆಗೆ ಮತ್ತೆ ಜೀವ ತುಂಬುತ್ತಿದ್ದಾರೆ.
ಇನ್ನು ಗೋಮಾಂಸ ರಫ್ತಿನಲ್ಲಿ ಭಾರತಕ್ಕೆ ಸಾಕಷ್ಟು ಆದಾಯ ಬರುತ್ತಿದ್ದು, ಗೋಹತ್ಯೆ ನಿಷೇಧವಷ್ಟೇ ಮಾಡುತ್ತಾರೆ, ರಫ್ತು ಅಲ್ಲ ಎಂದು ಹಲವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಗೋಹತ್ಯೆ ಏಕೆ? ಕಲ್ಲಡ್ಕ ಪ್ರಭಾಕರ್ ಭಟ್ಟರು ಕೇಳಿದ್ದು ಯಾರಿಗೆ?


