ಪ್ರಧಾನ ಮಂತ್ರಿ ನರೇಂದ್ರ ಮೊದಿಯವರ ವೆಬ್ ಸೈಟ್ ನ ಅಧಿಕೃತ ಟ್ವಿಟರ್ ಖಾತೆಯನ್ನು ಇಂದು ಬೆಳಗಿನ ಜಾವ ಹ್ಯಾಕ್ ಮಾಡಲಾಗಿದೆ. ಈ ಖಾತೆಯ ಭದ್ರತೆಗಾಗಿ ಕ್ರಮತೆಗೆದುಕೊಂಡು, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಟ್ವಿಟರ್ ವಕ್ತಾರರು ಖಚಿತಪಡಿಸಿದ್ದಾರೆ.
“ಈ ಘಟನೆಯ ಬಗ್ಗೆ ನಮಗೆ ಅರಿವಿದೆ. ಹ್ಯಾಕ್ ಮಾಡಲಾದ ಖಾತೆಯನ್ನು ಭದ್ರಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರಸ್ತುತ ಪರಿಸ್ಥಿತಿಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದ್ದೇವೆ. ಆದರೆ ಇದು ಹೆಚ್ಚುವರಿ ಖಾತೆಗಳ ಮೇಲೆ ಪರಿಣಾಮ ಬೀರಿದೆಯೇ ಎಂಬುದು ನಮಗೆ ತಿಳಿದುಬಂದಿಲ್ಲ” ಎಂದು ಟ್ವಿಟರ್ ನ ವಕ್ತಾರರೊಬ್ಬರು ಹೇಳಿದ್ದಾರೆಂದು ಎನ್ ಡಿ ಟಿ ವಿ ವರದಿ ಮಾಡಿದೆ.
ಜುಲೈ ತಿಂಗಳಿನಲ್ಲಿ, ಹಲವಾರು ಪ್ರಮುಖ ವ್ಯಕ್ತಿಗಳ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಇದಾದ ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಖಾತೆಯನ್ನು, ಕ್ರಿಪ್ಟೋಕರೆನ್ಸಿಯ ಮೂಲಕ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮೋದಿ ತನ್ನ ಅನುಯಾಯಿಗಳನ್ನು ಕೇಳುವ ಸರಣಿ ಟ್ವೀಟ್‌ಗಳೊಂದಿಗೆ ಹ್ಯಾಕ್ ಮಾಡಲಾಗಿದೆ ಎಂದು ಟ್ವಿಟರ್ ಗುರುವಾರ ದೃಢಪಡಿಸಿದೆ.
ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್ ವೆಬ್ ಸೈಟ್ ಹ್ಯಾಕ್ ಮಾಡಿ ಮೋದಿ ವಿರುದ್ದ ಹೋರಾಡಲು ಕರೆಕೊಟ್ಟ ಹ್ಯಾಕರ್
@Narendramodi_in ಖಾತೆಯಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗಳ ಕುರಿತು ಮೋದಿಯವರ ಕಚೇರಿ ತಕ್ಷಣ ಸ್ಪಂದಿಸಲಿಲ್ಲ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಈ ಖಾತೆಯು, ಮೋದಿಯವರ ವೈಯಕ್ತಿಕ ವೆಬ್‌ಸೈಟ್ (https://www.narendramodi.in/) ಮತ್ತು ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್, 2.5 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಿದೆ.
ಈ ಘಟನೆಯಿಂದ, ಪ್ರಧಾನಿ ಮೋದಿಯವರ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ ಯಾವುದೇ ಕೆಟ್ಟ ಪರಿಣಾಮ ಬೀರಿಲ್ಲ. ಈ ಖಾತೆಗೆ ಸುಮಾರು 61 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್, ಮಾಜಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಮತ್ತು ಬಿಲಿಯನೇರ್ ಎಲೋನ್ ಮಸ್ಕ್ ಸೇರಿದಂತೆ ಟ್ವಿಟರ್ ನ ಕೆಲವು ಉನ್ನತ ಧ್ವನಿಗಳನ್ನು ಅಪಹರಿಸಲು, ಹ್ಯಾಕರ್ಸ್ ಜುಲೈನಲ್ಲಿ ಟ್ವಿಟ್ಟರ್ ನ ಆಂತರಿಕ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿ, ಡಿಜಿಟಲ್ ಕರೆನ್ಸಿಯನ್ನು ಕೋರಲು ಅವುಗಳನ್ನು ಬಳಸಿದ್ದರು.
ಇದನ್ನೂ ಓದಿ: ಹ್ಯಾಕರ್ಸ್‍ಗಳ ಕಾಟ : ನಟಿಯರ ಗೋಳಾಟ


