ಭಾರತೀಯ ರೈಲ್ವೆ ಮಂಡಳಿಯ 7 ಕೋಚ್ ಕಾರ್ಖಾನೆಗಳನ್ನು ಒಂದೇ ಘಟಕಕ್ಕೆ ವಿಲೀನಗೊಳಿಸಿರುವ ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯನ್ನು ಒಟ್ಟಾರೆಯಾಗಿ ಖಾಸಗಿ ಕೈಗೆ ಹಸ್ತಾಂತರಿಸುವ ಸಿದ್ಧತೆಗಳನ್ನು ಚುರುಕುಗೊಳಿಸಿದೆ.
ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಅವರ ಹುದ್ದೆಯನ್ನು ಸ್ಥಳಾಂತರಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕ ಮಾಡಲಾಗಿದೆ. ಮಂಡಳಿಯಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ರದ್ದುಪಡಿಸಲಾಗಿರುವ ಹುದ್ದೆಗಳು ಎಂಜಿನಿಯರಿಂಗ್ ಮತ್ತು ಸಾಮಗ್ರಿಗಳ ನಿರ್ವಹಣೆಯನ್ನು ನಿರ್ವಹಿಸುವ ಇಲಾಖೆಗಳಿಗೆ ಸಂಬಂಧಿಸಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಪ್ರತಿನಿಧಿಗಳು ನಿರ್ವಹಿಸುತ್ತಾರೆ.
ಇದನ್ನೂ ಓದಿ: ರೈಲ್ವೇ ಫಲಕದಲ್ಲಿ ಸಂಸ್ಕೃತ ಭಾಷೆಯಿರುವ ಸಂಬಿತ್ ಪಾತ್ರ ಟ್ವೀಟ್- ವಾಸ್ತವವೇನು?; ಫ್ಯಾಕ್ಟ್‌ಚೆಕ್
ನಿಲ್ದಾಣಗಳನ್ನು ಈಗಾಗಲೇ ಖಾಸಗೀಕರಣಗೊಳಿಸಿರುವ ಕೇಂದ್ರ ಸರ್ಕಾರ, ಇದೀಗ ಕೋಚ್ ಮತ್ತು ಲೋಕೋಮೋಟಿವ್ ಕಾರ್ಖಾನೆಗಳನ್ನು ಮಾರಾಟ ಮಾಡಲು ಹಾಗೂ 151 ಖಾಸಗಿ ರೈಲುಗಳನ್ನು ಪರಿಚಯಿಸಲು ಮತ್ತು ಸರಕು ಕಾರಿಡಾರ್‌ನಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ತರಲು ಕಾರ್ಯವಿಧಾನಗಳನ್ನು ಪ್ರಾರಂಭಿಸಿದೆ.
ಭಾರತೀಯ ರೈಲ್ವೆಯ ಏಳು ಕೋಚ್ ಕಾರ್ಖಾನೆಗಳನ್ನು ಒಂದೇ ಕಂಪನಿಯಾಗಿ ವಿಲೀನಗೊಳಿಸಲಾಗಿದೆ. ಇದು ಒಮ್ಮೆಗೆ ಷೇರುಗಳನ್ನು ಮಾರಲು ಅನುಕೂಲವಾಗಲಿದೆ ಎನ್ನಲಾಗಿದೆ.
ಚಿತ್ರಂಜನ್ ಲೋಕೋಮೋಟಿವ್ ವರ್ಕ್ಸ್, ವಾರಣಾಸಿ ಡೀಸೆಲ್ ಲೋಕೋಮೋಟಿವ್ ವರ್ಕ್ಸ್, ಪಟಿಯಾಲ ಡೀಸೆಲ್ ಲೊಕ್ ಮೋಡೆರೇಷನ್ ವರ್ಕ್ಸ್, ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಕಪುರ್ಥಾಲಾ ರೈಲ್‌ಕೋಚ್ ಫ್ಯಾಕ್ಟರಿ, ಬೆಂಗಳೂರು ವ್ಹೀಲ್ ಮತ್ತು ಆಕ್ಸಿಲ್ ಫ್ಯಾಕ್ಟರಿ ಮತ್ತು ರಾಯ್ ಬರೇಲಿ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಗಳನ್ನು ಒಂದೇ ಕಂಪನಿಯೊಂದಿಗೆ ವಿಲೀನಗೊಳಿಸಲಾಗುವುದು. ವಿವಿಧ ಸ್ಥಳಗಳಲ್ಲಿನ ರೈಲ್ವೆ ಜಮೀನುಗಳನ್ನು ದೀರ್ಘಾವಧಿಯ ಗುತ್ತಿಗೆಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಸುಮಾರು 3 ಲಕ್ಷ ಹುದ್ದೆಗಳನ್ನು ರದ್ದುಗೊಳಿಸಿ ನೌಕರರ ಸಂಖ್ಯೆಯಲ್ಲಿ ಬೃಹತ್ ಕಡಿತ ಮಾಡಲಾಗುತ್ತದೆ. ಮುಂದಿನ ನೇಮಕಾತಿಗಳನ್ನು ನಿಷೇಧಿಸುವ ಸಾರ್ವಜನಿಕ ಅಧಿಸೂಚನೆ ಹೊರಡಿಸಿದ್ದು, ಅಲ್ಲಿ ಗುತ್ತಿಗೆ ಕಾರ್ಮಿಕರನ್ನು ವ್ಯಾಪಕವಾಗಿ ತೊಡಗಿಸಲಾಗುವುದು ಎನ್ನಲಾಗಿದೆ.
ಕೇಂದ್ರದ ಈ ನಡೆಗೆ ಹಲವು ಯೂನಿಯನ್‌ಗಳು ವಿರೋಧ ವ್ಯಕ್ತಪಡಿಸಿವೆ.
ಇದನ್ನೂ ಓದಿ: ರೈಲ್ವೇ ಖಾಸಗೀಕರಣಕ್ಕೆ ಚಾಲನೆ: ಮುಂದಿನ ಕರಾಳ ದಿನಗಳಿಗೆ ಹಸಿರು ನಿಶಾನೆ


