Homeಮುಖಪುಟರೈಲ್ವೇ ಖಾಸಗೀಕರಣಕ್ಕೆ ಚಾಲನೆ: ಮುಂದಿನ ಕರಾಳ ದಿನಗಳಿಗೆ ಹಸಿರು ನಿಶಾನೆ

ರೈಲ್ವೇ ಖಾಸಗೀಕರಣಕ್ಕೆ ಚಾಲನೆ: ಮುಂದಿನ ಕರಾಳ ದಿನಗಳಿಗೆ ಹಸಿರು ನಿಶಾನೆ

- Advertisement -
- Advertisement -

ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ರೈಲ್ವೆ ಇಲಾಖೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಹಂತಕ್ಕೆ ಬೆಳೆದು ನಿಂತ ಪ್ರತಿಷ್ಟಿತ ಇಲಾಖೆ. ಕೇಂದ್ರ ರೈಲ್ವೇ ಸಚಿವಸ್ಥಾನಕ್ಕೆ ಪ್ರತಿ ರಾಜ್ಯ ಲಾಬಿ ಮಾಡುವ ಕಾಲ ಇತ್ತು. ಪ್ರತಿ ಹೊಸ ರೈಲ್ವೇ ಹಳಿ ಆ ರಾಜ್ಯದ ಅಭಿವೃದ್ಧಿಯ ಮಾಪಕ ಎಂದೇ ಪರಿಗಣಿಸಲಾಗಿತ್ತು. ಆದರೆ, ಇದೀಗ ರೈಲ್ವೆ ಇಲಾಖೆ ತನ್ನ ಮಹತ್ವವನ್ನು ಕಳೆದುಕೊಳ್ಳುವ ಸಾಧ್ಯತೆಗೆ ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರ ಮುನ್ನುಡಿ ಬರೆಯುತ್ತಿದೆ. ಇನ್ನು ಮುಂದೆ ರೈಲ್ವೇ ಹಳಿಗಳ ಮೇಲೆ ಖಾಸಗಿ ರೈಲುಗಳ ಸಂಚಾರ ಶುರುವಾಗಲಿದೆ. ಇದು ಮೋದಿ ಸರ್ಕಾರದ ಐತಿಹಾಸಿಕ ಪರಮಾದವಾಗಿ ದಾಖಲಾಗಲಿದೆ ಎಂದೇ ಬಣ್ಣಿಸಲಾಗುತ್ತಿದೆ.

ಜುಲೈ ಒಂದರಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ 109 ಕ್ಕೂ ಹೆಚ್ಚು ಪ್ರಯಾಣಿಕರ ರೈಲು ಸೇವೆಗಳ ಮಾರ್ಗಗಳಲ್ಲಿ ಸರ್ಕಾರದ ಜೊತೆಗೆ ಭಾಗವಹಿಸಲು ಇಚ್ಚಿಸುವ ಅರ್ಹ ಖಾಸಗಿ ಕಂಪೆನಿಗಳಿಗೆ ರೈಲ್ವೆ ಇಲಾಖೆಯಲ್ಲಿ ಹೂಡಿಕೆ ಮಾಡಲು ಮುಕ್ತ ಆಹ್ವಾನ ನೀಡಿದೆ. ಅಲ್ಲದೆ, 30,000 ಕೋಟಿ ರೂ. ವರೆಗೆ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ಐತಿಹಾಸಿಕ ಭಾರತೀಯ ರೈಲ್ವೆಯನ್ನೂ ಖಾಸಗೀಕರಣ ಮಾಡಲು ಹೊರಟಿದೆ.

“ಭಾರತೀಯ ರೈಲ್ವೆ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನವಾದ ರೋಲಿಂಗ್ ಸ್ಟಾಕ್ ಅನ್ನು ಪರಿಚಯಿಸುವುದು, ಕಡಿಮೆ ನಿರ್ವಹಣೆ, ಕಡಿಮೆ ಸಾಗಣೆ ಸಮಯ, ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು, ಸುರಕ್ಷತೆ ಹಾಗೂ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವ ಸಲುವಾಗಿ ಖಾಸಗಿ ಹೂಡಿಕೆದಾರರಿಗೆ ಅವಕಾಶ ನೀಡಲಾಗುತ್ತಿದೆ. ಈ ಹೂಡಿಕೆಯ ಕಾಲಾವಧಿ 35 ವರ್ಷವಾಗಿರುತ್ತದೆ” ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (Public Private Partnership) ಮಾದರಿಯಲ್ಲಿ ನಡೆಸಲಾಗುವುದು. ಏಪ್ರಿಲ್ 2023 ರ ವೇಳೆಗೆ ದೇಶದಲ್ಲಿ ಖಾಸಗಿ ರೈಲುಗಳು ಓಡಲಾರಂಭಿಸುತ್ತವೆ. ಈ ಬಗ್ಗೆ ಮಾಹಿತಿ ಕೊಟ್ಟಿರುವ ರೈಲ್ವೆ ಬೋರ್ಡ್ ಅಧ್ಯಕ್ಷ ವಿನೋದ್ ಕುಮಾರ್ ಯಾದವ್, 2023 ರ ಫೆಬ್ರವರಿ – ಮಾರ್ಚ್ ವೇಳೆಗೆ ಬಿಡ್ಡಿಂಗ್ ಮುಕ್ತಾಯವಾಗಲಿದ್ದು, ಏಪ್ರಿಲ್ ವೇಳೆಗೆ ಭಾರತೀಯ ರೈಲ್ವೆಯಲ್ಲಿ ಖಾಸಗಿ ಪ್ಯಾಸೆಂಜರ್ ರೈಲುಗಳ ಸಂಚಾರ ಶುರುವಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ 30 ಸಾವಿರ ಕೋಟಿ ಹಣ ಹೂಡಿಕೆ ಮಾಡುತ್ತಿದ್ದು, ದೇಶದ 109 ಮಾರ್ಗಗಳಲ್ಲಿ 150 ಖಾಸಗಿ ರೈಲುಗಳ ಓಡಾಟಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ಭಾರತೀಯ ರೈಲ್ವೆ ಜಾಲದಾದ್ಯಂತ 12 ಕ್ಲಸ್ಟರ್‍ಗಳನ್ನು ವಿಂಗಡಿಸಿ, 150 ಆಧುನಿಕ ರೈಲುಗಳನ್ನು ಪರಿಚಯಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರತಿ ರೈಲು ಕನಿಷ್ಠ 16 ಬೋಗಿಗಳನ್ನು ಹೊಂದಿರುವಂತೆ ವಿನ್ಯಾಸಗೊಳಿಸಲು ಉದ್ದೇಶಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ರೈಲುಗಳ ಕೋಚ್‍ಗಳು ತಯಾರಾಗಲಿದ್ದು, ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡಲು ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿರುತ್ತದೆ. 35 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗುತ್ತಿದ್ದು, ಅಲ್ಲಿಯವರೆಗೂ ನಿರ್ವಹಣೆ ಸೇರಿದಂತೆ ಎಲ್ಲಾ ಉಸ್ತುವಾರಿಯನ್ನು ಖಾಸಗಿ ರೈಲುಗಳ ಸಂಸ್ಥೆಗಳೇ ನೋಡಿಕೊಳ್ಳಬೇಕು. ವಿದ್ಯುತ್ ಬಳಕೆ ಸೇರಿದಂತೆ ಸರ್ಕಾರದ ಸ್ವತ್ತು ಬಳಕೆಗೆ ಹಣ ಪಾವತಿ ಮಾಡಬೇಕು. ಅಂತಿಮವಾಗಿ ಬರುವ ಆದಾಯದಲ್ಲಿ ಸರ್ಕಾರಕ್ಕೂ ಪಾಲು ಕೊಡಬೇಕು ಎನ್ನುವುನ್ನೂ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ರೈಲ್ವೇಯ ಕೆಲವು ವಿಶಿಷ್ಟತೆಗಳು

ಅಂದಾಜಿನ ಪ್ರಕಾರ, 2019 ರಲ್ಲಿ 8.4 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. 2030 ರಲ್ಲಿ ಈ ಸಂಖ್ಯೆ 13 ಕೋಟಿ ಆಗಿರಬಹುದು, 2040 ರ ವೇಳೆಗೆ 18 ಕೋಟಿ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.

2015 ಏಪ್ರಿಲ್ 16ರಂದು ತನ್ನ 162ನೇ ವರ್ಷಾಚರಣೆಯನ್ನು ಆಚರಿಸಿಕೊಂಡ ಸಮಯದ ಅಂಕಿಅಂಶಗಳ ಪ್ರಕಾರ: ಜಗತ್ತಿನ ಅತಿ ದೊಡ್ಡ ರೈಲ್ವೇ ಜಾಲವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆ 115,000 ಕೀ.ಮೀ. ರೈಲು ಹಳಿ (65,436 ಕೀ.ಮೀ. ರೈಲು ರೂಟ್) ಮತ್ತು 7172 ಸ್ಟೇಷನ್‍ಗಳನ್ನು ಹೊಂದಿದೆ. 2014-15ರಲ್ಲಿ ವಾರ್ಷಿಕವಾಗಿ 839.7 ಕೋಟಿ ಪ್ರಯಾಣಿಕರು, ದೈನಂದಿನ 23 ದಶಲಕ್ಷ ಪ್ರಯಾಣಿಕರು (ಅರ್ಧದಷ್ಟು ಜನರು ಉಪನಗರ ರೈಲಿನಲ್ಲಿ ಪ್ರಯಾಣಿಸುತ್ತಾರೆ) ಮತ್ತು 1050.18 ದಶಲಕ್ಷ ಟನ್ ಸರಕುಗಳ ಸಾಗಾಟ ನಡೆದಿದೆ.

ಅಂತೆಯೇ 2014-15ರ ಸಾಲಿನಲ್ಲಿ ಒಟ್ಟು 1,63,450 ಕೋಟಿ ರೂ ಆದಾಯ ಗಳಿಸಿದೆ. ಇದರಲ್ಲಿ 1,06,927 ಕೋಟಿ ರೂ ಆದಾಯ ಸರಕುಗಳಿಂದ ಹಾಗೂ 40,280 ಕೋಟಿ ರೂ ಪ್ರಯಾಣಿಕ ಟಿಕೆಟ್ ಸಂಗ್ರಹದಿಂದ ಬಂದಿದೆ. 2018-19 ರ ಸಾಲಿನಲ್ಲಿ 1,97,214 ಕೋಟಿ ರೂ ಆದಾಯ ಬಂದಿದ್ದು, ನಿವ್ವಳ ಆದಾಯ 6,014 ಕೋಟಿಯಾಗಿದೆ.

ಅಷ್ಟೇ ಅಲ್ಲದೇ ಇಂಡಿಯನ್ ರೈಲ್ವೇಯಲ್ಲಿ ದೈನಂದಿನ 11,000 ರೈಲುಗಳು ಓಡಾಡುತ್ತಿರುತ್ತದೆ. ಹಾಗೆಯೇ ಭಾರತೀಯ ರೈಲ್ವೆ ದೈನಂದಿನ ಅಂದಾಜಿನ ಪ್ರಕಾರ 2.5 ಕೋಟಿ ಪ್ರಯಾಣಿಕರನ್ನು ಸಾಗಿಸುತ್ತಿದೆ. ಇನ್ನೂ ನೂರಾರು ವೈಶಿಷ್ಟ್ಯತೆಗಳಿರುವ, ಇಷ್ಟೊಂದು ಲಾಭದಾಯಕವಾಗಿರುವ ರೈಲ್ವೇ ಇಲಾಖೆಯ ಖಾಸಗೀಕರಣ ಎಷ್ಟು ಸರಿ?

ಬಾಣಲೆಯಿಂದ ಬೆಂಕಿಗೆ…! ದುಬಾರಿಯಯಾಗುತ್ತಿರುವ ಬದುಕು…!

ಈಗಾಗಲೇ ಖಾಸಗೀ ಶಾಲೆಗಳು, ಖಾಸಗೀ ಆಸ್ಪತ್ರೆಗಳು, ಖಾಸಗೀ ವಿಮಾನಗಳು ಹೀಗೆ ಖಾಸಗಿಕರಣದಿಂದ ಬಳಲಿಹೋಗಿರುವ ಜನಕ್ಕೆ ಸರ್ಕಾರ ಮತ್ತೊಂದು ಹೊಡೆತ ನೀಡಿದೆ.

ಭಾರತೀಯ ರೈಲ್ವೆಯಿಂದ ಸುಮಾರು 12 ಲಕ್ಷ ರೈಲ್ವೆ ಸಿಬ್ಬಂದಿ ಜೀವನ ರೂಪಿಸಿಕೊಂಡಿದ್ದಾರೆ. ಇದೀಗ ಖಾಸಗಿ ರೈಲುಗಳ ಸಂಚಾರದಿಂದ ಮುಂದಿನ ವರ್ಷಗಳಲ್ಲಿ ಈ 12 ಲಕ್ಷ ನೌಕರರ ಜೀವನೋಪಾಯದ ಪ್ರಶ್ನೆ ಎದುರಾಗುತ್ತದೆ. ಹಲವು ವಲಯಗಳಲ್ಲಿ ಖಾಸಗೀಕರಣದಿಂದ ಸಾವಿರಾರು ಸರ್ಕಾರಿ ಉದ್ಯೋಗ ನಷ್ಟ ಆದ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ. ಇನ್ನು ಖಾಸಗಿ ಪ್ಯಾಸೆಂಜರ್ ರೈಲು ಓಡುವುದರಿಂದ ಮಾಸಿಕ ಪಾಸ್ ಸೇರಿದಂತೆ ಸರ್ಕಾರ ನೀಡುತ್ತಿದ್ದ ರಿಯಾಯ್ತಿ ಟಿಕೆಟ್‍ಗಳಿಗೆ ಕೂಡ ಕುತ್ತುಬೀಳಲಿದೆ.

ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭವಾಗಲಿರುವ ಖಾಸಗಿ ರೈಲು ಸಂಚಾರ, ತದನಂತರ ರೈಲ್ವೆ ಇಲಾಖೆಯ ರೈಲುಗಳು ಸರಿಯಾದ ಸಮಯಕ್ಕೆ ದೊರಕದಿರುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಲಿದ್ದು (ಈಗ ಇರುವ ಸಣ್ಣ ಸಮಸ್ಯೆಗಳನ್ನು ಮಾಧ್ಯಮಗಳ ಮೂಲಕ ಬೃಹತ್ತಾಗಿ ಬಿಂಬಿಸಿ) ಪ್ರಯಾಣಿಕರು ಖಾಸಗಿ ರೈಲುಗಳಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಮಾಡಲಾಗುತ್ತದೆ. ಬಹುತೇಕ ಮಾರ್ಗಗಳಿಗೆ ಕೇವಲ ಖಾಸಗಿ ರೈಲುಗಳನ್ನು ಬಿಡುವ ಮೂಲಕ, ಪ್ರಯಾಣಿಕರಿಗೆ ಹೊರೆಯಾದರೂ ಖಾಸಗಿ ಬಂಡವಾಳದಾರರಿಗೆ ಅನುಕೂಲ ಮಾಡಿಕೊಡುವ ಸಂದರ್ಭ ಬರಬಹುದು. ಟಿಕೆಟ್ ದರ ನಿಗದಿ ಮಾಡಲು ಸರ್ವಸ್ವತಂತ್ರರು ಎಂದು ಈಗಾಗಲೇ ತಿಳಿಸಲಾಗಿದೆ. ಅಂದರೆ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಒಮ್ಮೆ ಜ್ಞಾಪಕ ಮಾಡಿಕೊಂಡರೆ ಮುಂದಿನ ದಿನಗಳ ಪರಿಸ್ಥಿತಿ ಹೇಗಿರಲಿದೆ ಎನ್ನುವ ಲೆಕ್ಕಾಚಾರ ಕಣ್ಣ ಮುಂದೆ ಹಾದು ಹೋಗುತ್ತದೆ.

ರೈಲು ಬಡವರ ಸಂಚಾರಕ್ಕೆ ಹೇಳಿ ಮಾಡಿಸಿದ್ದ ಸಂಚಾರ ವ್ಯವಸ್ಥೆ. ಆದರೆ ಮುಂದಿನ ದಿನಗಳಲ್ಲಿ ಮಾಸಿಕ ಪಾಸ್ ಅಷ್ಟೇ ಅಲ್ಲ, ಬೇರೆ ಎಲ್ಲಾ ಸೌಲಭ್ಯಗಳಿಗೂ ಕತ್ತರಿ ಬೀಳಲಿದೆ. ಜೊತೆಗ ಖಾಸಗಿ ಬಸ್ ಲಾಬಿ ನಡೆಯುವ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಖಾಸಗಿ ರೈಲು ಕಂಪನಿಗಳ ಲಾಬಿ ನಡೆಯಲಿದೆ. 30 ವರ್ಷದ ತನಕ ಹೆದ್ದಾರಿಯನ್ನು ನಿರ್ವಹಣೆ ಮಾಡಬೇಕು ಎಂದು ಒಪ್ಪಂದ ಮಾಡಿಕೊಂಡು ಜೀವನ ಪಯರ್ಂತ ಟೋಲ್ ಸಂಗ್ರಹಿಸುವ ಖಾಸಗಿ ಕಂಪನಿಗಳಂತೆಯೇ ಸುಲಿಗೆ ಮಾಡುವುದು ಶತಸಿದ್ಧ ಎನ್ನಬಹುದು.

ಇನ್ನು, ಕಡಿಮೆ ನಿರ್ವಹಣೆ, ಕಡಿಮೆ ಸಾಗಣೆ ಸಮಯ, ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು, ಸುರಕ್ಷತೆ ಹಾಗೂ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವ ಸಲುವಾಗಿ ಖಾಸಗಿ ಹೂಡಿಕೆದಾರರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತ ಬಳಗದ ಉದ್ಯಮಿಗಳೇ ಸರ್ಕಾರ ಘೋಷಿಸಿರುವ ಈ ಬಿಡ್ಡಿಂಗ್ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಅಥವಾ ಆ ಬಿಡ್ಡಿಂಗ್‍ನಲ್ಲಿ ಬಿಜೆಪಿಗೆ ಆಪ್ತರಾಗಿರುವ ಉದ್ಯಮಿಗಳು ಷೇರು ಪಡೆಯುವ ಸಾಧ್ಯತೆಯೂ ಇದೆ. ಖಾಸಗೀಕರಣ ಎಂದರೆ ಅಲ್ಲಿ ಲಾಭವಿಲ್ಲದೇ ಯಾವ ಉದ್ಯಮಿಯೂ ಏನೂ ಮಾಡಲಾರ. ಹಾಗಾಗಿ “ರೈಲ್ವೇ ಸರ್ವೀಸಿನಿಂದ ರೈಲ್ವೇ ಬಿಜಿನೆಸ್” ಆಗುವುದರಲ್ಲಿ ಅನುಮಾನವಿಲ್ಲ.

ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ವಿಶ್ವದರ್ಜೆ ರೈಲಿನಲ್ಲಿ ಸಂಚಾರ ಮಾಡಬಹುದು ಎಂದು ಬೀಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಾಮಾನ್ಯ ಜನರ ಬದುಕು ಈಗಾಗಲೇ ಇರುವ ಸಮಸ್ಯೆಗಳೊಟ್ಟಿಗೆ ಇದೂ ಸೇರಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಬದುಕು ದುಬಾರಿಯಾಗುತ್ತದೆ.

ಮಾತು ತಪ್ಪಿದ ಸರ್ಕಾರದ ನಡೆ…!?

2014ರ ನವಂಬರ್ ತಿಂಗಳಿನಲ್ಲಿ ಅಂದಿನ ಬಿಜೆಪಿ-ಎನ್‍ಡಿಎ ಸರ್ಕಾರ ಭಾರತದ ವೇಗಧೂತ ರೈಲ್ವೇ ಪ್ರಾಜೆಕ್ಟ್ ಸೇರಿದಂತೆ 17 ಪ್ರಮುಖ ವಲಯಗಳಲ್ಲಿ ಶೇಕಡ 100 ರಷ್ಟು FDI ಅನ್ನು ಘೊಷಿಸಿತು. ಅದರೆ ಇದರ ವಿರುದ್ಧ ದೇಶದಾದ್ಯಂತ ರೈಲ್ವೇ ಕಾರ್ಮಿಕರ ಹೋರಾಟಗಳು ನಡೆದಾಗ, ಪ್ರಧಾನಿ ನರೇಂದ್ರ ಮೋದಿ 2014 ಡಿಸೆಂಬರ್, ವಾರಣಾಸಿಯಲ್ಲಿ ಸಾರ್ವಜನಿಕವಾಗಿ “ಭಾರತೀಯ ರೈಲ್ವೇ ಯಾವತ್ತಿಗೂ ಖಾಸಗೀಕರಣಕ್ಕೆ ಒಳಪಡುವುದಿಲ್ಲ” ಎಂದಿದ್ದರು. ಅದರೆ ಇಂದು…?

ಇನ್ನು 2019 ಜೂನ್, ಭಾರತೀಯ ರೈಲ್ವೇಯನ್ನು ಖಾಸಗೀಕರಣಗೊಳಿಸುವ ಸುದ್ದಿಯ ಬಗ್ಗೆ ಅಂದು ಸಮಾಜವಾದಿ ಪಕ್ಷದ ಸಂಸದರಾಗಿದ್ದ ಸುರೇಂದ್ರನಾಥ್ ನಗರ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರೈಲ್ವೆ ಸಚಿವ ಪಿಯೂಶ್ ಗೋಯಲ್ “ರೈಲ್ವೆಯನ್ನು ಖಾಸಗೀಕರಣಕ್ಕೊಳಪಡಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ” ಎಂಬ ಸ್ಪಷ್ಟನೆಯನ್ನು ನೀಡಿದ್ದರು. ಆದರೆ ಈಗ ಅವರೇ “ಜುಲೈ 1 ಐತಿಹಾಸಿಕ ದಿನ” ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ.

ಹೀಗೆ ಜನಗಳನ್ನ ನಂಬಿಸಿ ಮೋಸ ಮಾಡುವುದು ಈ ಸರ್ಕಾರಕ್ಕೆ ಹೊಸದೇನಲ್ಲ.

ಖಾಸಗೀಕರಣದ ಇತಿಹಾಸ.

ಖಾಸಗೀಕರಣದಲ್ಲಿ ಜಾಗತಿಕ ಒಲವು ಮೂಡತೊಡಗಿದ್ದು ಇಂಗ್ಲೆಂಡಿನ ಮಾರ್ಗರೆಟ್ ಥ್ಯಾಚರ್ ಮತ್ತು ಅಮೇರಿಕಾದಲ್ಲಿ ರೊನಾಲ್ಡ್ ರೀಗನ್ ಇವರು 1980ರ ದಶಕದಲ್ಲಿ ತಮ್ಮ ದೇಶಗಳನ್ನು ಮುನ್ನಡೆಸಲು ಪ್ರಾರಂಭಿಸಿದಾಗ. ಖಾಸಗೀಕರಣದೆಡೆಗಿನ ಜಾಗತಿಕ ಅರ್ಥವ್ಯವಸ್ಥೆಯ ಈ ವಿಶೇಷ ಒಲವನ್ನು ‘ಥ್ಯಾಚರಿಸಂ’ ಮತ್ತು ‘ರೀಗನೋಮಿಕ್ಸ್’ ಎಂದು ಕರೆಯಲಾಗುತ್ತಿತ್ತು. ಅಮೇರಿಕಾ ಅಧ್ಯಕ್ಷ ರೀಗನ್(1980-88) ಜಗತ್ತಿನಾದ್ಯಂತ ಮುಕ್ತ ಮಾರುಕಟ್ಟೆಯ ಅರ್ಥವ್ಯವಸ್ಥೆಯು ರೂಪಿತವಾಗಬೇಕು ಮತ್ತು ಆರ್ಥಿಕೋದ್ಯಮಗಳು ತಮ್ಮ ಸಾಮಥ್ರ್ಯದ ನೆಲೆಯಲ್ಲಿ ಸ್ಪರ್ಧಿಸುವಂತಿರಬೇಕು ಎಂಬ ನಿಲುವು ತಳೆದಿದ್ದರು. ಇತ್ತ ಬ್ರಿಟನ್ ಪ್ರಧಾನಿ ಥ್ಯಾಚರ್ ನೇತೃತ್ವದಲ್ಲಿ ಕೈಗಾರಿಕೋದ್ಯಮ ಮತ್ತು ಸೇವಾ ಕ್ಷೇತ್ರವನ್ನು (ಉದಾ: ಬ್ರಿಟಿಷ್ ಪೆಟ್ರೋಲಿಯಂ, ಬ್ರಿಟಿಷ್ ಗ್ಯಾಸ್ ಮುಂತಾದವು) ಖಾಸಗೀಕರಣಗೊಳಿಸುವ ಬಹಳ ತ್ವರಿತ ಗತಿಯ ಕ್ರಮಗಳನ್ನು ಕೈಗೊಂಡಿತ್ತು. ನಂತರ ಫ್ರಾನ್ಸ್, ಜರ್ಮನಿ, ಗ್ರೀಸ್, ನಾರ್ವೆ, ಇಟಲಿ, ಪೋರ್ಚುಗಲ್, ಸ್ಪೇನ್ ಮುಂತಾದ ದೇಶಗಳು ಅಮೇರಿಕಾ ಹಾಗೂ ಬ್ರಿಟನ್ನಿನ ಮಾದರಿಯನ್ನು ಅನುಸರಿಸತೊಡಗಿದವು. ಹಾಗೆಯೇ ಏಷ್ಯಾ ಹಾಗೂ ಲ್ಯಾಟಿನ್ ಅಮೇರಿಕಾದ ಕೆಲವು ದೇಶಗಳೂ ಈ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಂಡವು.

ಭಾರತದಲ್ಲಿ 1980 ರ ದಶಕದಲ್ಲಿ ಈ ಖಾಸಗೀಕರಣದ ಗಾಳಿ ಬೀಸತೊಡಗಿದರೂ ಸಹ, 1991ರ ಹೊಸ ಆರ್ಥಿಕ ನೀತಿ ಮತ್ತು 1991ರ ಹೊಸ ಕೈಗಾರಿಕಾ ನೀತಿ ಜಾರಿಗೆ ಬಂದ ನಂತರ ಬಲವಾಗಿ ನೆಲೆಯೂರತೊಡಗಿತು. ನಂತರ 1991ರಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ಪ್ರಸ್ತಾಪಿತ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ಪರಿಕಲ್ಪನೆಗಳು ಮತ್ತು ಅದಕ್ಕೆ ಪೂರಕವಾದ ಸರ್ಕಾರದ ನಿಲುವುಗಳಿಂದ ಖಾಸಗೀಕರಣ ಇನ್ನೂ ಬಲವಾಯಿತು.

ಖಾಸಗೀಕರಣದ ಗೊಂದಲದ ಸಿದ್ಧಾಂತ ಬಂಡವಾಳಶಾಹಿಗಳಿಗೆ ವರವಾಗಿ, ಕಾರ್ಮಿಕರಿಗೆ ಶಾಪವಾಗಿ ಪರಿಣಮಿಸಿತು. ಇಂದು ಖಾಸಗೀಕರಣವೆಂದರೆ ಕಾರ್ಮಿಕರ ಶೋಷಣೆ ಎಂಬಂತಾಗಿಬಿಟ್ಟಿದೆ. ಇನ್ನು ಭಾರತದಂತಹ ದೇಶಗಳಲ್ಲಿ ಅಲಕ್ಷ್ಯಕ್ಕೆ ಒಳಪಟ್ಟಿರುವ ಸಮುದಾಯಗಳು ಸಾಕಷ್ಟಿವೆ. ಮೀಸಲಾತಿ ಮುಂತಾದ ಸೌಲಭ್ಯಗಳು ಇನ್ನೂ ಎಷ್ಟೋ ನಿರ್ಲಕ್ಷಿತ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ತಲುಪಿಲ್ಲ. ಅಲ್ಲದೆ ಖಾಸಗೀ ಉದ್ಯಮಗಳ ಮೀಸಲಾತಿ ವಿರೋಧಿ ದೋರಣೆ ಮೊದಲಿನಿಂದಲೂ ತಿಳಿದಿರುವುದೇ! ಇಂತಹ ಸಮಯದಲ್ಲಿ ರೈಲ್ವೇ ಖಾಸಗೀಕರಣ ಸಮಸ್ಯೆಗಳನ್ನು ಉಲ್ಬಣಿಸುವುದರಲ್ಲಿ ಅನುಮಾನವಿಲ್ಲ.

ಬ್ರಿಟಿಷ್ ರೈಲ್ವೇ ಖಾಸಗೀಕರಣದ ಜ್ವಲಂತ ಉದಾಹರಣೆ…

90ರ ದಶಕದ ಇಂಗ್ಲೆಂಡಿನಲ್ಲಿ ಥ್ಯಾಚರಿಸಂ ಎಂಬ ಖಾಸಗೀಕರಣ ಯುಗ ನಾಗಾಲೋಟದಲ್ಲಿ ಓಡುತ್ತಿತ್ತು. ಸರ್ಕಾರಿ ಸ್ವಾಮ್ಯದ ಪ್ರಮುಖ ಇಲಾಖೆಗಳನ್ನು ಖಾಸಗೀಕರಣಗೊಳಿಸುವತ್ತ ಸರ್ಕಾರ ಹೆಜ್ಜೆಯನ್ನಿಡುತ್ತಿತ್ತು. ಇದರ ಭಾಗವಾಗಿ ಅಲ್ಲಿನ ರೈಲ್ವೇ ಇಲಾಖೆಯನ್ನು ಖಾಸಗೀಕರಣಗೊಳಿಸಬೇಕೆಂಬ ಸರ್ಕಾರದ ಆಶಯ ಬಲಗೊಂಡು ಕ್ರಿಯಾರೂಪಕ್ಕೆ ಬಂತು. ಇಂದು ನಮ್ಮ ಮೋದಿ ಸರ್ಕಾರಗಳು ನೀಡುತ್ತಿರುವ ಆಶ್ವಾಸನೆಯನ್ನೇ ಅದಕ್ಕಿಂತಲೂ ಬಲವಾಗಿ ಅಲ್ಲಿ ನೀಡಲಾಯಿತು. ಪ್ರಯಾಣಿಕರ ಟಿಕೆಟ್ ದರವನ್ನು ಹೆಚ್ಚಿಸುವ ಮಾತೇ ಇಲ್ಲ ಎಂದು 1993ರಲ್ಲಿ ಅಲ್ಲಿನ ರೈಲ್ವೇ ಸಚಿವಾಲಯ ಹೇಳಿತು. ಆಧುನಿಕತೆ, ಉತ್ತಮ ಸ್ಪರ್ಧೆ, ಸಮಯದ ನಿರ್ವಹಣೆ, ಉತ್ತಮ ಗುಣಮಟ್ಟ ಎಂಬ ಮುಂತಾದ ಆಶ್ವಾಸನೆಗಳನ್ನು ನೀಡಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಅವೆಲ್ಲವೂ ಹುಸಿಯಾಯಿತು. 1995-2005 ರ ನಡುವೆ ಸರಾಸರಿ ಶೇ 117% ರಷ್ಟು ಟಿಕೆಟ್ ದರವನ್ನು ಹೆಚ್ಚಿಸಿತು. ಇನ್ನೂ ಕೆಲವು ಮಾರ್ಗಗಳಲ್ಲಿ ಶೇ 200% ದರವನ್ನು ಹೆಚ್ಚಸಿತು. ಹೀಗೆ ಇದರೊಂದಿಗೆ ಇನ್ನೂ ಹಲವಾರು ಸಮಸ್ಯೆಗಳು ಉದ್ಭವವಾಯಿತು. ಇದರ ಕುರಿತಂತೆ 2003 ರಲ್ಲಿ The Great Train Robbery : Rail Privatisation and After ಎನ್ನುವ ಸಾರ್ವಜನಿಕ ಹಿತಾಸಕ್ತಿ ವರದಿಯೊಂದು ಬಿಡುಗಡೆಯಾಗಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ಈ ಅಧ್ಯಯನದ ವರದಿ ಸರ್ಕಾರದ ನಿದ್ದೆಗೆಡಿಸಿತು. ನಂತರ ಬ್ರಿಟಿಷ್ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ “ರೈಲ್ವೇ ಮರು-ರಾಷ್ಟ್ರೀಕರಣ”ವೇ ನಮ್ಮ ಆದ್ಯತೆ ಎನ್ನುವಷ್ಟರಮಟ್ಟಿಗೆ ಚರ್ಚೆಯನ್ನು ಹುಟ್ಟುಹಾಕಿತು. ಶೇ75% ಕ್ಕಿಂತಲೂ ಹೆಚ್ಚು ಜನ ರೈಲ್ವೇ ಖಾಸಗೀಕರಣವನ್ನು ವಿರೋಧಿಸಿದ್ದರು.

ಈಗ ಮಾಡಬೇಕಾಗಿರುವುದೇನು…?

ಯಾವ ಕಾಲದಲ್ಲೂ ಪ್ರಭುತ್ವಗಳಿಗೆ ಜನಸಾಮಾನ್ಯರ ಚಿಂತೆ ಇದ್ದಂತಿಲ್ಲ. ಹಾಗಾಗಿಯೇ ತಾವು ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷ ಜಾರಿಗೆ ತರುವ ಕಾನೂನು-ಕಾಯ್ದೆಗಳ ಬಗ್ಗೆ ಅಸಹಕಾರ ತೋರಿ, ಪ್ರತಿಭಟಿಸುತ್ತಿದ್ದವರು, ತಾವು ಅಧಿಕಾರಕ್ಕೆ ಬಂದ ನಂತರ ಅದೇ ಕೆಲಸವನ್ನ ಇನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. 15 ವರ್ಷಗಳ ಹಿಂದೆಯೇ ರೈಲ್ವೇ ಖಾಸಗೀಕರಣದ ಕೆಲಸ ನಡೆದಾಗ ಇದೇ ಬಿಜೆಪಿ ಪಕ್ಷ ವಿರೋಧಿಸಿತ್ತು. ಆದರೆ ಈಗ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಗಾಯದ ಮೇಲೆ ಬರೆ ಎಳೆಯುತ್ತಿದೆ. ಅದರಲ್ಲೂ 2014 ರಿಂದ ಈಚೆಗೆ ಸರ್ಕಾರಿ ಒಡೆತನದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಹೆಚ್ಚಾಗುತ್ತಲೇ ಇದೆ. ಇನ್ನೂ ಕಳವಳಕಾರಿಯಾದ ವಿಷಯವೆಂದರೆ ರೈಲ್ವೇ ಇಲಾಖೆಯಲ್ಲಿ ಈಗಾಗಲೇ ದುಡಿಯುತ್ತಿರುವವರಿಗೆ ಇದರ ಪರಿವೆಯೇ ಇಲ್ಲದಿರುವುದು. ಇಷ್ಟು ದೊಡ್ಡ ಮತ್ತು ಲಾಭದಾಯಕ ರೈಲ್ವೇ ಸೇವೆಯನ್ನು ಖಾಸಗೀಕರಣಗೊಳಿಸುವ ಉದ್ದೇಶವಾದರೂ ಏನು? ಇದರ ವಿರುದ್ಧ ಸಾಕಷ್ಟು ಹೋರಾಟಗಳೂ ನಡೆದಿವೆಯಾದರೂ ಅವು ದೇಶದಾದ್ಯಂತ ಸಂಘಟಿತವಾಗಿ ಆಗಿಲ್ಲ. ಎಲ್ಲಿಯವರೆಗೆ ದೇಶದ ಮತ್ತು ಸಾಮಾನ್ಯ ಜನರ ಸಮಸ್ಯೆ ನಮ್ಮದಲ್ಲ ಎಂದು ಈ ನಾಗರಿಕ ಸಮಾಜ ಸುಮ್ಮನಿರುತ್ತದೆಯೋ ಅಲ್ಲಿಯವರೆಗೂ ಇಂತಹ ದಬ್ಬಾಳಿಕೆಗಳಿಗೆ ಕೊನೆಯಿಲ್ಲ.


ಇದನ್ನು ಓದಿ: ಕೊರೊನಾ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರ್ಕಾರಕ್ಕೆ ಸೋಂಕು ಪರೀಕ್ಷೆ ನಡೆಸಲು ಗೊತ್ತಿಲ್ಲ: ಸಿದ್ದರಾಮಯ್ಯ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...